ಮಗನನ್ನು ಕಳೆದುಕೊಂಡ ನಮಗೆ ಪೊಲೀಸರಿಂದ ನ್ಯಾಯ ಸಿಗಲಿಲ್ಲ: ಪತ್ರಿಕಾಗೋಷ್ಠಿಯಲ್ಲಿ ಪೋಷಕರ ಅಳಲು
ಬೆಳ್ತಂಗಡಿ: ತೋಟತ್ತಾಡಿ ನೆಲ್ಲಿಗುಡ್ಡೆ ನಿವಾಸಿ ಚಂದ್ರಶೇಖರ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಇವರ ಬಂಧನಕ್ಕೆ 3 ದಿನ ಗಡುವು ನೀಡುತ್ತಿದ್ದು, ಸಾವಿನ ಮನೆಯಲ್ಲಿ ರಾಜಕೀಯ ಮಾಡದೆ ನ್ಯಾಯ ಒದಗಿಸಿ ಇಲ್ಲವಾದಲ್ಲಿ ನ. 7 ರಂದು ಧರ್ಮಸ್ಥಳ ಠಾಣೆಯ ಎದುರು ಊರವರು ಹಾಗೂ ಪೋಷಕರು ಸಮಾನ ಮನಸ್ಕರು ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನ್ಯಾಯವಾದಿ ಮನೋಹರ್ ಕುಮಾರ್ ಹಾಗೂ ಚಂದ್ರ ಶೇಖರ ಅವರ ಮನೆಯವರು ಹೇಳಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಚಂದ್ರಶೇಖರ ಸೇರಿದಂತೆ 8 ಜನರು ಶಬರಿ ಸ್ವಸಹಾಯ ಸಂಘದಲ್ಲಿದ್ದು, ಇವರು ಉಜಿರೆ ವಿಶ್ವಕರ್ಮ ಬ್ಯಾಂಕಿನಿಂದ 4 ಲಕ್ಷ ಸಾಲ ಪಡೆದಿದ್ದರು. ಇದರಲ್ಲಿ ಅಮಾಯಕ ಚಂದ್ರಶೇಖರನ ಹೆಸರಿನಲ್ಲಿ ಯೋಗೀಶ್ ಎಂಬವನು ಹಣಪಡೆದುಕೊಂಡು ಸ್ವಸಹಾಯ ಸಂಘಕ್ಕೆ ಮರುಪಾವತಿ ಮಾಡದೆ ಈತನೇ ಮರುಪಾವತಿ ಮಾಡಬೇಕು ಎಂದು ಸಚಿನ್ ಯೋಗೀಶ್ ನಾರಾಯಣ ಸುದರ್ಶನ್ ಎಂಬವರು ಬೆದರಿಕೆ ಒಡ್ಡಿದ್ದು ಕೊಲೆ ಬೆದರಿಕೆಯನ್ನೂ ಹಾಕಿರುತ್ತಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈತನಿಗೆ ನ್ಯಾಯೊದಗಿಸಬೇಕು ಎಂದರು. ಈಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರೂ ರಾಜಕೀಯ ಒತ್ತಡದಿಂದಾಗಿ ಆರೋಪಿಗಳನ್ನು ಬಂಧಿಸಿಲ್ಲ ಗ್ರಾಮ ಪಂಚಾಯತು ಸದಸ್ಯನೂ ಆಗಿರುವ ಸಚಿನ್ ಸ್ಥಳೀಯವಾಗಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ತನಗೆ ರಾಜಕೀಯ ಬೆಂಬಲವಿದೆ ಎಂದು ತಿರುಗಾಡುತ್ತಿದ್ದಾನೆ. ಈ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆಗೆ ಮುಂದಾಗಿರುವುದಾಗಿ ತಿಳಿಸಿದರು.
ಮೃತನ ತಂದೆ ಆನಂದ ಪೂಜಾರಿ ಮಾತನಾಡಿ ನನ್ನ ಮಗ ಅಮಾಯಕನಾಗಿದ್ದು ನಮ್ಮ ಆಧಾರಸ್ತಂಭವಾಗಿದ್ದ. ಈತನ ಹೆಸರಿನಲ್ಲಿ ಸ್ವಸಹಾಯ ಸಂಘದಲ್ಲಿ ಸಾಲಮಾಡಿ ಯೋಗೀಶ ಎಂಬವನು ಹಣಪಡೆದಿದ್ದು, ಇದನ್ನು ಮರುಪಾವತಿ ಮಾಡದೆ ಮಗನೇ ಮರುಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೆ ಇವರೊಂದಿಗೆ ಸೇರಿ ಸಚಿನ್, ನಾರಾಯಣ, ಸುದರ್ಶನ್ ಇವರು ಕೊಲೆ ಬೆದರಿಕೆ ಒಡ್ಡಿದ್ದು ಇದರಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೀವನ್ಮರಣದಲ್ಲಿ ಮಗನನ್ನು ಒಂದು ತಿಂಗಳು ಬದುಕಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದೀಗ ಮಗನನ್ನು ಕಳೆದುಕೊಂಡಿರುವ ನಮಗೆ ಪೊಲೀಸ್ ಇಲಾಖೆಯಿಂದ ನ್ಯಾಯ ಸಿಗುತ್ತಿಲ್ಲ. ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇವರಿಂದ ನಮಗೆ ಜೀವ ಭಯವಿದೆ ನಮಗೆ ರಕ್ಷಣೆ ಬೇಕು. ನಮಗೆ ನ್ಯಾಯಸಿಗದಿದ್ದಲ್ಲಿ ಪೊಲೀಸ್ ಠಾಣೆಯೆದುರು ಧರಣಿ ಕುಳಿತುಕೊಳ್ಳಲು ನಾನು ಸಿದ್ದನಿದ್ದೇನೆ ಎಂದರು.
ಸ್ಥಳಿಯ ನಿವಾಸಿ ಸನತ್ ಕೋಟ್ಯಾನ್ ಮಾತನಾಡಿ ಚಂದ್ರಶೇಖರನ ಸಾವಿಗೆ ನ್ಯಾಯಸಿಗಬೇಕು, ಅಮಾಯಕ ಜೀವವನ್ನು ಕಳೆದುಕೊಂಡಿದ್ದೇವೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಎದುರು ನ. 7ರಂದು ಪ್ರತಿಭಟನೆ ನಡೆಸಲಿದ್ದು ಇದಕ್ಕೆ ಬೆಂಬಲ ನೀಡುವಂತೆ ಮಾಜಿ ಶಾಸಕ ಕೆ. ವಸಂತ ಬಂಗೇರ, ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಯುವವಾಹಿನಿ ಘಟಕ ಬೆಳ್ತಂಗಡಿ ಹಾಗೂ ಸಮಾನ ಮನಸ್ಕರಲ್ಲಿ ಮನವಿ ಮಾಡಿದ್ದು ಭಾನುವಾರದೊಳಗೆ ಬಂಧನವಾಗದಿದ್ದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅಮರಣಾಂತ ಧರಣಿ ನಡೆಸಲಿದ್ದೇವೆ ಎಂದರು.
ಗೊಷ್ಠಿಯಲ್ಲಿ ಮೃತನ ತಾಯಿ ಪುಷ್ಪ, ಮೃತನ ಸಹೋದರ ವಿನಯಕುಮಾರ್, ಸ್ಥಳಿಯರಾದ ರಾಜನ್, ಮಂಜುನಾಥ್ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka