ಮುಸ್ಲಿಂ ಶಿಕ್ಷಕರ ಮೇಲೆ ಮತಾಂತರದ ಸುಳ್ಳು ಆರೋಪ ಹೊರಿಸಿ ಅಮಾನತು: ಅಮಾನತನ್ನು ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ - Mahanayaka

ಮುಸ್ಲಿಂ ಶಿಕ್ಷಕರ ಮೇಲೆ ಮತಾಂತರದ ಸುಳ್ಳು ಆರೋಪ ಹೊರಿಸಿ ಅಮಾನತು: ಅಮಾನತನ್ನು ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

27/02/2024

ಬಲವಂತದ ಮತಾಂತರ, ಲವ್ ಜಿಹಾದ್ ಚಟುವಟಿಕೆ ನಡೆಸುತ್ತಿದ್ಧಾರೆಂದು ರಾಜಸ್ಥಾನದ ಕೋಟಾ ಎಂಬಲ್ಲಿನ ಖಜೂರಿ ಗ್ರಾಮದ ಶಾಲೆಯೊಂದರ ಶಿಕ್ಷಕರಾದ ಫಿರೋಝ್ ಖಾನ್, ಮಿರ್ಜಾ ಮುಜಾಹಿದ್ ಮತ್ತು ಶಬಾನಾ ಎಂಬುವವರನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಈ ಶಾಲೆಯ ಹಿಂದೂ ಧರ್ಮದ ವಿದ್ಯಾರ್ಥಿಗಳು ಶಿಕ್ಷಕರ ಅಮಾನತನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರಲ್ಲದೇ ಶಾಲೆಯಿಂದ ಹಲವಾರು ಕಿಮೀ ದೂರ ಇರುವ ಸಂಗೋಡ್ ಪಟ್ಟಣದಲ್ಲಿರುವ ಎಸ್‌ಡಿಎಂ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಅಮಾನತುಗೊಂಡ ಮುಸ್ಲಿಂ ಶಿಕ್ಷಕರ ಮರುಸ್ಥಾಪನೆಗೆ ಕೋರಿದರು.

ಶಿಕ್ಷಕರ ವಿರುದ್ಧದ ಆರೋಪಗಳನ್ನು ನಿರಾಕರಿಸಿದ ವಿದ್ಯಾರ್ಥಿಗಳು, ಅವರ ಮೇಲೆ ಸುಳ್ಳು ಆರೋಪ ಹೊರಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಪ್ರತಿಭಟನೆ ವೇಳೆ ಭಾವುಕರಾದ ವಿದ್ಯಾರ್ಥಿಗಳಲ್ಲಿ ಕೆಲವರು ತಮಗೆ ಶಿಕ್ಷಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಬಲವಂತಪಡಿಸಲಾಗಿತ್ತು ಎಂದೂ ಹೇಳಿದ್ದಾರೆ.

ಹತ್ತನೇ ಗ್ರೇಡ್ ವಿದ್ಯಾರ್ಥಿಯೊಬ್ಬ ಪ್ರತಿಕ್ರಿಯಿಸಿ ನನಗೆ ನಮಾಝ್ ಸಲ್ಲಿಸಲು ಬಲವಂತಪಡಿಸಲಾಗಿರಲಿಲ್ಲ. ಆದರೂ ಮುಸ್ಲಿಂ ಶಿಕ್ಷಕರ ವಿರುದ್ಧ ಸುಳ್ಳು ಆರೋಪ ಹೊರಿಸಲು ಬಲವಂತಪಡಿಸಲಾಗಿತ್ತು ಎಂದು ಹೇಳಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ಈ ವಿದ್ಯಾರ್ಥಿಯ ಮಾತುಗಳು ಕೇಳಿಸುತ್ತವೆ – “ನೀನು ಹಿಂದೂ ಎಂದು ಅವರ ಸತತವಾಗಿ ನೆನಪಿಸುತ್ತಿದ್ದರು. ಅವರ ಮಾತುಗಳನ್ನು ಕೇಳಿ ನಾನು ತಪ್ಪು ಮಾಡಿದೆ. ಈ ಶಿಕ್ಷಕರು ನಮ್ಮವರು. ಅವರ ಬಗ್ಗೆ ಏಕೆ ಸುಳ್ಳು ಹೇಳಲಿ? ನಾನು ಇಂದು ಏನಾಗಿದ್ದೇನೆಯೋ ಅದಕ್ಕೆ ಅವರು ಕಾರಣರು,” ಎಂದು ಆತ ಹೇಳಿದ್ದಾನೆ.

ಬಲವಂತದ ಮತಾಂತರ, ‘ಲವ್ ಜಿಹಾದ್’ ಮತ್ತು ನಮಾಝ್ ಚಟುವಟಿಕೆಗಳನ್ನು ಅಮಾನತುಗೊಂಡ ಶಿಕ್ಷಕರು ನಡೆಸಿಲ್ಲ ಎಂದು ಅವರ ವಿರುದ್ಧದ ಆರೋಪಗಳನ್ನು ನಿರಾಕರಿಸಿ ಜಿಲ್ಲಾ ಶಿಕ್ಷಣ ಇಲಾಖೆಗೆ ಶಾಲೆಯ 15 ಹಿಂದೂ ಶಿಕ್ಷಕರು ಪತ್ರ ಬರೆದಿದ್ದಾರೆ. ಶಾಲೆಯ ಆಡಳಿತ ಸಮಿತಿ, ಸ್ಥಳೀಯ ಗ್ರಾಮ ಸರಪಂಚ ಕೂಡ ಶಿಕ್ಷಕರ ವಿರುದ್ಧದ ಆರೋಪ ನಿರಾಕರಿಸಿದ್ದಾರೆ.

‘ಸರ್ವ್ ಹಿಂದು ಸಮಾಜ್’ ಎಂಬ ಸಂಘಟನೆಯ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ