ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ನಿಜವಾದ ಕಾರಣ ಏನು? - Mahanayaka

ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ನಿಜವಾದ ಕಾರಣ ಏನು?

28/11/2020

ಬೆಂಗಳೂರು:  ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಅವರ ಆತ್ಮಹತ್ಯೆ ಯತ್ನ ಸದ್ಯ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ಪುತ್ರ ವಿಜಯೇಂದ್ರ, ಸಂತೋಷ್ ಪತ್ನಿ ಜೆಹ್ನಾವಿ ಈ ಬಗ್ಗೆ ಭಿನ್ನವಾದ ಹೇಳಿಕೆಗಳನ್ನು ನೀಡಿದ್ದಾರೆ.

ಎನ್.ಆರ್.ಸಂತೋಷ್ ಪತ್ನಿ ಜಾಹ್ನವಿ ಘಟನೆಯನ್ನು ವಿವರಿಸಿದ್ದು, “ಅವರು ಬೆಳಗ್ಗಿನಿಂದಲೇ ಅವರು ಸ್ವಲ್ಪ ಬೇಜಾರಾಗಿದ್ದರು. ಸಂಜೆ ಹೊರಗಡೆ ಹೋಗಿದ್ದರು. ಹೀಗೆ ಹೋದವರು ಸಂಜೆ ಸುಮಾರು 7 ಗಂಟೆಗೆ ಮನೆಗೆ ಬಂದರು. ಓದುತ್ತಾ ಇರುತ್ತೀನಿ ಅಂತ ಮನೆಯ ಮೇಲೆ ಹೋಗಿದ್ದರು ಎಂದರು. ಈ ವೇಳೆ ನಾನು ಊಟಕ್ಕೆ ಏನು ಮಾಡ್ಲಿ ಅಂತ ಕೇಳೋದಕ್ಕೆ ಹೋದೆ. ಆಗ ಅವರು ಸ್ವಲ್ಪ ಬೇಜಾರಲ್ಲಿದ್ದರು. ಅದಾಗಲೇ ಅವರು ಏನು ಮಾತನಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಅವರು ಪ್ರಜ್ಞಾ ಕಳೆದುಕೊಳ್ಳುತ್ತಾ ಇದ್ದರು. ಇದರಿಂದ ಗಾಬರಿಗೊಂಡ ನಾವು ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದೆವು” ಎಂದು ವಿವರಿಸಿದ್ದಾರೆ.

“ರಾಜಕೀಯ ಅಸಮತೋಲನದಿಂದ ಸ್ವಲ್ಪ ಬೇಜಾರಾಗಿದ್ದರು ಅಷ್ಟೆ. ಇನ್ನು ಕೌಟುಂಬಿಕವಾಗಿ ನಾವು ತುಂಬಾನೇ ಚೆನ್ನಾಗಿದ್ದೇವೆ. ಅಂಥದ್ದೇನೂ ಸಮಸ್ಯೆ ನಮ್ಮ ನಡುವೆ ಇಲ್ಲ. ಮುಕ್ತವಾಗಿ ಮಾತಾಡಿಕೊಂಡು ಎಲ್ಲಾ ರೀತಿಯಲ್ಲೂ ನಾವಿಬ್ಬರೂ ಚೆನ್ನಾಗಿದ್ದೇವೆ. ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡ ಕಾರಣ ಸ್ವಲ್ಪ ಅವರಿಗೆ ಪ್ರಜ್ಞಾ ಇಲ್ಲ. ಆದರೆ ಶೀಘ್ರ ಸರಿಹೋಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ” ಎಂದು ಜಾಹ್ನವಿ ಹೇಳಿದ್ದಾರೆ.


ಇನ್ನೂ ಈ ಸಂಬಂಧ ಮಾತನಾಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ,  ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್​ ಆತ್ಮಹತ್ಯೆ ಯತ್ನ ನಮಗೂ ಶಾಕ್​ ತಂದಿದೆ. ಸದ್ಯ ಸಂತೋಷ್ ಚೇತರಿಸಿಕೊಳ್ಳುತ್ತಿದ್ದಾರೆ. ಇವತ್ತು ಅವರನ್ನು ಜನರಲ್ ವಾರ್ಡ್​ಗೆ ಶಿಫ್ಟ್ ಮಾಡ್ತಾರೆ. ಅವರು ಗುಣಮುಖರಾದ ಮೇಲೆ ಕೂತು ಚರ್ಚೆ ಮಾಡುತ್ತೇವೆ. ಸಂತೋಷ್​ ರಾಜೀನಾಮೆ ಕೊಟ್ಟಿದ್ದಾರೆ ಅಂತ ಊಹಾಪೋಹ ಹಬ್ಬಿದೆ. ಇಂತಹ ಊಹಾಪೋಹಗಳಿಗೆ ನಾನು ಉತ್ತರಿಸಲ್ಲ. ಮರಿಸ್ವಾಮಿ ಕಾವೇರಿ ನಿವಾಸಕ್ಕೆ ಬರೋದು ಹೊಸದಲ್ಲ. ಸಂತೋಷ್​ಗೆ ರಾಜೀನಾಮೆ ಕೊಡಿ ಅಂತ ಯಾರೂ ಕೇಳಿಲ್ಲ. ಯಾರಿಗೆ ಯಾವ ಸ್ಥಾನವನ್ನ ಕೊಡಬೇಕು ಅನ್ನೋದು ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಇನ್ನೂ ಸಂತೋಷ್ ಆತ್ಮಹತ್ಯೆ ಯತ್ನ ಸಂಬಂಧ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದು, ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ರಹಸ್ಯ ವಿಡಿಯೋ ಕಾರಣ. ಯಾವುದೋ ರಹಸ್ಯ ವಿಡಿಯೋ ಒಂದನ್ನು ಸಂತೋಷ್ ಎಂಎಲ್ಸಿ ಹಾಗೂ ಸಚಿವರಿಗೆ ನೀಡಿದ್ದಾರೆ. ಹೈಕಮಾಂಡ್ ಗೂ ಈ ವಿಡಿಯೋ ಎತ್ತಿಕೊಂಡು ಹೋಗಿ ಕೊಟ್ಟಿದ್ದಾರೆ ಎಂಬ ಮಾಹಿತಿ ಬಂದಿತ್ತು. ಆ ವಿಡಿಯೋವನ್ನಿಟ್ಟುಕೊಂಡು ಆ ಎಂಎಲ್ಸಿ ಹಾಗೂ ಸಚಿವರು, ಸಂತೋಷ್ ಹಾಗೂ ಸಿಎಂ ಇಬ್ಬರಿಗೂ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ ಎಂಬ ವಿಚಾರ ಕಳೆದ ಎರಡು ಮೂರು ತಿಂಗಳಿಂದ ಕೇಳಿಬಂದಿತ್ತು. ಇದೇ ಕಾರಣಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ