ಮತದಾನ ಮಾಡಲು ಅಡ್ಡಿ: ಪೊಲೀಸ್ ಗೆ ಸಡ್ಡು ಹೊಡೆದ ಮಹಿಳೆಗೆ ಸನ್ಮಾನ ಮಾಡಲು ಮುಂದಾದ ಎಸ್ ಪಿ ಪಕ್ಷ
ಉಪಚುನಾವಣೆಯಲ್ಲಿ ಮತದಾನ ಮಾಡದಂತೆ ತಡೆದ ಪೊಲೀಸ್ ಅಧಿಕಾರಿಯನ್ನು ಧೈರ್ಯದಿಂದ ಎದುರಿಸಿದ ತೌಹೀದಾ ಎಂಬ ಮುಸ್ಲಿಂ ಮಹಿಳೆಯನ್ನು ಸನ್ಮಾನಿಸಲು ಸಮಾಜವಾದಿ ಪಕ್ಷ ನಿರ್ಧರಿಸಿದೆ. ಉತ್ತರ ಪ್ರದೇಶದ ಮುಝಫರ್ ನಗರದ ಮೀರತ್ ನಲ್ಲಿ ಕಳೆದವಾರ ಈ ಘಟನೆ ನಡೆದಿತ್ತು. ಪೊಲೀಸ್ ಅಧಿಕಾರಿ ಆಕೆಗೆ ಬಂದೂಕು ತೋರಿಸಿ ಮತದಾನ ಮಾಡದಂತೆ ತಡೆದ ಈ ಘಟನೆ ವ್ಯಾಪಕ ಖಂಡನೆಗೆ ಒಳಗಾಗಿತ್ತು. ರಾಜೀವ್ ಶರ್ಮಾ ಎಂಬ ಈ ಪೊಲೀಸ್ ಅಧಿಕಾರಿ ಬಂದೂಕು ಹಿಡಿದ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ನಾನು ಬಂದೂಕಿಗೆ ಹೆದರಲ್ಲ, ನನ್ನನ್ನು ಅವರು ಮತದಾನ ಮಾಡುವುದಕ್ಕೆ ಬಿಡಲಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಈ ತೌಹೀದಾ ಹೇಳಿದ್ದರು. ಇದರ ಬೆನ್ನಿಗೆ ಸಮಾಜವಾದಿ ಪಕ್ಷವು ರಂಗಕ್ಕಿಳಿದಿತ್ತು. ಮುಸ್ಲಿಮರ ಮತವನ್ನು ಅತ್ಯಂತ ಯೋಜನಾ ಬದ್ಧವಾಗಿ ತಡೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿತ್ತು.
ಹಾಗೆಯೇ ಮುಸ್ಲಿಮ್ ಮಹಿಳೆಯರ ನಕಾಬನ್ನು ಎತ್ತಿ ಪೊಲೀಸರು ತಪಾಸಣೆ ನಡೆಸುತ್ತಿರುವ ಚಿತ್ರವನ್ನು ಕೂಡ ಅದು ಬಿಡುಗಡೆಗೊಳಿಸಿತ್ತು. ಮಾತ್ರಅಲ್ಲ ಚುನಾವಣಾ ಆಯೋಗವು ಶೀಘ್ರವೇ ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತ್ತು.
ಈ ಘಟನೆಯ ಬಳಿಕ ಸಮಾಜವಾದಿ ಪಕ್ಷದ ನಾಯಕ ಝಿಯಾ ಚೌಧರಿಯವರು ಈ ತೌಹೀದರ ಮನೆಗೆ ತೆರಳಿ ಮಾಹಿತಿ ಪಡೆದಿದ್ದರು. ಮಾತ್ರ ಅಲ್ಲ ಸಮಾಜವಾದಿ ಪಕ್ಷದ ಒತ್ತಡದ ಬಳಿಕ ಅಕ್ರಮದಲ್ಲಿ ಭಾಗಿಯಾದ ಪೊಲೀಸರನ್ನು ಸಸ್ಪೆಂಡ್ ಮಾಡಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದರು.
ಇದೀಗ ತೌಹೀದಾ ಅವರನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೇ ಸನ್ಮಾನಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj