ಗೂಗಲ್ ಪೇ, ಆನ್ ಲೈನ್ ಪೇಮೆಂಟ್ ಬಳಸುವವರೇ ಎಚ್ಚರ! | ಸ್ವಲ್ಪ ಯಾಮಾರಿದ್ರೂ ಹಣ ಕಳೆದುಕೊಳ್ಳುತ್ತೀರಿ - Mahanayaka
4:45 AM Saturday 14 - December 2024

ಗೂಗಲ್ ಪೇ, ಆನ್ ಲೈನ್ ಪೇಮೆಂಟ್ ಬಳಸುವವರೇ ಎಚ್ಚರ! | ಸ್ವಲ್ಪ ಯಾಮಾರಿದ್ರೂ ಹಣ ಕಳೆದುಕೊಳ್ಳುತ್ತೀರಿ

upi online payment
04/10/2024

ಗೂಗಲ್ ಪೇ ಸೇರಿದಂತೆ ಆನ್ ಲೈನ್ ಪೇಮೆಂಟ್ ಮಾಡಿಕೊಳ್ಳುವವರು ತಪ್ಪದೇ ಈ ಸುದ್ದಿಯನ್ನು ಓದಲೇ ಬೇಕಿದೆ. ಸಾಧ್ಯವಾದರೆ ನೀವು ಈ ಸುದ್ದಿಯನ್ನು ಓದಿದ ನಂತರ ಇದರ ಲಿಂಕ್ ನಿಮ್ಮ ಬಂಧುಗಳಿಗೆ, ನಿಮ್ಮ ಇತರ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಿ, ಎಲ್ಲರನ್ನೂ ಎಚ್ಚರಿಸುವ ಕೆಲಸ ಮಾಡಬೇಕಿದೆ.

ಹೌದು..! ಇಂದಿನ ಆಧುನಿಕ ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲಿಕರಣ ಬಹಳ ವೇಗವಾಗಿ ನಡೆಯುತ್ತಿದೆ. UPI ಬಳಕೆಯಂತೂ ಬಹಳ ವೇಗವಾಗಿ ಬೆಳೆಯುತ್ತಿದೆ. ಆಧುನಿಕತೆ ಬೆಳೆಯುತ್ತಿದ್ದಂತೆಯೇ ಅದಕ್ಕೆ ತಕ್ಕದಾಗಿ ಮೋಸಗಾರರು, ಕಳ್ಳರು ಕೂಡ ಬದಲಾಗುತ್ತಾರೆ.  ಅಂತಹ ಘಟನೆಯೊಂದನ್ನು ನಾವಿಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ…

ಈ ಘಟನೆ ನಡೆದಿರುವುದು ಮಂಗಳೂರಿನಲ್ಲಿ.  ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಬೇಕರಿಯೊಂದಕ್ಕೆ ಕರೆ ಬರುತ್ತದೆ. ಆ ಕಡೆಯಿಂದ ಹಿಂದಿ ಭಾಷೆಯಲ್ಲಿ  ಮಾತನಾಡಿದ ವ್ಯಕ್ತಿ, 4 KG ಕೇಕ್ ಆರ್ಡರ್ ಮಾಡುತ್ತಾನೆ. ಕೇಕ್ ತೆಗೆದುಕೊಂಡು ಹೋಗಲು ನಮ್ಮ ಹುಡುಗ ಬರುತ್ತಾನೆ. ನೀವು ರೆಡಿ ಮಾಡಿ ಇಡಿ, ನಾನು ಈಗಲೇ ನಿಮ್ಮ ಖಾತೆಗೆ ಹಣ ಹಾಕುತ್ತೇನೆ ಅಂತ ಹೇಳುತ್ತಾನೆ. ಎಷ್ಟು ಹಣ ಅಂತ ಆತ ಕೇಳಿದಾಗ , ಅಂಗಡಿ ಮಾಲಿಕ 2,800 ರೂಪಾಯಿ ಆಗುತ್ತದೆ ಎಂದು ಹೇಳುತ್ತಾರೆ.

ನೀವು ಲೈನ್ ನಲ್ಲೇ ಇರಿ, ಈಗಲೇ ನಿಮಗೆ ನಾನು ಹಣ ಟ್ರಾನ್ಸ್ ಫರ್ ಮಾಡುತ್ತೇನೆ ಅಂತ ಆ ವ್ಯಕ್ತಿ ಹೇಳುತ್ತಾನೆ. ಫೋನ್  ಲೈನ್ ನಲ್ಲಿ ಇರಿಸಿಕೊಂಡು ಆತ ಗೂಗಲ್ ಪೇ ನಂಬರ್ ಕೇಳ್ತಾನೆ. ಲೈನ್ ನಲ್ಲಿರುವ ಕಾರಣ ಅಂಗಡಿ ಮಾಲಿಕ ತನ್ನ ಪತ್ನಿಯ ಗೂಗಲ್ ಪೇ  ನಂಬರ್ ಕೊಡುತ್ತಾರೆ.

ಸ್ವಲ್ಪ ಹೊತ್ತಿನಲ್ಲೇ ಅಂಗಡಿ ಮಾಲಿಕರ ಪತ್ನಿಯ ನಂಬರ್ ಗೆ   28 ಸಾವಿರ ರೂಪಾಯಿ ಕ್ರೆಡಿಟ್ ಆಗಿದೆ ಅಂತ ಮೆಸೇಜ್ ಬರುತ್ತದೆ.  ಅಂಗಡಿ ಮಾಲಿಕ ಪತ್ನಿಗೆ ಕರೆ ಮಾಡಿದಾಗ 28 ಸಾವಿರ ಹಣ ಬಂದಿರುವುದಾಗಿ ಮೆಸೇಜ್ ಬಂದಿದೆ ಅಂತ ಅವರು ಹೇಳುತ್ತಾರೆ.

ಅದೇ ವೇಳೆ ಆ ಕಡೆಯಿಂದ  ಆ ವ್ಯಕ್ತಿ ಕರೆ ಮಾಡ್ತಾನೆ, ಸರ್ ನೀವು 2,800 ಹೇಳಿರೋದು. ಆದ್ರೆ, ನಾನು ತಪ್ಪಿ 28,000 ತಪ್ಪಿ ಹಾಕಿದ್ದೇನೆ. ನಿಮ್ಮ ಅಮೌಂಟ್ ಕಟ್ ಮಾಡಿಕೊಂಡು  ಆ ಅಮೌಂಟ್ ನನಗೆ ರಿಟನ್ ಮಾಡ್ತೀರಾ… ನನ್ನ ಮೆಡಿಸಿನ್ ಗೆ ಅಂತ ಇಟ್ಟುಕೊಂಡಿರುವ ಹಣ ಅದು ಅಂತ ರಿಕ್ವೆಸ್ಟ್ ಮಾಡಿಕೊಳ್ಳುತ್ತಾನೆ.

ಈ ವೇಳೆ ಅಂಗಡಿ ಮಾಲಿಕ,  ಓಕೆ ನೋ ಪ್ರಾಬ್ಲಂ, ನಾನು ನನ್ನ ವೈಫ್ ಜೊತೆ ಮಾತನಾಡಿ, ನಿಮ್ಮ ಹಣ ವಾಪಸ್ ಹಾಕ್ತೇನೆ ಅಂತ ಹೇಳುತ್ತಾರೆ.

ಹಾಗೆ ಅಂಗಡಿ ಮಾಲಿಕ ತನ್ನ ಪತ್ನಿಗೆ ಕರೆ ಮಾಡಿ, ಅವರು ತಪ್ಪಿ ಹೆಚ್ಚು ಹಣ ಹಾಕಿದ್ದಾರಂತೆ ಅಂತ ಹೇಳುತ್ತಾರೆ. ಈ ವೇಳೆ ಅಂಗಡಿ ಮಾಲಿಕರ ಪತ್ನಿ, ನಮಗೆ ಹಣ ಬಂದಿದೆ ಅಂತ ಮೆಸೇಜ್ ಬಂದಿದೆ. ಆದ್ರೆ ನಮ್ಮ ಅಕೌಂಟ್ ಗೆ ಹಣ ಕ್ರೆಡಿಟ್ ಆಗಿಲ್ಲ ಅಂತ  ಹೇಳುತ್ತಾರೆ.

ಅಂಗಡಿ ಮಾಲಿಕ ಮತ್ತೆ, ಆ ವ್ಯಕ್ತಿಗೆ ಕಾಲ್ ಮಾಡಿ, ನಮಗೆ ಮೆಸೇಜ್ ಬಂದಿದೆ. ಆದರೆ ನಮ್ಮ ಅಕೌಂಟ್ ಗೆ ಹಣ ಕ್ರೆಡಿಟ್ ಆಗಿಲ್ಲ ಅಂತ ಹೇಳ್ತಾರೆ. ಈ ವೇಳೆ ಆ ವ್ಯಕ್ತಿ ಮೆಸೇಜ್ ಬಂದಿದೆಯಾದ್ರೆ,  ಹಣ ನಿಮಗೆ ಸ್ವಲ್ಪ ಹೊತ್ತಿನಲ್ಲೇ ಬರಬಹುದು ಅಂತ ಹೇಳುತ್ತಾನೆ.

ಈ ವೇಳೆ ಅಂಗಡಿ ಮಾಲಿಕ ತನ್ನ ಪತ್ನಿಗೆ ಕಾನ್ಫರೆನ್ಸ್ ಕಾಲ್ ಮಾಡುತ್ತಾರೆ. ಈ ವೇಳೆ ಆ ವ್ಯಕ್ತಿ ಮೇಡಂ ನಿಮಗೆ ತಪ್ಪಿ 28 ಸಾವಿರ ಹಾಕಿದ್ದೇನೆ ಅಂತ ವಾದಿಸ್ತಾನೆ. ಈ ವೇಳೆ ಅಂಗಡಿ ಮಾಲಿಕನ ಪತ್ನಿ ಹೌದು..! ನಮಗೆ ಮೆಸೇಜ್ ಬಂದಿದೆ ಆದ್ರೆ ಹಣ ಅಕೌಂಟ್ ಗೆ ಕ್ರೆಡಿಟ್ ಆಗಿಲ್ಲ ಅಂತ ಹೇಳುತ್ತಾರೆ.

ಈ ವೇಳೆ ಆ ವ್ಯಕ್ತಿ ಕಣ್ಣೀರು ಹಾಕುತ್ತಾ, ಮೇಡಂ ಬೈ ಮಿಸ್ಟೇಕ್ ಹಣ ನಿಮ್ಮ ಅಕೌಂಟ್ ಗೆ ಬಂದಿದೆ. ನನಗೆ ಈಗ ಅರ್ಜೆಂಟ್ ಆಗಿ ಹಾಸ್ಪಿಟಲ್ ಬಿಲ್ ಕಟ್ಲಿಕ್ಕೆ ಇದೆ. 10 ಸಾವಿರ ಆದ್ರೂ ನಮ್ಮ ಬ್ಯಾಂಕ್ ಅಕೌಂಟ್ ಗೆ ಹಾಕಿ ಅಂತ. ಬಾಕಿಯ ಹಣ ನನ್ನ ಹುಡುಗ ಬರ್ತಾನೆ ಆ ಹಣ ಅವನ ಬಳಿಯಲ್ಲಿ ಕೊಡಿ ಅಂತ ಗೋಗರೆಯುತ್ತಾನೆ.

ಈ ವೇಳೆ ಅಂಗಡಿ ಮಾಲಿಕರಿಗೆ ಅನ್ನಿಸಿತಂತೆ, ನೆಟ್ ಬ್ಯಾಂಕಿಂಗ್ ಅಲ್ವಾ ಸ್ವಲ್ಪ ಸಮಯದ ನಂತರ ಹಣ ಬರಬಹುದು ಅಂತ ಹಾಗಾಗಿ, ಹಣ ಹಾಕಿ ಬಿಡು ಅಂತ ಪತ್ನಿಗೆ ಹೇಳುತ್ತಾರೆ. ಈ ವೇಳೆ ಅಂಗಡಿ ಮಾಲಿಕನ ಪತ್ನಿ ತನ್ನ ಪತಿಗೆ, ನೀನು ಕಾನ್ಫರೆನ್ಸ್ ಕಾಲ್ ಕಟ್ ಮಾಡಿ ನನಗೆ ಕಾಲ್ ಮಾಡು ಅಂತಾರೆ.

ಹಾಗಾಗಿ ಕಾನ್ಫರೆನ್ಸ್ ಕಾಲ್ ಕಟ್ ಮಾಡಿ ಮತ್ತೆ ಅಂಗಡಿ ಮಾಲಿಕ ತನ್ನ ಪತ್ನಿಗೆ ಕರೆ ಮಾಡುತ್ತಾರೆ. ಈ ವೇಳೆ ಪತ್ನಿ ಹೇಳುತ್ತಾರೆ, 28 ಸಾವಿರ ಹಣ ಬಂದಿದೆ ಅಂತ ನನ್ನ ಮೊಬೈಲ್ ಗೆ ಮೆಸೇಜ್ ಬಂದಿರೋದು ಬ್ಯಾಂಕ್ ನ ನಂಬರ್ ನಿಂದ ಅಲ್ಲ, ನಿನಗೆ ಕರೆ ಮಾಡಿದ ವ್ಯಕ್ತಿಯ ನಂಬರ್ ನಿಂದ ಆ ಮೆಸೇಜ್ ಬಂದಿದೆ. ಬ್ಯಾಂಕ್ ಖಾತೆಗೆ ಹಣ ಹಾಕಿದ್ರೆ, ಅದು ಬ್ಯಾಂಕ್ ನ ನಂಬರ್ ನಿಂದ ಮೆಸೇಜ್ ಬರುತ್ತದೆ ಅಲ್ವಾ ಅಂತ. ಈ ವೇಳೆ ಅಂಗಡಿ ಮಾಲಿಕನಿಗೆ ಈ ವಿಷಯ ಹೌದಲ್ವಾ ಅನ್ನಿಸಿದೆ.

ಅಷ್ಟೊತ್ತಿಗೆ ಆ ವ್ಯಕ್ತಿ ಮತ್ತೆ ಕಾಲ್ ಮಾಡ್ತಾನೆ… ಈ ವೇಳೆ ಈ ಮೆಸೇಜ್ ನಿಮ್ಮ ನಂಬರ್ ನಿಂದ ಬಂದಿರೋದು ಅದು ಹೇಗೆ ಆ ಥರ ಬಂದಿದೆ ಅಂತ ಕೇಳಿದಾಗ ಆ ಕಡೆಯಿಂದ ಕಾಲ್ ಡಿಸ್ ಕನೆಕ್ಟ್ ಆಗುತ್ತೆ. ಮತ್ತೆ ಇವರಿಗೆ ಅವರಿಂದ ಕರೆ ಬಂದಿಲ್ಲ.

ಈ ಘಟನೆಯ ನಂತರ ಅಂಗಡಿ ಮಾಲಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಈ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಆನ್ ಲೈನ್ ಬ್ಯಾಂಕಿಂಗ್ ನಲ್ಲಿ  ವಂಚನೆ ಅನ್ನೋದು ಕೇವಲ ಅಂಗಡಿಯವರಿಗೆ ಮಾತ್ರ ನಡೆಯುತ್ತಿಲ್ಲ. ನೆಟ್ ಬ್ಯಾಂಕ್ ಯಾರೆಲ್ಲ ಬಳಸುತ್ತಾರೋ ಅವರೆಲ್ಲರ ಮೇಲೆ ಕೂಡ ಇಂತಹ ವಂಚನೆ ಮಾಡಲು ಆನ್ ಲೈನ್ ಕಳ್ಳರು ಮುಂದಾಗಬಹುದು. ಹಾಗಾಗಿ ಆನ್ ಲೈನ್ ನಲ್ಲಿ ಹಣದ ವ್ಯವಹಾರ ಮಾಡಬೇಕಾದ್ರೆ, ನೂರು ಸಲ ಯೋಚಿಸಿ ತೀರ್ಮಾನ ಮಾಡಿ.

ಒಬ್ಬ ಸಾಮಾನ್ಯನಿಗೂ ಈ ರೀತಿಯಾಗಿ ವಂಚನೆ ಮಾಡಬಹುದು. ನಮಗೆ ಕೆಲವೊಂದು ಬಾರಿ ನಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎನ್ನುವುದೂ ಕೂಡ ತಿಳಿದಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನಾನು ನಿಮ್ಮ ಖಾತೆಗೆ ಹಣ ಹಾಕಿದ್ದೇನೆ ಮೆಸೇಜ್ ಚೆಕ್ ಮಾಡಿ ಅಂತ ಯಾವುದೋ ನಂಬರ್ ನಿಂದ ಮೆಸೇಜ್ ಕಳುಹಿಸಿ, ದಯವಿಟ್ಟು ರಿಟನ್ ಮಾಡಿ ಅಂತ ನಾಟಕವಾಡಿದ್ರೆ, ಮನುಷ್ಯತ್ವ ತೋರಿ, ನಂಬಿ ಹಣ ಹಾಕುವ ಎಷ್ಟೋ ಜನರು ನಮ್ಮ ನಡುವೆ ಇರುತ್ತಾರೆ.

ಅಂಗಡಿ ಮಾಲಿಕನ ಪತ್ನಿ ಸ್ವಲ್ಪ ಯೋಚನೆ ಮಾಡದೇ ಹೋಗಿದ್ದರೆ, ಅವರು ಹಣ ಕಳೆದುಕೊಳ್ಳಬೇಕಿತ್ತು. ಅವರ ಜಾಣ್ಮೆಗೆ ನಿಜವಾಗಿಯೂ ತಲೆಬಾಗಲೇ ಬೇಕು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ