ಸರ್ವೇಯರ್ ಆತ್ಮಹತ್ಯೆ ಕೇಸ್ ಗೆ ಟ್ವಿಸ್ಟ್: ಬ್ಲಾಕ್ ಮೇಲ್, ಒತ್ತಡದ ಶಂಕೆ

ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ನಿನ್ನೆ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಸರ್ವೇಯರ್ ಶಿವಕುಮಾರ್ ಸಾವಿಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಿವಕುಮಾರ್ ಬರೆದಿಟ್ಟಿದ್ದರೆನ್ನಲಾದ ಡೆತ್ ನೋಟ್ ಮೂಡಿಗೆರೆ ಸರ್ವೇ ಇಲಾಖೆ ಕಛೇರಿಯಲ್ಲಿ ಪತ್ತೆಯಾಗಿದ್ದು, ಅವರು ಕೆಲಸದ ಒತ್ತಡ ಜೊತೆಗೆ ಮಹಿಳೆಯೊಬ್ಬರಿಂದ ಬ್ಲಾಕ್ ಮೇಲ್ ಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಶಿವಕುಮಾರ್ ಅವರು ತಾವು ಸಾಯುವ ಮುನ್ನ ಬರೆದಿಟ್ಟುರುವ ಡೆತ್ ನೋಟ್ ನಲ್ಲಿ ಮೂವರ ಹೆಸರನ್ನು ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.
ಶಿವಕುಮಾರ್ ಅವರ ಪತ್ನಿ ಪುಷ್ಪಲತಾ ಅವರು ತಮ್ಮ ಪತಿ ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಹೆಸರಿಸಲಾಗಿರುವ ಆರೋಪಿತರಾದ ಗ್ರೆಗೋರಿಯನ್ ಡಿ ಕುನ್ನ, ಕುನ್ನಹಳ್ಳಿ ಗ್ರಾಮದ ವಾಸಿ, ಡೊನಾಲ್ಡ್ ಡಿಸೋಜ ಕುನ್ನಹಳ್ಳಿ ಗ್ರಾಮದ ವಾಸಿ ಹಾಗೂ ಸ್ವಪ್ನ ಮೂಡಿಗೆರೆ ವಾಸಿ ಇವರುಗಳ ಮೇಲೆ ಮೂಡಿಗೆರೆ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಸಾರಾಂಶ: ಮೂಡಿಗೆರೆ ಸರ್ವೆ ಶಾಖೆಯಲ್ಲಿ ಭೂ ಮಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ B.S. ಶಿವಕುಮಾರ ಎಂಬುವವರು ದಿನಾಂಕ 13.02.2025 ರಂದು ಬೆಳಿಗ್ಗೆ ಸುಮಾರು 11.30 ಗಂಟೆ ಸಮಯದಲ್ಲಿ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಯು,ಡಿ,ಆರ್, ನಂಬರ್ 03/2025 ಕಲಂ 194 (3)(IV) ಬಿ,ಎನ್,ಎಸ್,ಎಸ್, ರೀತ್ಯಾ ಪ್ರಕರಣ ದಾಖಲಾಗಿದ್ದು ನಂತರ ಸರ್ಕಾರಿ ಆಸ್ಪತ್ರೆ ಮೂಡಿಗೆರೆ ಶವಾಗಾರದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯುವ ಸಮಯದಲ್ಲಿ ಮೂಡಿಗೆರೆ ಸರ್ವೆ ಶಾಖೆಯ ADLR ಮಹದೇವಯ್ಯ H.R ರವರು ಬಂದು ಮೃತ ಶಿವಕುಮಾರ್ ರವರು ಕರ್ತವ್ಯ ನಿರ್ವಹಿಸುತ್ತಿದ್ದ ಸರ್ವೆ ಶಾಖೆಯ ಕಚೇರಿಯ ಅವರ ಟೇಬಲ್ ಮೇಲೆ ಒಂದು ಡೆತ್ ನೋಟ್ ಸಿಕ್ಕಿದೆ ಎಂದು ಮೃತರ ಪತ್ನಿ ಪುಷ್ಪಲತಾ ರವರಿಗೆ ತಿಳಿಸಿದ್ದು ಸದರಿ ಡೆತ್ ನೋಟ್ ನಲ್ಲಿ ಕುನ್ನ ಹಳ್ಳಿ ಗ್ರಾಮದ ಸರ್ವೇ ನಂಬರ್ 99 ರ ಜಮೀನಿನ ಅಳತೆ ವಿಚಾರದಲ್ಲಿ ಗ್ರೆಗೋರಿಯನ್ ಡಿ ಕುನ್ನ, ಕುನ್ನಹಳ್ಳಿ ಗ್ರಾಮದ ವಾಸಿ ಮತ್ತು ಡ್ರೊನಾಲ್ಡ್ ಡಿಸೋಜ ಕುನ್ನಹಳ್ಳಿ ಗ್ರಾಮದ ವಾಸಿರವರು ಕಿರುಕುಳ ನೀಡುತ್ತಿದ್ದು ಹಾಗೂ ಪರಿಚಯಸ್ಥ ಸ್ವಪ್ನ ಎನ್ನುವವರು ಮೊಬೈಲ್ ನಲ್ಲಿ ಸೇಕ್ಸಿಯಾಗಿ ಮಾತನಾಡಿದ್ದು ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದರಿಂದ ತಾನು ಆತ್ಮ ಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ತಿಳಿಸಿದ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೇಲ್ಕಂಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ.
ಸರ್ವೆಗೆ ಹೋದಾಗ ಪರಿಚಯವಾಗಿದ್ದ ಸ್ವಪ್ನ ಎಂಬ ಯುವತಿ ಜೊತೆ ಫೋನಿನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ಶಿವಕುಮಾರ್ ಬಳಿ ಮಹಿಳೆ ಹಣಕ್ಕಾಗಿ ಪೀಡಿಸುತ್ತಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರ ಎಫ್ಐಆರ್‌ನಲ್ಲಿ ಕೂಡ ಪ್ರಸ್ತಾಪವಾಗಿದೆ.
ಈ ಮಧ್ಯೆ ಶಿವಕುಮಾರ್ ಸರ್ವೆಯರ್ ಆಗಿದ್ದರಿಂದ ಸರ್ವೇ ವಿಚಾರವಾಗಿ ಸರಿಯಾಗಿ ಸರ್ವೆ ಮಾಡಿಲ್ಲ ಎಂದು ಗ್ರೆಗೋರಿಯನ್ ಡಿ ಕುನ್ನ ಮತ್ತು ಡ್ರೊನಾಲ್ಡ್ ಡಿಸೋಜ ಕುನ್ನಹಳ್ಳಿ ಗ್ರಾಮದ ವಾಸಿ ಇಬ್ಬರು ಅವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಮಾನತ್ತಾಗುತ್ತೇನೆ ಎಂದು ಆತಂಕಕ್ಕೀಡಾಗಿದ್ದರು. ಹಾಗಾಗಿ, ಕಳೆದ ಎಂಟತ್ತು ತಿಂಗಳಿಂದ ಮನೆಯಲ್ಲಿ ಏಕಾಂಗಿಯಾಗಿದ್ದ ಶಿವಕುಮಾರ್ ಖಿನ್ನತೆಗೆ ಓಳಗಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಮೃತ ಶಿವಕುಮಾರ್ ಗೆ ಪತ್ನಿ ಹಾಗೂ ಮಗಳಿದ್ದು, ಮಗಳ ಓದಿಗಾಗಿ ಪತ್ನಿ ಹಾಗೂ ಮಗಳು ಬೆಂಗಳೂರಿನಲ್ಲಿ ವಾಸವಿದ್ದರು. ಮೃತ ಸರ್ವೆಯರ್ ಮೂಲತಃ ತುಮಕೂರು ಜಿಲ್ಲೆಯ ಬೆಣ್ಣೆಹಳ್ಳ ಮೂಲದವರು. ಕಳೆದ ಆರು ವರ್ಷಗಳಿಂದ ಮೂಡಿಗೆರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪೊಲೀಸರು ದೂರಿನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಡೆತ್ ನೋಟ್ ನಲ್ಲಿ ಹೆಸರಿಸಿರುವ ಸ್ವಪ್ನ ಎಂಬ ಯುವತಿ ಯಾರೆಂಬುದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: