ವಯನಾಡು ಭೂಕುಸಿತ: ರಾಜ್ಯ ಸರ್ಕಾರದಿಂದ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಇಬ್ಬರು ಐಎಎಸ್ ಅಧಿಕಾರಿಗಳ ನಿಯೋಜನೆ
ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಪ್ರದೇಶದಲ್ಲಿ ಭೂ ಕುಸಿತದಿಂದ ಉಂಟಾಗಿರುವ ವಿಪತ್ತಿನ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಕರ್ನಾಟಕ ಸರ್ಕಾರವು ತ್ವರಿತವಾಗಿ ಎಲ್ಲ ರೀತಿಯ ಸಹಕಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಇದಕ್ಕಾಗಿ ಇಬ್ಬರು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿ, ಗಡಿಭಾಗದ ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ತಂಡಗಳನ್ನು ಕಳುಹಿಸಿ,ಅಗತ್ಯ ವೈದ್ಯಕೀಯ ಸೌಕರ್ಯಗಳ ಏರ್ಪಾಡು ಕೂಡ ಮಾಡಿಕೊಳ್ಳಲಾಗಿದೆ.
ನವದೆಹಲಿಯಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು ವಯನಾಡಿನಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಬೆಂಗಳೂರಿನಲ್ಲಿರುವ ಎನ್ ಡಿ ಆರ್ ಎಫ್ ತಂಡ ಹಾಗೂ ಭಾರತೀಯ ಸೇನೆಯ ಮದ್ರಾಸ್ ಎಂಜಿನಿಯರ್ ಗ್ರೂಪ್ ನ ಪಡೆಯ ತಂಡಗಳು ತ್ವರಿತವಾಗಿ ತೆರಳಲು ಹಾಗೂ ಅಗತ್ಯ ಉಪಕರಣಗಳು ಮತ್ತು ಇತರ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಸೂಚಿಸಿದ್ದಾರೆ.
ಎಂಇಜಿ ಯ ಒಬ್ಬರು ಅಧಿಕಾರಿ, ಇಬ್ಬರು ಜೆ.ಸಿ.ಓ. ಗಳು ಹಾಗೂ 70 ಮಂದಿ ವಿವಿಧ ಶ್ರೇಣಿಗಳ ಸಿಬ್ಬಂದಿ ಈಗಾಗಲೇ ರಕ್ಷಣೆ ಹಾಗೂ ಪರಿಹಾರ ಸಾಮಗ್ರಿಗಳೊಂದಿಗೆ 15 ವಾಹನಗಳಲ್ಲಿ ವಯನಾಡಿಗೆ ತೆರಳಿದ್ದಾರೆ. ಇನ್ನೂ ಇಬ್ಬರು ಅಧಿಕಾರಿಗಳು, ನಾಲ್ಕು ಮಂದಿ ಜೆ.ಸಿ.ಓ.ಗಳು, ಹಾಗೂ 100 ಮಂದಿ ಸೇನಾ ಸಿಬ್ಬಂದಿ ರಕ್ಷಣಾ ಉಪಕರಣಗಳೊಂದಿಗೆ 40 ವಾಹನಗಳಲ್ಲಿ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ತಂಡಗಳು ವಯನಾಡಿಗೆ ಶೀಘ್ರವೇ ತಲುಪಲು ಅನುವಾಗುವಂತೆ, ಬಂಡಿಪುರ ಚೆಕ್ ಪೋಸ್ಟ್ ನಲ್ಲಿ ಈ ಎನ್ ಡಿ ಆರ್ ಎಫ್ ಹಾಗೂ ಸೇನೆಯ ತಂಡಗಳಿಗೆ ಹಾಗೂ ಪರಿಹಾರ ಸಾಮಗ್ರಿಗಳ ಸಾಗಾಣಿಕೆ ವಾಹನಗಳಿಗೆ ಗ್ರೀನ್ ಕಾರಿಡಾರ್ ಮೂಲಕ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.
ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ನೆರವು ಒದಗಿಸಲಾಗುತ್ತಿದೆ. ಅಲ್ಲದೆ ಗಡಿ ಭಾಗದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹ ಸೂಕ್ತ ಬೆಂಬಲ ನೀಡುತ್ತಿದ್ದಾರೆ.
ಭೂಕುಸಿತದ ತ್ಯಾಜ್ಯ ವಿಲೇವಾರಿಗೆ ಲೋಕೋಪಯೋಗಿ ಇಲಾಖೆ ನೆರವು:
ವಯನಾಡಿನಲ್ಲಿ ಭೂಕುಸಿತದಿಂದ ಉಂಟಾಗಿರುವ ತ್ಯಾಜ್ಯಗಳ ತೆರವಿಗೆ ರಾಜ್ಯದಿಂದ ಅಗತ್ಯ ಜೆಸಿಬಿ,ಕ್ರೇನ್ ಮತ್ತಿತರ ಭಾರೀ ವಾಹನಗಳ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ಕೈಗೊಳ್ಳುತ್ತಿದೆ.
ಮುಖ್ಯಮಂತ್ರಿಗಳು ಸ್ವತಃ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಚರಣೆಗೆ ಎಲ್ಲ ರೀತಿಯ ಬೆಂಬಲ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದಲ್ಲದೆ ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತಂತೆ ಸಮನ್ವಯಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಪಿ.ಸಿ. ಜಾಫರ್ (ಮೊಬೈಲ್ ಸಂಖ್ಯೆ 9448355577) ಹಾಗೂ ದಿಲೀಶ್ ಶಶಿ (9446000514) ಅವರನ್ನು ನಿಯೋಜಿಸಲಾಗಿದೆ.
ಕನ್ನಡಿಗರ ರಕ್ಷಣೆಗೆ ಪ್ರಯತ್ನ:
ವಯನಾಡಿನಲ್ಲಿ ಕನ್ನಡಿಗರು ಸಿಲುಕಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದು, ಅವರ ರಕ್ಷಣೆಗೆ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಚಾಮರಾಜನಗರ:
ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಹಾಗೂ ಸುತ್ತಲಿನ ಪ್ರದೇಶಗಳ ಅಸಂಘಟಿತ ಕಾರ್ಮಿಕರು ಅಲ್ಲಿಗೆ ನಿಯಮಿತವಾಗಿ ಕೆಲಸಕ್ಕಾಗಿ ತೆರಳಿರುವ ಸಾಧ್ಯತೆ ಇರುವುದರಿಂದ ಅಂತಹವರು ಕಣ್ಮರೆಯಾಗಿದ್ದಾರೆ ಅವರು ಸಂಬಂಧಿಕರು,ಪರಿಚಿತರು ಮಾಹಿತಿ ನೀಡಲು ಚಾಮರಾಜನಗರ ಜಿಲ್ಲಾಡಳಿತವು 24/7 ಸಹಾಯವಾಣಿ ಸ್ಥಾಪಿಸಿದೆ.ಸಹಾಯವಾಣಿ ಸಂಖ್ಯೆಗಳು- 08226-223161,223163,223160 ಅಥವಾ ವಾಟ್ಸಪ್ ಸಂಖ್ಯೆ 9740942902 ಮೂಲಕ ಸಾರ್ವಜನಿಕರು ಸಂಪರ್ಕಿಸಲು ಕೋರಿದೆ.
ಮಾರ್ಗ ಸ್ಥಗಿತ:
ಗುಂಡ್ಲುಪೇಟೆ ಮಾರ್ಗವಾಗಿ ಸಾಗುವ ಬೆಂಗಳೂರು-ವೈನಾಡ್ ರಾಷ್ಟ್ರೀಯ ಹೆದ್ದಾರಿ 766 ರ ಮಾರ್ಗದಲ್ಲಿ ಸಂಚಾರ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧಿಸಲಾಗಿದ್ದು.ಪರ್ಯಾಯವಾಗಿ ಗುಂಡ್ಲುಪೇಟೆ-ಬಂಡೀಪುರ-ಗುಡಲೂರ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ.
ಮೈಸೂರು:
ಮೈಸೂರು ಜಿಲ್ಲಾಡಳಿತವು ಕೂಡ ಹೆಗ್ಗಡದೇವನಕೋಟೆ ತಾಲ್ಲೂಕು ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.ವೈದ್ಯರನ್ನು ನಿಯೋಜಿಸಿದೆ.ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲು ಸಾಕಷ್ಟು ಬಸ್,ವಾಹನಗಳನ್ನು ಅಣಿಗೊಳಿಸಲಾಗಿದೆ.ಪಾರ್ಥಿವ ಶರೀರಗಳ ಸಂರಕ್ಷಣೆಗೆ ಶೈತ್ಯಾಗಾರದ ಘಟಕಗಳನ್ನು ಒದಗಿಸುವ ಸರಬರಾಜುದಾರನ್ನು ಗುರುತಿಸಲಾಗಿದೆ. ಮೈಸೂರು ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ:0821-24223800
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: