ಮುಸ್ಲಿಮರು, ಕ್ರೈಸ್ತರು, ಬೌದ್ಧರು ಯಾಕೆ ಮತಾಂತರವಾಗುವುದಿಲ್ಲ? | ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಒಂದು ಪ್ರಶ್ನೆ - Mahanayaka

ಮುಸ್ಲಿಮರು, ಕ್ರೈಸ್ತರು, ಬೌದ್ಧರು ಯಾಕೆ ಮತಾಂತರವಾಗುವುದಿಲ್ಲ? | ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಒಂದು ಪ್ರಶ್ನೆ

03/11/2020

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಿಂದನಾತ್ಮಕ ಹೇಳಿಕೆಗಳಿಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಮುಸ್ಲಿಮರು, ಕ್ರೈಸ್ತರು ಹಿಂದೂಗಳನ್ನು ಮತಾಂತರ ಮಾಡುತ್ತಾರೆ, ಇಂಡಿಯಾವನ್ನು ಪಾಕಿಸ್ತಾನ, ಇಂಗ್ಲೆಂಡ್ ಮಾಡುತ್ತಾರೆ ಎಂಬಂತಹ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ನಿನ್ನೆಯೂ ಅವರು ಮಂಗಳೂರಿನ ಉಳ್ಳಾಲವನ್ನು ಪಾಕಿಸ್ತಾನ ಎಂದು ಕರೆದು ಜನರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ. ಇದೇ ಸಂದರ್ಭಗಳಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಪ್ರಶ್ನೆಗಳು ಯಾವುದೂ ಭಾವನಾತ್ಮಕವಾದದ್ದು ಅಲ್ಲ ಎಲ್ಲವೂ ವಾಸ್ತವವಾದದ್ದು.



Provided by

ಹಿಂದೂ ಧರ್ಮದಿಂದ ಮುಸ್ಲಿ, ಕ್ರೈಸ್ತ, ಬೌದ್ಧ ಧರ್ಮಕ್ಕೆ ಜನರು ಮತಾಂತರವಾಗುತ್ತಿದ್ದಾರೆ ಎನ್ನುವ ವಿಚಾರಗಳನ್ನು ಕಲ್ಲಡ್ಕ ಪ್ರಭಾಕರ್ ಭಟ್ ಸಹಿತ ಹಲವು ಆರೆಸ್ಸೆಸ್ ನಾಯಕರು ಜನರ ಮನಸ್ಸಿಗೆ ತುಂಬುತ್ತಲೇ ಬರುತ್ತಿದ್ದಾರೆ. ಓರ್ವ ಹಿಂದೂವಾಗಿ  ಅವರ ಧರ್ಮದ ಮೇಲಿನ ಗೌರವವನ್ನು ಗೌರವಿಸೋಣ. ಆದರೆ, ಆ ಮತಾಂತರಕ್ಕೆ ಕ್ರೈಸ್ತರು, ಮುಸ್ಲಿಮರೇ ಕಾರಣ ಎನ್ನುವ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಹಿಂದೂ ಧರ್ಮದಲ್ಲಿ ಮತಾಂತರವಾಗಲು ಮುಖ್ಯ ಕಾರಣ, ಜಾತಿಬೇಧ. ಹಿಂದೂ ಧರ್ಮದಲ್ಲಿ ಜಾತಿಯ ಹೆಸರಿನಲ್ಲಿ ಮೇಲು ಕೀಳು ಎನ್ನುವುದನ್ನು ಸೃಷ್ಟಿಸಲಾಗಿದೆ. ಇದನ್ನು ಆರೆಸ್ಸೆಸ್ ಕೂಡ ಬಾಹ್ಯವಾಗಿ ಬೆಂಬಲಿಸುತ್ತಿದೆ. ಹಾಗಾಗಿಯೇ ಈ ಪದ್ಧತಿ ಇಂದಿಗೂ ಹಿಂದೂಗಳು ಎಂದೆನಿಸಿಕೊಂಡವರನ್ನು ಪ್ರತಿದಿನ ನೋಯಿಸುತ್ತಿದೆ. ಈ ನೋವಿನಿಂದಾಗಿಯೇ ಬಹಳಷ್ಟು ಜನರು ಈಗಾಗಲೇ ಬೇರೆ ಧರ್ಮಗಳಿಗೆ ಮತಾಂತರವಾಗಿದ್ದಾರೆಯೇ ಹೊರತು, ಕಲ್ಲಡ್ಕ ಪ್ರಭಾಕರ್ ಭಟ್ ಸುಳ್ಳು ಕಥೆಗಳು ನಿಜವಲ್ಲ.


ಕಲ್ಲಡ್ಕ ಪ್ರಭಾಕರ ಭಟ್ ಅವರು, ಬಂಟ, ಬಿಲ್ಲವ, ದಲಿತ ಹೀಗೆ ಎಲ್ಲ ಅಸ್ಪೃಶ್ಯ ಸಮುದಾಯಗಳಿಗೆ ಭಾಷಣ ಮಾಡುತ್ತಾರೆ. ಹಿಂದೂ ಧರ್ಮವನ್ನು ಉಳಿಸಿ ಎಂದು. ಆದರೆ, ಇಂದಿಗೂ ದೇವಸ್ಥಾನಗಳಲ್ಲಿ ಪ್ರತ್ಯೇಕ ಪಂಕ್ತಿಗಳಲ್ಲಿ ಕುಳಿತು ಕಲ್ಲಡ್ಕ ಪ್ರಭಾಕರ್ ಭಟ್ ಅವರ ಸಮುದಾಯ ಊಟ ಮಾಡುತ್ತಿದೆ. ಇದನ್ನು ಯಾವುದಾದರೂ ಬಹಿರಂಗ ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ವಿರೋಧಿಸಿದ್ದನ್ನು ಯಾರೂ ಕಂಡಿಲ್ಲ. ಹಾಗೆಯೇ ಆರೆಸ್ಸೆಸ್ ನಾಯಕರು ಕೂಡ ಇದನ್ನು ವಿರೋಧಿಸಿರುವುದನ್ನು ಎಲ್ಲಿಯೂ ಕಂಡಿಲ್ಲ. ಕೆಲವು ವರ್ಷಗಳ ಹಿಂದೆಯಷ್ಟೇ ಉಡುಪಿಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಾಬಲ್ಯ ಇರುವ ಪ್ರಮುಖ ದೇವಸ್ಥಾನವೊಂದರಲ್ಲಿ ಬಂಟ ಸಮುದಾಯದ ಮಹಿಳೆ ಬ್ರಾಹ್ಮಣರ ಜೊತೆಗೆ ಊಟಕ್ಕೆ ಕುಳಿತಾಗ ಆಕೆಗೆ ಅವಮಾನ ಮಾಡಿ ಅಲ್ಲಿಂದ ಹೊರ ದಬ್ಬಿದರು. ದುರಂತವೇನೆಂದರೆ, ಬಂಟ ಸಮುದಾಯ ಇದು ಯಾಕೆ ಎಂದು ಕೂಡ ಪ್ರಶ್ನಿಸುವಷ್ಟೂ ಪ್ರಬುದ್ಧತೆ ತೋರಲಿಲ್ಲ. ಈ ರೀತಿಯಾಗಿ ಅವಮಾನವನ್ನು ಪ್ರತಿಯೊಬ್ಬರೂ ಎದುರಿಸುವವರೆಗೂ ಪ್ರತಿಯೊಬ್ಬ ಹಿಂದೂವಿಗೂ “ಹಿಂದೂಗಳು ಯಾಕೆ ಮತಾಂತರವಾಗುತ್ತಿದ್ದಾರೆ. ಅವರ ನೋವೇನು ಎನ್ನುವುದು ತಿಳಿಯಲು ಸಾಧ್ಯವಿಲ್ಲ.


ಕ್ರೈಸ್ತರು ಪ್ರತಿಯೊಬ್ಬ ಕ್ರೈಸ್ತರನ್ನು ತನ್ನ ಸಮಾನವಾಗಿ ನೋಡುತ್ತಾರೆ. ಮುಸ್ಲಿಮರು ಪ್ರತಿ ಮುಸಲ್ಮಾನನನ್ನೂ ಸಮಾನವಾಗಿ ನೋಡುತ್ತಾರೆ. ಬೌದ್ಧರು ಬುದ್ಧವಂದನೆ ಮಾಡುವಾಗ ಪ್ರತಿ ಬೌದ್ಧನನ್ನೂ ಸಮಾನವಾಗಿ ನೋಡುತ್ತಾರೆ. ಅಲ್ಲಿ ಬಡವ ಶ್ರೀಮಂತ ಯಾವುದೂ ಇರುವುದಿಲ್ಲ. ಮಸೀದಿಯಲ್ಲಿ ನಮಾಝ್ ಮಾಡುವಾಗ, ಚರ್ಚ್ ನಲ್ಲಿ ಪ್ರಾರ್ಥನೆ ಮಾಡುವಾಗ, ಬುದ್ಧವಂದನೆ ಮಾಡುವಾಗ ಪ್ರತಿಯೊಬ್ಬರೂ ಸಮಾನರು. ಈವರೆಗೆ ಚರ್ಚ್ ಗೆ ಪ್ರವೇಶಿಸಿದ್ದಕ್ಕಾಗಿ, ಮಸೀದಿಗೆ ಪ್ರವೇಶಿಸಿದ್ದಕ್ಕಾಗಿ, ಬೌದ್ಧ ವಿಹಾರಕ್ಕೆ ಪ್ರವೇಶಿಸಿದ್ದಕ್ಕಾಗಿ ಒಬ್ಬನೇ ಒಬ್ಬ ವ್ಯಕ್ತಿಯನ್ನು ಜೀವಂತ ಸುಟ್ಟು ಕೊಂದ ಉದಾಹರಣೆ ಭಾರತದಲ್ಲಿ ಮಾತ್ರವಲ್ಲ. ಇಡೀ ಪ್ರಪಂಚದಲ್ಲಿ ಕಾಣಲು ಸಿಗುವುದಿಲ್ಲ. ಆದರೆ ದಲಿತನೊಬ್ಬ ದೇವಸ್ಥಾನ ಪ್ರವೇಶಿಸಿದ ಎಂಬ ಕಾರಣಕ್ಕಾಗಿ ಹೊಡೆದು ಕೊಲ್ಲುವುದು, ಜೀವಂತ ಸುಡುವುದು, ಮೂತ್ರ ಕುಡಿಸುವುದು ಮೊದಲಾದ ಘಟನೆಗಳು ಆಗಾಗ ಮಾಧ್ಯಮಗಳಲ್ಲಿ ಕಾಣಸಿಗುತ್ತವೆ. ಇಷ್ಟೆಲ್ಲ ಹಿಂಸೆ ನೀಡಿದರೆ ಯಾರಾದರೂ ಒಂದು ಧರ್ಮದಲ್ಲಿ ನಿಲ್ಲಬೇಕು ಎಂದು ಬಯಸಲು ಕೂಡ ಸಾಧ್ಯವೇ?


ನಾವು ಮಾಂಸಾಹಾರಿಗಳ ಜೊತೆಗೆ ಊಟ ಮಾಡುವುದಿಲ್ಲ ಎಂದು ಬ್ರಾಹ್ಮಣರು ವಾದಿಸುತ್ತಾರೆ. ಆದರೆ, ಅದೇ ಮಾಂಸಹಾರಿಗಳು ಹಣಕೊಟ್ಟರೆ ಪೂಜೆ ಮಾಡುತ್ತಾರೆ. ದಕ್ಷಿಣೆ ಹಾಕಿದರೆ ಅದನ್ನು ಸ್ವೀಕರಿಸುತ್ತಾರೆ. ಅದೆಲ್ಲ ಯಾವುದೇ ಮೈಲಿಗೆ ಅನ್ನಿಸುವುದಿಲ್ಲ. ಇಂದು ಹಿಂದೂಗಳು ಮತಾಂತರವಾಗಲು ನೇರ ಕಾರಣ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಪ್ರತಿನಿಧಿಸುವ ಅವರ ಸಮುದಾಯವೇ ಹೊರತು, ಮುಸ್ಲಿಮರು, ಕ್ರೈಸ್ತರು, ಬೌದ್ಧರು ಕಾರಣವಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಿಜವಾಗಿಯೂ ಹಿಂದೂ ಸಮಾಜದ ಮೇಲೆ ಕಾಳಜಿ ಇದ್ದರೆ, ಪ್ರತಿಯೊಬ್ಬ ಬ್ರಾಹ್ಮಣರಲ್ಲಿಯೂ  ಅಸ್ಪೃಶ್ಯತೆಯ ವಿರುದ್ಧ ಜಾಗೃತಿ ಮೂಡಿಸಲಿ. ನಾವೆಲ್ಲರೂ ಹಿಂದೂಗಳು ಇಲ್ಲಿ ಯಾರೂ ಶ್ರೇಷ್ಟರಲ್ಲ ಎನ್ನುವುದನ್ನು ತಿಳಿ ಹೇಳಲಿ. ಈ ಭೇಧ ಭಾವಗಳನ್ನು ಬಿಡಿ, ಎಲ್ಲಾ ಹಿಂದೂಗಳು ಸುಖ-ಸಂತೋಷದಿಂದ, ಪ್ರೀತಿ ಸೌಹಾರ್ದತೆಯಿಂದ ಬಾಳಲಿ ಎಂದು ಬುದ್ಧಿ ಹೇಳಲಿ. ಈ ಕೆಲಸವನ್ನು ಮಾಡಿದ ಬಳಿಕ ನೀವು ಬೇರೆ ಸಮುದಾಯದ ಯುವಕರಿಗೆ ಪಾಠ ಮಾಡಲು ನೈತಿಕತೆ ಹೊಂದಿರುತ್ತೀರೇ ವಿನಃ ಇದನ್ನು ಮಾಡದೇ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂದು ಜನ ಕೇಳುತ್ತಿದ್ದಾರೆ.


ಇತ್ತೀಚಿನ ಸುದ್ದಿ