ಶೋಭಾ ಕರಂದ್ಲಾಜೆ ಚುನಾವಣಾ ಪ್ರಚಾರದ ವೇಳೆ ಓರ್ವ ಯುವಕ ಅಪಘಾತಕ್ಕೆ ಬಲಿ!

ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಅವರ ಕಾರಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ.
ಪ್ರಕಾಶ್(35) ಮೃತಪಟ್ಟ ಯುವಕನಾಗಿದ್ದಾನೆ. ಸೋಮವಾರ ಬೆಳಗ್ಗೆ ಕೆ.ಆರ್.ಪುರ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಪ್ರಚಾರಕ್ಕಾಗಿ ಆಗಮಿಸಿದ್ದರು. ಇಲ್ಲಿನ ದೇವಸ್ಥಾನದ ಬಳಿಯಲ್ಲಿ ತಮ್ಮ ಕಾರು ನಿಲ್ಲಿಸಿದ್ದರು.
ಕಾರಿನ ಬಾಗಿಲನ್ನು ಸರಿಯಾಗಿ ಗಮನಿಸದೇ ತೆರೆದ ವೇಳೆ ಹಿಂದಿನಿಂದ ಬಂದ ಬೈಕ್ ಕಾರಿನ ಡೋರ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಪ್ರಕಾಶ್ ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಅವರ ಮೇಲೆ ಬಸ್ ಹರಿದಿದ್ದು, ತಕ್ಷಣ ಆವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಾಂದ್ಲಾಜೆ, ನಮ್ಮ ಕಾರ್ಯಕರ್ತ ಪ್ರಕಾಶ್ ಗೆ ಆಕ್ಸಿಡೆಂಟ್ ಆಗಿದೆ. ನಾವು ರ್ಯಾಲಿಯಲ್ಲಿ ಮುಂದೆ ಹೋಗಿದ್ವಿ. ರಸ್ತೆ ಬದಿ ನಿಂತಿದ್ದ ನಮ್ಮ ಕಾರು ಡೋರ್ ಓಪನ್ ಆದಾಗ ಬೈಕ್ ನಲ್ಲಿ ಬಂದು ಡಿಕ್ಕಿ ಹೊಡೆದಿದ್ದಾರೆ.
ಬಳಿಕ ಕೆಳಗೆ ಬಿದ್ದಿದ್ದಾಗ ಬಸ್ ಹರಿದಿದೆ. ಪೋಸ್ಟ್ ಮಾರ್ಟಮ್ ನಲ್ಲಿ ಸಾವು ಹೇಗೆ ಆಗಿದೆ ಎನ್ನುವುದು ತಿಳಿಯಲಿದೆ. ನಮಗೆಲ್ಲರಿಗೂ ದುಃಖ ಆಗಿದೆ, ಪ್ರಕಾಶ್ ನಿಷ್ಟಾವಂತ ಕಾರ್ಯಕರ್ತ. ಕುಟುಂಬಕ್ಕೆ ಪಕ್ಷದಿಂದ ಪರಿಹಾರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth