ವೈಯಕ್ತಿಕ ದ್ವೇಷಕ್ಕೆ 150ಕ್ಕೂ ಅಧಿಕ ಅಡಿಕೆ ಗಿಡಗಳು ಬಲಿ: ತರೀಕೆರೆಯಲ್ಲಿ ಕಿಡಿಗೇಡಿಗಳ ಅಟ್ಟಹಾಸ
ಚಿಕ್ಕಮಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದುಷ್ಟರು 150ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ರಾತ್ರೋರಾತ್ರಿ ಕಡಿದು ಹಾಕಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ.
ಕರಕುಚ್ಚಿ ಗ್ರಾಮದ ರೈತ ಸಣ್ಣಪ್ಪ ಎಂಬುವರು ತಮ್ಮ ಮುಕ್ಕಾಲು ಎಕರೆ ಜಮೀನಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಷ್ಟಪಟ್ಟು ಈ ಅಡಿಕೆ ಗಿಡಗಳನ್ನು ಬೆಳೆಸಿದ್ದರು. ಮುಂದಿನ ವರ್ಷದಿಂದ ಸಮೃದ್ಧ ಫಸಲು ನೀಡಲು ಸಜ್ಜಾಗಿದ್ದ ಈ ಮರಗಳನ್ನು ಕಂಡು ಸಂತಸದಲ್ಲಿದ್ದ ರೈತನಿಗೆ ಕಿಡಿಗೇಡಿಗಳು ತೀವ್ರ ಆಘಾತ ನೀಡಿದ್ದಾರೆ. ತಮ್ಮ ವೈಯಕ್ತಿಕ ವೈಷಮ್ಯಕ್ಕಾಗಿ ಬೆಳೆದು ನಿಂತಿದ್ದ ಅಡಿಕೆ ತೋಟವನ್ನು ಸಂಪೂರ್ಣವಾಗಿ ನಾಶಪಡಿಸಿ ರಾತ್ರೋರಾತ್ರಿ ವಿಕೃತಿ ಮೆರೆದಿದ್ದಾರೆ.
ನಾಲ್ಕು ವರ್ಷಗಳಿಂದ ಮಕ್ಕಳಂತೆ ಸಾಕಿ ಬೆಳೆಸಿದ ಗಿಡಗಳು ನೆಲಸಮವಾಗಿರುವುದನ್ನು ಕಂಡು ರೈತ ಸಣ್ಣಪ್ಪ ಹಾಗೂ ಅವರ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಈ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಕೃತ್ಯ ಎಸಗಿದ ಕಿಡಿಗೇಡಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.




























