ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ 2026: ನಾಮನಿರ್ದೇಶನ ಪಟ್ಟಿ ಪ್ರಕಟ; ರಿಷಬ್ ಶೆಟ್ಟಿಗೆ ಡಬಲ್ ಧಮಾಕಾ!
ಮೆಲ್ಬೋರ್ನ್ನಲ್ಲಿ ನಡೆಯಲಿರುವ ಪ್ರತಿಷ್ಠಿತ 17ನೇ ಆವೃತ್ತಿಯ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ (IFFM) 2026ರ ಪ್ರಶಸ್ತಿಗಳ ನಾಮನಿರ್ದೇಶನ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ‘ಕಾಂತಾರ: ಎ ಲೆಜೆಂಡ್ — ಚಾಪ್ಟರ್ 1’ ಸಿನಿಮಾ ಪ್ರಮುಖ ವಿಭಾಗಗಳಲ್ಲಿ ನಾಮಿನೇಟ್ ಆಗುವ ಮೂಲಕ ಅಬ್ಬರಿಸಿದೆ.
ಕನ್ನಡ ಚಿತ್ರರಂಗದ ರಿಷಬ್ ಶೆಟ್ಟಿ ಅವರಿಗೆ ಈ ಸಾಲಿನ ಮೆಲ್ಬೋರ್ನ್ ಚಿತ್ರೋತ್ಸವದಲ್ಲಿ ಡಬಲ್ ಧಮಾಕಾ ಸಿಕ್ಕಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರದ ಅದ್ಭೂತ ನಟನೆಗಾಗಿ ಅವರು ‘ಉತ್ತಮ ನಟ’ (Male) ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ಇದರ ಜೊತೆಗೆ ಚಿತ್ರದ ಗಜಗಾತ್ರದ ಮೇಕಿಂಗ್ ಮತ್ತು ಕಲ್ಪನೆಗಾಗಿ ‘ಉತ್ತಮ ನಿರ್ದೇಶಕ’ ವಿಭಾಗದಲ್ಲೂ ರಿಷಬ್ ಸ್ಥಾನ ಪಡೆದುಕೊಂಡಿದ್ದಾರೆ.
ಉತ್ತಮ ನಟರ ವಿಭಾಗದಲ್ಲಿ ತೀವ್ರ ಪೈಪೋಟಿ:
ಅತ್ಯುತ್ತಮ ನಟ ಪ್ರಶಸ್ತಿಗಾಗಿ ಭಾರತೀಯ ಚಿತ್ರರಂಗದ ದೈತ್ಯ ನಟರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ರಿಷಬ್ ಶೆಟ್ಟಿ ಅವರ ಜೊತೆಗೆ ಬಾಲಿವುಡ್ ನ ಆಮೀರ್ ಖಾನ್, ರಣವೀರ್ ಸಿಂಗ್, ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟ್ಟಿ ಹಾಗೂ ದುಲ್ಕರ್ ಸಲ್ಮಾನ್ ಮುಂತಾದವರು ಈ ರೇಸ್ನಲ್ಲಿದ್ದಾರೆ.
ಅತ್ಯುತ್ತಮ ಚಿತ್ರಗಳ ರೇಸ್ ನಲ್ಲಿ ‘ಕಾಂತಾರ: ಚಾಪ್ಟರ್ 1’:
ವಿಶ್ವದಾದ್ಯಂತ ಭಾರೀ ಕುತೂಹಲ ಮೂಡಿಸಿರುವ ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ಚಿತ್ರವು ‘ಅತ್ಯುತ್ತಮ ಸಿನಿಮಾ’ (Best Film) ವಿಭಾಗದಲ್ಲೂ ನಾಮನಿರ್ದೇಶನಗೊಂಡಿದೆ. ಇದರೊಂದಿಗೆ ‘ಸಿತಾರೆ ಜಮೀನ್ ಪರ್’, ‘ಹಕ್’, ‘ಜರನ್’ ಸೇರಿದಂತೆ ಹಲವು ವಿಭಿನ್ನ ಭಾಷೆಗಳ ಸಿನಿಮಾಗಳು ಪೈಪೋಟಿ ನಡೆಸುತ್ತಿವೆ.
ವಿಕ್ಟೋರಿಯಾ ಸರ್ಕಾರದ ಸಹಯೋಗದೊಂದಿಗೆ ಈ ವರ್ಷದ ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಸ್ಟ್ 13 ರಿಂದ ಆಗಸ್ಟ್ 23, 2026 ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಈ ಚಿತ್ರೋತ್ಸವದಲ್ಲಿ ಕೇವಲ ಪ್ರಶಸ್ತಿ ಪ್ರದಾನ ಮಾತ್ರವಲ್ಲದೆ, ವಿಶೇಷ ಪ್ರೀಮಿಯರ್ ಶೋಗಳು, ಮಾಸ್ಟರ್ಕ್ಲಾಸ್ಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆಸ್ಟ್ರೇಲಿಯಾದ ಚಿತ್ರರಂಗದ ಪ್ರಮುಖ ಗಣ್ಯರನ್ನೊಳಗೊಂಡ ಸ್ವತಂತ್ರ ತೀರ್ಪುಗಾರರ ಮಂಡಳಿಯು ವಿಜೇತರನ್ನು ಆಯ್ಕೆ ಮಾಡಲಿದ್ದು, ಆಗಸ್ಟ್ ಅಂತ್ಯದಲ್ಲಿ ವಿಜೇತರಿಗೆ ಪ್ರಶಸ್ತಿ ಗೌರವ ಸಿಗಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























