ಡ್ಯಾನ್ಸ್ ಮಾಸ್ಟರ್ ನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ:  ಆರೋಪಿ ಹಾಗೂ ಆರೋಪಿಗೆ ಹಲ್ಲೆ ನಡೆಸಿದ 7 ಮಂದಿಯ ಬಂಧನ - Mahanayaka
11:43 AM Tuesday 27 - February 2024

ಡ್ಯಾನ್ಸ್ ಮಾಸ್ಟರ್ ನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ:  ಆರೋಪಿ ಹಾಗೂ ಆರೋಪಿಗೆ ಹಲ್ಲೆ ನಡೆಸಿದ 7 ಮಂದಿಯ ಬಂಧನ

ruman
09/02/2024

ಡ್ಯಾನ್ಸ್ ಮಾಸ್ಟರ್ ಒಬ್ಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಪಟ್ಟಣದಲ್ಲಿ ಗುರುವಾರ  ಈ ಘಟನೆ ನಡೆದಿದೆ.

ಡ್ಯಾನ್ಸ್ ಕಲಿಯಲು ಬರುತ್ತಿದ್ದ ಅಪ್ರಾಪ್ತ ಹಿಂದೂ ಬಾಲಕಿಯ ಜತೆ ಆಲ್ದೂರು ಪಟ್ಟಣದ ಸಂತೆ ಮೈದಾನದ ನಿವಾಸಿ ರುಮಾನ್ ಎಂಬಾತ ಸಲಿಗೆ ಬೆಳೆಸಿಕೊಂಡಿದ್ದ. ರುಮಾನ್ ಡಾನ್ಸ್ ಕೊರಿಯೋಗ್ರಾಫರ್ ಆಗಿದ್ದು, ಪ್ರೀತಿಯ ಹೆಸರಿನಲ್ಲಿ ಬಾಲಕಿಯನ್ನು ಮೋಸದ ಬಲೆಗೆ ಬೀಳಿಸಿದ್ದ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ.

ಆಲ್ದೂರು ಸಮೀಪ ದೊಡ್ಡ ಮಾಗರವಳ್ಳಿ ಗ್ರಾಮದ  ಬಾಲಕಿಯನ್ನು ಪ್ರೀತಿಯ ಹೆಸರಲ್ಲಿ ಪುಸಲಾಯಿಸಿ ದಾರಿತಪ್ಪಿಸಿದ್ದಾನೆ ಎಂದು ಬಾಲಕಿಯ ಪೋಷಕರು ಆಲ್ದೂರು ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಡ್ಯಾನ್ಸ್ ಮಾಸ್ಟರ್ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಘಟನೆ ಸಂಬಂಧ ವಿಎಚ್‌ ಪಿ ಜಿಲ್ಲಾ ಸಂಚಾಲಕ ಸೇರಿ 7 ಹಿಂದೂ ಕಾರ್ಯಕರ್ತರನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯ ಪೋಷಕರಿಂದ ರುಮಾನ್ ವಿರುದ್ಧ ಅಪ್ರಾಪ್ತೆಯ ಅಪಹರಣ ಯತ್ನ, ಪ್ರೀತಿ ವಂಚನೆ ಎಂದು ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ರುಮಾನ್ ಕುಟುಂಬಸ್ಥರಿಂದಲೂ ಪ್ರತಿ ದೂರು ದಾಖಲಾಗಿದೆ.

ಬಾಲಕಿಯ ತಂದೆ ನೀಡಿದ ದೂರಿನ ಸಾರಾಂಶ : ಬಾಲಕಿಯ ತಂದೆ ಆಲ್ದೂರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಸಾರಾಂಶವೆಂದರೆ ; ನನ್ನ ಹಿರಿಯ ಮಗಳು ರುಮಾನ್ ಅವರ ಬಳಿ 3 ವರ್ಷಗಳಿಂದ ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದಳು, ಅವಳು ನಾನು ಚಿಕ್ಕವಳು ಬೇಡ ಎಂದರು ಕೇಳದೇ ನನ್ನ ಮಗಳನ್ನು ಮುರುಡೇಶ್ವರ, ಬೇಲೂರು, ಮಂಗಳೂರಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ನಂತರ ವಿಡಿಯೋ ಮಾಡಿಟ್ಟುಕೊಂಡು ಅವಳನ್ನು ಬ್ಲಾಕ್ ಮೇಲ್ ಮಾಡಿದ್ದಾನೆ. ಮನೆಯಲ್ಲಿ ಹೇಳಿದರೆ ನಿನ್ನ ವಿಡಿಯೋ, ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ನನ್ನ ಮಗಳು ನಿನ್ನೆ ಮನೆಗೆ ಬಂದು ನನ್ನ ಬಳಿ ರುಮಾನ್ ನಿಂದ ಈ ರೀತಿ ಕಿರುಕುಳ ಆಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ. ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿದ್ದಾರೆ.

ಹಲ್ಲೆ ಆರೋಪ ರುಮಾನ್ ನಿಂದ ದೂರು : ಹಲ್ಲೆಗೊಳಗಾದ ರುಮಾನ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ   1) ಸಿ ಡಿ ಶಿವಕುಮಾರ, ಚಿಕ್ಕಮಾಗರವಳ್ಳಿ  2) ಮಧು ಚಿಕ್ಕಮಾಗರವಳ್ಳಿ  3) ಪ್ರಜ್ವಲ್ ಆಲ್ದೂರು  4) ಪರೀಕ್ಷಿತ್ ಗಾಳಿಗಂಡಿ   5) ರಂಜಿತ್ ಅರೇನಹಳ್ಳಿ  6) ಸ್ವರೂಪ ಕಬ್ಬಿಣ ಸೇತುವೆ   7) ಆದರ್ಶ್ ಅರೇನಹಳ್ಳಿ   8) ಕಾರ್ತಿಕ್ ಅರೇನಹಳ್ಳಿ  ಇವರುಗಳ ಮೇಲೆ ದೂರು ನೀಡಿದ್ದಾನೆ.

ಘಟನೆಗೆ ಸಂಬಂಧ ಆಲ್ದೂರು ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಪೋಕ್ಸೋ ಕಾಯ್ದೆಯಡಿ ರುಮಾನ್ ಬಂಧನವಾಗಿದ್ದರು, ಇತ್ತ ರುಮಾನ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ 7 ಮಂದಿ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಆಲ್ದೂರು ಪಟ್ಟಣದಲ್ಲಿ ಕೆಎಸ್‌ ಆರ್‌ಪಿ  ನಿಯೋಜನೆ ಮಾಡಲಾಗಿದೆ. ಘಟನೆಯಿಂದ ಆಲ್ದೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ಇತ್ತೀಚಿನ ಸುದ್ದಿ