ಕಾಫಿತೋಟದ ಮ್ಯಾನೇಜರ್ ನ ಮೇಲೆ ಕಾಡುಕೋಣ ದಾಳಿ! - Mahanayaka

ಕಾಫಿತೋಟದ ಮ್ಯಾನೇಜರ್ ನ ಮೇಲೆ ಕಾಡುಕೋಣ ದಾಳಿ!

surendra gowda
05/12/2023

ಕಾಡುಕೋಣ ದಾಳಿಯಿಂದ ಕಾಫಿತೋಟದ ಮ್ಯಾನೇಜರ್ ಒಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.


Provided by

ಮೂಡಿಗೆರೆ ತಾಲ್ಲೂಕಿನ ಸಾರಗೋಡು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸಾರಗೋಡು ಗ್ರಾಮದ ಎಸ್.ಟಿ. ಸುರೇಂದ್ರಗೌಡ ಎಂಬುವವರ ಹಲಸೂರು ಎಸ್ಟೇಟ್ ನಲ್ಲಿ ಈ ಘಟನೆ ಸಂಭವಿಸಿದೆ.

ಹಲಸೂರು ಎಸ್ಟೇಟ್ ಮ್ಯಾನೇಜರ್ ಸುನಿಲ್ ಎಂಬುವವರ ಕಾಲಿಗೆ ಕಾಡುಕೋಣ ದಾಳಿಯಿಂದ ತೀವ್ರವಾಗಿ ಗಾಯವಾಗಿದೆ.

ಸೋಮವಾರ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲ್ವಿಚಾರಣೆ ಮಾಡಲು ತೆರಳಿದ್ದಾಗ ಎಸ್ಟೇಟ್ ಮ್ಯಾನೇಜರ್ ಸುನಿಲ್ ಅವರ ಕಾಡುಕೋಣ ದಾಳಿಮಾಡಿದೆ ಎಂದು ತಿಳಿದುಬಂದಿದೆ. ಹಲಸೂರು ಎಸ್ಟೇಟ್ ಗೆ ಎಲೆಕ್ಟ್ರೀಕ್ ಬೇಲಿ ಇದ್ದರೂ ಸಹ ಅದನ್ನು ದಾಟಿ ಬಂದಿರುವ ಕಾಡುಕೋಣ ಸುನಿಲ್ ಅವರ ಮೇಲೆ ಏಕಾಏಕಿ ದಾಳಿಮಾಡಲು ಮುಂದಾಗಿದೆ. ಆಗ ಅವರು ದೊಡ್ಡ ಕಾಫಿ ಗಿಡವೊಂದನ್ನು ಏರಿದ್ದಾರೆ. ಕಾಡುಕೋಣ ಆ ಕಾಫಿ ಗಿಡವನ್ನೇ ಬುಡಸಮೇತ ಕಿತ್ತು ಬೀಳಿಸಿದೆ. ನೆಲಕ್ಕೆ ಬಿದ್ದ ಸುನಿಲ್ ಅವರು ಸಾವರಿಸಿಕೊಂಡು ಮತ್ತೊಂದು ಗಿಡವನ್ನು ಏರುವ ಸಂದರ್ಭದಲ್ಲಿ ಅವರ ಕಾಲಿನ ಭಾಗಕ್ಕೆ ಕಾಡುಕೋಣ ತಿವಿದಿದೆ. ಅದೃಷ್ಟಾವಸತ್ ಅವರು ಕಾಫಿ ಗಿಡವನ್ನು ಏರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಡುಕೋಣ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಸುನಿಲ್ ಅವರನ್ನು ತಕ್ಷಣ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸುನಿಲ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈಗ್ಗೆ ನಾಲ್ಕು ದಿನದ ಹಿಂದೆ ಮೂಡಿಗೆರೆ ಸಮೀಪದ ಲೋಕವಳ್ಳಿಯಲ್ಲಿ ವ್ಯಕ್ತಿಯೋರ್ವರ ಮೇಲೆ ಕಾಡುಕೋಣ ದಾಳಿ ನಡೆಸಿ ಗಾಯಗೊಳಿಸಿತ್ತು. ಮಲೆನಾಡು ಭಾಗದಲ್ಲಿ ಈಗ ಕಾಡಾನೆಗಳ ಜೊತೆಗೆ ಕಾಡುಕೋಣಗಳ ಹಾವಳಿ ಮಿತಿಮೀರಿದೆ. ಹಿಂಡು ಹಿಂಡು ಕಾಡುಕೋಣಗಳು ತೋಟ ಗದ್ದೆಗಳಿಗೆ ದಾಳಿಯಿಡುತ್ತಿವೆ. ಇದರಿಂದ ಕಾರ್ಮಿಕರು ಕಾಫಿ ತೋಟಗಳಿಗೆ ತೆರಳಲು ಭಯಪಡುವಂತಾಗಿದೆ.

ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ವಹಿಸದೇ ಇದ್ದರೆ ಮಲೆನಾಡಿನಲ್ಲಿ ಕೃಷಿ ಕಾರ್ಯ ಮಾಡುವುದೇ ದುಸ್ತರವೆನ್ನುವ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಕಾಡುಕೋಣಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ