ಉತ್ತರಾಖಂಡ ಹಿಂಸಾಚಾರ: ರಾತ್ರಿಯೇ ತರಾತುರಿಯಲ್ಲಿ ಮೃತರ ಅಂತ್ಯಕ್ರಿಯೆ - Mahanayaka
2:13 AM Tuesday 27 - February 2024

ಉತ್ತರಾಖಂಡ ಹಿಂಸಾಚಾರ: ರಾತ್ರಿಯೇ ತರಾತುರಿಯಲ್ಲಿ ಮೃತರ ಅಂತ್ಯಕ್ರಿಯೆ

11/02/2024

ಉತ್ತರಾಖಂಡದ ಹಲ್ದ್ವಾನಿ ಹಿಂಸಾಚಾರದಲ್ಲಿ ಐವರು ಮೃತಪಟ್ಟು ಒಂದು ಡಜನ್‌ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿಯೇ ತರಾತುರಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ. ಪೊಲೀಸರು 16 ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಮಸೀದಿ ಮದ್ರಸ ತೆರವು ಕಾರ್ಯಾಚರಣೆಯ ವೇಳೆ ದಾಖಲೆ ಒದಗಿದೇ ಇರುವುದು ಹಿಂಸಾಚಾರ ಭುಗಿಲೇಳುವಂತೆ ಮಾಡಿತ್ತು.

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಗುರುವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಐವರು ಸಂತ್ರಸ್ತರ ಶವಗಳ ಅಂತ್ಯಕ್ರಿಯೆಯನ್ನು ಪೊಲೀಸರು ಶುಕ್ರವಾರ ರಾತ್ರೋರಾತ್ರಿ ನಡೆಸಿದ್ದಾರೆ. ಎಂದು ಮಾಧ್ಯಮಗಳಿಗೆ ಎಜಿಡಿ ಮಾಹಿತಿ ನೀಡಿದ್ದಾರೆ. ಇದೀಗ ಹಲ್ದ್ವಾನಿಯಲ್ಲಿ ನಿಷೇಧಾಜ್ಞೆ ಸಡಿಲಗೊಳಿಸಲಾಗಿದೆ, ಆದರೆ ಬನ್‌ಭೂಲ್‌ಪುರ ಪ್ರದೇಶದಲ್ಲಿ ನಿಷೇಧಾಜ್ಞೆ ಮುಂದುವರಿದಿದೆ.

ಹಿಂಸಾಚಾರದಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ಮತ್ತು ಅತಿಕ್ರಮಣ ತೆರವು ಕಾರ್ಯಾಚರಣೆಯ ಸಂದರ್ಭ ವಾಹನಗಳನ್ನು ಧ್ವಂಸಗೊಳಿಸಿರುವ ಆರೋಪದಲ್ಲಿ 16 ಮಂದಿಯ ಮೇಲೆ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಉಳಿದ ಆರೋಪಿಗಳನ್ನು ಗುರುತಿಸಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಎಪಿ ಅಂಶುಮನ್ ತಿಳಿಸಿರುವುದಾಗಿ ವರದಿಯಾಗಿದೆ.

ರಸ್ತೆ, ಮಾರುಕಟ್ಟೆ, ಮೈದಾನದಂತಹ ಸಾರ್ವಜನಿಕ ಉದ್ದೇಶದ ಸರ್ಕಾರಿ ಆಸ್ತಿಗಳ ನಿರ್ಮಾಣಕ್ಕೆ ಬಳಸಲಾಗುವ ನಾಜೂಲ್ ಭೂಮಿಯಲ್ಲಿ ಮಸೀದಿ ಮತ್ತು ಮದರಸಾ ನಿರ್ಮಿಸಲಾಗಿದೆ ಎಂದು ಆರೋಪಿಸಿ, ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ತೆರವು ಕಾರ್ಯಾಚರಣೆಯ ಆದೇಶದ ಪ್ರತಿ ತೋರಿಸಿ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದರು. ಆಗ ಆಡಳಿತ ಮತ್ತು ಸ್ಥಳೀಯರ ನಡುವಿನ ವಾಗ್ಯುದ್ಧ ಹಿಂಸಾಚಾರಕ್ಕೆ ತಿರುಗಿತ್ತು.

ಆಡಳಿತ ಒತ್ತಡಪೂರ್ವಕ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲು ಮುಂದಾದಾಗ ಜನರು ಕಲ್ಲುಗಳನ್ನು ಎಸೆದು, ಕಾರುಗಳಿಗೆ ಬೆಂಕಿ ಹಚ್ಚಿದ್ದರು. ಪೊಲೀಸ್ ಠಾಣೆಗೂ ಮುತ್ತಿಗೆ ಹಾಕಿದ್ದರು. ಮುಖ್ಯಮಂತ್ರಿ ಪುಷ್ಕರ್ ಧಾಮಿ ಗಲಭೆನಿರತರಿಗೆ ಸ್ಥಳದಲ್ಲೇ ಗುಂಡು ಹಾರಿಸಲು ಆದೇಶಿಸಿದ್ದರು.

ಇತ್ತೀಚಿನ ಸುದ್ದಿ