ಕೋಟಿ ಕೋಟಿ ಮಾದಪ್ಪ… 5 ದಿನ: 2.8 ಕೋಟಿ ಹಣ
ಚಾಮರಾಜನಗರ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ 10 ರಿಂದ 14 ರವರೆಗೆ ಅದ್ಧೂರಿಯಾಗಿ ದೀಪಾವಳಿ ಜಾತ್ರೆ ನಡೆದಿದ್ದು ಕೇವಲ 5 ದಿನಗಳ ಅವಧಿಯಲ್ಲಿ ಕ್ಷೇತ್ರಕ್ಕೆ 2.8 ಕೋಟಿ ರೂ. ಆದಾಯ ಹರಿದು ಬಂದಿದೆ.
ಹೌದು…, ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಈ ಸಂಬಂಧ ಮಾಹಿತಿ ನೀಡಿದ್ದು, ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ ಐದು ದಿನಗಳ ಅವಧಿಯಲ್ಲಿ 2.8 ಕೋಟಿ ಆದಾಯ ಹರಿದು ಬಂದಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಚಿನ್ನದ ರಥ ಸೇವೆ, ರುದ್ರಾಕ್ಷಿ ವಾಹನ, ಬೆಳ್ಳಿ ರಥ, ಲಾಡು ಮಾರಾಟ, ಮಿಶ್ರ ಪ್ರಸಾದ ಮಾರಾಟ, ಪಾರ್ಕಿಂಗ್, ವಿಶೇಷ ದರ್ಶನದ ಟಿಕೆಟ್ ಸೇರಿದಂತೆ ವಿವಿಧ ಸೇವೆಗಳಿಂದ 2,08,82,110 ರೂ. ಆದಾಯ ಬಂದಿದ್ದು ಇದರಲ್ಲಿ ಹುಂಡಿ ಹಣ ಸೇರಿಲ್ಲ.
ಯಾವ ಸೇವೆಯಿಂದ ಎಷ್ಟು ಹಣ:
ಐದು ದಿನಗಳ ಅವಧಿಯಲ್ಲಿ 1786 ಚಿನ್ನದ ರಥೋತ್ಸವ, 50 ಬೆಳ್ಳಿ ರಥೋತ್ಸವ, 1114 ಬಸವ ವಾಹನ, 9135 ಹುಲಿ ವಾಹನ, 410 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಸಿದ್ದಾರೆ. ಇನ್ನು ಮಲೆ ಮಹದೇಶ್ವರ ಹುಲಿವಾಹನ ಉತ್ಸವಕ್ಕೆ ಅತಿ ಹೆಚ್ಚು ಭಕ್ತರು ಎಳೆದಿದ್ದಾರೆ. ಈ ಉತ್ಸವಗಳಿಂದಲೇ 86 ಲಕ್ಷ ರೂ. ಹಣ ಪ್ರಾಧಿಕಾರಕ್ಕೆ ಸಂದಾಯವಾಗಿದೆ.
ಇನ್ನು, ಲಾಡು ಮಾರಾಟದಿಂದ 54 ಲಕ್ಷ, ಮಿಶ್ರ ಪ್ರಸಾದದಿಂದ 8 ಲಕ್ಷ, ಪುದುವಟ್ಟು ಸೇವೆಯಿಂದ 2 ಲಕ್ಷ, ಸೇವೆಗಳಿಂದ 5 ಲಕ್ಷ, ಪ್ರಸಾದದ ಕ್ಯಾರಿ ಬ್ಯಾಗ್ ನಿಂದಲೇ 72 ಸಾವಿರ ಹಣ ಬಂದಿದ್ದು ಒಟ್ಟಾರೆ 5 ದಿನದ ಅವಧಿಯಲ್ಲಿ ಕ್ಷೇತ್ರಕ್ಕೆ 2,08,82,110 ರೂ ಆದಾಯ ಬಂದಿದೆ.
10 ಸಾವಿರ ಮಂದಿ ಪಾದಯಾತ್ರಿಗಳಿಗೆ ಪಾಸ್:
ತಿರುಪತಿ ಮಾದರಿಯಲ್ಲಿ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಪಾದಯಾತ್ರೆಗಳಿಗೆ ಉಚಿತ ದರ್ಶನ, ವಸತಿ ಹಾಗೂ ದಾಸೋಹದ ಪಾಸ್ ವ್ಯವಸ್ಥೆ ಕಲ್ಪಿಸಲಾಗಿತ್ತು ಸುಮಾರು 10600ಕ್ಕೂ ಹೆಚ್ಚು ಕಾಲ್ನಡಿಗೆ ಭಕ್ತಾದಿಗಳು ಈ ಪಾಸ್ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ದೀಪಾವಳಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಮಲೆ ಮಹದೇಶ್ವರನ ದರ್ಶನ ಪಡೆಯುವ ಜೊತೆಗೆ ಕೋಟ್ಯಾಂತರ ರೂ. ಆದಾಯವನ್ನು ಕ್ಷೇತ್ರಕ್ಕೆ ಕೊಟ್ಟಿದ್ದಾರೆ.