40 ಲಕ್ಷ ರೂ. ವಧುದಕ್ಷಿಣಿಗೆ ಬೇಡಿಕೆ: ವಿರೋಧಿಸಿದ ಮಗಳಿಗೆ ಕಾಲೇಜಿನಲ್ಲೇ ಇರಿದ ತಂದೆ!
ಬೆಂಗಳೂರು ಗ್ರಾಮಾಂತರ: ಮದುವೆಗೆ 40 ಲಕ್ಷ ರೂ. ವಧುದಕ್ಷಿಣೆ ಮತ್ತು ಮಗಳ ಪ್ರತಿ ತಿಂಗಳ ಸಂಬಳವನ್ನು ತನಗೇ ನೀಡುವಂತೆ ಪಟ್ಟು ಹಿಡಿದು, ಅದನ್ನು ವಿರೋಧಿಸಿದ ಸ್ವಂತ ಮಗಳ ಮೇಲೆಯೇ ತಂದೆಯೊಬ್ಬ ಕಾಲೇಜಿನ ಚೇಂಬರ್ ಗೆ ನುಗ್ಗಿ ಚಾಕುವಿನಿಂದ ಭೀಕರವಾಗಿ ಇರಿದು ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಬೆಂಗಳೂರು ನಗರ ಜಿಲ್ಲೆಯ ರಾಜಾನುಕುಂಟೆಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಜುಲೈ 25 ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ರಾಜಾನುಕುಂಟೆ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.
ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿರುವ ಆರೋಪಿ ನಾಗೇಂದ್ರ ಎಂಬುವವರು ತಮ್ಮ ಮಗಳು ಲಕ್ಷ್ಮೀದುರ್ಗಾಗೆ ಮದುವೆ ಮಾಡಲು ಗಂಡು ಹುಡುಕಿದ್ದರು. ಮದುವೆಗೆ ಹುಡುಗನ ಕಡೆಯವರೂ ಒಪ್ಪಿಗೆ ಸೂಚಿಸಿದ್ದರು.
ಆದರೆ, ಮಗಳನ್ನು ಕಷ್ಟಪಟ್ಟು ಓದಿಸಿದ್ದೇನೆ ಎಂದು ಹೇಳಿ ಮದುವೆ ಮಾಡಲು ಹುಡುಗನ ಬಳಿ 40 ಲಕ್ಷ ರೂಪಾಯಿ ವಧುದಕ್ಷಿಣೆ ನೀಡುವಂತೆ ನಾಗೇಂದ್ರ ಒತ್ತಾಯಿಸಿದ್ದರು. ಇದರೊಂದಿಗೆ ಮಗಳು ಕೆಲಸ ಮಾಡಿ ಗಳಿಸುವ ಪ್ರತಿ ತಿಂಗಳ ಸಂಬಳವನ್ನೂ ತನಗೇ ಕೊಡಬೇಕೆಂದು ಪಟ್ಟು ಹಿಡಿದಿದ್ದರು.
ತಂದೆಯ ಈ ಅನ್ಯಾಯದ ಬೇಡಿಕೆಗಳನ್ನು ಮಗಳು ಲಕ್ಷ್ಮೀದುರ್ಗಾ ಹಾಗೂ ಆಕೆಯ ತಾಯಿ ತೀವ್ರವಾಗಿ ವಿರೋಧಿಸಿದ್ದರು. ಈ ವಿಚಾರವಾಗಿ ಕುಟುಂಬದಲ್ಲಿ ವೈಮನಸ್ಸು ಉಂಟಾಗಿ ಗಲಾಟೆ ನಡೆದಿತ್ತು.
ಕುಟುಂಬದ ಜಗಳದಿಂದ ಆಕ್ರೋಶಗೊಂಡಿದ್ದ ನಾಗೇಂದ್ರ, ಜುಲೈ 25 ರಂದು ಮಗಳು ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜಾನುಕುಂಟೆಯ ಖಾಸಗಿ ಕಾಲೇಜಿಗೆ ತೆರಳಿದ್ದಾನೆ. ನೇರವಾಗಿ ಹೆಚ್ ಒಡಿ ಚೇಂಬರ್ ಗೆ ನುಗ್ಗಿ ಮಗಳನ್ನು ಕರೆಸಿಕೊಂಡಿದ್ದಾನೆ. ಲಕ್ಷ್ಮೀದುರ್ಗಾ ಚೇಂಬರ್ ಗೆ ಬರುತ್ತಿದ್ದಂತೆ ಆಕೆಯ ಎದೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಮನಬಂದಂತೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಭೀಕರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮೀದುರ್ಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಂದೆ ನಾಗೇಂದ್ರನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.\
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























