1949 ರ ಬಳಿಕ ಇದೇ ಮೊದಲ ಬಾರಿಗೆ ಯುಎಇಯಲ್ಲಿ ದಾಖಲೆ ಮಳೆ: ಪ್ರವಾಹದ ಸ್ಥಿತಿ ಸೃಷ್ಟಿ

ಭಾರೀ ಮಳೆ ಮತ್ತು ಚಂಡಮಾರುತದಿಂದ ದುಬೈ ತತ್ತರಿಸಿದೆ. ಎಡೆಬಿಡದೇ ಸುರಿದ ಮಳೆಯಿಂದಾಗಿ ಯುಎಇಯಾದ್ಯಂತ ವ್ಯಾಪಕವಾದ ಪ್ರವಾಹದ ಸ್ಥಿತಿ ಉಂಟಾಗಿದೆ. ಭಾರತ ಮತ್ತು ಯುಎಇ ನಡುವಿನ 28 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ವಾಯುಯಾನ ಅಧಿಕಾರಿಗಳು ದುಬೈಗೆ ಹೋಗುವ ಸುಮಾರು 15 ವಿಮಾನಗಳನ್ನು ರದ್ದುಗೊಳಿಸಿದ್ದಾರೆ, ಅದೇ ವೇಳೆ ಭಾರತಕ್ಕೆ ಬರಬೇಕಿದ್ದ 13 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
1949 ರ ಬಳಿಕ ಇದೇ ಮೊದಲ ಬಾರಿಗೆ ಯುಎಇಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದ್ದು, ವಿಮಾನಗಳ ವಿಳಂಬ ಅಥವಾ ಮಾರ್ಗ ಬದಲಾವಣೆಗೆ ಕಾರಣವಾಗಿದೆ. ಕಾರುಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಿಲುಕಿಕೊಂಡಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಪ್ರಮುಖ ಶಾಪಿಂಗ್ ಸೆಂಟರ್‌ಗಳಾದ ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್ ಎರಡೂ ಪ್ರವಾಹಕ್ಕೆ ಸಿಲುಕಿದ್ದು, ಮೆಟ್ರೋ ನಿಲ್ದಾಣಗಳಿಗೂ ನೀರು ನುಗ್ಗಿದೆ. ರೆಡ್ ಮತ್ತು ಗ್ರೀನ್ ಲೈನ್‌ಗಳಲ್ಲಿನ ನಿಲ್ದಾಣಗಳಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಸದ್ಯ, ಕೆಲವು ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತದ ಪ್ರಭಾವವು ದುಬೈನ ಆಚೆಗೂ ವಿಸ್ತರಿಸಿದ್ದು, ಇಡೀ ಯುಎಇ ಮತ್ತು ನೆರೆಯ ಬಹ್ರೇನ್ ಪ್ರವಾಹ ಮತ್ತು ಅವ್ಯವಸ್ಥೆಯಿಂದ ತತ್ತರಿಸಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಸರ್ಕಾರಿ ನೌಕರರಿಗೆ ರಿಮೋಟ್ ಕೆಲಸದ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ.
ಒಮನ್‌ಗೆ ಅಪ್ಪಳಿಸಿದ ನಂತರ ಯುಎಇ ಮತ್ತು ಬಹ್ರೇನ್‌ಗೆ ಚಂಡಮಾರುತ ಅಪ್ಪಳಿಸಿದ್ದು, ಅಲ್ಲಿ ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದರು. 1949 ರ ನಂತರ ಇದು ಅತ್ಯಧಿಕ ಮಳೆಯಾಗಿದೆ ಎಂದು ಯುಎಇ ಅಧಿಕೃತ ಮಾಧ್ಯಮ ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth