ಮಹಿಳೆಯನ್ನು ಬಲಿ ಪಡೆದ ಸ್ಥಳದಲ್ಲಿ ಮತ್ತೊಮ್ಮೆ ಘೀಳಿಟ್ಟ ಆನೆ: ಅತ್ತ ಪೊಲೀಸರು, ಇತ್ತ ಆನೆ, ಬೆಚ್ಚಿಬಿದ್ದ ಜನರು - Mahanayaka

ಮಹಿಳೆಯನ್ನು ಬಲಿ ಪಡೆದ ಸ್ಥಳದಲ್ಲಿ ಮತ್ತೊಮ್ಮೆ ಘೀಳಿಟ್ಟ ಆನೆ: ಅತ್ತ ಪೊಲೀಸರು, ಇತ್ತ ಆನೆ, ಬೆಚ್ಚಿಬಿದ್ದ ಜನರು

hullemane
23/11/2022

ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಶೋಭಾ ಎಂಬ ಮಹಿಳೆಯನ್ನು ಆನೆ ಬರ್ಬರವಾಗಿ ಹತ್ಯೆ ಮಾಡಿತ್ತು. ಇದರಿಂದ ರೊಚ್ಚಿಗೆದ್ದ ಜನ, ಶಾಸಕರನ್ನು ಅಟ್ಟಾಡಿಸಿದ್ದರು. ಇದೀಗ  ನಿನ್ನೆ ರಾತ್ರಿ ಮತ್ತೆ ಮಹಿಳೆಯ ಹತ್ಯೆ ನಡೆದ ಸ್ಥಳದಿಂದ ಆನೆಗಳು ಘೀಳಿಟ್ಟಿದ್ದು, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಬರೇ ಆನೆ ಮಾತ್ರವಲ್ಲದೇ ಇತ್ತ ಪೊಲೀಸರಿಗೂ ಹೆದರಿ ಕುಳಿತುಕೊಳ್ಳುವ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ.

ಭಾನುವಾರವಷ್ಟೇ  ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಶೋಭಾ ಎಂಬ ರೈತ ಮಹಿಳೆಯನ್ನು ನರಹಂತಕ ಆನೆ ಹತ್ಯೆ ಮಾಡಿತ್ತು. ಈ ಹಿಂದೆ ಇದೇ ಪ್ರದೇಶಕ್ಕೆ ಎರಡು ಕಿ.ಮೀ. ಅಂತರದಲ್ಲಿ ಹಾರ್ಗೋಡಿನಲ್ಲಿ ಆನಂದ್ ದೇವಾಡಿಗ ಎಂಬುವವರನ್ನು ಹತ್ಯೆ ಮಾಡಿತ್ತು. ಅಂದು ಆನೆ ದಾಳಿಗೆ ಶಾಶ್ವತ ಪರಿಹಾರ ದೊರಕಿಸುವ ಆಶ್ವಾಸನೆ ನೀಡಿದ್ದರು. ಆದರೆ, ಇದಾದ ಬಳಿಕ ಈ ಬಗ್ಗೆ ಗಮನ ಹರಿಸಲೇ ಇಲ್ಲ. ಇದರಿಂದಾಗಿ ಶೋಭಾ ಅವರು ಪ್ರಾಣ ಕಳೆದುಕೊಂಡಿದ್ದರು. ಇದರಿಂದಾಗಿ ಜನರ ಆಕ್ರೋಶದ ಕಟ್ಟೆ ಒಡೆದಿತ್ತು.

ಸರ್ಕಾರದ ವಿರುದ್ಧದ ಜನರ ಆಕ್ರೋಶ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ  ತಿರುಗಿತ್ತು.  ಕೆಲವರು ಈ ಸಂದರ್ಭದಲ್ಲಿ ಅತಿರೇಕದ ವರ್ತನೆ ತೋರಿದ್ದರು. ಶಾಸಕರನ್ನು ಆಕ್ರೋಶಿತ ಜನರು ರಸ್ತೆಯುದ್ದಕ್ಕೂ ಅಟ್ಟಾಡಿಸಿದ್ದರು. ಈ ಘಟನೆಯ ಬಳಿಕ ಶಾಸಕರು ಪೊಲೀಸರ ಸಹಕಾರದೊಂದಿಗೆ ಸ್ಥಳದಿಂದ ಸುರಕ್ಷಿತವಾಗಿ ತೆರಳಿದ್ದರು. ಆದರೆ, ಆ ಬಳಿಕ  ಶಾಸಕರು ಅಂಗಿ ಹರಿದು ಕೊಂಡ ಸ್ಥಿತಿಯಲ್ಲಿ ವಿಡಿಯೋ ಸಂದೇಶವನ್ನು ಕಳುಹಿಸಿದ್ದರು.

ಜನರ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ಇದೀಗ ಅತ್ತ ಆನೆ, ಇತ್ತ ಪೊಲೀಸರು ಅನ್ನೋ ಸ್ಥಿತಿ ಇಲ್ಲಿನ ಜನರಿಗೆ ನಿರ್ಮಾಣವಾಗಿದೆ. ಶಾಸಕರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಮತ್ತಷ್ಟು ಜನರ ಬಂಧನಕ್ಕೆ ಮುಂದಾಗುತ್ತಿದ್ದಾರೆ. ಈ ನಡುವೆ ಕೆಲವರು ಗ್ರಾಮವನ್ನು ತೊರೆದಿದ್ದರು. ಶಾಸಕರು ಮತ್ತೆ ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಇನ್ನೂ ಯಾರನ್ನು ಬಂಧಿಸುವುದಿಲ್ಲ ಎಂದು ಸ್ಥಳೀಯ ಮುಖಂಡರು ಹೇಳಿರುವುದರಿಂದಾಗಿ ಎಲ್ಲರೂ ಊರಿಗೆ ಮರಳಿದ್ದರು. ಆದರೆ, ಮಂಗಳವಾರ ರಾತ್ರಿ ಸುಮಾರು 3 ಪೊಲೀಸ್ ರಿಸರ್ವ್ ವ್ಯಾನ್ ಗಳೊಂದಿಗೆ ಇಲ್ಲಿನ ಹುಲ್ಲೆಮನೆ, ಬೈರಿಗದ್ದೆ, ತಳವಾರ, ಕುಂಡ್ರ, ಕಣಗದ್ದೆ ಸೇರಿದಂತೆ ನಾಲ್ಕಾರು ಗ್ರಾಮಗಳಲ್ಲಿ ಅನೇಕರನ್ನು ಪೊಲೀಸರು ಬಂಧಿಸಿದ್ದು, ಇನ್ನಷ್ಟು ಜನರು ಬಂಧನದ ಭೀತಿಯಲ್ಲಿದ್ದಾರೆ.

ರಾಜ್ಯ ಸರ್ಕಾರ, ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಜನರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಆನೆ ಹೇಗೆ ಸಾರ್ವಜನಿಕರನ್ನು ಅಟ್ಟಾಡಿಸುತ್ತಿದೆಯೋ ಅದರ ಅನುಭವವನ್ನು ಸರ್ಕಾರದ ಪ್ರತಿನಿಧಿಗೆ ತೋರಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದರು. ಆದರೆ, ಸರ್ಕಾರ ಆನೆಯನ್ನು ಹಿಡಿಯುವ ಕೆಲಸಕ್ಕೆ ಮುಂದಾಗದೇ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿ ಶಾಸಕರ ವೈಯಕ್ತಿಕ ಪ್ರತಿಷ್ಠೆಯನ್ನು ಕಾಯಲು ಮುಂದಾಗಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಇದೀಗ ಕೇಳಿ ಬಂದಿದೆ.

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 8 ಗಂಟೆಯವರೆಗೆ ಸ್ಥಳದಲ್ಲಿ ಸುಮಾರು ಮೂರು ಆನೆಗಳು ಜನರ ಎದೆ ನಡುಗಿಸುವಂತೆ ಘೀಳಿಟ್ಟಿದ್ದು, ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಒಂದೆಡೆ ಆನೆಗಳು ನಮ್ಮನ್ನು ಬೇಟೆಯಾಡುತ್ತಿದೆ. ಮತ್ತೊಂದೆಡೆ ಪೊಲೀಸರು ಬೇಟೆಯಾಡುತ್ತಿದ್ದಾರೆ ಎಂದು ಇಲ್ಲಿನ ಜನರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ