ರಾಜಕೀಯ ಲಾಭಕ್ಕೆ ಬಳಕೆಯಾಗುತ್ತಿದೆಯೇ ನೇಹಾ ಹಿರೇಮಠ್ ಹತ್ಯೆ ಪ್ರಕರಣ!? - Mahanayaka

ರಾಜಕೀಯ ಲಾಭಕ್ಕೆ ಬಳಕೆಯಾಗುತ್ತಿದೆಯೇ ನೇಹಾ ಹಿರೇಮಠ್ ಹತ್ಯೆ ಪ್ರಕರಣ!?

neha
20/04/2024

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ರಾಜ್ಯದಲ್ಲಿ ಜೋರಾಗಿ ಚರ್ಚೆಗೀಡಾಗುತ್ತಿದೆ. ಸಮೀಪದಲ್ಲೇ ಚುನಾವಣೆ ಕೂಡ ಇರುವ ಕಾರಣ, ಈ ಪ್ರಕರಣವನ್ನು ಹೇಗೆ ಬಳಕೆ ಮಾಡಬೇಕೋ ಹಾಗೆ ರಾಜಕಾರಣಿಗಳು ಬಳಕೆ ಮಾಡಲು ಮುಂದಾಗಿದ್ದಾರೆ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ. ಮೇಲ್ನೋಟಕ್ಕೆ ಇದೊಂದು ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ, ಹತ್ಯೆ ಮಾಡಿದ ಯುವಕ ಮತ್ತು ಕೊಲೆಯಾದ ಯುವತಿ ಭಿನ್ನ ಸಮುದಾಯಕ್ಕೆ ಸೇರಿರುವುದರಿಂದಾಗಿ ಇದನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ ಎನ್ನುವ ಶಂಕೆ ಮೂಡಿದೆ.

ಪ್ರಕರಣ ನಡೆದ ಬೆನ್ನಲ್ಲೇ ಆರೋಪಿ ಫಯಾಝ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಗರಿಷ್ಠ ಪ್ರಮಾಣದಲ್ಲಿ ಶಿಕ್ಷೆ ದೊರಕಿಸಿಕೊಡಲು ಪೊಲೀಸ್ ಇಲಾಖೆ ಪ್ರಕರಣದ ತನಿಖೆಯನ್ನು ಬಿರುಸುಗೊಳಿಸಿದೆ. ನೇಹಾ ತಂದೆ ತಾಯಿ, ಕುಟುಂಬಸ್ಥರು ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಅತ್ತ ಆರೋಪಿ ಫಯಾಝ್ ನ ತಂದೆ ತಾಯಿ ಕೂಡ ತಮ್ಮ ಮಗ ಮಾಡಿರೋದು ತಪ್ಪು, ಆತನಿಗೆ ಕಾನೂನು ರೀತಿಯ ಶಿಕ್ಷೆ ಆಗಲಿ ಎಂದು ಹೇಳಿಕೆ ನೀಡಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ಹಾಗೂ ಬಿಜೆಪಿ ಪರ ಸಂಘಟನೆಗಳು ಈ ಘಟನೆಯನ್ನು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಲು ಯತ್ನಿಸುತ್ತಿರುವುದರ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹದ್ದೇ ಕೊಲೆ ನಡೆದಿತ್ತು:


Provided by

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ, ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿಯಲ್ಲೇ ಭಗ್ನ ಪ್ರೇಮಿಯೋರ್ವ ಯುವತಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. 2023ರ ಆಗಸ್ಟ್ ನಲ್ಲಿ ಈ ಘಟನೆ ನಡೆದಿತ್ತು. ಅಲ್ಲಿ ಕೊಲೆಯಾದ ಯುವತಿ ಗೌರಿ(18). ಹತ್ಯೆ ಮಾಡಿದವನು ಪದ್ಮರಾಜ್(23) ಆಗಿದ್ದ. ಈ ಘಟನೆ ಕೂಡ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದ್ದ ಪ್ರಕರಣವಾಗಿತ್ತು. ಗೌರಿ ಬಡ ಕುಟುಂಬದ ಹೆಣ್ಣು ಮಗಳಾಗಿದ್ದಳು. ಆಕೆಯ ಪರವಾಗಿ ಮಾತನಾಡಲು ಯಾವ ಧಾರ್ಮಿಕ, ರಾಜಕೀಯ ಸಂಘಟನೆಗಳೂ ಇರಲಿಲ್ಲ, ಯಾಕೆಂದರೆ ಗೌರಿಯ ಸಾವಿನಿಂದ ಯಾವುದೇ ಪಕ್ಷಕ್ಕೂ ರಾಜಕೀಯ ಲಾಭವಿರಲಿಲ್ಲ. ಕೊಲೆಯಾದವಳು ಮತ್ತು ಕೊಲೆ ಮಾಡಿದವನು ಒಂದೇ ಧರ್ಮಕ್ಕೆ ಸೇರಿದವರಾಗಿದ್ದರು. ಆದ್ರೆ ನೇಹಾ ಹಿರೇಮಠ್ ಹತ್ಯೆ ಪ್ರಕರಣದಲ್ಲಿ ಆರೋಪಿ ಬೇರೆ ಧರ್ಮದವನು ಎನ್ನುವುದು ತಿಳಿಯುತ್ತಿದ್ದಂತೆಯೇ ವಿವಾದ ಸೃಷ್ಟಿಯಾಗಿದೆ. ಒಬ್ಬ ಮಾಡಿದ ದುಷ್ಕೃತ್ಯವನ್ನು ಒಂದು ಸಮಾಜದ ತಲೆಗೆ ಕಟ್ಟಲು ಪ್ರಯತ್ನಗಳು ಜೋರಾಗಿ ಸಾಗುತ್ತಿದ್ದು, ಒಂದು ಹಂತದಲ್ಲಿ ಕಾಂಗ್ರೆಸ್ ಪಕ್ಷದವರೇ ಮಾಡಿಸಿದ್ದಾರೆ ಎನ್ನುವ ಮಟ್ಟಕ್ಕೆ ಅಪಪ್ರಚಾರಗಳು ನಡೆಯುತ್ತಿರುವುದು ಅಚ್ಚರಿ ಸೃಷ್ಟಿಸಿದೆ.

ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿರುವ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಆರೋಪಿಗಳನ್ನು ಪೊಲೀಸರು ಕಾನೂನಿನಡಿಯಲ್ಲಿ ಗರಿಷ್ಠ ಶಿಕ್ಷೆ ಕೊಡಿಸುವಲ್ಲಿ ಕೂಡ ಯಶಸ್ವಿಯಾಗುತ್ತಿದ್ದಾರೆ. ಇಂತಹ ಪ್ರಕರಣದಲ್ಲಿ ಸಮುದಾಯಗಳನ್ನು ಎಳೆದು ತಂದು, ಬೇಧ ಭಾವ ಸೃಷ್ಟಿಸುವ ಹೀನ ರಾಜಕೀಯಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ.

ನೇಹಾ ಮನೆಗೆ ಸಾಂತ್ವನ ಹೇಳಲು ಹೋದ ಬಿಜೆಪಿ ನಾಯಕರು ಲವ್ ಜಿಹಾದ್ ನಂತಹ ಹೇಳಿಕೆಗಳನ್ನು ನೀಡಿ ಕಿಡಿ ಹಚ್ಚಿರುವುದು, ಕೊಲೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಆತುರದಲ್ಲಿರುವಂತೆ ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಪೇಜ್ ಗಳು ಗೃಹ ಲಕ್ಷ್ಮೀ ಯೋಜನೆಗೂ ನೇಹಾ ಹತ್ಯೆಗೂ ಲಿಂಕ್ ಮಾಡಿ ಅಪಪ್ರಚಾರ ನಡೆಸುತ್ತಿರುವುದು, ರಾಜಕೀಯ ಬೇಳೆ ಬೇಯಿಸಲು ಹಚ್ಚಿರುವ ಬೆಂಕಿಯೇ ಎನ್ನುವ ಅನುಮಾನಗಳಿಗೆ ಕಾರಣವಾಗಿದೆ.

ಒಟ್ಟಿನಲ್ಲಿ ನೇಹಾ ಹಿರೇಮಠ್ ಎನ್ನುವ ಯುವತಿಯ ಹತ್ಯೆಯನ್ನು ನಾಗರಿಕ ಸಮಾಜ ಖಂಡಿಸಲೇ ಬೇಕು, ಕೃತ್ಯ ಎಸಗಿದವನು ಜೀವನ ಪರ್ಯಾಂತ ಜೈಲಿನಲ್ಲಿ ಪಶ್ಚಾತಾಪದಿಂದ ಕೊಳೆಯಬೇಕು. ಹೆಣ್ಣು ಮಗಳ ಮೇಲೆ ಮೃಗೀಯವಾಗಿ ನಡೆದುಕೊಂಡ ಆರೋಪಿ ನಾಗರಿಕ ಸಮಾಜದಲ್ಲಿರಲು ಯೋಗ್ಯನಲ್ಲ, ಆತನಿಗೆ ಜೀವನ ಪರ್ಯಂತ ಜೈಲು ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ಜೊತೆಗೆ ಕೊಲೆಗಳಂತಹ ಪ್ರಕರಣಗಳಲ್ಲಿ ರಾಜಕೀಯ ಮಾಡುವ ಯಾವುದೇ ಜನರು, ರಾಜಕಾರಣಿಗಳನ್ನು ಸಮಾಜ ಬೆಂಬಲಿಸಬಾರದು, ರಾಜಕೀಯ ಪಕ್ಷಗಳು ತಮ್ಮ ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಮತ ಪಡೆಯಬೇಕೆ ಹೊರತು, ಕೊಲೆಗಳನ್ನು ತೋರಿಸಿ ಮತ ಕೇಳುವಂತಾಗಬಾರದು. ಆಗಲೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎನ್ನುವುದೇ ಈ ವರದಿಯ ಆಶಯ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ