ಪುಸ್ತಕ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಕನ್ನಡ ಪುಸ್ತಕ ಪ್ರಾಧಿಕಾರ!
ಹಾಸನ: ಕನ್ನಡರಾಜ್ಯೋತ್ಸವದ ಅಂಗವಾಗಿ 2020ರ ನವೆಂಬರ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಕಡ 50 ರಷ್ಟು ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್‍ಲೈನ್ ನಲ್ಲಿ ಕೂಡ ಈ ಶೇ.50 ರಷ್ಟು ರಿಯಾಯಿತಿ ಲಭ್ಯವಿದೆ.
ಇದಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿಯೂ ಕೂಡ ಶೇ.50 ರಷ್ಟು ರಿಯಾಯಿತಿಯಲ್ಲಿ ಅಂದರೆwww.kannadapustakapradhikara.com ನಲ್ಲಿ ನಮ್ಮ ಪುಸ್ತಕಗಳು ವಿಭಾಗದಲ್ಲಿ ಆಯ್ಕೆ ಮಾಡಿ, ಆನ್‍ಲೈನ್ ಮೂಲಕ ಹಣ ಪಾವತಿಸಿ ಪುಸ್ತಕಗಳನ್ನು ಅಂಚೆ ಮೂಲಕ ಪಡೆಯಬಹುದಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಸುಮಾರು 360 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ. ಅತ್ಯಂತ ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶ ಕನ್ನಡ ಪುಸ್ತಕ ಪ್ರಾಧಿಕಾರದ್ದಾಗಿದೆ.