ಲೂಸ್ ಎಣ್ಣೆ ಪ್ಯಾಕೆಟ್ ಗಳಲ್ಲಿ ಮಾರುವಂತಿಲ್ಲ | ಹೈಕೋರ್ಟ್ ಆದೇಶ - Mahanayaka

ಲೂಸ್ ಎಣ್ಣೆ ಪ್ಯಾಕೆಟ್ ಗಳಲ್ಲಿ ಮಾರುವಂತಿಲ್ಲ | ಹೈಕೋರ್ಟ್ ಆದೇಶ

18/12/2020

ಚೆನ್ನೈ: ಅಡುಗೆ ಎಣ್ಣೆಯಲ್ಲಿ ಭಾರೀ ಕಲಬೆರಕೆಗಳು ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯನ್ನು ಲೂಸ್ ಪ್ಯಾಕೆಟ್ ಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದು  ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.

ಅಡುಗೆ ಎಣ್ಣೆಯಲ್ಲಿ ಕಲಬೆರಕೆಯಾಗುತ್ತಿರುವ ಬಗ್ಗೆ ಸೂಕ್ತ ಕ್ರಮ ಜರಗಿಸುವಂತೆ ಕೋರಿ ಸಲ್ಲಿಲಾಗಿದ್ದ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್​.ಕಿರುಬಂಕರನ್​ ನೇತೃತ್ವದ ಪೀಠ,  ಈ ಆದೇಶವನ್ನು ಹೊರಡಿಸಿದೆ.

ಅಡುಗೆ ಎಣ್ಣೆಯಲ್ಲಿ ಕಲಬೆರಕೆ ಮಾಡುತ್ತಿರುವ ವಿಚಾರ ಅತ್ಯಂತ ಅಪಾಯಕಾರಿಯಾಗಿದೆ. ಈ ರೀತಿಯಾಗಿ ಕಲಬೆರಕೆ ಮಾಡುವವರ ವಿರುದ್ಧ ತಮಿಳುನಾಡು ಗೂಂಡಾ ಕಾಯ್ದೆ -1982ರ ಅಡಿಯಲ್ಲಿ ಶಿಕ್ಷೆ ನೀಡುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಬೆರಕೆ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಮನುಷ್ಯನ ನರವ್ಯೂಹವನ್ನೇ ಅಪಾಯದ ಅಂಚಿಗೆ ತರುತ್ತಿದೆ. ದೃಷ್ಟಿದೋಷ, ವಾಕರಿಕೆ, ವಾಂತಿ, ತಲೆತಿರುಗುವಿಕೆ, ತಲೆನೋವು ಸೇರಿದಂತೆ ಮಾರಣಾಂತಿಕ ಕಾಯಿಲೆಗಳನ್ನೂ ಇದು ತರಬಲ್ಲುದು. ಇಷ್ಟೆಲ್ಲ ಗೊತ್ತಿದ್ದೂ, ಇಂತಹ ಕೃತ್ಯ ಎಸಗುವವರನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತು.

ಇನ್ನೂ ತಮಿಳುನಾಡಿನಲ್ಲಿ ಎಣ್ಣೆ ತಯಾರಿಕೆ ಘಟಕಗಳು ಎಷ್ಟಿವೆ, ಯಾವ್ಯಾವ ಪ್ರಯೋಗಾಲಯಗಳಲ್ಲಿ ಇದರ ಗುಣಮಟ್ಟದ ಪರೀಕ್ಷೆ ನಡೆಯುತ್ತದೆ, ಅದರ ಉಸ್ತುವಾರಿ ವಹಿಸಿರುವವರು ಯಾರು ಎಂಬ ಬಗ್ಗೆ ಕೋರ್ಟ್ ಮಾಹಿತಿ ಕೇಳಿದೆ.

ಇತ್ತೀಚಿನ ಸುದ್ದಿ