ನನಗೆ ದೈಹಿಕ, ಮಾನಸಿಕ ಹಿಂಸೆಯಾಗುತ್ತಿದೆ ಎಂದು ಮಹಿಳೆ ಯಾರ ವಿರುದ್ಧ ದೂರು ನೀಡಿದ್ದು ಗೊತ್ತೆ?
ಮುಂಬೈ: ಮಹಿಳೆಯೊಬ್ಬರು ತನಗೆ ರಸ್ತೆಯಲ್ಲಿರುವ ಹೊಂಡ, ಗುಂಡಿಗಳಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆಯಾಗುತ್ತಿದ್ದು, ಆರ್ಥಿಕ ನಷ್ಟವನ್ನೂ ಉಂಟು ಮಾಡಿದೆ ಎಂದು ದೂರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆಯು ಮಹಾರಾಷ್ಟ್ರದ ಔರಂಗಬಾದ್ ನಗರದಲ್ಲಿ ನಡೆದಿದೆ. ಡಿಸೆಂಬರ್ 7ರಂದು ಸಂಧ್ಯಾ ಘೋಳ್ವೆ ಎಂಬವರು ಈ ದೂರನ್ನು ನೀಡಿದ್ದಾರೆ. ಸುಮಾರು 30 ಕಿ.ಮೀ. ದೂರದಲ್ಲಿರುವ ಫುಲಾಂಬ್ರಿ ತೆಹಸಿಲ್ ಪ್ರದೇಶದಲ್ಲಿರುವ ತನ್ನ ಕಚೇರಿಗೆ ತೆರಳಲು ತಾನು ಬಹಳಷ್ಟು ತೊಂದರೆಪಡುತ್ತಿದ್ದು, ದೈಹಿಕ ಹಾಗೂ ಮಾನಸಿಕವಾಗಿ ತಾನು ತೊಂದರೆಗೀಡಾಗುತ್ತಿದ್ದೇನೆ ಎಂದು ದೂರು ನೀಡಿದ್ದಾರೆ.
ಈ ರಸ್ತೆಯಲ್ಲಿ ಸಾವಿರಾರು ಜನರು ಪ್ರಯಾಣಿಸುತ್ತಿದ್ದರೂ, ಈ ಮಹಿಳೆ ಒಬ್ಬರು ಮಾತ್ರವೇ ದೂರು ದಾಖಲಿಸಿದ್ದಾರೆ. ಉಳಿದವರು ಹಿಡಿಶಾಪ ಹಾಕಿಕೊಂಡು ಹೋಗುತ್ತಿದ್ದಾರೆ ಅಷ್ಟೇ ಜನರು ಯಾವಾಗ ಕಾನೂನಿನ ಬಗ್ಗೆ ಅರಿತುಕೊಳ್ಳುತ್ತಾರೋ ಆಗ ಮಾತ್ರವೇ ಅವರ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಕನಿಷ್ಠ ಪಕ್ಷ ಈ ಸಮಸ್ಯೆಗಳಿಂದ ಜನರು ರೋಸಿ ಹೋಗಿದ್ದಾರೆ ಎನ್ನುವ ಸಂದೇಶವನ್ನಾದರೂ ಆಡಳಿತ ವರ್ಗಕ್ಕೆ ನೀಡಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ರಸ್ತೆ ಸರಿ ಇಲ್ಲವಾದರೆ, ಬೈದುಕೊಂಡು ಹೋದರೆ, ರಸ್ತೆ ಸರಿಯಾಗುವುದಿಲ್ಲ. ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ, ತನಗೆ ತೊಂದರೆಯಾದಾಗ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಲ್ಲಿ ದೂರು ದಾಖಲಿಸಬೇಕು. ಇದು ಜವಾಬ್ದಾರಿ ಅಂದ್ರೆ, ರಸ್ತೆ ಸರಿ ಇಲ್ಲದ ಸಂದರ್ಭದಲ್ಲಿ ಒಬ್ಬೊಬ್ಬ ಪ್ರಜೆ ಕೂಡ ಸಂಬಂಧ ಪಟ್ಟವರ ವಿರುದ್ಧ ದೂರು ದಾಖಲಿಸುವ ಕೆಲಸ ಮಾಡಿದರೆ, ಜನಪ್ರತಿನಿಧಿಗಳಿಗೆ ಕೂಡ ಬಿಸಿಮುಟ್ಟುತ್ತದೆ. ಆ ಮೂಲಕ ಸಮಸ್ಯೆಗಳು ಹಾಗೆಯೇ ಉಳಿಯುವುದಿಲ್ಲ.