ವಿಧಾನಸೌಧದಲ್ಲೇ ರೈತರಿಗೆ ‘ಮಕ್ಮಲ್ ಟೋಪಿ’: ಕೋಟಿ ಕೋಟಿ ಹಣದೊಂದಿಗೆ ಎಸ್ಕೇಪ್ ಆದ ವಂಚಕ! - Mahanayaka

ವಿಧಾನಸೌಧದಲ್ಲೇ ರೈತರಿಗೆ ‘ಮಕ್ಮಲ್ ಟೋಪಿ’: ಕೋಟಿ ಕೋಟಿ ಹಣದೊಂದಿಗೆ ಎಸ್ಕೇಪ್ ಆದ ವಂಚಕ!

chikkamagaluru
16/04/2026

ಚಿಕ್ಕಮಗಳೂರು: ರಾಜಧಾನಿಯ ಶಕ್ತಿ ಕೇಂದ್ರವಾದ ವಿಧಾನಸೌಧದ ಹೆಸರನ್ನು ಬಳಸಿಕೊಂಡು ಕಾಫಿನಾಡಿನ ಅಮಾಯಕ ರೈತರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೃಷಿ ಮತ್ತು ಪ್ರವಾಸೋದ್ಯಮ ಇಲಾಖೆಯ ಯೋಜನೆಗಳ ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸುಮಾರು 80ಕ್ಕೂ ಹೆಚ್ಚು ರೈತರಿಗೆ ಬರೋಬ್ಬರಿ 1,38,98,400 ರೂಪಾಯಿ ವಂಚಿಸಲಾಗಿದೆ.

ಕಳೆದ ಒಂದು ವರ್ಷದಿಂದ ರೈತರೊಂದಿಗೆ ಸಂಪರ್ಕದಲ್ಲಿದ್ದ ಗಂಗಾಧರ ಗೌಡ ಎಂಬ ವ್ಯಕ್ತಿ ಈ ಬೃಹತ್ ವಂಚನೆಯ ಜಾಲ ಹೆಣೆದಿದ್ದಾನೆ. ಸರ್ಕಾರಿ ಸಬ್ಸಿಡಿಗಳ ಆಮಿಷ ಒಡ್ಡುತ್ತಿದ್ದ ಈತ, “ಕೇವಲ 50 ಸಾವಿರ ರೂಪಾಯಿ ಪಾವತಿಸಿದರೆ ಒಂದು ಟ್ರ್ಯಾಕ್ಟರ್‌ಗೆ 3 ಲಕ್ಷ ರೂಪಾಯಿ ಸಬ್ಸಿಡಿ ಕೊಡಿಸುತ್ತೇನೆ” ಎಂದು ರೈತರನ್ನು ನಂಬಿಸಿದ್ದಾನೆ.

ಈ ವಂಚಕ ಗಂಗಾಧರ ಗೌಡ ರೈತರನ್ನು ನೇರವಾಗಿ ಬೆಂಗಳೂರಿನ ವಿಧಾನಸೌಧಕ್ಕೇ ಕರೆಸಿಕೊಂಡು ಅಲ್ಲಿಯೇ ಹಣದ ವಹಿವಾಟು ನಡೆಸಿದ್ದಾನೆ. ವಿಧಾನಸೌಧದ ಆವರಣದಲ್ಲೇ ವ್ಯವಹಾರ ಕುದುರಿಸಿದ್ದರಿಂದ, ರೈತರು ಇದು ಅಧಿಕೃತ ಸರ್ಕಾರಿ ಕೆಲಸವೆಂದು ನಂಬಿ ತಮ್ಮ ಕಷ್ಟದ ಹಣವನ್ನು ಆತನ ಕೈಗಿಟ್ಟಿದ್ದಾರೆ.

ಹಣ ಪಡೆದ ನಂತರ ಕೆಲಸ ವಿಳಂಬವಾಗುತ್ತಿರುವುದನ್ನು ಕಂಡು ರೈತರು ಪ್ರಶ್ನಿಸಿದಾಗ, “ಈಗ ಬಜೆಟ್ ನಡೆಯುತ್ತಿದೆ, ಬೆಳಗಾವಿ ಅಧಿವೇಶನ ಮುಗಿಯಲಿ, ಸೆಷನ್ ನಂತರ ಕೆಲಸ ಮಾಡಿಕೊಡುತ್ತೇನೆ” ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡಿದ್ದಾನೆ. ಆದರೆ ಅಧಿವೇಶನ ಮುಗಿಯುತ್ತಿದ್ದಂತೆ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಗಂಗಾಧರ ಗೌಡ ನಾಪತ್ತೆಯಾಗಿದ್ದಾನೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತರು:

ತಾವು ಮೋಸ ಹೋಗಿರುವುದು ತಡವಾಗಿ ಅರಿವಿಗೆ ಬರುತ್ತಿದ್ದಂತೆ, ಕಡೂರು ತಾಲೂಕಿನ ಪರಮೇಶ್ವರಪ್ಪ, ಕಲ್ಲೇಶ್, ಚಂದ್ರಶೇಖರ್ ಸೇರಿದಂತೆ ಸಂತ್ರಸ್ತ ರೈತರು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಗಲು ದರೋಡೆ ನಡೆಸಿರುವ ವಂಚಕನನ್ನು ಕೂಡಲೇ ಬಂಧಿಸಿ, ತಮಗೆ ನ್ಯಾಯ ಕೊಡಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ