ತೃತೀಯಲಿಂಗಿ ವೇಷದಲ್ಲಿ ಬಂದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ನಗದು ದೋಚಿ ಪರಾರಿ
ಮುಂಬೈ: ತೃತೀಯಲಿಂಗಿಯಂತೆ ವೇಷ ಧರಿಸಿ ಬಂದು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಗದು ದೋಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ಈ ಆಘಾತಕಾರಿ ಘಟನೆ ಮುಂಬೈನ ಪೊವೈ ಪ್ರದೇಶದಲ್ಲಿ ನಡೆದಿದೆ.
ಅನಿಲ್ ಶೇಷರಾವ್ ಶಿಂಧೆ (28) ಬಂಧಿತ ಆರೋಪಿ. ಈತ ಸೀರೆ ಉಟ್ಟು ತೃತೀಯಲಿಂಗಿಯಂತೆ ನಟಿಸಿ ಮಹಿಳೆಯ ಮನೆಗೆ ನುಗ್ಗಿದ್ದ. ಸಂತ್ರಸ್ತ ಮಹಿಳೆಗೆ ಮದುವೆಯಾಗಿ ನಾಲ್ಕೈದು ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಈ ವಿಷಯವನ್ನು ಹೇಗೋ ತಿಳಿದುಕೊಂಡಿದ್ದ ಆರೋಪಿ, ದೃಷ್ಟಿ ತೆಗೆದು ಮಗುವಿನ ಭಾಗ್ಯಕ್ಕಾಗಿ ವಿಶೇಷ ಆಶೀರ್ವಾದ ನೀಡುವುದಾಗಿ ನಂಬಿಸಿ ಮಹಿಳೆಯ ಫ್ಲಾಟ್ಗೆ ಪ್ರವೇಶ ಪಡೆದಿದ್ದಾನೆ.
ಮನೆ ಪ್ರವೇಶಿಸಿದ ಕೂಡಲೇ ಆತ ಮಹಿಳೆಯನ್ನು ಮಲಗುವ ಕೋಣೆಗೆ ದೂಡಿ, ಜೀವ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಮನೆಯಲ್ಲಿದ್ದ 2 ಸಾವಿರ ರೂಪಾಯಿ ನಗದನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡ ಪೊವೈ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿದರು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಸೀರೆ ಧರಿಸಿದ್ದ ಆರೋಪಿ ಆಟೋರಿಕ್ಷಾದಲ್ಲಿ ಥಾಣೆಯತ್ತ ಪರಾರಿಯಾಗಿರುವುದು ಪತ್ತೆಯಾಗಿದೆ. ಆರೋಪಿಯನ್ನು ಹಿಂಬಾಲಿಸಿದ ಪೊಲೀಸರು ಅದೇ ರಾತ್ರಿ ಕಲ್ವಾ ಭಾಗದ ಖರೇಗಾಂವ್ ಕೊಳೆಗೇರಿ ಪ್ರದೇಶದಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಪೂಜೆ, ದೃಷ್ಟಿ ತೆಗೆಯುವುದು, ಭಿಕ್ಷಾಟನೆ ಅಥವಾ ಆಶೀರ್ವಾದದ ಹೆಸರಿನಲ್ಲಿ ಬರುವ ಯಾವುದೇ ಅಪರಿಚಿತ ವ್ಯಕ್ತಿಗಳಿಗೆ ಮನೆ ಅಥವಾ ಫ್ಲಾಟ್ ಗಳ ಒಳಗೆ ಪ್ರವೇಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಹಾಗೆಯೇ, ವಸತಿ ಸಮುಚ್ಛಯಗಳ ಭದ್ರತಾ ಸಿಬ್ಬಂದಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಅಪರಿಚಿತರು ಒಳಬರುವಾಗ ಕಡ್ಡಾಯವಾಗಿ ಗುರುತಿನ ಚೀಟಿ ಪರಿಶೀಲಿಸಬೇಕು ಮತ್ತು ನಿವಾಸಿಗಳ ಪೂರ್ವಾನುಮತಿ ಪಡೆದ ನಂತರವಷ್ಟೇ ಅವರನ್ನು ಒಳಗೆ ಬಿಡುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























