ಪುರಾಣ ಕನ್ಯೆ: ಅಗಾಂತರದ ಆಚೆ ಈಚೆ - Mahanayaka

ಪುರಾಣ ಕನ್ಯೆ: ಅಗಾಂತರದ ಆಚೆ ಈಚೆ

l n mukundaraj
05/12/2023

  • ಎಲ್.ಎನ್. ಮುಕುಂದರಾಜ್

ಚಿಕ್ಕಣ್ಣ ಎನ್ನುವ ಈ ಹಳ್ಳಿಗಾಡಿನ ಸೊಗಡು ಜೀವದ ಬಗ್ಗೆ ನನಗೆ ವಿಚಿತ್ರ ಪ್ರೀತಿ. ಇವರು ಬರೆದ ಕಥೆ ಕಾದಂಬರಿಗಳನ್ನು ನಾನು ಆಗಾಗ ಓದುತ್ತಿರುತ್ತೇನೆ. ಆ ಮೂಲಕ ಮತ್ತೆ ನಾನು ಗ್ರಾಮೀಣ ಬದುಕಿನ ಕಡೆಗೆ ಮುಖ ಚಾಚುತ್ತೇನೆ.


Provided by

ಕೆ.ಎ.ಎಸ್. ಪದವಿ ಪಡೆದು, ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿ ಸಕಲವನ್ನು ಅನುಭವಿಸಿದ ಈ ಚಿಕ್ಕಣ್ಣ, ಅದು ಹೇಗೆ ಮತ್ತು ಏಕೆ ಮತ್ತೆ ಮತ್ತೆ ತನ್ನ ಹಳ್ಳಿಗೆ ಹಿಂದಿರುಗಿ ಸಣ್ಣ ಹುಡುಗನಾಗುತ್ತಾರೆ ಎಂಬುದರ ಬಗ್ಗೆ ನನಗೆ ವಿಚಿತ್ರವಾದ ಕುತೂಹಲವಿದೆ. ತನಗೆ ಇದ್ದ ಅಧಿಕಾರದ ಕಾರಣಕ್ಕಾಗಿ ಚಿಕ್ಕಣ್ಣ ಎಂದೋ ದೊಡ್ಡಣ್ಣನಾಗಬಹುದಾಗಿತ್ತು. ಆದರೆ ಲೇಖಕನಾದ ಚಿಕ್ಕಣ್ಣನವರಿಗೆ ಮನುಷ್ಯ ಪ್ರೀತಿ ಬಹಳ ಮುಖ್ಯವಾದದ್ದು. ಹಾಗಾಗಿ ಅವರು ಮತ್ತೆ ಮತ್ತೆ ತಮ್ಮ ಹಳ್ಳಿಯನ್ನು ಎಡತಾಕುತ್ತಾರೆ. ಅಲ್ಲಿನ ಅನೂಹ್ಯ ಜಗತ್ತನ್ನು ತಮ್ಮ ಬರವಣಿಗೆಯ ಕೇಂದ್ರವನ್ನಾಗಿ ಮಾಡಿಕೊಂಡು ಹೊಸ ಹೊಸ ಕುತೂಹಲಗಳನ್ನು ಸೃಷ್ಟಿಸುತ್ತಾರೆ.

ಚಿಕ್ಕಣ್ಣ ಕನಕ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾಗ ನನಗೆ ಬಹುದೊಡ್ಡ ಜವಾಬ್ದಾರಿಯನ್ನು ವಹಿಸಿದ್ದರು. ಅವರ ನಿರೀಕ್ಷೆಗೆ ತಕ್ಕಂತೆ ನಾನು ಕಾಗಿನೆಲೆಯಲ್ಲಿ ಮೂರು ದಿನಗಳ ಕಾಲ ಕನಕ ಅಧ್ಯಯನ ಶಿಬಿರವನ್ನು ಸಂಘಟಿಸಿದ್ದೆ. ಬಹಳ ವರ್ಷಗಳ ಹಿಂದೆಯೇ ಅವರು ಬರೆದಿದ್ದ ಮುಂಜಾವು ಕಾದಂಬರಿಯನ್ನು ಬೆಂಗಳೂರಿನ ಪ್ರಸಿದ್ಧ ಕಲಾವಿದ ಸಿ. ಚಂದ್ರಶೇಖರ್ ಅವರ ಸ್ಟುಡಿಯೋದಲ್ಲಿ, ಮಲ್ಲಿಕಾರ್ಜುನ ಸ್ವಾಮಿಯೊಂದಿಗೆ ಓದಿ ಪ್ರಸ್ತುತಪಡಿಸಿದ್ದೆ.

ಈ ಹಳೆಯ ನೆನಪುಗಳೆಲ್ಲ ಹಾಳಾಗಿ ಹೋಗಲಿ. ಕೆಲವು ತಿಂಗಳುಗಳ ಹಿಂದೆ ಚಿಕ್ಕಣ್ಣ ನನಗೆ ಫೋನ್ ಮಾಡಿ “ತನ್ನ ಹೊಸ ಕಾದಂಬರಿ ಪುರಾಣ ಕನ್ಯೆ ಬಿಡುಗಡೆಯಾಗುತ್ತಿದೆ, ನೀವು ಬರಬೇಕು ಶಿವ” ಎಂದು ಆಹ್ವಾನಿಸಿದ್ದರು. ಅವರ ಬಾಯಲ್ಲಿ ‘ಶಿವಾ’ ಎನ್ನುವ ಪದವನ್ನು ಕೇಳಿದಾಗಲೆಲ್ಲ ನನ್ನ ಮೈ ಮೇಲಿನ ಕೂದಲಗಳು ವಿನಾಕಾರಣ ನಿಮಿರಿ ನಿಲ್ಲುತ್ತಿದ್ದವು. ಆ ಸಭೆಗೆ ನಾನು ಹೋಗಿ ಕುಳಿತೆ. ಅಲ್ಲಿ ಗುರುಗಳಾದ ಡಾ. ಕೆ.ಮರಳಸಿದ್ದಪ್ಪ, ವಿದ್ವಾಂಸ ದಂಡಪ್ಪ ಮುಂತಾದವರು ಈ ಕೃತಿಯ ಬಗ್ಗೆ ಮಾತನಾಡಿದರು. ಅಲ್ಲಿ ಮಾರಾಟಕ್ಕೆ ಇಟ್ಟಿದ್ದ ಪುರಾಣ ಕನ್ಯೆಯ ಒಂದು ಪ್ರತಿಯನ್ನು ಕೊಂಡು ಮನೆಗೆ ತಂದೆ. ಬಹಳ ದಿನಗಳಿಂದ ಓದದೆ ಕಪಾಟಿನಲ್ಲಿ ಇಟ್ಟಿದ್ದ ಆ ಪುಸ್ತಕವನ್ನು ಕಳೆದ ಎರಡು ದಿನಗಳಿಂದ ಓದಿ ಮುಗಿಸಿದೆ.

ಭಾರತೀಯರಾದ ನಾವು ಪುರಾಣ ಪ್ರಿಯರು. ರಾಜ ಮಹಾರಾಜರ ಚರಿತ್ರೆಯನ್ನು, ಮಹಾಕಾವ್ಯಗಳ ಕಥಾನಕಗಳನ್ನು, ನಮ್ಮ ಸಮಕಾಲೀನ ಅನುಭವಗಳನ್ನು ಪುರಾಣ ರೂಪದಲ್ಲಿ ನಿರೂಪಿಸುತ್ತೇವೆ. ಪುರಾಣ ಎನ್ನುವುದು ಹೇಳುವವನಿಗೂ, ಕೇಳುವವನಿಗೂ ಒಂದು ಅನುಭವ ಜನ್ಯ ಶ್ರದ್ಧಾಕೇಂದ್ರ. ಬ್ರಹ್ಮಾಂಡವೆಂಬುದು ಒಂದು ಕಾಲಾತೀತ ನಡವಳಿಕೆ. ಅದಕ್ಕೆ ಆಚೆ ಈಚೆ ನಡುವಂತರಗಳ ವ್ಯತ್ಯಾಸವಿಲ್ಲ. ನಿತ್ಯವೂ ನಮ್ಮ ನಾಗರಿಕತೆ ಬದಲಾಗುತ್ತಿದೆ. ನಮ್ಮ ಪೂರ್ವಿಕರಿಗೆ ಇಲ್ಲದ ಅನೇಕ ಸಂಗತಿಗಳು ನಮ್ಮನ್ನು ಸಮೃದ್ಧವಾಗಿ ಇಟ್ಟಿವೆ. ಆದರೆ ಮನುಷ್ಯನ ಒಳಗಿನ ಗುಣಾವಗುಣಗಳು ಒಂದಿಂಚು ಬದಲಾಗದೆ ಸ್ಥಿರವಾಗಿರುವಂತೆ ಕಾಣುತ್ತದೆ. ನಮ್ಮ ಹಿಂದಿನವರು ಅನಕ್ಷರಸ್ಥರಾಗಿದ್ದರು. ಈಚಿನವರಾದ ನಾವು ಅಕ್ಷರವಂತರಾಗಿದ್ದೇವೆ. ಆಗಿದ್ದೇವೆ. ಇಷ್ಟಲ್ಲದೆ ಮತ, ಮೌಢ್ಯ, ಪುಂಡಾಟಿಕೆಗಳಲ್ಲಿ ನಮಗೂ ಅವರಿಗೂ ಯಾವುದೇ ವ್ಯತ್ಯಾಸವಿಲ್ಲ. ‘ ಅಕ್ಕರವ ಬಲ್ಲಾತ ಒಕ್ಕಲನು ತಿನಗಲಿತ’ ಎನ್ನುವ ಸರ್ವಜ್ಞನ ಮಾತಿನಂತೆ, ನಾವೆಲ್ಲ ಅಕ್ಷರ ಕಲಿತ ರಾಕ್ಷಸರಾಗಿದ್ದೇವೆ.

ನೀಲವೇಣಿ ಎನ್ನುವ ಪಟ್ಟಣದಲ್ಲಿ ಹುಟ್ಟಿದ ಹೆಣ್ಣು ಮಗಳೊಬ್ಬಳು ತನ್ನ ಸಂಶೋಧನಾ ಕಾರ್ಯಕ್ಕಾಗಿ ಕಟ್ಟೆಕೊಪ್ಪಲು ಎನ್ನುವ ಹಳ್ಳಿಗೆ ಹೋಗುತ್ತಾಳೆ. ಹೋಗುವ ಮೊದಲು ಅವಳ ಪ್ರಾಧ್ಯಾಪಕ ಸಂಜೀವಪ್ಪನವರು ಹಲವು ಮಹತ್ವದ ಸಂಗತಿಗಳನ್ನು ಅವಳಿಗೆ ತಿಳಿಸಿ ಹೇಳುತ್ತಾರೆ. “ಊರಿನೋರಿಗೆಲ್ಲ ಹಿಂದಿನ ಚರಿತ್ರೆ, ಕಥೆ ಗೊತ್ತಿರುತ್ತೆ ಅಂತ ತಿಳ್ಕೋಬೇಡ. ನಮ್ಮ ಭಾವನೆ ನೆನಪುಗಳು ಎಷ್ಟು ವಿಸ್ಮಯಭರಿತವಾಗಿದೆ ಎಂದರೆ ಪುರಾಣ ವ್ಯಕ್ತಿಗಳ ಬಗ್ಗೆ ಅವರ ಹೆಸರು, ಅವರ ಖ್ಯಾತಿ ಗೊತ್ತು. ಆತ ಧರ್ಮರಾಯನಂಥೋನು ಅಂತೀವಿ. ಅವನು ಶಕುನಿ ಥರ ಕಿತಾಪತಿ ಅಂತೀವಿ. ಅವರು ರಾಮ ಲಕ್ಷ್ಮಣರಂಥ ಸೋದರರು ಅಂತೀವಿ. ಅವಳು ಸೀತೆ ಥರ ವನವಾಸ ಅನುಭವಿಸಿದೋಳು ಅಂತೀವಿ. ಅವನು ದುರ್ಯೋಧನನ ಥರ ದುಷ್ಟ, ದುರಂಕಾರಿ ಅಂತೀವಿ. ಕೀಚಕನ ಕಿಳ್ಳೇಲಿ ಇರಬೇಡ ಅಂತೀವಿ. ಅವಳು ದ್ರೌಪದಿ ಥರ ಛಲಗಾತಿ ಅಂತೀವಿ. ಅವನು ದಾನಶೂರ ಕರ್ಣ ಅಂತೀವಿ. ಅವನು ಕೃಷ್ಣ ಪರಮಾತ್ಮ ಅಂತೀವಿ. ಅವನು ಕುಂಭಕರ್ಣನ ನಿದ್ದೆ ವಂಶದವನು ಅಂತೀವಿ. ಅವನು ರಾವಣನ ಥರ ಲಂಪಟ ಅಂತೀವಿ. ಹಿಂಗೇ ಗುಣ ವಿಶೇಷವಿರುವ ಪುರಾಣ ವ್ಯಕ್ತಿಗಳನ್ನೇ ಹೆಸರಿಸಿಕೊಂಡು ಮಾತಾಡ್ತೀವಿ‌. ಆದರೆ ನಿಮ್ಮ ವಂಶಸ್ಥರ ಹೆಸರು ಹೇಳು ಅಂದ್ರೆ ಅರಿವಿರೋದಿಲ್ಲ. ತುಂಬಾ ಹಿಂದಿನವರು ಹೋಗಲಿ, ಎರಡು ಮೂರು ತಲೆಮಾರಿನ ತಾತ ಮುತ್ತಾತನ ಹೆಸರೇ ನಮಗೆ ಗೊತ್ತಿರುವುದಿಲ್ಲ” ಪ್ರೊಫೆಸರ್ ಅವರ ಈ ಮಾತುಗಳಲ್ಲಿ ನಮ್ಮ ಜನತೆಯ ಪರಂಪರಾಗತ ಚಾರಿತ್ರಿಕ ವಿಸ್ಮೃತಿಯ ಸ್ಪಷ್ಟ ಚಿತ್ರಣ ಇದೆ. ನಮಗೆ ದೇಶದ ಚರಿತ್ರೆಯಾಗಲಿ, ನಾಡಿನ ಚರಿತ್ರೆಯಾಗಲಿ, ಭಾಷೆಯ ಸಾಹಿತ್ಯ ಸಂಸ್ಕೃತಿಯ ವಿವರಗಳಾಗಲಿ, ನಮ್ಮ ಊರಿನ, ನಮ್ಮ ಕುಟುಂಬದ ಚರಿತ್ರೆಯಾಗಲಿ ಅರಿವಿಗೆ ಬರುವುದಿಲ್ಲ. ಇದೇ ಕಾರಣಕ್ಕಾಗಿಯೇ ನಮ್ಮ ಜನ ಮತ್ತೆ ಮತ್ತೆ ಮೇಲ್ವರ್ಗದ ಆರ್ಯಪುರುಷರು ಎರಚುವ ಮಂಕುಬೂದಿಗೆ ಒಳಗಾಗಿ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಶೋಷಿತರಾಗಿ, ಅಸಹಾಯಕರಾಗಿ ಬಾಳುತ್ತಾರೆ. ಆರ್ಥಿಕ ಹಾಗೂ ಕಾನೂನು ತಜ್ಞರಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಚರಿತ್ರೆಯ ಬಗ್ಗೆ ಅಷ್ಟೆಲ್ಲ ಏಕೆ ತಲೆ ಕೆಡಿಸಿಕೊಂಡರೆಂಬುದಕ್ಕೆ ಚಿಕ್ಕಣ್ಣನವರ ಈ ಕಾದಂಬರಿಯಲ್ಲಿ ಸಾಕ್ಷ್ಯ ದೊರೆಯುತ್ತದೆ. ನಮ್ಮ ದೇಶದ ಜನ ಚರಿತ್ರೆಯನ್ನು ಸರಿಯಾಗಿ, ಸ್ಪಷ್ಟವಾಗಿ ಅರ್ಥ ಮಾಡಿಕೊಂಡರೆ ಭವಿಷ್ಯವನ್ನು ಸುಂದರವಾಗಿ ನಿರ್ಮಾಣ ಮಾಡಿಕೊಳ್ಳಬಲ್ಲರೆಂಬ ಭರವಸೆ ಬಾಬಾ ಸಾಹೇಬರಿಗೆ ಇತ್ತು. ನಮ್ಮ ಕಾಲದ ಕನ್ನಡ ಕವಿ ಕುವೆಂಪು ಅವರು ಇದೇ ಕಾರಣದಿಂದಾಗಿಯೇ ಪುರಾಣದ ಸಂಗತಿಗಳನ್ನು ವರ್ತಮಾನದ ವಿವೇಕಗಳೊಂದಿಗೆ ಒಟ್ಟುಗೂಡಿಸಿ ಹೊಸ ಶಿಲ್ಪವಾಗಿ ಕಟ್ಟಿಕೊಟ್ಟಿದ್ದಾರೆ.

ಚಿಕ್ಕಣ್ಣನವರ ಈ ಪುರಾಣ ಕನ್ಯೆ ಕಥನವೂ ಕೂಡ ಇದೇ ಮಾದರಿಯಲ್ಲಿ ನಮ್ಮ ಜನರನ್ನು ಗಂಭೀರವಾಗಿ ಎಚ್ಚರಿಸುತ್ತದೆ. ನೀಲವೇಣಿ ಸಂಶೋಧನೆಗಾಗಿ ಆಯ್ಕೆ ಮಾಡಿಕೊಂಡ ಈ ಹಳ್ಳಿಯು ಇದಕ್ಕಿಂತ ಭಿನ್ನವಾಗಿಲ್ಲ. ಕೆಲವು ತಲೆಮಾರುಗಳ ಹಿಂದೆ ಜೀವಂತವಾಗಿದ್ದ ವ್ಯಕ್ತಿಗಳು ತಾವು ಹಿಂಸೆಪಟ್ಟಿದ್ದನ್ನು ಹಾಗೂ ಇತರರ ಸಂಕಷ್ಟಗಳಿಗೆ ಸ್ಪಂದಿಸಿ, ಸ್ವತಃ ದೇವರೇ ಆಗುವ ಪುರಾಣ ಪ್ರಕ್ರಿಯೆಯೊಂದು ಇಲ್ಲಿನ ಜನರ ನಾಲಿಗೆಯಲ್ಲಿ ನೆಲೆ ನಿಂತಿರುತ್ತದೆ. ಸಂಶೋಧಕನಾಗಿರುವ ವ್ಯಕ್ತಿ ಇದೆಲ್ಲವನ್ನು ಕೆದಕಿ ಹೊರತೆಗೆಯಬೇಕು.
ಈ ಮಾತಿಗೆ ಪೂರಕವೆನ್ನುವಂತೆ ನೀಲವೇಣಿ “ಒಂದು ದೇವ್ರು ಅಂದ್ರೆ ಅದ್ರ ಸುತ್ತ ಎಷ್ಟು ಕತೆಗಳು ಇರ್ತವೆ? ಹೇಳಕ್ಕೆ ದೇವರ ಕತೆ, ಆದ್ರೆ ವಾಸ್ತವದಲ್ಲಿ ಅವು ಮನುಷ್ಯರ ಕತೆಗಳೇ ಅಲ್ವಾ? ಸಮಾಜಕ್ಕೆ ಒಳ್ಳೇದು ಮಾಡಿದ ಮಹಿಮರನ್ನ ನಮ್ಮ ಪೂರ್ವಿಕರು ಹೆಂಗೆ ದೇವರ ಮಾಡಿ ಬುಡುತ್ತಾರೆ ಅಲ್ವಾ ಅಜ್ಜಾ”? ಈ ಮಾತುಗಳ ಮೂಲಕ ಕಾದಂಬರಿಕಾರರು ದೇವರ ನಿಜವಾದ ಅರ್ಥ ಏನು ಎಂಬುದನ್ನು ಓದುಗರಿಗೆ ವಿವರಿಸಿ ಹೇಳುವ ಪ್ರಯತ್ನ ಮಾಡುತ್ತಾರೆ. ದೇವರು ಎಂಬುವವನು ಹೊರಗೆ ಎಲ್ಲೋ ಇಲ್ಲ. ನಮ್ಮ ಅಂತರಂಗದೊಳಗೆ ಇದ್ದಾನೆ ಎಂಬ ಕನ್ನಡದ ಪಾರಂಪರಿಕ ಬಸವಪ್ರಜ್ಞೆ ಇಲ್ಲಿ ಕೆಲಸ ಮಾಡುತ್ತಿರುದನ್ನು ಗ್ರಹಿಸಬಹುದು.

ಇಲ್ಲಿ ದೇವತೆಯರಾಗಿರುವವರು ದೇವಲೋಕದಿಂದ ಬಂದ ಅತಿಮಾನುಷ ವ್ಯಕ್ತಿಗಳಲ್ಲ. ಜೀವನಪೂರ್ತಿ ನೋವು ತಿಂದು ಬಾಳಿ ಬದುಕಿ ಸತ್ತುಹೋದ ಸಾಮಾನ್ಯ ಹಳ್ಳಿಗಾಡಿನ ಮಹಿಳೆಯರು. ಅವರ ಸಂಕಷ್ಟಗಳು ಆ ಪರಮಾತ್ಮನಿಗೆ ಪ್ರೀತಿಯಾಗಬೇಕು. ಇವರು ಸುರಲೋಕದಿಂದ ನೆಲಕ್ಕಿಳಿದು ಬಂದ ಆರ್ಯ ದೇವತೆಗಳಂತಲ್ಲ. ಆರ್ಯ ದೇವತೆಗಳು ಸಾಮಾನ್ಯ ಮನುಷ್ಯರಿಗೆ ನೆರವಾದ ಉದಾರಣೆಗಳು ಹದಿನೆಂಟು ಪುರಾಣಗಳು ಸೇರಿದಂತೆ, ನಮ್ಮ ರಾಮಾಯಣ ಮತ್ತು ಮಹಾಭಾರತದ ಕಥೆಗಳಲ್ಲಾಗಲೀ ಕಾಣಸಿಗುವುದು ಅಪರೂಪ.

ಆ ಊರಿನಲ್ಲಿ ಕಣಗಲಮ್ಮ ಎನ್ನುವ ಕಥಕಿ ಆಲಕಮ್ಮ, ಬಾಣ್ತವ್ವ, ಕಾಳವ್ವ ಹಾಗೂ ಮಾಳವ್ವ ಎನ್ನುವ ನಾಲ್ಕು ಹೆಣ್ಣು ದೇವರುಗಳ ಬಗ್ಗೆ ಕತೆ ಹೇಳುತ್ತಾಳೆ. ಅವಳು ಆ ಕಥೆಗಳನ್ನು ತಾನೇ ಸ್ವತಃ ಕಟ್ಟಿ ಹೇಳುವುದಿಲ್ಲ. ನಮ್ಮ ನಡುವೆಯೇ ನಿನ್ನೆಮೊನ್ನೆ ತಾನೆ ಬದುಕಿ ಬಾಳಿ ಹೋದವರ, ಜೀವಂತ ಕತೆಗಳನ್ನು ಹೇಳುತ್ತಾಳೆ. ಪ್ರತಿಯೊಂದು ಕಥೆಯು ಕಲೆಯಾಗಿ ಅರಳುತ್ತವೆ. ಅವಳೇ ಹೇಳುವಂತೆ “ಕೇಳೋದು ಒಂದು ಕಲೆ” ಎಂಬುದನ್ನು ಕಾದಂಬರಿಕಾರರು ಇಲ್ಲಿ ನಿರೂಪಿಸುತ್ತಾರೆ. ಆ ಮೂಲಕ ಸಹೃದಯನಾದ ಓದುಗನನ್ನು ಹತ್ತಿರದವನನ್ನಾಗಿ ಮಾಡಿಕೊಳ್ಳುತ್ತಾರೆ.

ಬಾಣ್ತವ್ವ ಎನ್ನುವ ಒಬ್ಬ ಹೆಣ್ಣು ಮಗಳು ವೈಯಕ್ತಿಕ ಬದುಕಿನಲ್ಲಿ ಕಡುಕಷ್ಟಕ್ಕೆ ಈಡಾದರೂ ಊರ ಜನರಿಗಾಗಿ, ದನಕರುಗಳಿಗಾಗಿ ನೀರಿನ ಸೆಲೆಯನ್ನು ಸೃಷ್ಟಿಸಿ ಹೋಗುತ್ತಾಳೆ. ಪಂಪನ ಕಾವ್ಯದಲ್ಲಿ ಬರುವ ನಿರ್ನಾಮಿಕೆಯನ್ನು ಹೋಲುವ ಮತ್ತೊಬ್ಬ ದೇವತೆ ಮಾಳವ್ವ. ಹೆತ್ತ ತಂದೆ ತಾಯಿಯನ್ನು, ಅನ್ನಕ್ಕೆ ಆಸರೆಯಾಗಿದ್ದ ಅಜ್ಜನನ್ನು ಕಳೆದುಕೊಳ್ಳುವ ಈ ಹುಡುಗಿ ಅನುಭವಿಸುವ ಅವಮಾನ ಘೋರತರವಾದದ್ದು. ಕಾಮುಕರ ಆಕ್ರಮಣಕ್ಕೆ ತುತ್ತಾಗುವ ಹೆಣ್ಣು ಮಗಳು ಅವರ ವಿರುದ್ಧ ಹೋರಾಟ ಮಾಡುವ ವೀರಾವೇಶವನ್ನು ಚಿಕ್ಕಣ್ಣ ಚಿತ್ರವತ್ತಾಗಿ ಕಟ್ಟಿಕೊಟ್ಟಿದ್ದಾರೆ.

ಕಾದಂಬರಿಯ ಉದ್ದಕ್ಕೂ ಜನಪದ ತ್ರಿಪದಿಗಳನ್ನು ಸಮಯ ಸಂದರ್ಭೋಚಿತವಾಗಿ ಲೇಖಕರು ಬಳಸಿದ್ದಾರೆ.
“ಹೆಣ್ಣಿನ ಗೋಳಟ್ಟಿ ಬನ್ನಿಯ ಮರ ಬೆಂದೊ
ಅಲ್ಲಿ ಸನ್ಯಾಸಿ ಮಠಬೆಂದು ಹಾರುವರ
ಪಂಚಾಂಗ ಕತ್ತಿ ಉರದಾವೆ”

ಹೆಣ್ಣಿನ ಗೋಳು ಭೂಮಿಯ ತುಂಬಾ ವ್ಯಾಪಿಸಿದರೆ ಬನ್ನಿಯ ಮರವಿರಲಿ, ಸನ್ಯಾಸಿ ಮಠವಿರಲಿ, ಹಾರುವರ ಪಂಚಾಂಗವಿರಲಿ ಯಾವುದೂ ಉಳಿಯದೆ, ಎಲ್ಲವೂ ನಾಶವಾಗುವುದರ ಮುನ್ಸೂಚನೆಯನ್ನು ಇಲ್ಲಿ ಕಾಣಬಹುದು. ಇದು ಒಂದರ್ಥದಲ್ಲಿ ಕಾದಂಬರಿಕಾರ ಕಟ್ಟಿಕೊಡುತ್ತಿರುವ ಕಾಲಜ್ಞಾನ.
ರಾಮಾಯಣದಂತಹ ಮಹಾಕಾವ್ಯಕ್ಕೆ ಮತ್ತೊಂದು ಅರ್ಥವ್ಯಾಪ್ತಿಯನ್ನು ಚಿಕ್ಕಣ್ಣ ಇಲ್ಲಿ ವಿಸ್ತರಿಸುವುದು ಸೋಜಿಗವೆನಿಸುತ್ತದೆ. ಶಿಷ್ಟ ರಾಮಾಯಣದಲ್ಲಿ ಹೆಣ್ಣಿನ ಶೀಲ ಪರಿಶೀಲಿಸಲು ಅಗ್ನಿ ಪ್ರವೇಶದ ಪರೀಕ್ಷೆಯನ್ನು ಒಡ್ಡಲಾಗುತ್ತದೆ. ಆದರೆ ನಮ್ಮ ಜನಪದರು ಸೀತೆಯನ್ನು ಒಣಗಿದ ಜಂಬುನೇರಳೆ ಮರವನ್ನು ತಬ್ಬಿಕೊಳ್ಳುವ ಮೂಲಕ ತನ್ನ ಚಾರಿತ್ರ್ಯವನ್ನು ಸಾಬೀತುಪಡಿಸಲು ಹೇಳುತ್ತಾರೆ. ಪ್ರಪಂಚದ ಪ್ರತಿಯೊಂದನ್ನು ಸುಟ್ಟುಹಾಕುವ ಬೆಂಕಿಗಿಂತಲೂ, ಚಿಗುರುವ ನೇರಳೆ ಮರದ ಜೀವಂತಿಕೆ ಎಷ್ಟು ದೊಡ್ಡದು ಅಲ್ಲವೇ.

ನಗರದ ಶೋಕಿಯ ವಾತಾವರಣದಲ್ಲಿ ಬದುಕಿರುವ ಚಿಕ್ಕಣ್ಣ, ತನ್ನ ಹಳ್ಳಿಯ ಜನರಾಡುವ ಅಪ್ಪಟ ಸೊಗಡಿನ ಭಾಷೆಯನ್ನು ಈ ಕಾದಂಬರಿಯಲ್ಲಿ ಬಳಸಿರುವುದು ನಿಜಕ್ಕೂ ಸಂತೋಷ ತರುತ್ತದೆ. ಗದ್ಯಕ್ಕೆ ಅಪರೂಪ ಎನ್ನುವ ರೂಪಕದ ಭಾಷೆಯನ್ನು ಇಲ್ಲಿ ಬಳಸಿದ್ದಾರೆ. ಕೆಲವು ಪುಟಗಳಲ್ಲಿ ಕಥೆಯ ಜೊತೆಗೆ, ಕವಿತೆಯ ಸೂಕ್ಷ್ಮಗಳು ಸಹಜವಾಗಿ ಚೆಲ್ಲುವರಿದಿವೆ. ಪ್ರಸಂಗಗಳ ನಿರೂಪಣೆಯಂತೂ ಅತ್ಯಂತ ಆಕರ್ಷಕವಾಗಿದೆ.

 

ಇತ್ತೀಚಿನ ಸುದ್ದಿ