ಸೆಮಿಫೈನಲ್ ನಲ್ಲಿ ಹರಿಣ ಪಡೆಗೆ ಸೋಲುಣಿಸಿದ ಕಾಂಗರೂ ಪಡೆ: ಫೈನಲ್ ಗೆ ಆಸ್ಟ್ರೇಲಿಯಾ ಪ್ರವೇಶ - Mahanayaka

ಸೆಮಿಫೈನಲ್ ನಲ್ಲಿ ಹರಿಣ ಪಡೆಗೆ ಸೋಲುಣಿಸಿದ ಕಾಂಗರೂ ಪಡೆ: ಫೈನಲ್ ಗೆ ಆಸ್ಟ್ರೇಲಿಯಾ ಪ್ರವೇಶ

17/11/2023

ಐಸಿಸಿ ವಿಶ್ವಕಪ್ -2023ರ ಎರಡನೇ ಸೆಮಿಫೈನಲ್ ನಲ್ಲಿ ಸೌತ್ ಆಫ್ರಿಕಾ ನೀಡಿದ ಅಲ್ಪ ರನ್ ಗಳ ಸವಾಲನ್ನು ಕಷ್ಟಪಟ್ಟು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಫೈನಲ್ ಗೆ ಪ್ರವೇಶ ಪಡೆದಿದೆ.


Provided by

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವು 47.2 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿತು.

ಪಂದ್ಯದ ಆರಂಭದಲ್ಲಿ ಮಳೆ ಸ್ವಲ್ಪ ತೊಂದರೆ ಕೊಟ್ಟರೂ ಬಳಿಕ ಯಾವುದೇ ಸಮಸ್ಯೆಯಾಗಲಿಲ್ಲ. ಸೌತ್ ಆಫ್ರಿಕಾ ಅಲ್ಪ ರನ್ ಗಳಿಸಿ ಆಸ್ಟ್ರೇಲಿಯಾಕ್ಕೆ ಗೆಲ್ಲುವ ಸುಲಭ ಅವಕಾಶವನ್ನು ಕೊಟ್ಟಿದ್ದರೂ ಅವರೂ ಕಷ್ಟಪಟ್ಟೇ ಈ ಗುರಿಯನ್ನು ಬೆನ್ನಟ್ಟಬೇಕಾಯಿತು. ಸೌತ್ ಆಫ್ರಿಕಾಕ್ಕೆ ಗೆಲ್ಲುವ ಸಾಕಷ್ಟು ಅವಕಾಶಗಳು ಕೈಚೆಲ್ಲಿದ್ದರಿಂದ ಸೋಲು ಅನುಭವಿಸಬೇಕಾಯಿತು.

18 ಬಾಲ್ ಗೆ 29 ರನ್ ಗಳಿಸಿ ಸೌತ್ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಗೆ ಮೊದಲ ವಿಕೆಟ್ ಒಪ್ಪಿಸಿದ ಡೇವಿಡ್ ವಾರ್ನರ್ ಬಳಿಕ ಬಂದ ಮಿಚೆಲ್ ಮಾರ್ಷ್ ಯಾವುದೇ ರನ್ ಗಳಿಸದೆ ಪೆವಿಲಿಯನ್ ಗೆ ಹಿಂದಿರುಗಿದರು. ಟ್ರಾವಿಸ್ ಹೆಡ್ ಗರಿಷ್ಠ 62 ರನ್ ಗಳಿಸಿದರೆ ಬಳಿಕ ಸ್ಟೀವನ್ ಸ್ಮಿತ್ ಅತ್ಯಧಿಕ 30 ರನ್ ಗಳಿಸಿ ಔಟ್ ಆದರು.

ಮಾರ್ನಸ್ ಲ್ಯಾಬುಸ್ಚಾಗ್ನೆ 18, ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಜೋಶ್ ಇಂಗ್ಲಿಸ್ 28 ರನ್ ಗಳಿಸಿ ಜೆರಾಲ್ಡ್ ಕೊಯೆಟ್ಜಿ ಅವರಿಗೆ ವಿಕೆಟ್ ಒಪ್ಪಿಸಿದರೆ ಮಿಚೆಲ್ ಸ್ಟಾರ್ಕ್ 16, ಪ್ಯಾಟ್ ಕಮಿನ್ಸ್ 14 ರನ್ ಗಳಿಸಿ ಅಜೇಯರಾಗಿ ಉಳಿದರು.

ಸೌತ್ ಆಫ್ರಿಕಾ ಪರ ತಬ್ರೈಜ್ ಶಮ್ಸಿ, ಜೆರಾಲ್ಡ್ ಕೊಯೆಟ್ಜಿ ತಲಾ ಎರಡು ವಿಕೆಟ್ ಪಡೆದರೆ ಕಗಿಸೊ ರಬಾಡ, ಐಡೆನ್ ಮಾರ್ಕ್ರಮ್, ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಪಡೆದರು.
ಇವತ್ತಿನ ಪಂದ್ಯ ಸೇರಿ ಈವರೆಗೆ ಐಸಿಸಿ ವಿಶ್ವಕಪ್ ನಲ್ಲಿ ನಾಲ್ಕು ಬಾರಿ ಸೆಮಿಫೈನಲ್ ಪ್ರವೇಶಿಸಿದ್ದ ಸೌತ್ ಆಫ್ರಿಕಾ ಫೈನಲ್ ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದೆ.

ಈ ಬಾರಿಯ ಪಂದ್ಯದಲ್ಲಿ ಇತಿಹಾಸವೊಂದು ಮರುಕಳಿಸಿತು. 1999ರಲ್ಲಿ ಐಸಿಸಿ ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಿದ್ದ ಸೌತ್ ಆಫ್ರಿಕಾಕ್ಕೆ ಆಸ್ಟ್ರೇಲಿಯಾ 213 ರನ್ ಗಳ ಸವಾಲು ಒಡ್ಡಿದ್ದು, ಇದರಲ್ಲಿ ಎರಡೂ ತಂಡಗಳು ತಮ್ಮ ಇನ್ನಿಂಗ್ಸ್‌ನಲ್ಲಿ ಇಷ್ಟು ಮೊತ್ತವನ್ನು ಗಳಿಸಿ ಮ್ಯಾಚ್ ಟೈ ಆಗಿತ್ತು. ರನ್ ರೇಟ್ ಮೇಲೆ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿತ್ತು. ಫೈನಲ್ ನಲ್ಲಿ ಅಂದು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಸೋತಿತ್ತು. ಈ ಬಾರಿ ಆಸ್ಟ್ರೇಲಿಯಾಕ್ಕೆ ಭಾರತ ಎದುರಾಳಿಯಾಗಿದ್ದು ಹೀಗಾಗಿ ಪಂದ್ಯ ರೋಚಕವಾಗಿದೆ.

ಇತ್ತೀಚಿನ ಸುದ್ದಿ