ದುಷ್ಟ ಸಂಸ್ಕೃತಿಗಳ ಸೆರೆಯಲ್ಲಿ ಸಿಲುಕಿದವರಿಗೆ ಅಕ್ಷರದ ಆಸರೆ ನೀಡಿದ ಸಾವಿತ್ರಿಬಾಯಿ ಫುಲೆ - Mahanayaka

ದುಷ್ಟ ಸಂಸ್ಕೃತಿಗಳ ಸೆರೆಯಲ್ಲಿ ಸಿಲುಕಿದವರಿಗೆ ಅಕ್ಷರದ ಆಸರೆ ನೀಡಿದ ಸಾವಿತ್ರಿಬಾಯಿ ಫುಲೆ

17/10/2020

ಸ್ತೀ ಶಿಕ್ಷಣದ ಹೋರಾಟಕ್ಕೆ ಮುನ್ನುಡಿ ಬರೆದ ಸಾವಿತ್ರಿಬಾಯಿ ಫುಲೆ 1831ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ ‘ನೈಗಾಂನ್’ನಲ್ಲಿ ಹುಟ್ಟಿದರು. ಪುರೋಹಿತಶಾಹಿಗಳು ಸ್ತ್ರೀ ಶಿಕ್ಷಣದ ವಿರೋಧಿಗಳಾಗಿದ್ದ ಸಂದರ್ಭದಲ್ಲಿ ಎಲ್ಲ ಧರ್ಮ, ಜಾತಿಗಳ ಮಹಿಳೆಯರಿಗಾಗಿ ಸಾವಿತ್ರಿಬಾಯಿ ಹೋರಾಟ ಮಾಡುತ್ತಾರೆ. ಸಾವಿತ್ರಿಬಾಯಿ ಅವರು ತಮ್ಮ ಬಾಲ್ಯದಲ್ಲಿಯೇ  ಮಹಾತ್ಮ ಜ್ಯೋತಿಬಾಫುಲೆ ಅವರನ್ನು ವಿವಾಹವಾದರು. ಜ್ಯೋತಿಬಾಫುಲೆ ಅವರನ್ನು ವಿವಾಹವಾದ ಬಳಿಕ ಅವರ ಜೀವನದ ದಾರಿಯೇ ಬದಲಾಯಿತು. ತಮ್ಮ ಇಡೀ ಜೀವನವನ್ನು ಮಹಿಳೆಯರ, ಅಸ್ಪೃಶ್ಯರ ಶಿಕ್ಷಣದ ಹಕ್ಕಿಗಾಗಿ ಅವರು ಮುಡಿಪಿಟ್ಟರು.

ವೃತ್ತಿಯಲ್ಲಿ ಶಿಕ್ಷಕರಾಗಿದ್ದ, ಸಾವಿತ್ರಿಬಾಯಿ ಅವರ ಪತಿ ಜ್ಯೋತಿಬಾಫುಲೆ ಅವರು, ಸಾವಿತ್ರಬಾಯಿ ಅವರಿಗೆ ಶಿಕ್ಷಣ ಕಲಿಯಲು ಹಾಗೂ ಕಲಿಸಲು ಪ್ರೇರಕ ಶಕ್ತಿಯಾಗುತ್ತಾರೆ.  ಸಾವಿತ್ರಬಾಯಿ ಅವರು ಶಿಕ್ಷಣ ಕಲಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಮನುವಾದಿಗಳು ಅವರ ಮೇಲೆ ಸೆಗಣಿ ಎರಚಿ, ಕಲ್ಲು ತೂರಾಟ ನಡೆಸಿ ಗಾಯಗೊಳಿಸುವುದು, ಅವಾಚ್ಯಪದಗಳಿಂದ ನಿಂದಿಸುವುದು ಇಂತಹ ಹಲವು ತೊಂದರೆಗಳನ್ನು ನೀಡುತ್ತಿದ್ದರು. ಆದರೆ ಇದ್ಯಾವುದರ ಬಗ್ಗೆಯೂ ಯೋಚಿಸದ ಸಾವಿತ್ರಿಬಾಯಿ ತಾವು ಶಾಲೆಗೆ ಪಾಠ ಮಾಡಲು ಹೊರಡುತ್ತಿರುವ ಸಂದರ್ಭದಲ್ಲಿ ತಾವು ಉಟ್ಟುಕೊಂಡು ಹೋಗಿದ್ದ ಬಟ್ಟೆಯ ಜೊತೆಗೆ ಇನ್ನೊಂದು ಬಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಕೆಸರ ಬಟ್ಟೆಯ ಮೇಲೆ ಆಗಬಹುದು. ಆದರೆ ಮನುಷ್ಯನ ಮನಸ್ಸಿಗೆ ಅಲ್ಲ ಎನ್ನುವುದನ್ನು ಅವರು ಅರಿತಿದ್ದರು.


Provided by

ಹೀಗೆ ಆರಂಭವಾದ ಫುಲೆ ದಂಪತಿಯ ಶಿಕ್ಷಣ ಕ್ರಾಂತಿಯಲ್ಲಿ ಮುಂದೆ 1848ರಿಂದ 1852ರ ಅವಧಿಯಲ್ಲಿ 18 ಶಾಲೆಗಳನ್ನು ಫುಲೆ ದಂಪತಿ ತೆರೆದು, ಶಿಕ್ಷಣ ವಂಚಿತರಾಗಿದ್ದ ಎಲ್ಲ ಜಾತಿಯ ಹೆಣ್ಣು ಮತ್ತು ಗಂಡು ಮಕ್ಕಳಿಗೂ ಶಿಕ್ಷಣ ನೀಡಲು ಆರಂಭಿಸಿದರು. ಆ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದವರು ಮಾತ್ರವೇ ಶಿಕ್ಷಣ ಕಲಿಸಬೇಕು ಎನ್ನುವ ನೀಚ ಸಂಪ್ರದಾಯವಿತ್ತು. ಆದರೆ, ಸಾವಿತ್ರಿಬಾಯಿ ಇವುಗಳನ್ನೆಲ್ಲ ಮೀರಿ, ಉಳಿದೆಲ್ಲ ಜಾತಿಯವರಿಗೂ ಶಿಕ್ಷಣ ನೀಡಿದರು. ಇದರ ಫಲವಾಗಿಯೇ ಇಂದು ಎಲ್ಲ ಜಾತಿಯವರು ಶಿಕ್ಷಣ ಪಡೆಯಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿರುವುದು.

ಪಾಠಶಾಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಲಾಡಳಿತ, ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ  ಮೊದಲಾದ ಕೆಲಸಗಳನ್ನು ಯಶಸ್ವಿಯಾಗಿ ಸಾವಿತ್ರಿಬಾಯಿ ನಿಭಾಯಿಸಿದ್ದರು. ಇವರ ಕೆಲಸಗಳನ್ನು ಗಮನಿಸಿದ ಅಂದಿನ ಬ್ರಿಟೀಷ್ ಸರ್ಕಾರ, ಸಾವಿತ್ರಿಬಾಯಿ ಅವರಿಗೆ ಮೆಚ್ಚುಗೆ ಸೂಚಿಸಿತ್ತು.

ಇಂದು ಮಹಿಳೆಯರಿಗೆ ಭಾರತದಲ್ಲಿ ಶಿಕ್ಷಣ ಪಡೆಯುವ ಹಕ್ಕಿದೆ. ಪುರುಷ ಎಷ್ಟು ಶಿಕ್ಷಣ ಕಲಿಯಬಹುದೋ ಅಷ್ಟು ಶಿಕ್ಷಣವನ್ನು ಮಹಿಳೆಯೂ ಕಲಿಯಬಹುದಾಗಿದೆ. ಇದಕ್ಕೆಲ್ಲ ಕಾರಣ ಸಾವಿತ್ರಿಬಾಯಿ ಅವರ ತ್ಯಾಗ. ಆಗ ಸಮಾಜದಲ್ಲಿದ್ದ, ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ(ಗಂಡ ಸತ್ತ ಮಹಿಳೆಯನ್ನು ಜೀವಂತ ಸುಡುವುದು), ವಿಧವೆಯರ ಕೇಶ ಮುಂಡನ ಇವೆಲ್ಲದರ ವಿರುದ್ಧ ಹೋರಾಟ ಮಾಡಿ, ಈಗ ಮಹಿಳೆಯರು ನೆಮ್ಮದಿಯಿಂದ ಬದುಕುವ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ದುರಂತವೇನೆಂದರೆ, ಬಹುತೇಕ ಜನರಿಗೆ ಇಂದಿಗೂ ಸಾವಿತ್ರಿಬಾಯಿ ಅವರ ತ್ಯಾಗಗಳು ಇನ್ನೂ ಗೊತ್ತಿಲ್ಲ.  ಸಾವಿತ್ರಿಬಾಯಿ ಅವರನ್ನು ಇತಿಹಾಸದಲ್ಲಿ ಮುಚ್ಚಿ ಹಾಕಿರುವ ಪರಿಣಾಮದಿಂದಲೇ ಇಂದಿನ ಮಹಿಳೆಯರು ಸಾವಿತ್ರಿಬಾಯಿ ಅವರನ್ನು ಅರಿತುಕೊಳ್ಳಲು ಸಾಧ್ಯವಾಗಿಲ್ಲ. ಮಹಿಳಾ ದಿನಾಚರಣೆಗಳು ಬಂದಾಗ, ಸಾವಿತ್ರಿಬಾಯಿ ಅವರನ್ನು ಮಹಿಳೆಯರು ನೆನೆಯದಿದ್ದರೆ, ಇತಿಹಾಸಕ್ಕೆ ಅವರು ಬಗೆದ ಮಹಾದ್ರೋಹವಾಗುತ್ತದೆ.

ಇತ್ತೀಚಿನ ಸುದ್ದಿ