ಬಾಲ್ಯ ವಿವಾಹ ಮಾಡಿದರೆ ಕಠಿಣ ಶಿಕ್ಷೆಗೊಳಗಾಗುತ್ತೀರಿ | ಪಿಎಸ್ ಐ ಕು.ಭಾರತಿ ಕಂಕನವಾಡಿ ಎಚ್ಚರಿಕೆ - Mahanayaka

ಬಾಲ್ಯ ವಿವಾಹ ಮಾಡಿದರೆ ಕಠಿಣ ಶಿಕ್ಷೆಗೊಳಗಾಗುತ್ತೀರಿ | ಪಿಎಸ್ ಐ ಕು.ಭಾರತಿ ಕಂಕನವಾಡಿ ಎಚ್ಚರಿಕೆ

14/11/2020

ಚನ್ನಗಿರಿ:  ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ , ಸ್ಪೂರ್ತಿ ಸಂಸ್ಥೆ ಹಾಗೂ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಕ್ಕಳ ಸಹಾಯವಾಣಿ ಜಾಗೃತಿ ರಥ ಕಾರ್ಯಕ್ರಮವನ್ನು  (ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್) ಶನಿವಾರ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ  ಏರ್ಪಡಿಸಲಾಗಿತ್ತು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಬಸವಾಪಟ್ಟಣ ಪಿಎಸ್ ಐ ಕು. ಭಾರತಿ ಕಂಕನವಾಡಿ ಮಾತನಾಡಿ, ಮಕ್ಕಳ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಪೋಷಕರ ಸಹಕಾರ ಅಗತ್ಯವಿದೆ . ಇಂತಹ ಹೀನಾಕೃತ್ಯಕ್ಕೆ ಮುಂದಾದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತೀರಿ, ಈ ಕೃತ್ಯಕ್ಕೆ  ಸಹಕಾರ ನೀಡಿದವರ ಮೇಲೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಳ್ಳಬೇಕಾಗುವುದೆಂದು ಎಚ್ಚರಿಕೆ ಸಂದೇಶ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಬಿವೃದ್ಧಿ ಅಧಿಕಾರಿಗಳಾದ ನಂದಿಲಿಂಗೇಶ್ವರ ಸಾರಂಗಮಠ  ಮಾತನಾಡಿ,  ಮಕ್ಕಳ ಹಕ್ಕುಗಳು , ಮಕ್ಕಳ ಸಮಸ್ಯೆಗಳ ನಿವಾರಣೆ , ಮಕ್ಕಳ ಸಹಾಯವಾಣಿ ಹಾಗೂ ಮಕ್ಕಳ ರಕ್ಷಣಾ ಘಟಕ ಕುರಿತಂತೆ ತಾಲೂಕಿನ ವಿಧ್ಯಾರ್ಥಿ ನಿಲಯಗಳ ವಾರ್ಡನ್ ಗಳು ಸೇರಿದಂತೆ ಸಂಬಂಧಿಸಿದ ತಾಲೂಕಿನ ಅಧಿಕಾರಿಗಳು ತಾಲೂಕುವಾರು ಕಾರ್ಯಾಗಾರ ನಡೆಸುವುದು ಮಕ್ಕಳ ಸಹಾಯವಾಣಿ ಕುರಿತಂತೆ ಜಾಗೃತಿ ಫಲಕಗಳು , ಗೋಡೆ ಬರಹಗಳು ಬಿತ್ತಿಪತ್ರಗಳ ಪ್ರದರ್ಶನದ ಮೂಲಕ ಮಕ್ಕಳಿಗೆ ಜಾಗೃತಿ ಮೂಡಿಸಬಹುದಾಗಿದೆ ಎಂದು  ಅಭಿಪ್ರಾಯ ಪಟ್ಟರು.

ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದಿಂದ ರಕ್ಷಿಸುವ ಸಲುವಾಗಿ ಮಕ್ಕಳ ಸಹಾಯವಾಣಿ, ಬಾಲಕಾರ್ಮಿಕ ಮಕ್ಕಳು, ಮಕ್ಕಳ ಮಾರಾಟ ಸಾಗಾಣಿಕೆ, ಬಾಲ್ಯ ವಿವಾಹ, ಲೈಂಗಿಕ ಕಿರುಕುಳ, ಬೀದಿ ಮಕ್ಕಳು, ವಿಕಲಚೇತನ ಮಕ್ಕಳು, ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳಿಗೆ  ಸೂಕ್ತ ರಕ್ಷಣೆ, ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದರು.

ಮಕ್ಕಳ ಸಹಾಯವಾಣಿ ಸ್ಫೂರ್ತಿ ಸಂಸ್ಥೆ ಚನ್ನಗಿರಿ,  ಸಂಯೋಜಕರಾದ  ಶಂಕರ್  ರವರು ಮಾತನಾಡಿ,  ಮಕ್ಕಳ ಸಹಾಯವಾಣಿ ಕುರಿತು ಜಾಗೃತಿಯ ನುಡಿಗಳನ್ನು ನುಡಿದರು,   ಮಕ್ಕಳ ಸಹಾಯವಾಣಿ ಜಾಗೃತ ರಥಕ್ಕೆ ಪಿಡಿಒ ಹಾಗೂ ಪಿಎಸ್ಐ ಭಾರತಿ ಕಂಕನವಾಡಿ  ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತರು, ಗ್ರಾಮಸ್ಥರು ,ಗ್ರಾಮದಮುಖಂಡರುಗಳು , ಗ್ರಾಮಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ