ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಹೇಗಿದೆ ಪ್ರತಿಕ್ರಿಯೆ? - Mahanayaka

ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಹೇಗಿದೆ ಪ್ರತಿಕ್ರಿಯೆ?

08/12/2020

ಬೆಂಗಳೂರು: ಭಾರತ ಬಂದ್ ನ ಬಿಸಿ ಕರ್ನಾಟಕಕ್ಕೂ ತಟ್ಟಿದ್ದು, ಕರ್ನಾಟಕದಾದ್ಯಂತ ಕರಾಳ ಕೃಷಿ ಕಾನೂನಿನ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ರಾಜ್ಯ ಲಾರಿ ಮಾಲಕರ ಸಂಘ, ಓಲಾ-ಊಬರ್ ಚಾಲಕರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘಟನೆ, ದಲಿತ ಸಂಘಟನೆಗಳು, ಆಟೊ ಯೂನಿಯನ್, ಜೈ ಭಾರತ್ ಚಾಲಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬಂದ್‍ ಗೆ ಬೆಂಬಲ  ಸೂಚಿಸಿವೆ.


Provided by

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೂರು ಪ್ರವೇಶ ದ್ವಾರದಲ್ಲಿ ಪೊಲೀಸರ ಕಾವಲು ಹಾಕಲಾಗಿದೆ. ಮುಂಜಾನೆಯಿಂದ ವಾಹನಗಳ ತಪಾಸಣೆ ಕಾರ್ಯ ಮಾಡಲಾಗುತ್ತಿದೆ.




ಇನ್ನೂ ಭಾರತ ಬಂದ್ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಬೆಳಿಗ್ಗೆ ರೈತ ಸಂಘಟನೆಗಳು ಟೈರ್‌ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹೇಮಗುಡ್ಡ ಬಳಿಯ ಟೋಲ್ ಗೇಟ್ ಬಳಿ ರೈತ ಹಿತರಕ್ಷಣ ವೇದಿಕೆ ಪ್ರತಿಭಟನೆ ನಡೆಸುತ್ತಿದೆ.  ಈ ಪ್ರದೇಶದಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಟೋಲ್ ಗೇಟ್ ಬಂದ್ ಮಾಡಲಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಯಾದಗಿರಿಯಲ್ಲಿ ಹೊಸ ಬಸ್ ನಿಲ್ದಾಣ ಬಳಿ ರೈತ, ಕಾರ್ಮಿಕ, ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಕಾರ್ಮಿಕ, ರೈತ ಪರ ಸಂಘಟನೆಗಳ ಪದಾಧಿಕಾರಿಗಳು ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ಆರ್ ಕೆಎಸ್, ಎಐಡಿಎಸ್‌ಒ, ಎಐಯುಟಿಯುಸಿ‍ ಸೇರಿದಂತೆ ಕಾರ್ಮಿಕ, ರೈತ ಸಂಘಟನೆಗಳು ಭಾಗವಹಿಸಿವೆ.

 ಭಾರತ್ ಬಂದ್‌ ಗೆ ಮೈಸೂರಿನಲ್ಲಿ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು ವಿವಿಧ ಕಾರ್ಮಿಕ ಒಕ್ಕೂಟ, ರಸ್ತೆ ಬದಿ ತರಕಾರಿ ವ್ಯಾಪಾರಿಗಳ ಸಂಘ ಸೇರಿ ಹಲವು ಪ್ರಮುಖ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿದೆ. ಮೈಸೂರಿನಲ್ಲಿ ಬಂದ್ ನಲ್ಲಿ ಭಾಗವಹಿಸಿದ್ದಕ್ಕಿಂತಲೂ ನೈತಿಕ ಬೆಂಬಲವೇ ಹೆಚ್ಚಾಗಿ ನೀಡಲಾಗಿದ್ದು, ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು ವಿವಿಧ ಕಾರ್ಮಿಕ ಒಕ್ಕೂಟ, ರಸ್ತೆ ಬದಿ ತರಕಾರಿ ವ್ಯಾಪಾರಿಗಳ ಸಂಘ ಸೇರಿದಂತೆ  ಹಲವು ಪ್ರಮುಖ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ.

ಉಳಿದಂತೆ ದಾವಣಗೆರೆಯಲ್ಲಿ ಜಗಳೂರು ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದು, ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗಾವಿ ಬಸ್ ನಿಲ್ದಾಣ ಎದುರು ಟಯರ್‌ಗೆ ಬೆಂಕಿ ಹಚ್ಚಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯು ಪ್ರತಿಭಟನೆ ನಡೆಸುತ್ತಿದೆ.

ಇತ್ತೀಚಿನ ಸುದ್ದಿ