ತಮಿಳುನಾಡಿನಲ್ಲಿ ಇನ್ನು ಅಣ್ಣಾಮಲೈ VS ಸಸಿಕಾಂತ್ ಸೆಂಥಿಲ್ | ಕಾಂಗ್ರೆಸ್-ಬಿಜೆಪಿ ಬಿಗ್ ಫೈಟ್ ಗೆ ಡ್ರಾವಿಡ ಕುಡಿಗಳ ನೇತೃತ್ವ! - Mahanayaka

ತಮಿಳುನಾಡಿನಲ್ಲಿ ಇನ್ನು ಅಣ್ಣಾಮಲೈ VS ಸಸಿಕಾಂತ್ ಸೆಂಥಿಲ್ | ಕಾಂಗ್ರೆಸ್-ಬಿಜೆಪಿ ಬಿಗ್ ಫೈಟ್ ಗೆ ಡ್ರಾವಿಡ ಕುಡಿಗಳ ನೇತೃತ್ವ!

08/11/2020

ದ್ರಾವಿಡ ನಾಡು ತಮಿಳುನಾಡಿನಲ್ಲಿ ಉತ್ತರ ಭಾರತೀಯ ಮೂಲದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಖಾತೆ ತೆರೆಯಲು ಒಬ್ಬ  ಮಾಜಿ ಐಪಿಎಸ್ ಮತ್ತು ಇನ್ನೊಬ್ಬ ಮಾಜಿ ಐಎಎಸ್ ಅಧಿಕಾರಿಯನ್ನು ನೇಮಿಸಿಕೊಂಡಿವೆ. ಇಬ್ಬರೂ ಯುವ ಅಧಿಕಾರಿಗಳಾಗಿದ್ದು, ಉತ್ತಮ ವಾಕ್ಚಾತುರ್ಯ ಹೊಂದಿದವರೇ ಆಗಿದ್ದಾರೆ. ಇತ್ತೀಚೆಗಷ್ಟೆ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಬಳಿಕ ಇದೀಗ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಬಳಿಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ,  ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ.

ಬಿಜೆಪಿಯು ಅಣ್ಣಾಮಲೈ ಅವರಿಗೆ ತಮಿಳುನಾಡಿನಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದ್ದರೆ, ಇತ್ತ ಕಾಂಗ್ರೆಸ್ ಸಸಿಕಾಂತ್ ಸೆಂಥಿಲ್ ಅವರನ್ನು ಪ್ರತಿಯಾಗಿ ತಮಿಳುನಾಡಿನಲ್ಲಿ ಬಿಜೆಪಿಗೆ ಎದುರಾಗಿ ನಿಲ್ಲಿಸಿದ್ದು, ಎರಡು ಉತ್ತರ ಭಾರತೀಯರ ಪಕ್ಷದಲ್ಲಿ ದ್ರಾವಿಡ ನಾಡಿನ ಕುಡಿಗಳ ರೋಚಕ ಫೈಟ್ ಮುಂದಿನ ಚುನಾವಣೆಯಲ್ಲಿರುವ ಸಾಧ್ಯತೆಗಳು ಕಂಡು ಬಂದಿದ್ದು, ಈ ಮೂಲಕ ದ್ರಾವಿಡ ಪಕ್ಷಗಳ ಪ್ರಾಬಲ್ಯಕ್ಕೆ ತಿಲಾಂಜಲಿ ಇಡುವ ಕಾರ್ಯಕ್ರಮ ಆರಂಭವಾಗಿದೆಯೇ ಎಂಬ ಮಾತುಗಳು ಕೇಳಿ ಬಂದಿವೆ.

41 ವರ್ಷದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ತಾನು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತೇನೆ ಎನ್ನುವುದನ್ನು ಬಹಿರಂಗಗೊಳಿಸಿದ್ದಾರೆ.  ಸೋಮವಾರ ಸಸಿಕಾಂತ್ ಸೆಂಥಿಲ್ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳಲಿದ್ದಾರೆ. ಇವರು ಕಾಂಗ್ರೆಸ್ ಗೆ ಸೇರುವುದರ ಹಿಂದೆ ಕರ್ನಾಟಕ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಅಣ್ಣಾಮಲೈ ಅವರು ಬಿಜೆಪಿಗೆ ಸೇರ್ಪಡೆಯಾದ ತಕ್ಷಣವೇ ಅವರನ್ನು ತಮಿಳುನಾಡಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಸಸಿಕಾಂತ್ ಸೆಂಥಿಲ್ ಅವರಿಗೂ ತಮಿಳುನಾಡು ಕಾಂಗ್ರೆಸ್ ನಲ್ಲಿ ಪ್ರಮುಖ ಹುದ್ದೆ ದೊರೆಯುವ ಸಾಧ್ಯತೆಗಳು ಕಂಡು ಬಂದಿದೆ. ಸಸಿಕಾಂತ್ ಸೆಂಥಿಲ್ ಅವರು, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನಜಾಗೃತಿ ಮೂಡಿಸಿದ್ದರು.

ಇತ್ತೀಚಿನ ಸುದ್ದಿ