ಮಹಾನಾಯಕ ವೀಕ್ಷಕರಿಗೆ ಸಿಹಿಸುದ್ದಿ | ಜೀ ಟಿವಿಗೆ ಘನತೆ ತಂದ ಮಹಾನಾಯಕ ಧಾರಾವಾಹಿಗೆ ಪ್ರಶಸ್ತಿ
ಬೆಂಗಳೂರು: ಕರ್ನಾಟಕದ ಜನರ ಮನೆಮಾತಾಗಿರುವ ಮಹಾಮಾನವತಾವಾದಿ ಡಾ.ಬಿ,ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಧಾರವಾಹಿ ಮಹಾನಾಯಕವು ಕನ್ನಡ ಧಾರಾವಾಹಿಗಳ ಲೋಕದಲ್ಲಿ ಹೊಸ ದಾಖಲೆಯನ್ನೆ ನಿರ್ಮಿಸಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ರಾಜ್ಯದಾದ್ಯಂತ ಜನಮನ್ನಣೆ ಗಳಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನಾಧಾರಿತ “ಮಹಾನಾಯಕ” ಧಾರಾವಾಹಿಗೆ ಡಬ್ಬಿಂಗ್ ವಿಭಾಗದಲ್ಲಿ ಜೀ ಕುಟುಂಬ ಪ್ರಶಸ್ತಿ ಲಭಿಸಿದೆ.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ. ಮುಂದಿನ ವಾರ ಇದರ ಪ್ರಸಾರ ಮಾಡಲಾಗುತ್ತದೆ ಎಂದು ಜೀ ಕನ್ನಡದ ಅನಿಲ್ ಕುಮಾರ್ ಜೆ ತಿಳಿಸಿದ್ದಾರೆ.
ಜೀ ಟಿವಿ ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಈ ಧಾರಾವಾಹಿಯು ಸಾಮಾಜಿಕ ವ್ಯವಸ್ಥೆಗಳನ್ನು ಬದಲಿಸುವಲ್ಲಿ, ಜನರ ಮನಸ್ಥಿತಿಗಳನ್ನು ಬದಲಿಸುವಲ್ಲಿ ಯಶಸ್ವಿಯಾಗುತ್ತಿದೆ. ಅಂಬೇಡ್ಕರ್ ಎಂಬ ಮಹಾಮಾನವತಾ ವಾದಿ ತನ್ನ ಬಾಲ್ಯದಿಂದಲೂ ನಡೆಸಿದ ಹಲವು ಪರಿವರ್ತನೆಗಳನ್ನು ಇಡೀ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶವೇ ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಮಹಾನಾಯಕ ಧಾರಾವಾಹಿಗೆ ಪ್ರಶಸ್ತಿ ಬಂದಿರುವುದು ಇಡೀ ದೇಶದ ಜನರಿಗೆ ಸಂದ ಗೌರವವಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.
ಮಹಾನಾಯಕ ಧಾರಾವಾಹಿಯು ಒಂದು ವಾರ ಕಾರಣಾಂತರಗಳಿಂದ ಪ್ರಸಾರವಾಗಿರಲಿಲ್ಲ. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಜೀ ಟಿವಿಯ ಕಚೇರಿಗೆ ಹಾಗೂ ಮುಖ್ಯಸ್ಥರಾಗಿರುವ ರಾಘವೇಂದ್ರ ಹುಣಸೂರು ಅವರಿಗೆ ಕರೆ ಮಾಡಿ, ಮಹಾನಾಯಕ ಪ್ರಸಾರ ಮಾಡಿ ಎಂದು ಮನವಿ ಮಾಡಿದ್ದರು. ಮೊದಲೇ ಮಹಾನಾಯಕ ಧಾರಾವಾಹಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಧಾರಾವಾಹಿ ನಿಲ್ಲಿಸಿ ಬಿಟ್ಟರೇ ಎಂಬ ಆತಂಕ, ಆಕ್ರೋಶವನ್ನು ವೀಕ್ಷಕರು ವ್ಯಕ್ತಪಡಿಸಿದ್ದರು. ಇಂತಹದ್ದೊಂದು ಅಪೂರ್ವ ಬೆಂಬಲ ಇದೇ ಮೊದಲಾ ಬಾರಿಗೆ ಧಾರಾವಾಹಿಯೊಂದಕ್ಕೆ ದೊರೆಯುತ್ತಿದೆ. ಇದು ಜೀ ಕನ್ನಡಕ್ಕೆ ದೊರಕಿದ ಮೊದಲ ಪ್ರಶಸ್ತಿ ಎಂದೇ ಹೇಳಬಹುದಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಜನತೆ, ಮಹಾನಾಯಕ ಅತ್ಯುತ್ತಮ ಧಾರಾವಾಹಿ ಎಂಬ ಸರ್ಟಿಫಿಕೆಟ್ ನೀಡಿದ್ದಾರೆ. ಈ ಮೂಲಕ ಭಾರತದ ನಿಜವಾದ ಇತಿಹಾಸವನ್ನು ತೆರೆದಿಡುವ ಹಾಗೂ ಜ್ಯೋತಿಬಾಫುಲೆ, ಪೆರಿಯಾರ್, ನಾರಾಯಣಗುರು, ಗೌತಮಬುದ್ಧ ಮೊದಲಾದ ಮಹಾನಾಯಕರುಗಳ ಬಗ್ಗೆಯೂ ಧಾರಾವಾಹಿಗಳು ಪ್ರಸಾರವಾಗಲಿ ಎಂದು ರಾಜ್ಯದ ಜನತೆ ಶುಭ ಹಾರೈಸಿದ್ದಾರೆ.
ವರದಿ: ಯಶೋಧರ ಕಾಂಬಳೆ