ಮಕ್ಕಳ ಮನ ಗೆಲ್ಲುವ ಕುವೆಂಪು ಅವರ “ಮೇಘಪುರ”
07/01/2024
- ಉದಂತ ಶಿವಕುಮಾರ್
ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತ್ತಿರುವುದು
ವಿಸ್ತೃತನಾಕದಲಿ
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯಶಿಶು
ಹಾಡಲಿ, ಕುಣಿಯಲಿ, ಹಾರಲಿ, ಏರಲಿ
ದಿವಿಜತ್ವಕೆ ಈ ಮನುಜ ಪಶು!
ಎನ್ನುವ ಈ ಸಾಲುಗಳನ್ನು ನಾವು ಕುವೆಂಪುರವರು ಬರೆದಿರುವ “ಮೇಘಪುರ” ಮಕ್ಕಳ ಕವನಸಂಕಲನದಲ್ಲಿ ಕಾಣಬಹುದು. ದೊಡ್ಡವರಲ್ಲಿಯೂ ಮಗುವಿನ ಭಾವನೆಗಳು ಇದ್ದು, ಅದು ಮಕ್ಕಳ ಸಂಗದೊಳಗೆ ಎಚ್ಚರಗೊಳ್ಳುತ್ತದೆ. ಈ ಸಂದರ್ಭದಲ್ಲಿ “ಮೇಘಪುರ” ಕವನ ಸಂಕಲನದ ಕವಿತೆಗಳನ್ನು ದೊಡ್ಡವರಾದ ನೀವು ತಮ್ಮ ಮಕ್ಕಳ ಜೊತೆಗೂಡಿ ಮಕ್ಕಳಾಗಿ ಕುಣಿಯುತ, ನಲಿಯುತ, ಹಾಡುತ, ಓದುತಾ ಇಲ್ಲಿನ ಕವನಗಳನ್ನು ಮಕ್ಕಳಲ್ಲಿ ಭಿತ್ತಬೇಕು ಎಂದು ಕುವೆಂಪುರವರು 1942ರಲ್ಲಿ “ಮೇಘಪುರ” ಎನ್ನುವ ಮಕ್ಕಳ ಕವನ ಸಂಕಲನವನ್ನು ನಮ್ಮ ಮುಂದಿಟ್ಟಿದ್ದಾರೆ. ಈ ಸಂಕಲನದಲ್ಲಿ 13 ಕವಿತೆಗಳಿವೆ.
ಸಂಸಾರದ ಬದುಕಿನಲ್ಲಿ ಬಳಲಿದ ದೊಡ್ಡವರಾದ ನಮಗೆ ಕೆಲವೊಮ್ಮೆ ಮಗುವಾಗಿದ್ದರೆ ಎಷ್ಟು ಚೆನ್ನಾಗಿತ್ತು ಎನ್ನುವ ಆಲೋಚನೆ ಬಂದು ಹೋಗುವುದು ಸಹಜ. ಆ ಕ್ಷಣದಲ್ಲಿ ಹಿಂದೆ ಮಗುವಾಗಿದ್ದಾಗ ಆಡಿದ ಬಾಲ ಲೀಲೆಗಳನ್ನು ಇಂದಿನ ಮಕ್ಕಳ ಜೊತೆ ಸೇರಿ ಆಟ ಆಡಬೇಕೆನ್ನುವ ಆಸೆಯಿಂದ ಇವತ್ತಿನ ಮಕ್ಕಳ ಶಿಷ್ಯನಾಗಿ
“ಧೂಳಾಟವಾಡುವುದ ಕಲಿಸೆನಗೆ, ಕಂದ,
ಬಳಲಿ ಬಂದಿಹೆ ಜಗದ ಮರುಳು ರಣದಿಂದ!
ಕೋಲ ಕುದುರೆಯ ಮಾಡಿ ಹೊಡೆವುದನ್ನು ಕಲಿಸು, ಕೋಗಿಲೆಯನಣಕಿಸುವ ಕಂಠವನು ಕಲಿಸು”
ಎಂದು “ಶಿಷ್ಯ” ಎನ್ನುವ ಕವಿತೆಯ ಮೂಲಕ ಹೀಗೆ ಹೇಳುತ್ತಾರೆ.
ಬಾಲ್ಯದಲ್ಲಿ ಮಕ್ಕಳಾದ ನಾವು ಮನೆಯೊಳಗೆ ಯಾವುದೋ ಕೆಲಸದಲ್ಲಿ ತಲ್ಲಿನರಾಗಿದ್ದಾಗ, ಹೊರಗೆ ಬೀದಿಯಲ್ಲಿ ಕರಡಿ ಕುಣಿಸುವವನೊ, ಕೋಲೆ ಬಸವನಾಡಿಸುವವನೊ, ಟಾಂಗಾದಲ್ಲಿ ಚೀಟಿ ಹಂಚುವವನೊ ಹೊರಗೆ ಬೀದಿಯಲಿ ನಾದಸ್ವರ, ಮೈಕಿನ ಧ್ವನಿ ಅಥವಾ ಡಮರುಗದ ಧ್ವನಿ ಕಿವಿಗೆ ಬಿದ್ದರೆ ಕೂಡಲೇ ಮನೆಯೊಳಗಿನ ಕೆಲಸವನ್ನು ನಿಲ್ಲಿಸಿ ಬೀದಿಗೆ ಓಡಿ ಬಂದು ಅಲ್ಲಿ ಅವುಗಳನ್ನು ಕುತೂಹಲದಿಂದ ವೀಕ್ಷಿಸುವ ಪರಿಯನ್ನು ಕವಿ “ಕೇಳಿದೊಡನೆಯೆ ಬೀದಿವಾದ್ಯ” ಎನ್ನುವ ಕವಿತೆಯ ಮೂಲಕ ಸೊಗಸಾಗಿ ಕಟ್ಟಿಕೊಡುತ್ತಾರೆ.
ಬದುಕಿನ ಚಿತ್ರಣವನ್ನು ಹಿರಿಯರಿಗೆ ಅರುಹುವ, ಮಕ್ಕಳಿಗೆ ಕುತೂಹಲವನ್ನು ಮೂಡಿಸುವ ಕವನ “ತೊರೆಯ ಬಳಿ” ಇಲ್ಲಿ ತೊರೆ ಹರಿಯುವುದು ಎಲ್ಲಿಗೆ? ಬಂದದ್ದು ಎಲ್ಲಿಂದ? ಎನ್ನುವ ಪ್ರಶ್ನೆಯನ್ನು ಮಕ್ಕಳು ಮಾಡುತ್ತಾ ಕೊನೆಗೆ ತೊರೆಯ ಅನುಯಾಯಿಯಾಗಿ
“ಹೋಗಿ ಬರುವೆನು, ತೊರೆಯೆ!
ಯೋಗಿ, ನಿನ್ನಂ ಮರೆಯೆ!
ನಿನ್ನಂತೆ ನಾ ಕರೆವೆ;
ನಿನ್ನಂತೆ ಹರಿವೆ! ಓ ಮುದ್ದು ತೊರೆಯೆ!
ಎಂದು ಹೇಳುವ ಮೂಲಕ ಹೊಸ ಚೈತನ್ಯವನ್ನು ಪಡೆದು ಸಂತೋಷಪಡುವುದನ್ನು ನಾವಿಲ್ಲಿ ಕಾಣಬಹುದು.
ಪರಕಿಯ ದಾಸ್ಯದಲ್ಲಿ ಬಳಲುತ್ತಿರುವ ಭಾರತಾಂಬೆಯ ಬಿಡುಗಡೆಗಾಗಿ, ದೇಶ ಸೇವೆಗೆ ಸಿದ್ದರಾಗುವಂತೆ ಕವಿ ಬಾಲಕರಲ್ಲಿ ಹುರುಪು ತುಂಬುವುದನ್ನು “ಏಳಿರೈ ಬಾಲರೇ” ಎನ್ನುವ ಕವಿತೆಯಲ್ಲಿ
ಪರಕೀಯರ ಪದತಳದೊಳು
ಹೊರಳಾಡುತ ಅಳುತ್ತಿರುವಳು!
ಕಂಡು ನೀವು ಸಹಿಪರೇ?
ಗಂಡುಗಲಿಗಳಲ್ಲವೇ? ಎಂದು ಹೇಳುತ್ತಾ
ವೀರಶಿವನ ಮರೆತಿರುವಿರ?
ಧೀರತನವ ತೊರೆದಿರುವಿರ?
ಏಳಿ, ಅಮೃತ ಪುತ್ರರೆ!
ಏಳಿ, ಆನಂದಾತ್ಮರೆ! ಎಂದು ಎಚ್ಚರಿಸುತ್ತಾರೆ.
ಮನುಷ್ಯನ ಸಂಗದ ಬಗ್ಗೆ ಎಚ್ಚರಿಕೆಯನ್ನು ಹಕ್ಕಿಗಳಿಗೆ ನೀಡುವಲ್ಲಿ ಕವಿ ಕುವೆಂಪುರವರು “ಹಕ್ಕಿಗಳು” ಎನ್ನುವ ಕವನದಲ್ಲಿ
ವ್ಯಾಧರಿಹರವರ ಸಹವಾಸ ನಿಮಗಲ್ಲ:
ಹೋದ ಹೃದಯರ ಸಂಗ ನಿಮಗೊಳ್ಳಿತಲ್ಲ.
ಪಂಡಿತರ ಬಲೆಯೊಳಗೆ ಸಿಲುಕದಿರಿ ನೀವು:
ಖಂಡಿಪರು ಶೋಧಿಸಲು; ನಿಮಗಹುದು ಸಾವು!
ಎಂದು ಹೇಳುತ್ತಾರೆ.
ಸೂರ್ಯನಿಂದ ಬರುವ ಹೊಂಬಿಸಿಲನು ಕುರಿತು “ಏಕೆ? ಹೊಂಬಿಸಿಲು” ಕವನದಲ್ಲಿ
ಹಳದಿ ಪೈರು ಬೆಳೆದು ನಿಂತ
ಗದ್ದೆ ಬೈಲುಗಳ ಅನಂತ
ವಿಸ್ತಾರದ ಸಂಚಾರದ
ಸಿರಿಯನೆಲ್ಲ ತಂದಿದೆ!
ಇದಿರುಗೊಳಲು ನಡೆಯೊ, ಕಂದ!
ದೇವ ಕೃಪೆಯ ನಿನಗೆ ತಂದ
ರಶ್ಮಿರೂಪಿ ಮಿತ್ರವೃಂದ
ಬಾಗಿಲ ಬಳಿ ಬಂದಿದೆ!
ಎಂದು ಹೇಳುವ ಮೂಲಕ ನಮ್ಮ ಬದುಕಿನ ನಮ್ಮ ಭೂಮಿಯ ನಮ್ಮ ಪರಿಸರದ ಚೈತನ್ಯ ಸೂರ್ಯ ಎನ್ನುವುದನ್ನು ಮಕ್ಕಳಿಗೆ ತಿಳಿಸುತ್ತಾರೆ.
ಮಳೆ ಬೀಳುವ ಹನಿಗಳನ್ನು ಕುವೆಂಪುರವರು ಮುಗಿಲ ಬಾಲಕರು ಎಂದು ಹೇಳುವ ಮೂಲಕ ಮಗು ಮತ್ತು ತಾಯಿಯ ನಡುವಿನ ಸಂಭಾಷಣೆಯನ್ನು “ಮೇಘಪುರ” ಎಂಬ ಕವಿತೆಯಲ್ಲಿ ಕಾವ್ಯವಾಗಿಸಿದ್ದಾರೆ. ಮಳೆ ಬೀಳುವ ಬಗೆ ಬಗೆಯ ದೃಶ್ಯಗಳನ್ನು ಕವಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಮಗು ಮಳೆ ಹನಿಗಳ ಜೊತೆ ಆಟವಾಡಲು ಹೋಗಬೇಕು ಎಂದು ಅದರ ಆಸೆಗೆ ತಾಯಿಯ ಒಲುಮೆಯೇ ಸೆರೆಯಾಗಿದೆ. ಎಂದು ಬರೆಯುತ್ತಾ ಮಗು ಹೀಗೆ ಹೇಳುತ್ತದೆ.
“ಮುಗಿಲ ಬಾಲಕನಾಗಿ
ಹಗಲೆಲ್ಲ ಅಲೆಯುವೆನು
ನಗ ಶೃಂಗಗಳ ಚರಿಸಿ
ನೆಗೆದಾಡಿ ಸಂಜೆಯೊಳು
ಮಗುವಾಗಿ ಬರುವೆ. ಎಂದು ತಾಯಿಗೆ ಹೇಳುವ ಮಾತು.
ಮೊದಮೊದಲು ಮೇಘಗಳು ಸುರಿಸುವ ಮಳೆ, ಎಲೆಗಳ ಮೇಲೆ, ಸುಮಗಳ ಮೇಲೆ, ಮನೆ ಹೆಂಚಿನ ಮೇಲೆ, ಮಾಡಿನ ಮೇಲೆ ಮಾಡುವ ಶಬ್ದದಿಂದ ಮುಗಿಲ ಬಾಲಕರು ಕರೆಯುವಂತೆ ಭಾಷವಾಗುವುದನ್ನು ಅಮ್ಮನಿಗೆ ಹೇಳುವ ಮಗುವಿನ ಮಾತು. ಆದರೂ ಅಮ್ಮ ಹೊರಗೆ ಮಳೆ ಎಂದು ತಡೆಯುವುದನ್ನು ಅರಿಯದವ ನೀನು ಎಂದು ಬೆದರಿಸುವುದನ್ನು ಕಾಣಬಹುದು. ಆಗ ಮಗು ಹೇಳುವ ಸಾಲುಗಳು
ನೀರ್ ದನಿಯ ನಾ ಕೇಳಿ
ಹನಿಗಳಲಿ ಅವಿತಿಹರು
ಆ ಗೆಳೆಯರೆಂದರಿತು
ಕೈ ನೀಡಿ ಹಿಡಿಯಲಾ
ಹನಿಯೊಳವರಿಲ್ಲ!
ಗೆಳೆಯರನು ಕರೆಯೆ ನಾ
ಕೈಚಾಚಿ ಕೊರಳೆತ್ತಿ
ಓ ಬನ್ನಿ ಬನ್ನಿರೆನೆ
ನುಡಿಯದೆಯೆ ನಡೆವರಾ
ಕಡಲ ಮನೆಗೆ.
ಗೆಳೆಯರೆನ್ನವರಮ್ಮಾ
ಮುಗಿಲ ಮಕ್ಕಳ ಗುಂಪು.
ಅವರ ದನಿ ಬಲು ಇಂಪು,
ಅವರ ಮೇಯ್ ಬಲು ತಂಪು,
ಒಡನಾಟ ಸೊಂಪು.
ಎಂದು ಹೇಳುವ ಮಗುವಿನ ಮುಗ್ಧತೆಯು ನಿಜಕ್ಕೂ ಸೋಜಿಗವೇ ಸರಿ. ಕುವೆಂಪು ಇಲ್ಲಿ ಮಗುವಾಗಿಯೇ ಇದನ್ನು ಬರೆದಂತೆ ತೋರುತ್ತದೆ.
ಮಗುವಿನ ನಗು ಹಗೆ, ಹೊಗೆಯನ್ನು ತೊಲಗಿಸಿ ಬಾಳ ಬಗೆಯನ್ನು ತಿಳಿಸುತ್ತದೆ, ಎಂದು “ನಗು, ಮುದ್ದು ಮಗೂ!” ಎಂಬ ಕವಿತೆಯಲ್ಲಿ ನಮಗೆ ತಿಳಿಸಿದ್ದಾರೆ.
ಸೂರ್ಯೋದಯ ಎಳೆಬಿಸಿಲನ್ನು ಅನುಭವಿಸುವ ಕ್ಷಣಗಳನ್ನು “ಎಳೆ ಬಿಸಿಲು” ಕವನದಲ್ಲಿ ನಮಗೆ ಕಟ್ಟಿಕೊಡುತ್ತಾರೆ.
ಪ್ರಕೃತಿಯ ಮಡಿಲಿನಿಂದ ತಾರಾಮಂಡಲಕ್ಕೆ ಹೋಗಿ ಆಟವಾಡಿ ಬರುವ ಚಿತ್ರಣವನ್ನು “ತಾರಾ ಸೇತು” ಕವಿತೆಯ ಮೂಲಕ ತಿಳಿಸಿದ್ದಾರೆ.
“ಒಡನಾಟ” ಕವಿತೆಯ ಮೂಲಕ ತಾಯಿ ಜೊತೆ ಮಗು ಆಟವಾಡುವುದಕ್ಕೆ ಯಾವ ನಿಯಮ, ಕಟ್ಟಳೆಗಳು ಇಲ್ಲವೆಂದು ತಿಳಿಸುತ್ತಾರೆ.
“ಎದ್ದೇಳು” ಕವಿತೆಯ ಮೂಲಕ ಜಾಗೃತನಾಗಿರು ನೀನು ಶುದ್ದಾತ್ಮ, ಧೀರ, ಕೇಸರಿ ಎಂದು ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ.
ಸಂಕಲನದಲ್ಲಿ ಮಕ್ಕಳಿಗೆ ಕವಿತೆಯನ್ನು ಹೇಳಿಕೊಡುವಾಗ ಪದಗಳಾದ ಕರ್ಮಗಳನೇಳಿಪುದ, ಪದತಳ, ನಿರ್ಮಲನಭದ, ನಾಗಸ್ವರ, ಅರೆಹರಿದಿಹ, ಪರವಸನವ, ಜಡತನ, ಚಂದಳಿರ, ನಳಿದೋಳಿನಿಂದೆನ್ನ, ಪಕ್ಕಗಳ, ಲೋಭ, ವ್ಯಾಧ, ಒತ್ತಗೆ, ಸೊಗದ, ಕ್ಷುದ್ರ ದುರ್ಮೇಧ್ಯ, ಕಂದರ, ಸಾಂದ್ರವಿಪಿನ, ಮಿಹಿರದೇವ, ಮಿಸುನಿ, ಶರಧಿ, ಕದಿರ, ಚವರಿ, ಅಗಲಿಕೆ, ಮೇಘ, ಭೂತಳ, ನಗ, ಶೃಂಗ ಹೀಗೆ, ಮೂಡಣ, ತಿಮಿರ, ನಜರೇತಿ, ಪೃಥ್ವಿ, ಆಧ್ಯಾತ್ಮ, ವೈಜ್ಞಾನಿಕ, ಉಡುಗಳಾಚೆ, ಗಳಪುತ್ತಾ, ಪೊರಮಡುವ, ಮುಂತಾದ ಪದಗಳನ್ನು ಬಿಡಿಸಿ ಹೇಳುವ ಮತ್ತು ಅರ್ಥೈಸುವ ಮೂಲಕ ಮಕ್ಕಳಿಗೆ ಇಲ್ಲಿನ ಕವನಗಳನ್ನು ನಾವು ಮುಟ್ಟಿಸಬೇಕಾಗಿದೆ.
ಕುವೆಂಪು ಅವರ ಬರಹದ ವೈವಿಧ್ಯತೆ ಎಲ್ಲರೂ ಮೆಚ್ಚಬೇಕಾಗಿದೆ. ಇಂತಹ ಸಂಕಲಗಳನ್ನು ಓದಿಸುವ, ಹಾಡಿಸುವ, ಅರ್ಥೈಸುವ ಕೆಲಸವನ್ನು ಹಿರಿಯರು ಮತ್ತು ಶಿಕ್ಷಕರು ಮಾಡಬೇಕಾಗುತ್ತದೆ. ಇಂತಹ ಮಕ್ಕಳ ಕವನಗಳು ಪಠ್ಯಗಳಲ್ಲಿ ಬಂದು ಅವುಗಳನ್ನು ಕಲಿಸುವಂತಾಗಬೇಕು ಎಂದು ಹೇಳುತ್ತಾ ಕುವೆಂಪು ಅವರನ್ನು ಸ್ಮರಿಸೋಣ.