ಅನಂತಕುಮಾರ್ ಹೆಗಡೆ ಎನ್ನುವ ಹೆಡೆ ಬಿಚ್ಚಿದ ಹಾವು! - Mahanayaka

ಅನಂತಕುಮಾರ್ ಹೆಗಡೆ ಎನ್ನುವ ಹೆಡೆ ಬಿಚ್ಚಿದ ಹಾವು!

ananth kumar hegade
22/01/2024

– ದಮ್ಮಪ್ರಿಯ ಬೆಂಗಳೂರು


Provided by

ಸಂಸದರಾದ ಅನಂತಕುಮಾರ್ ಹೆಗಡೆ ಒಂದು ರೀತಿಯ ಪೀತ ಮನಸ್ಥಿತಿಯುಳ್ಳವರು. ಕಳೆದ 4 ವರ್ಷಗಳಿಂದ ಹೆಡೆ ಬಿಚ್ಚದ ಇವರು   ನಾನು ಮತ್ತೆ ಬದುಕಿ ಬಂದಿದ್ದೇನೆ ಎಂದು ತೋರಿಸಿಕೊಳ್ಳುವ ಹುಚ್ಚು ಮನಸ್ಥಿತಿ ಇವರದು. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಪ್ರಜೆಗಳಿಂದ ಆಯ್ಕೆಯಾಗಿ ತನ್ನ ನಾಡಿನ ಪ್ರಜೆಗಳ ಬಗ್ಗೆ ಎಳ್ಳಷ್ಟು ಕೆಲಸ ಮಾಡದಿದ್ದರೂ, ಆಡುವ ಮಾತಿಗೇನು ಕಡಿಮೆಯಿಲ್ಲ. ಕೋಮು ದ್ವೇಷದ  ಮಾತುಗಳನ್ನಾಡುವುದರಲ್ಲಿ ಇವರು ಬಹಳ ನಿಸ್ಸೀಮರು. ಹಾಗಾಗಿ  ತನ್ನ ಪಕ್ಷಕ್ಕೆ  ತಾನೇ ಕಂಟಕ ಎಂದರು ತಾಪಗಲಾರದು.

ಒಬ್ಬ ಗೌರವಾನ್ವಿತ ಮುಖ್ಯಮಂತ್ರಿಯನ್ನು ಅಗೌರವದಿಂದ ಮಗನೇ ಎಂದು ಮೂದಲಿಸುವ ಇವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ, ಪ್ರಜೆಗಳ ಬಗ್ಗೆ ಇನ್ನೆಷ್ಟು ಗೌರವ ಇರಲು  ಸಾಧ್ಯ.? ಇದನ್ನು  ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ.  ಇಂತಹ ಜನಪ್ರತಿನಿಧಿಗಳು ಯಾರಿಗೆ ಬೇಕಾಗಿದೆ ಎಂದು ತೀರ್ಮಾನಿಸಬೇಕಿದೆ.

ಕಳೆದ 3–4 ವರ್ಷಗಳ ಹಿಂದೆ ನಾವು ಬಂದಿರುವುದೇ ಸಂವಿಧಾನವನ್ನು ಬದಲಿಸಲು ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿ ಭಾರತೀಯ ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿ  ಹುತ್ತದೊಳಗೆ ಅವಿತು ಕುಳಿತಿದ್ದ ಹಾವಿನಂತಿದ್ದರು. ಈಗ ಮತ್ತೆ ಹೆಡೆ ಎತ್ತಿ ಬುಸುಗುಡುತ್ತಿದ್ದಾರೆ. ಆ ಹೆಡೆಯನ್ನು ಜನಸಾಮಾನ್ಯರು ಮುಂದಿನ ಚುನಾವಣೆಯಲ್ಲಿ ಮತಹಾಕುವ ಮೂಲಕ ತಕ್ಕ ಉತ್ತರ ನೀಡಬೇಕಿದೆ.  ಅಲ್ಲದೆ ಇಡೀ ದೇಶದ ಅಹಿಂದ ಮನಸ್ಥಿತಿಯನ್ನು ನಾಶ ಮಾಡುವುದೇ ನಮ್ಮ ಉದ್ದೇಶ  ಎಂದರೆ ಏನಿದರ ಅರ್ಥ ಎನ್ನುವುದನ್ನು ಮತದಾರ ಪ್ರಜೆಗಳು, ಯುವಕರು ತಿಳಿಯಬೇಕಿದೆ.

ಈ ಅಹಿಂದ ಎನ್ನುವ ಅಲ್ಪಸಂಖ್ಯಾತ ಹಿಂದುಳಿದ ಮತ್ತು ದಲಿತರು ಎಚ್ಚೆತ್ತು ಕರ್ನಾಕಟದ ಮಟ್ಟಿಗೆ ತಕ್ಕ ಪಾಠವನ್ನು ಕಲಿಸಬೇಕಿದೆ. ಅಹಿಂದ ಎನ್ನುವ ಒಂದು ಮನಸ್ಥಿತಿಯನ್ನು ಪ್ರಾರಂಭಿಸಿದ ಮಹಾನ್ ನಾಯಕರನ್ನು ಏಕವಚನದಲ್ಲಿ ಮಾತನಾಡಿಸುವ ಇಂತಹ ರಾಜಕೀಯ ನಾಯಕರು ಮತದಾರರಿಗೆ ಎಂದಿಗೂ ನ್ಯಾಯ ಕೊಡಿಸಲಾರರು ಎನ್ನಬಹುದು.  ಇಂತಹ ನಾಯಕರನ್ನು ಒಳಗೊಂಡ ಸರ್ಕಾರಕ್ಕೆ ತಕ್ಕ ಪಾಠವಾಗಬೇಕಿದೆ. ಇವರಿಗೆ ಪಾಠ ಕಲಿಸುವಲ್ಲಿ ಸಂವಿಧಾನದ ನೆರಳಲ್ಲಿ ಆಯ್ಕೆಯಾದ ಮೀಸಲು ಕ್ಷೇತ್ರದ ನಾಯಕರು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ  ಇಂತಹ ಅರೆಜ್ಞಾನಿಗಳು ಮತ್ತೆ  ತಲೆಯೆತ್ತುತ್ತಲೇ ಇರುತ್ತಾರೆ.

ಇಷ್ಟಕ್ಕೂ ಈ ಅನಂತ ಕುಮಾರ್ ಹೆಗಡೆ ಯಾರ ಪರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಇದ್ದಾರೆ.  BJP ಯಿಂದಲೇ ಗೆದ್ದು ಹೋದ  ಮೀಸಲು ಕ್ಷೇತ್ರದ 77 ನಾಯಕರು ಏನು ಮಾಡುತ್ತಿದ್ದಾರೆ.  ಸರ್ಕಾರವನ್ನು ವಿಸರ್ಜನೆ ಮಾಡುವ ಮೊದಲೇ, ಅದನ್ನು ಉರುಳಿಸುವ ಶಕ್ತಿ  ಇವರಿಗೆ ಏಕಿಲ್ಲಾ ? ಇವರೆಲ್ಲಾ ಮೂಕನಾಯಕರೇ ? ದೇಶದ ಪ್ರತಿಯೊಂದು ಸಮಸ್ಯೆಗೂ ಕಾರಣ, ಅದರ ಪರಿಣಾಮ ಮತ್ತು ಅದಕ್ಕೆ ಪರಿಹಾರ ಹುಡುಕುವ ನಮ್ಮ ಕೇಂದ್ರದ ಮಂತ್ರಿ ಮಹೋದಯರಿಗೆ  ಅಹಿಂದ ಜನಸಾಮಾನ್ಯರ ಸಮಸ್ಯೆಗಳು ಏಕೆ ಅರ್ಥವಾಗುತ್ತಿಲ್ಲ. ?

ಹಾಗಾದರೆ ಇಂದಿನ ಸರ್ಕಾರ ಯಾರ ಪರವಾಗಿ ಕೆಲಸವನ್ನು ನಿರ್ವಹಿಸುತ್ತಿದೆ. ಯಾರಿಗೆ ರತ್ನಗಂಬಳಿ ಹಾಸಿ ಮಣೆ ಹಾಕುತ್ತಿದೆ. ಶತಮಾನಗಳಿಂದ ದಲಿತರ ಮೇಲಿನ ದೌರ್ಜನ್ಯಗಳಿಗೆ ಕಾರಣ ಏನು ? ದಲಿತ ಹೆಣ್ಣುಮಕ್ಕಳ ಮೇಲೆ ಏಕೆ ನಿರಂತರ ಅತ್ಯಾಚಾರ ನಡೆಯುತ್ತಿದೆ,  ಏಕೆ  ಹೆಣ್ಣಿನ ಬೆತ್ತಲೆ ಮೆರವಣಿಗೆ ನಡೆಯುತ್ತಿದೆ. ದಲಿತರ ಕಗ್ಗೊಲೆಗಳು ಏಕೆ ನಡೆಯುತ್ತಿವೆ. ಇವತ್ತಿಗೂ ಏಕೆ ದಲಿತರಿಗೆ ದೇವಾಲಯಗಳಿಗೆ ಪ್ರವೇಶವಿಲ್ಲ, ಏಕೆ ದಲಿತರು ಮನುಷ್ಯರಲ್ಲವೇ ? ಅವರಿಗೂ ಮಾನವೀಯ ಮೌಲ್ಯಗಳಿಲ್ಲವೇ ? ಏಕೆ ಈ ನಿರಂತರ ಸಮಸ್ಯೆಗಳು, ಇದಕ್ಕೆ ಕಾರಣ ಏನು  ಮತ್ತು ಏನಿದರ ಪರಿಣಾಮ, ಇದಕ್ಕೆ ಏನು ಪರಿಹಾರ ಎನ್ನುವುದನ್ನು ಯಾವ  ಸಂಶೋಧಕರು ಸಂಶೋಧನೆ ಮಾಡಲು ಮುಂದಾಗಲಿಲ್ಲವೇ ಎನ್ನುವುದು  ಬಹಳ ಖೇದದ ವಿಚಾರ.

ನಮ್ಮನ್ನಾಳುವ ಇಂದಿನ ರಾಜಕಾರಣಿಗಳಿಗೆ ಅದೇ ದೊಡ್ಡ  ಬಂಡವಾಳ, ಆದರೆ ದಲಿತರನ್ನೇ  ರಕ್ಷಣೆ ಮಾಡಲು ಹೊರಟ ಕೇಂದ್ರ ಸರ್ಕಾರದ  131 ಮೀಸಲು ಕ್ಷೇತ್ರದ ನಾಯಕರುಗಳಿಗೆ ಇದರ ಅರಿವಿಲ್ಲದಿರುವಾಗ ಇನ್ನು ಯಾರಿಗೆ ದಲಿತರ ಬಗ್ಗೆ  ಕಾಳಜಿ ಬರಬೇಕು ಹೇಳಿ ?  ಈ  ದಲಿತ ನಾಯಕರು  ಕೇವಲ ಬಾಯಿ ಕಟ್ಟಿದ ನಾಯಿಗಳೇ ಹೊರತು ಇವರಿಗೆ ಇನ್ನೊಬ್ಬರನ್ನು ಹೆದರಿಸುವ ಯಾವ ತಾಕತ್ತು ಇಲ್ಲವಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರ ಇಷ್ಟೆಲ್ಲಾ  ಗೊಂದಲ ಸೃಷ್ಠಿ ಮಾಡಿ, ಆಡಳಿತ  ಮಾಡುತ್ತಿದ್ದರು ಬೆಂಬಲವಾಗಿ ನಿಂತ ಈ ದಲಿತ ಮೀಸಲು ಕ್ಷೆತ್ರದ 77 ನಾಯಕರು ಒಮ್ಮೆ ಗುಡುಗಿದರೆ ಇಡೀ ಸರ್ಕಾರವೇ ನಡುಗುತ್ತದೆ. ಅಷ್ಟೇ ಏಕೆ ಬೇರುಗಳೇ ಇಲ್ಲದ ಮರದಂತಾಗಿ, ತರಗೆಲಗಳಾಗಿ  ನೆಲಕ್ಕೆ ಉರುಳಿಹೋಗುತ್ತದೆ. ಅಷ್ಟು ತಾಕತ್ತು ಈ 77 ಮಂದಿ BJP ನಾಯಕರಲ್ಲಿ ಇರಬೇಕಿತ್ತು.

ಅಂತಹ  ತಾಕತ್ತು ಈ ಮೀಸಲು ಕ್ಷೇತ್ರದ  ನಾಯಕರಿಗೆ ಇದೆಯಾ ? ಇವರು ನಿಜವಾಗಿಯೂ ದಲಿತರ ಪರವಾಗಿದ್ದಿದ್ದರೆ, ಸಂವಿಧಾನದ ರಕ್ಷಕರಾಗಿದಿದ್ದರೆ, ಸರ್ಕಾರ ಅಲುಗಾಡಿಸುವವರಾಗಿದ್ದರೆ,ಕೇಂದ್ರ ಸರ್ಕಾರ ಇಷ್ಟು ದಲಿತರ ಬಹುಸಂಖ್ಯಾತರ ಅಹಿಂದ ದವರ ಕುರಿತು ಹೀಗೆ ಮಾತನಾಡುತ್ತಿರಲಿಲ್ಲ. ! ಅನಂತಕುಮಾರ್ ಹೆಗ್ಗಡೆ ಎನ್ನುವ ಹಾವು ಸಂವಿಧಾನದ ವಿರುದ್ಧ, ಅಹಿಂದ ವಿರುದ್ದ ಈ ರೀತಿಯಾಗಿ ಮಾತನಾಡುತ್ತಿರಲಿಲ್ಲ,  ನಾಲಕ್ಕು ವರ್ಷಗಳ ಕಾಲ ಬಿಲದೊಳಗೆ ಅಡಗಿ ಕುಳಿತಿದ್ದ ಕೆಟ್ಟ ನಾಗರ ಈಗ ಬುಸುಗುಡುತ್ತಿರಲಿಲ್ಲ. ನಮ್ಮ 77 ಮೀಸಲು ಕ್ಷೆತ್ರದ ನಾಯಕರಿಗೆ ನಿಜವಾಗಿಯೂ ಸ್ವಾಭಿಮಾನ ಇದ್ದಿದ್ದರೆ, ಬಾಬಾಸಾಹೇಬರ ಬಗ್ಗೆ ಅಲ್ಪ ಸ್ವಲ್ಪ ಗೌರವ ಇದ್ದಿದರೆ ತಾವು ಕುಳಿತ ಜಾಗದಿಂದಲೇ ತಮ್ಮ ಪದವಿಗೆ, ಸಂಸದರ ಸದಸ್ಯತ್ವವಕ್ಕೆ ರಾಜೀನಾಮೆ ನೀಡಿದಿದ್ದರೆ ಮೋದಿ ಸರ್ಕಾರವನ್ನು ವಿಸರ್ಜಿಸುವ ಸಮಯ ಕಾಯುವ ಅಗತ್ಯವಿರಲಿಲ್ಲ.ತಾನಾಗಿಯೇ ಸರ್ಕಾರ ಬಿದ್ದುಹೋಗುತ್ತಿತ್ತು.

ಅಂದು ಬಾಬಾಸಾಹೇಬರ ತಾಕತ್ತು,  ಅವರ ಮೊಮ್ಮಕ್ಕಳ ತಾಕತ್ತು, ದಲಿತರ ಒಗ್ಗಟ್ಟಿನ ತಾಕತ್ತು, ಎಲ್ಲದಕ್ಕೂ ಹೆಚ್ಚಾಗಿ ಸಾಮಾನ್ಯ ಜನರಿಗೆ ಸಂವಿಧಾನದ ತಾಕತ್ತು ಏನು ಎಂಬುದರ ಅರಿವಾಗುತ್ತಿತ್ತು. ಮುಂದಿನ ದಿನಗಳಲ್ಲಾದರೂ  ಸಂವಿದಾನವನ್ನು ಅಗೌರವಿಸುವ, ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೊರಟಿರುವ,ಅದರ ಶಕ್ತಿಯನ್ನು ನಿಷ್ಕ್ರಿಯಗೊಳಿಸುವಲ್ಲಿ ಕೆಲಸಮಾಡುವ ನಾಯಕರನ್ನು, ಅಂತಹ ಪಕ್ಷವನ್ನು  ಸೋಲಿಸುವಲ್ಲಿ ಪಣತೊಡೋಣ. ಮೀಸಲು ಕ್ಷೇತ್ರದ ನಾಯಕರು ಎಂದರೆ ಅವರು ಚುನಾವಣೆಯ ಸಂದರ್ಭದಲ್ಲಿ ತನ್ನನ್ನು ತಾನು ಮಾರಿಕೊಳ್ಳುವವರು, ತನ್ನ ಜನಾಂಗವನ್ನು ಅಳುವ ಸರ್ಕಾರಕ್ಕೆ ಒತ್ತೆಯಿಡುವವರು ಎನ್ನುವ ಸಾಮಾಜಿಕ ಜನಸಾಮಾನ್ಯರ ಮನಸ್ಥಿತಿಯನ್ನು ಬದಲಿಸೋಣ,  ಕಳೆದ 10 ವರ್ಷಗಳಲ್ಲಿ ಸಂವಿಧಾನಕ್ಕೆ ಮಾಡಿರುವ ಅಪಮಾನವೇ ಸಾಕು ,

ಈ 77 ನಾಯಕರು ಸಂವಿಧಾನ ರಕ್ಷಿಸುವಲ್ಲಿ ಸೋತಿದ್ದಾರೆ. ಇವರುಗಳ ಆಯ್ಕೆಯನ್ನು  ತಡೆಯೋಣ,  ನಿಜವಾದ ಬಾಬಾಸಾಹೇಬರ ಮಕ್ಕಳನ್ನು ಗೆಲ್ಲಿಸೋಣ,  ಕರ್ನಾಟಕದ ಮಟ್ಟಿಗೆ ಗೆದ್ದ 5 ಮೀಸಲು ಕ್ಷೇತ್ರದ ನಾಯಕರು ನಿಜವಾಗಿಯೂ ಇದ್ದು ಇಲ್ಲದಂತಾಗಿದ್ದಾರೆ. ಇವರುಗಳು ಖಂಡಿತ ಸೋಲಲೇಬೇಕಾಗಿದೆ.  ಇಂತಹ ನಿರ್ಧಾರಗಳನ್ನು ದಲಿತ, ಸಂಘಟಕರು, ಯುವಕರು ನಿರ್ಧರಿಸಿದ್ದಲ್ಲಿ , ಇವರ ದುರಾಡಳಿತ ಜನವಿರೋಧಿ ನೀತಿಗಳಿಂದ ಜನಸಾಮಾನ್ಯರನ್ನು ಕಾಪಾಡುವಲ್ಲಿ, ದೇಶವನ್ನು ರಕ್ಷಿಸುವಲ್ಲಿ ಜಾಗೃತಿವಹಿಸಬಹುದು.  ಬೂಟಾಟಿಕೆಯ ದೇಶಪ್ರೇಮಿಗಳಿಗೆ ತಕ್ಕ ಪಾಠ ಕಲಿಸಬಹುದು. ಇಂತಹಗಳ ನಿರ್ಧಾರಗಳಿಂದ ಮಾತ್ರ   ಸಂವಿಧಾನ ಮತ್ತು ದಲಿತರ ತಂಟೆಗೆ ಯಾರು ಬರಲು ಸಾಧ್ಯವೇ ಇಲ್ಲವಾಗುತ್ತದೆ. ಇದು ಬಾಬಾಸಾಹೇಬರು ಕೊಟ್ಟ ಅಧಿಕಾರದ ಶಕ್ತಿ. ಇದನ್ನು ಮಾರಿಕೊಂಡು, ಕೇವಲ  ಅಧಿಕಾರಕ್ಕಾಗಿ ಕುಳಿತು  ಗುಲಾಮರಾಗಿ ಬದುಕುವ ಮೀಸಲು ಕ್ಷೇತ್ರದ  ನಾಯಕರಿಗೆ ಅರ್ಥವಾಗಾಬೇಕಾಗಿದೆ. ಇವರಿಗೆ ಆ ಜವಾಬ್ದಾರಿ ಇಲ್ಲದಾಗ ಇನ್ನು ದಲಿತ ನೌಕರರು, ಯುವಕರು ಹೇಗೆ ದೈರ್ಯವಾಗಿ ಬದುಕಲು ಸಾಧ್ಯವಾಗುತ್ತದೆ.  ಕರುಣೆ ಹುಟ್ಟುವ ಕತೆಗಳನ್ನು ಓದಿಕೊಂಡು ಸುಮ್ಮನಾಗಬೇಕಾಗುತ್ತದೆ.  ದಯವಿಟ್ಟು ಇನ್ನಾದರೂ ಬದಲಾಗೋಣ,  ನಮ್ಮನ್ನು ರಕ್ಷಣೆ ಮಾಡುವವರನ್ನು, ನಮ್ಮ ಸಮಸ್ಯೆಗಳ ಬಗ್ಗೆ ಸಂಶೋಧನೆ ಮಾಡಿ ಸಮಸ್ಯೆಗೆ ಪರಿಹಾರ ಹುಡುಕುವ ನಾಯಕರನ್ನು ಆರಿಸೋಣ

ಇತ್ತೀಚಿನ ಸುದ್ದಿ