ಭೀಮನೇ ಇಲ್ಲದ ಎಪಿಸೋಡ್ 36 ಹೇಗಿತ್ತು? | ಗಣಪತಿ ಚಲವಾದಿ - Mahanayaka

ಭೀಮನೇ ಇಲ್ಲದ ಎಪಿಸೋಡ್ 36 ಹೇಗಿತ್ತು? | ಗಣಪತಿ ಚಲವಾದಿ

09/11/2020

ಮಹಾನಾಯಕ” ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ:
ಸಂಚಿಕೆ(ಎಪಿಸೋಡ):36
ವಾರ : ರವಿವಾರ
ದಿನಾಂಕ :08/11/2020


Provided by

ನಿನ್ನೆಯ ಸಂಚಿಕೆಯಲ್ಲಿ ಭೀಮಾಬಾಯಿಯವರು ಹಿರಿಯ ಮಗಳಾದ ಮಂಜುಳಾಳ ಮದುವೆಯನ್ನು ಮಾಡಿ ಮುಗಿಸಲೇಬೇಕೆಂದು ತರಾತುರಿಯಲ್ಲಿ ಕೇವಲ ಅಳಿಯಂದಿರೊಬ್ಬರ ಸಪೋರ್ಟ್ ತೆಗೆದುಕೊಂಡು ಮುಂದೆ ಸಾಗುತ್ತಾರೆ. ವರನನ್ನೂ ನೋಡಿ, ತರಾತುರಿಯಲ್ಲಿ ನಿಶ್ಚಿತಾರ್ಥ ಕೂಡ ಮಾಡಿ ಮುಗಿಸಿಬಿಟ್ಟರು. ಆದ್ರೆ ಇದಕ್ಕೆ ಭೀಮ ಹಾಗೂ ಇನ್ನುಳಿದವರು ಒಪ್ಪಿಗೆ ಇರುವುದಿಲ್ಲ, ಭೀಮಾಬಾಯಿಯವರು ಇವರನ್ನೂ ಒಪ್ಪಿಸಲು ಕೂಡ ವಿಫಲರಾಗಿದ್ದಾರೆ.

ವೀಕ್ಷಕರೂ ಅದರಲ್ಲೂ ಹೆಣ್ಣುಮಕ್ಕಳು ಮಾತಾಡಿಕೊಳ್ಳುತಿದ್ದರು “ಪಾಪ ಭೀಮಾಬಾಯಿ ತಾವೂ ಅನಾರೋಗ್ಯದಿಂದ ಬಳಲುತ್ತಿದ್ದಾರಲ್ಲ ಹೀಗಾಗಿ ತಾವೂ ಸಾಯುವುದರೊಳಗೆ ಹೆಣ್ಣುಮಕ್ಕಳ ಮದುವೆ ಮಾಡಿ ಮುಗಿಸಲು ಆಸೆ ಪಟ್ಟಿದ್ದು ತಪ್ಪೇನೂ ಇಲ್ಲ. ಮಗಳೇನು(ಮಂಜುಳಾ ) ಚಿಕ್ಕವಳೇ ಅಲ್ಲ್ವಾ, ಆದರೆ ಆಗಿನ ಕಾಲದಲ್ಲಿ ಅದೂ ಸಾಮಾನ್ಯವಾಗಿತ್ತು, ಇಲ್ಲಿ ಪ್ರಶ್ನೆ ಬಂದಿರೋದು ಅದೂ ಅಲ್ಲ, ಇಡೀ ಊರ ಜನರನ್ನು ಎದುರು ಹಾಕಿಕೊಂಡು ಭೀಮ ಹಾಗೂ ರಾಮಜೀ ಸಕ್ಪಾಲರೂ ತಮ್ಮ ಹೆಣ್ಣುಮಕ್ಕಳನ್ನೂ ಓದಿಸಬೇಕೆಂದು ಎಂತೆಂಥ ಸವಾಲನ್ನು ಸ್ವೀಕರಿಸಿದರು ಇಬ್ಬರೂ ಹೆಣ್ಣುಮಕ್ಕಳು ಕೂಡ ಇದನ್ನು ಎದುರಿಸಿ ಗೆದ್ದರು. ಆದರೆ ಈಗ ಓದು ಮುಗಿಯುವತನಕ ಕಾಯಬಹುದಾಗಿತ್ತೇನೋ, ಆದರೆ ಭೀಮಾಬಾಯಿಯವರ ಅರೋಗ್ಯ ಹೆಚ್ಚು ಕಡಿಮೆಯಾದರೆ…? ಹೀಗಾಗಿ ಎಲ್ಲರೂ ಗೊಂದಲದೊಳಗೆ ಇದ್ದರು
ಇವತ್ತಿನ 36ನೇ ಸಂಚಿಕೆ ಪ್ರಾರಂಭವಾಗುತ್ತಿದ್ದಂತೆ ಬಲರಾಮ್ ರಾತ್ರಿ ನಿದ್ರೆ ಬಾರದೆ ಹಾಸಿಗೆಯಲ್ಲಿ ಹೊರಳಾಡುತ್ತಿದ್ದಾನೆ. ತನಗೆ ಸಂಕಷ್ಟ ಕಾಲದಲ್ಲಿ ತನ್ನ ತಮ್ಮ ಭೀಮರಾವ ತನ್ನ ಪರವಾಗಿ ನಿಂತ ದೃಶ್ಯಗಳು ಹಾಗೂ ಅಕ್ಕಂದಿರ ಬಗ್ಗೆ, ಎಲ್ಲರ ಬಗ್ಗೆ ತೋರುತ್ತಿದ್ದ ಕಾಳಜಿ ನೆನಪಾಗಿ ಒಮ್ಮೆಲೇ ಎದ್ದು ಕೂತನು.ಗಂಗಕ್ಕನ ಮನೆಯಲ್ಲಿರುವ ಭೀಮರಾವನನ್ನು ಭೆಟ್ಟಿಯಾಗಿ ವಿಷಯ ತಿಳಿಯಲೇಬೇಕೆಂಬ ಕುತೂಹಲ ಅವನಲ್ಲಿ ಬಂದು ಬಿಟ್ಟಿದೆ. ಆನಂದನನ್ನು ಕೂಡ ಎಬ್ಬಿಸಿ, ತಾನು ಭೀಮನನ್ನೂ ಕಾಣಲು ಗಂಗಕ್ಕನ ಮನೆಗೆ ಹೋಗುತ್ತಿರುವುದಾಗಿ, ಅಮ್ಮನನ್ನು ಸೇರಿದಂತೆ ಬೇರೆ ಯಾರಿಗೂ ವಿಷಯ ತಿಳಿಯಬಾರದೆಂದು ಹೇಳುತ್ತಾನೆ.ಆನಂದನ ನೆರವಿನೊಂದಿಗೆ ಇನ್ನೇನೂ ಹೊರಗೆ ಹೆಜ್ಜೆ ಇಡಬೇಕು ಅಷ್ಟರಲ್ಲಿ ಅಪ್ಪ ತಮ್ಮ ಎದುರಿಗೆ ಬಂದು ನಿಂತುಬಿಟ್ಟಿದ್ದಾರೆ. ಇಬ್ಬರೂ ಕಕ್ಕಾಬಿಕ್ಕಿಯಾಗಿ ನಿಂತು ಬಿಟ್ಟರು!.  ತಂದೆ ಏನೆನ್ನುತ್ತಾರೋ ಎಂಬ ಭಯ ಅವರಿಗೆ. ನಿಜ ಹೆಳಬೇಕಂದರೆ ರಾಮಜೀ ಸಕ್ಪಾಲರು ಕೂಡ ತಮ್ಮ ಪ್ರೀತಿಯ ಮಗ ಭೀಮನನ್ನು ಕಾಣಬೇಕು, ಮಾತಾಡಬೇಕು ಎಂಬ ಆಸೆ. ಆದರೆ ಎಲ್ಲಿ ಭೀಮಾಬಾಯಿಯವರು ಬೇಸರ ಮಾಡಿಕೊಂಡು ಬಿಡುತ್ತಾರೇನೋ, ತಮ್ಮಿಂದ ತಮ್ಮ ಅನಾರೋಗ್ಯದ ಪತ್ನಿಯ ಮನಸ್ಸಿಗೆ ನೋವಾಗದಿರಲಿ ಎಂದು ಸುಮ್ಮನೆ ಇದ್ದಾರೆ. ಆದರೆ ಈಗ ಮಗ ಬಲರಾಮ್ ಹೋಗುತ್ತಿರುವುದಕ್ಕೆ ಬೇಡ ಎನ್ನಲಿಲ್ಲ ಬದಲಾಗಿ ಖುಷಿ ಪಡುತ್ತಾರೆ. ಮತ್ತೂ “ಭೀಮನಿಗೆ ಹೋಗಿ ಹೇಳು ಹೋರಾಟ ಮಾಡುವವರು ಹೆದರಿ ಓಡಿ ಹೋಗಬಾರದು ನಿಂತು ಹೋರಾಟ ಮಾಡಬೇಕು. ಹೋರಾಟದಲ್ಲಿ ಗೆಲ್ಲಬಹುದು ಅಥವಾ ಸೋಲಬಹುದು ಆದ್ರೆ ಎರಡನ್ನು ಸಮಾನವಾಗಿ ಸ್ವೀಕರಿಸಬೇಕಾಗುತ್ತದೆ. ಆದ್ರೆಗೆಲ್ಲೋತನಕ ಹೋರಾಟ ಮುಂದುವರೆಸಬೇಕಾಗುತ್ತದೆ. ಹಾಗಾಗಿ ಭೀಮನಿಗೆ ಇಲ್ಲಿ ಬಂದು ಹೋರಾಟ ಮಾಡೋದಕ್ಕೆ ಹೇಳು”. ಹೀಗೆ ಹೇಳಿ ಬಲರಾಮನನ್ನು ಕಳಿಸಿ ಕೊಡುತ್ತಾರೆ.

ಈಗ ಆನಂದ ಅಪ್ಪ ಭೀಮ ಬಂದ್ರೆ ಖಂಡಿತ ಮಂಜುಳಾಳ ಮದುವೆ ನಿಲ್ಲಿಸಬಹುದು ಎಂದು ಕೇಳುತ್ತಾನೆ. ಆಗ ರಾಮಜೀಯವರು “ನಡೆ ಮಲಗೋಣ, ಮತ್ತೂ ಈ ವಿಷಯ ಯಾರಿಗೂ ಹೇಳಬೇಡ “ಎನ್ನುತ್ತಾರೆ. ಈಗ ಆನಂದ ಅಚ್ಚರಿಯಿಂದ ತನ್ನ ತಂದೆಯನ್ನೇ ನೋಡುತ್ತಾನೆ ರಾಮಜೀಯವರು ಏಕೆ ನೋಡುತ್ತಿದ್ದೀಯ ಆನಂದ ಎಂದು ಕೇಳಿದಾಗ, ಆನಂದ” ತಪ್ಪು ಮಾಡುವಲ್ಲಿ ಮುಂದಾದ ಒಬ್ಬ ಪ್ರಾಮಾಣಿಕ ವ್ಯೆಕ್ತಿ ಕೂಡ ಹೇಗೆ ಭಯ ಬಿಳುತ್ತಿದ್ದೀರಾ ಎಂಬುದನ್ನು ಕಂಡು ಅಚ್ಚರಿಯಾಗುತ್ತಿದೆ ” ಎನ್ನುತ್ತಾನೆ. ತಪ್ಪಿನ ವಿರುದ್ಧ ಧ್ವನಿ ಎತ್ತಲು ಹೇಳುತ್ತಿದ್ದ ನೀವೇ ಇವತ್ತು ಯಾರ ಮುಂದೆ ಹೇಳಬೇಡಿ ಎನ್ನುತ್ತಿದ್ದೀರಿ..?”. ತಂದೆ ಮನನೊಂದು ಹೇಳುತ್ತಿದ್ದಾರೆ, “ಆನಂದ ಯಾವತ್ತಾದ್ರೂ ಈ ಘಟನೆ ನೆನಪಾದ್ರೆ ಅಪ್ಪ ತಪ್ಪು ಹೆಜ್ಜೆ ಇಟ್ಟಿದ್ದರೂ ಎಂಬುದನ್ನು ಹೇಳಲು ಹಿಂಜರಿಯಬೇಡ. ನಾನೂ ಅಸಹಾಯಕತೆಗೆ ಹೆದರಿಕೊಂಡಿದ್ದೀನಿ ನನ್ನ ತಪ್ಪಿನಿಂದ ಪಾಠ ಕಲಿತುಕೋಬೇಕು. ಹೀಗೆ ನಿನಗೂ ಮುಂದೆ ಸರಿ ತಪ್ಪುಗಳ ನಡುವೆ ತೀರ್ಮಾನ ತಗೊಳ್ಳುವ ಸಂದರ್ಭ ಬಂದಾಗ ಅಸಹಾಯಕನಾಗಿ ನಿಲ್ಲಬೇಡ”. ಇಷ್ಟು ಹೇಳಿ ಗದ್ಗಧಿತರಾಗಿ ಹೊರಡುತ್ತಾರೆ.

ಬೆಳಿಗ್ಗೆ ಎದ್ದು ಭೀಮಾಬಾಯಿ ಬಲರಾಮ್ ಎಲ್ಲಿ ಹೋಗಿದ್ದಾನೆ ಎಂದು ಆನಂದನನ್ನು ಜೋರಾಗಿಯೇ ಕೇಳುತ್ತಾರೆ. ಆತ ಡೋಲು, ಗೀಲು ಎಂದು ತೊದಲುತ್ತ ಅಪ್ಪನೇ ಕಳಿಸಿದ್ದಾರೆ ಎಂದು ಹೇಳಿದಾಗ, ಭೀಮಾಬಾಯಿ ರಾಮಜೀಯವರತ್ತ ನೋಡುತ್ತಾರೆ. ಆಗ ರಾಮಜೀಯವರು ಕೂಡ “ಹೌದು, ಮದುವೆಗೆ ಡೋಲು ಬಡಿಯುವವರು ಬೇಕಲ್ಲ ಹಾಗಾಗಿ ಅವನಿಗೆ ಗೊತ್ತಿರುವ ಸ್ನೇಹಿತರ ಬಳಿ ಹೋಗಿದ್ದಾನೆ, ಇನ್ನೇನೂ ಬಂದು ಬಿಡುತ್ತಾನೆ ಎಂದು ಹೇಳಿದಾಗ, ಅದೇ ಸಮಯಕ್ಕೆ ಬಲರಾಮ್ ಬರುತ್ತಾನೆ. ಆಗ “ಬಲರಾಮ್ ಎಲ್ಲಿಗೆ ಹೋಗಿದ್ದೆ ನನಗೆ ಹೇಳದೇನೆ” ಎಂದು ತಾಯಿ ದಬಾಯಿಸಿದಾಗ ಬಲರಾಮ್ ಉತ್ತರ ಹೇಳಲು ತೊದಲಿದಾಗ ಆನಂದ ನೀಡಿದ ಸನ್ನೆಯಿಂದ ಡೋಲು ಬಾರಿಸುವವರಿಗೆ ಹೇಳೋಣವೆಂದು ಹೋಗಿದ್ದೇ ಎನ್ನುತ್ತಾನೆ. ಮತ್ತೂ ಇದನ್ನೆಲ್ಲಾ ಗಮನಿಸಿದ ಅಳಿಯಂದ್ರು ಇವರು ಏನೋ ಸನ್ನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅತ್ತೆಗೆ ಹೇಳುತ್ತಾರೆ. ಆದ್ರೆ ಆನಂದ ಚೇಷ್ಟೆ ಮಾಡುವ ಮೂಲಕ ಅದನ್ನು ಮರೆಸುತ್ತಾನೆ. ಕೊನೆಗೂ “ಇನ್ನೊಮ್ಮೆ ಹೊರಗಡೆ ಹೋಗಬೇಕಾದ್ರೆ ನನ್ನ ಕೇಳಿ ಹೋಗಬೇಕು ” ಹೀಗೆ ತಾಕೀತು ಮಾಡಿ ಭೀಮಾಬಾಯಿಯವರು ಸುಮ್ಮನಾಗುತ್ತಾರೆ.

ಈಗ ಮಂಜುಳಾನ ಮಾವ ಆಗೋನು ಅದೇ ಹುಡುಗನ ಅಪ್ಪ, ಮಕ್ಕಳು ಚಪ್ಪಲಿ ವ್ಯಾಪಾರ ಮಾಡುವಲ್ಲಿ ನಿಂತು, ವ್ಯಾಪಾರಿಯೊಬ್ಬನಿಗೆ “ನನ್ನ ಚಿಕ್ಕ ಮಗನ ಮದುವೆ ಗೊತ್ತು ಮಾಡಿದ್ದೀನಿ, ಹಾಗಾಗಿ ನಿಮ್ಮಂತವರು ಚಪ್ಪಲಿ ತಗೊಂಡ್ರೆ ಅಲ್ವಾ ನನ್ನ ಮಗನ ಮದ್ವೆ ಮಾಡೊಕ್ಕಾಗೋದು ” ಎಂದು ಹೇಳಿ ಮನವೊಲಿಸಿ ಚಪ್ಪಲಿ ಮಾರುತ್ತಾನೆ. ಈಗ ಇದು ಮಗನಿಗೆ ಸರಿ ಕಾಣದೆ “ಅಪ್ಪ ನನ್ನ ಮದುವೆ ಬಗ್ಗೆ ಎಲ್ಲರ ಮುಂದೆ ಹೇಳೋದು ಸರಿ ಅಲ್ಲಾ ಅಂತ ಅನ್ನಿಸುತ್ತೆ” ಹೀಗೆ ಭಯದಿಂದಲೇ ಹೇಳುತ್ತಾನೆ, ಮಗನ ಈ ಮಾತಿಗೆ ಕೋಪಗೊಂಡ ಆತ ಮಗನ ಕಪಾಳಕ್ಕೆ ಹೊಡೆದು, ನಾನು ಹೇಳಿದಂತೆ ನೀವೂ ಕೇಳಬೇಕು ಅಷ್ಟೇ ಎಂದು ಗದರುತ್ತಾನೆ.

ಮಗ ಭೀಮ ಏನೂ ಹೇಳಿದ್ದಾನೆ ಎಂದು ತಿಳಿಯುವ ಕುತೂಹಲ ರಾಮಜೀಯವರಿಗೆ ಹಾಗಾಗಿ ಬಲರಾಮನಿಗೆ ಕೇಳುತ್ತಾರೆ. ಅಲ್ಲಿ ಆನಂದ ಕೂಡ ಇದ್ದಾನೆ ಬಲರಾಮ ಈಗ ಅಪ್ಪನಿಗೆ “ಭೀಮನನ್ನು ಕಂಡು ಮಾತಾಡಿದೆ ಭೀಮ ನಾನೂ ಹೇಳೋದನ್ನು ತಾಳ್ಮೆಯಿಂದ ಕೇಳಿಸಿಕೊಂಡು ಈ ಪತ್ರ ಬರೆದು ನಿಮಗೆ ಕೊಡಲು ಹೇಳಿದ್ದಾನೆ” ಎಂಬುದಾಗಿ ಭೀಮ ಕೊಟ್ಟ ಪತ್ರ ತಂದೆಗೆ ಕೊಡುತ್ತಾನೆ. ಮತ್ತೂ ತಂದೆಯವರು ಪತ್ರವನ್ನು ಗಟ್ಟಿಯಾಗಿ ಈಗ ಓದುತ್ತಿದ್ದಾರೆ ” ಅಪ್ಪ ಹೇಳಿದ್ದು ಸರಿಯಾಗಿದೆ. ಜೀವನದಲ್ಲಿ ಯಾವ ಹೋರಾಟವನ್ನು ಓಡಿ ಹೋಗುವುದರಿಂದ ಗೆಲ್ಲುವುದಕ್ಕೆ ಆಗುವುದಿಲ್ಲ. ಆದರೆ ನಾನು ಯಾವತ್ತೂ ಓಡಿಹೋಗಿಲ್ಲಪ್ಪ, ಅಮ್ಮ ನನ್ನ ಪ್ರತಿ ಮಾತಿಗೂ ಕೋಪಿಸಿಕೊಳ್ಳುತ್ತಾರೆ. ಇಲ್ಲಿವರೆಗೆ ನನ್ನ ಪರವಾಗಿಯೇ ಮಾತಾಡಿಕೊಂಡು ಬಂದಿದ್ದಾರೆ. ಆದರೆ ಈ ಸಲ ಅಮ್ಮ ತಪ್ಪು ಮಾಡಿದ್ದಾರೆ. ನೀವು ಕೂಡ ಅಲ್ಲಿದ್ದರೂ ಕೂಡ ಏನೂ ಮಾತಾಡಲಿಲ್ಲ. ಇದರಿಂದ ನನಗೆ ತಿಳಿದಿದ್ದು ಇದು ಹೋರಾಟ ಅಲ್ಲ ಅಮ್ಮನ ಹಠವೆಂದು ನನಗೆ ಗೊತ್ತಾಯ್ತು. ಹಾಗೆ ನಿಮ್ಮ ಭೀಮ ಅಮ್ಮನ ಹಠದ ವಿರುದ್ಧ ಹೋರಾಟ ಮಾಡೋದಕ್ಕೆ ಲೈಕ್ ಇಲ್ಲ. ಹೀಗಾಗಿ ನಾನು ಹೊರಗೆ ಬಂದೆ. ಅಮ್ಮನಿಗೆ ಅರ್ಥ ಆದ್ರೂ ಆಗಬಹುದು. ಈ ಮೊದಲು ಅಮ್ಮ ಯಾವಾಗಲೂ ಕೋಪಿಸಿಕೊಂಡಿಲ್ಲ ಆದರೆ ಈಗ ಎರಡು ದಿನಗಳಿಂದ ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಅಮ್ಮನ ಮೇಲೆ ಇನ್ನೂ ನಂಬಿಕೆ ಇದೆ. ಅವರು ಅರ್ಥ ಮಾಡಿಕೊಂಡು ಈ ಮದುವೆ ನಿಲ್ಲಸಬಹುದು ಅಂತ. ಈ ಮದುವೆ ನಿಲ್ಲಿಸದಿದ್ದರೆ ಮಂಜುಳಕ್ಕನ ತಮ್ಮನಾಗಿ ನಾನೂ ಏನೂ ಮಾಡಲಿಲ್ಲವೆಂಬ ನೋವು ಕೊನೆಯತನಕ ಕಾಡುತ್ತಿರುತ್ತದೆ. ಹೀಗೆ ಆದ್ರೆ ನಾನೂ ಖಂಡಿತ ಮನೆಗೆ ವಾಪಸ್ಸು ಬರುವದಿಲ್ಲ ಜೀವನ ಪೂರ್ತಿ ಮನೆ ಬಿಟ್ಟು ಬಂದ ಕೊರಗಿನಲ್ಲಿಯೇ ಉಳಿಯುತ್ತೇನೆ. ಇಂತಿ ನಿಮ್ಮ ಮನೆಯ ಕಿರಿಯ ಸದಸ್ಯ. ಭೀಮರಾವ್”.

ಮಗನ ಈ ಪತ್ರವನ್ನು ಓದಿ ರಾಮಜೀಯವರು ಕಣ್ಣೀರು ಹಾಕುತ್ತಿದ್ದಾರೆ. ಮತ್ತೂ ಭೀಮಾಬಾಯಿಯವರು ಕೂಡ ಇದನ್ನು ಕೇಳಿಸಿಕೊಂಡು, ಕೇಳದ ಹಾಗೆ ಒಳ ಹೋಗುತ್ತಾರೆ. ರಾಮಜೀಯವರು ಈಗ ‘ಭೀಮ ತುಂಬಾ ಬೇಗ ದೊಡ್ಡವನಾಗಿ ಬಿಟ್ಟ, ಬೇಗ ಎಲ್ಲವನ್ನು ತಿಳಿದುಕೊಂಡು ಬಿಟ್ಟ. ಹೋರಾಟವನ್ನು ಎದುರುಗಡೆ ನಿಂತೇ ಮಾಡಬೇಕೆಂದೇನಿಲ್ಲ ಎಂಬುದನ್ನು ತಿಳುದುಕೊಂಡನು. ನಾನೂ ಭೀಮಾಬಾಯಿಗೆ ಹೆದರಿಕೊಂಡು ಸುಮ್ಮನಾಗಿದಿನಿ. ಆದ್ರೆ ನೀನು ದೂರ ಇದ್ದರೂ ಮಂಜುಳಾಳ ಮದುವೆ ವಿರುದ್ಧ ಅಮ್ಮನೊಡನೆ ಎಲ್ಲರಿಗಿಂತ ಹೆಚ್ಚು ಹೋರಾಟ ನಡೆಸಿದ್ದಿಯ, ಆದ್ರೆ ನಿಮ್ಮಮ್ಮ ತುಂಬಾ ಹಠವಾದಿ ಅವಳು ಈ ಮದುವೆ ಮಾಡೇ ಮಾಡ್ತಾಳೆ. ಆದುದರಿಂದ ನೀನು ಮನೆಗೆ ಬರುವತನಕ ನನಗೂ ಮನೆಯಲ್ಲಿ ಇರಲು ಆಸೆಯಿಲ್ಲ. ಏಕೆಂದರೆ ಭೀಮನ ಅಮ್ಮ ಸರಿ ಇರಲಿಲ್ಲ ಎಂಬುದಾಗಿ ಮುಂದೊಂದು ದಿವಸ ಭೀಮಾಬಾಯಿಗೆ ಕೆಟ್ಟ ಹೆಸರು ಬರಬಾರದು. ಹಾಗಾಗಿ ನಾನೂ ಈ ಭಾಮಾಬಾಯಿಗೆ ತಿಳಿಸಿ ಹೇಳಿ ಮದುವೆ ನಿಲ್ಲಿಸುವ ಪ್ರಯತ್ನ ಮಾಡಿದ್ರು ಪ್ರಯೋಜನ ಆಗಲಿಲ್ಲ ಅಂದ್ಮೇಲೆ ನಾನೂ ಮನೆ ಬಿಟ್ಟು ದೂರ ಇರಬೇಕು ‘ ಹೀಗಂದುಕೊಂಡು ಎದ್ದು ಹೋಗುತ್ತಾರೆ.

ಈಗ ಆನಂದ ಬಲರಾಮ್ನಿಗೆ ನಾವು ಹುಡುಗನ ಕಡೆಯವರಿಗೆ ಹೇಳಿ ಮದುವೆ ನಿಲ್ಲಿಸೋಣವೇ ಎಂದು ಕೇಳಿದಾಗ ಅದೂ ನಮ್ಮ ವ್ಯಾಪ್ತಿಯಲ್ಲಿ ಇಲ್ಲ, ಇದಕ್ಕೆ ಬೇರೆ ಏನಾದ್ರೂ ಉಪಾಯ ಮಾಡಬೇಕು ಎಂದು ಬಲರಾಮ್ ಹೇಳುತ್ತಾನೆ. ಇದೆಲ್ಲವನ್ನು ಭೀಮಾಬಾಯಿ ಕೇಳಿಸಿಕೊಂಡು, ಹಾಗೂ ಒಂದು ಸಲ ಭೀಮ ತನ್ನ ಹಾಗೂ ಮಂಜುಳಾಳ ಬಗ್ಗೆ ತೋರಿದ ಪ್ರೀತಿ ಕಾಳಜಿಗಳು ನೆನಪಾಗಿ ‘ಭೀಮಾ ನನ್ನ ಪರಿಸ್ಥಿತಿ ನೀನು ಅರ್ಥ ಮಾಡಿಕೊಳ್ಳುತ್ತೀಯ ಎಂದು ತಿಳಿದುಕೊಂಡಿದ್ದೆ ಆದ್ರೆ..? ” ಹೀಗಂದುಕೊಂಡು ಒಳಗೆ ಹೋದಾಗ ಅಲ್ಲಿ, ಮೀರಾಬಾಯಿಯವರು ಮಂಜುಳಾಳ ಮದುವೆಗೆ ಸಿದ್ಧಪಡಿಸಿದ ಸೀರೆ ತೋರಿಸಿದಾಗ ಭೀಮಾಬಾಯಿ ಅದನ್ನೂ ಕೈಯಲ್ಲಿಡಿದು ಮಂಜುಳಾಳ ಬಳಿ ಹೋಗುತ್ತಾರೆ. ಮತ್ತೂ ಮಂಜುಳಾಳಿಗೆ ಹೇಳುತ್ತಾರೆ “ಮಂಜುಳಾ ಈ ಸೀರೆಯಲ್ಲಿ ನೀನು ತುಂಬಾ ಚನ್ನಾಗಿ ಕಾಣಿಸುತ್ತಿದ್ದಿಯ, ಅವತ್ತು ಮದುವೆ ದಿಬ್ಬಣದಲ್ಲಿ ವಧುವನ್ನು ನೋಡಿ, ನೀನು ಹಂಗೆ ಆಗಬೇಕು, ನಾನೂ ಸಾಯುವುದರೊಳಗೆ ಇದಾಗಬೇಕೆಂದುಕೊಂಡೆ. ಮತ್ತೂ ಇದೆಲ್ಲ ನಿನ್ನ ಸಹೋದರರಿಗೆ ಅರ್ಥ ಆಗಲ್ಲ, ನೀನಾದ್ರೂ ನನ್ನ ಅರ್ಥ ಮಾಡಿಕೊ” ಎಂದು ಹೇಳಿ ಒಳಗೆ ಹೋಗುತ್ತಾರೆ. ಮತ್ತೂ ಇದೆಲ್ಲ ನೋಡುತ್ತಿದ್ದ ಆನಂದ ಬಲರಾಮನಿಗೆ ನಾವು ಕೂಡ ಅಮ್ಮ ನೋಡಿದ ವಧುವಿನ ರೀತಿಯಲ್ಲಿಯೇ ಅರ್ಥ ಮಾಡಿಸೋಣವೆಂದು, ಭೀಮನ ಹಾಗೆ ಅರ್ಥ ಮಾಡಿಸೋಕೆ ಪ್ರಯತ್ನ ಮಾಡೋಣ ಎಂದು ಹೇಳುತ್ತಾನೆ. ಮತ್ತೂ ಬಲರಾಮ್ ಈಗ ಮಂಜುಳಾಳ ಬಳಿ ಬಂದು ಆಕೆಯ ಕೈಯಲ್ಲಿ ಪುಸ್ತಕ ಕೊಟ್ಟು, ಭೀಮ ಹಾಗೂ ನಾವೆಲ್ಲರೂ ನಿನ್ನನ್ನು ಹೀಗೆ ನೋಡಲು ಇಷ್ಟ ಪಡುತ್ತೇವೆ. ಹೇಗಾದ್ರು ಮಾಡಿ ಈ ಮದುವೆ ನಿಲ್ಲಿಸಲು ಪ್ರಯತ್ನ ಮಾಡುತ್ತೇವೆ. ಒಂದು ವೇಳೆ ಇದಾಗದಿದ್ದರೆ ನಮ್ಮನ್ನು ನಾಲಾಯಕ ಅಣ್ಣಂದಿರು ಎಂದು ತಿಳಿದು ಬಿಡು ಎಂದು ಹೇಳಿ ಹೋಗುತ್ತಾರೆ. ಮಂಜುಳಾ ಈಗ ಬಲರಾಮ್ ಕೊಟ್ಟ ಪುಸ್ತಕ ಕೈಯಲ್ಲಿಡಿದು ಭೀಮನ ಶಿಕ್ಸಣ ಪ್ರೇಮ, ಮಂಜುಳಾ ಶಾಲೆಗೆ ಹೋಗುತ್ತಿದ್ದಾಳೆ, ನಾನೇ ತಲೆ ಬಾಚಿ ಶಾಲೆಗೆ ಕಳಿಸಿ ಕೊಡುತ್ತೇನೆ ” ಎಂಬ ಮಾತುಗಳು ಆಕೆಯ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ.

ಇತ್ತ ಬಲರಾಮ್ ಹಾಗೂ ಆನಂದ ಇಬ್ಬರೂ ಕೇರಿಗಳಲ್ಲಿ ಹೋಗಿ ಈಗಾಗಲೇ ದಿಬ್ಬಣ ಹತ್ತಿ, ಮದುವೆಯಾಗಿರುವ 25 ಹೆಣ್ಣು ಮಕ್ಕಳ ಅನಿಸಿಕೆ ಅಭಿಪ್ರಾಯ, ತಿಳಿದುಕೊಂಡು ಚೀಟಿಯಲ್ಲಿ ಬರೆಸಿಕೊಂಡು, ಭೀಮಾಬಾಯಿಗೆ ಹೇಳುತ್ತಾರೆ “ಅಮ್ಮ ಈ ಎಲ್ಲ ಹೆಣ್ಣುಮಕ್ಕಳು ಮಂಜುಳಾಳ ಹಾಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಹಲವಾರು ತೊಂದ್ರೆ ತಾಪತ್ರೆಯಗಳಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಹಾಗಾಗಿ ಇನ್ನಾದ್ರೂ ಮಂಜುಳಾಳ ಮದುವೆ ನಿಲ್ಲಿಸಿಬಿಡಿ ಅಮ್ಮ..” ಹೀಗೆ ಹೇಳಿ ಪತ್ರ ಅಮ್ಮನ ಕೈಯಲ್ಲಿ ಕೊಡುತ್ತಾರೆ. ಆದ್ರೆ ಅಮ್ಮಾ ಅ ಪತ್ರವನ್ನು ಎಲ್ಲರೆದುರೇ ಉರಿಯುತ್ತಿರುವ ಬೆಂಕಿಯಲ್ಲಿ ಹಾಕಿ ಸುಡುತ್ತಾರೆ. ಈಗ ಮಂಜುಳಾಳ ಓದುವ ಆಸೆ ಕೂಡ ಹಾಗೆಯೇ ಕರಗಿ ಹೋಗುತ್ತಿದೆ. ಮತ್ತೂ ಈಗ ಭೀಮಾಬಾಯಿ ಯಾವುದೇ ಕಾರಣಕ್ಕೂ ಈ ಮದುವೆ ನಿಲ್ಲೋದಕ್ಕೆ ನಾನೂ ಬಿಡೋದಿಲ್ಲ. ಎಂದು ಹೇಳುತ್ತಾರೆ.

ಆದ್ರೆ ಈಗಲೂ ಕೂಡ ಆನಂದ ಮತ್ತೂ ಬಲರಾಮ್ ಮದ್ವೆ ನಿಲ್ಲಿಸುವ ಪ್ರಯತ್ನದಲ್ಲಿ ಇದ್ದಾರೆ. ಈಗವರು ಅಂದುಕೊಂಡಂತೆ ಹುಡುಗನ ಮನೆಗೆ ಬಂದಿದ್ದಾರೆ ಅಲ್ಲಿ ಹುಡುಗನ ಅವ್ವ ಅಪ್ಪನ ಮುಂದೆ “ದಯವಿಟ್ಟು ಈ ಮದುವೆ ನಿಲ್ಲಿಸಿ ಬಿಡಿ, ಮಂಜುಳಾ ಓದಬೇಕು. ಮತ್ತೂ ಈಗಲೇ ಅವಳ ಮದುವೆ ಮಾಡೋದು ಅಮ್ಮ ಹಾಗೂ ಭಾವನನ್ನು ಬಿಟ್ಟರೆ ಬೇರೆ ಯಾರಿಗೂ ಇಷ್ಟ ಇಲ್ಲವೆಂದು ಹೇಳುತ್ತಾರೆ. ಆದ್ರೆ ಹುಡುಗನ ಅಪ್ಪ “ಹುಡುಗಿ ಓದಿ ಸಾದಿಸೋದು ಏನಿಲ್ಲ. ಅದೂ ಅಲ್ಲದೆ ನೀವೂ ಮಕ್ಕಳು ಇದರಲ್ಲಿ ಭಾಗಿಯಾಗಬಾರದು ಮನೆಗೋಗಿ. ಹೀಗೆ ಹೇಳಿ ಮತ್ತೇ ಅವರನ್ನು ನಿಲ್ಲಲು ಹೇಳಿ, ತಮ್ಮ ದೊಡ್ಡ ಸೊಸೆಯಿಂದ ಇಂಗ್ಲಿಷ್ ಮಾತನಾಡಿಸಿ, ಇವಳಿಗೂ ಓದು ಬರುತ್ತೆ ಆದ್ರೆ ಏನೂ ಪ್ರಯೋಜನ ಅಡುಗೆ ಮಾಡೋಕ ಬಂದ್ರೆ ಸಾಕು ಎಂದು ಹೇಳಿ ಕಳಿಸಿ ಸಹೋದರರಿಗೆ ಮದುವೆ ತಯಾರಿ ಮಾಡಿಕೊಳ್ಳಲು ಹೇಳಿ ಕಳಿಸುತ್ತಾರೆ. ಇತ್ತ ಮನೆಯಲ್ಲಿ ಆನಂದ ಹಾಗೂ ಬಲರಾಮ್ ಕಾಣದಾದಾಗ, ಬಹುಷಃ ಇವರು ಹುಡುಗನ ಮನೆಗೆ ಹೋಗಿದ್ದಾರೆಂದು ಕಂಡು ಹಿಡಿದ ಭೀಮಾಬಾಯಿ ಇಬ್ಬರನ್ನು ಬೈದು, ಮದುವೆ ಮುರಿಯುವ ಕೆಟ್ಟ ಕೆಲಸ ಮಾಡಬೇಡಿರೆಂದು, ಮತ್ತೂ ಭೀಮನಿಗೂ ನೀವೇ ತಿಳಿಸಿ ಹೇಳಬೇಕೆಂದು ಕೂಗಾಡುತ್ತಾರೆ.
ಇತ್ತ ಹುಡುಗನ ಮನೆಯಲ್ಲಿ ಅಪ್ಪ ಊಟಕ್ಕೆ ಕುಳಿತಿದ್ದಾರೆ. ಅದೇ ಸಮಯಕ್ಕೆ ಮಕ್ಕಳಿಬ್ಬರು ಚಪ್ಪಲಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಬರುತ್ತಾರೆ. ಮತ್ತೂ ಅಪ್ಪನಿಗೆ ಚಪ್ಪಲಿ ವ್ಯಾಪಾರ ಚನ್ನಾಗಿ ಆಯಿತೆಂದು ಹೇಳುತ್ತಾರೆ. ಅಪ್ಪ ಈಗ ಮದುಮಗ ಭಾಸ್ಕರನಿಗೆ ಮದುವೆ ಬಟ್ಟೆ ಹಾಕೊಂಡು ನೋಡು ಎನ್ನುತ್ತಾರೆ. ಆಯಿತೆಂದು ಆತ ಹೋದಾಗ, ಹಿರಿಯ ಸೊಸೆ ಈಗ ಭಾಸ್ಕರನಲ್ಲಿ ಹೋಗಿ ಬಲರಾಮ್, ಆನಂದ ಮನೆಗೆ ಬಂದಿದ್ದು, ನಡೆದ ಎಲ್ಲ ವಿಷಯ ಹೇಳಿ, ಮತ್ತೊಬ್ಬರ ಒತ್ತಡಕ್ಕೆ ಮಣಿದು ಮದುವೆ ಮಾಡಿಕೊಳ್ಳಬಾರದೆಂದು ಆತನಿಗೆ ಹೇಳಿದಾಗ ಆತ ಕೂಡ ಯೋಚನೆ ಮಾಡುತ್ತ, ಮಂಜುಳಾಳ ಅಭಿಪ್ರಾಯ ಏನಿರಬಹುದು ಎಂದು ಅತ್ತಿಗೆಗೆ ಕೇಳಿದಾಗ, ಅತ್ತಿಗೆ “ಇನ್ನೇನಿರುತ್ತೆ ಅವಳು ಕೂಡ ನಿನ್ನ ಹಾಗೆ ಬಲವಂತಕ್ಕೆ ಒಪ್ಪಿರಬಹದು… ” ಹೀಗೆ ಹೇಳುವಾಗ ಇವತ್ತಿನ ಈ ಸಂಚಿಕೆಗೆ ತೆರೆ ಬೀಳುತ್ತದೆ.
*ಹೀಗೆ ಇವತ್ತಿನ ಸಂಚಿಕೆಯಲ್ಲಿ ಮಂಜುಳಾಳ ಮದುವೆ ನಡೆಸಿಯೇ ತಿರಬೇಕೆಂದು ಭೀಮಾಬಾಯಿಯವರು ಹಠ ತೊಟ್ಟಿದ್ದಾರೆ. ಇನ್ನುಳಿದವರು ಮಂಜುಳಾಳು ಇನ್ನೂ ಓದಬೇಕು ಹಾಗಾಗಿ ಅವಳ ಮದುವೆ ನಿಲ್ಲಿಸಬೇಕು ಎಂಬ ಕಾರಣದಿಂದ ಮದುವೆ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಹೀಗಾಗಿ ಮುಂದಿನ ಸಂಚಿಕೆಯಲ್ಲಿ ಮಂಜುಳಾಳ ಮದುವೆಯ ವಿಷಯ ಸುಖಾಂತದಲ್ಲಿ ಮುಗಿಯುತ್ತದೆಯೇ..?  ಅಥವಾ ಮನೆ ಬಿಟ್ಟು ಹೋಗಿರುವ ಭೀಮರಾವ ಇದಕ್ಕೆ ಹೇಗಾದರೂ ಪರಿಹಾರ ಹುಡುಕಬಹುದೇ..? ಏನಾಗುತ್ತದೆ ಎಂದು ಎಲ್ಲರೂ ಕಾಯೋಣ

…ಅಲ್ಲಿಯವರಿಗೂ 
   … ಜೈಭೀಮ್
     … ಮುಂದುವರೆಯುವುದು

 

-ಗಣಪತಿ ಚಲವಾದಿ(ಗಗೋಚ), ಬಿಎಂಟಿಸಿ ನಿರ್ವಾಹಕರು , ಕಸಾಪ ಮಯೂರವರ್ಮ
ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

ಇತ್ತೀಚಿನ ಸುದ್ದಿ