ಮಂಜುಳಳ ಮದುವೆ | ಭೀಮಾಬಾಯಿಯ ಇಷ್ಟ ಮತ್ತು ಭೀಮನ ಸಂಕಟ | ಶನಿವಾರದ ಎಪಿಸೋಡ್ ಹೇಗಿತ್ತು? - Mahanayaka

ಮಂಜುಳಳ ಮದುವೆ | ಭೀಮಾಬಾಯಿಯ ಇಷ್ಟ ಮತ್ತು ಭೀಮನ ಸಂಕಟ | ಶನಿವಾರದ ಎಪಿಸೋಡ್ ಹೇಗಿತ್ತು?

08/11/2020

ಮಹಾನಾಯಕ” ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ:

ಸಂಚಿಕೆ(ಎಪಿಸೋಡ):35

ವಾರ : ಶನಿವಾರ


Provided by

ದಿನಾಂಕ :07/11/2020

ನಾವೆಲ್ಲರೂ ಹೋದ ವಾರ ಮಹಾನಾಯಕ ಧಾರಾವಾಹಿಗೆ ಡಬ್ಬಿಂಗ್ ಬಹುಮಾನ ಬಂದಿದ್ದು, ರಾಜ್ಯದ ಕೋಟಿ ಕೋಟಿ ಜನರು ಅಭಿನಂದಿಸಿ, ಖುಷಿ ಪಟ್ಟಿದ್ದು ಹಾಗೂ ಜೀ ವಾಹಿನಿಯ ಅವಾರ್ಡ ಕಾರ್ಯಕ್ರಮದಲ್ಲಿ ಖ್ಯಾತ ಹಂಸಲೇಖ ಸರ್ ವರು ಅಂಬೇಡ್ಕರ ಸಾಹೇಬ್ರ ಕುರಿತು ಅದ್ಬುತ ಹಾಡು ರಚನೆ ಮಾಡಿದ್ದು ಅದನ್ನು ಇನ್ನೋರ್ವ ಖ್ಯಾತ ಗಾಯಕರು ಪ್ರಕಾಶ ಸರವರು ಹಾಡಿದ್ದು ಇದೆಲ್ಲವೂ ಅದ್ಬುತವಾಗಿ ಮೂಡಿ ಬಂದಿದ್ದು, ವೀಕ್ಷಕರು ಹುಚ್ಚೆದ್ದು ಕುಣಿದಿದ್ದು, ಮತ್ತು ಅದೇ ಖುಷಿಯಲ್ಲಿ 34ನೇ ಎಪಿಸೋಡ್ ಕೂಡ ಕಣ್ಣ್ತುಂಬಿ ಕೊಂಡಿದ್ದರು.

ಈ 34ನೇ ಎಪಿಸೋಡನಲ್ಲಿ ಭೀಮಾಬಾಯಿಯವರ ಅನಾರೋಗ್ಯ ತುಂಬಾನೇ ಬಿಗಡಾಯಿಸಿದ್ದು, ಆ ಮಹಾತಾಯಿಗೆ ಒಂದೆಡೆ ಜಾತಿವಾದಿಗಳ ದೌರ್ಜನ್ಯ, ದಬ್ಬಾಳಿಕೆ ತನ್ನ ಕುಟುಂಬಕ್ಕೆ ಮಾರಕವಾದರೆ ಇನ್ನೊಂದೆಡೆ ತಾನೂ ಸತ್ತರೆ, ನನ್ನ ಇಬ್ಬರೂ ಹೆಣ್ಣುಮಕ್ಕಳ ಗತಿ ಏನೂ..? ಎಂಬುದು!. ಹೀಗಾಗಿ ಈಗ ಹಿರಿಯ ಮಗಳಾದ ಮಂಜುಳಾಗೆ ಮದುವೆ ಮಾಡಬೇಕೆಂದು ಅಳಿಯ ಗಂಗಕ್ಕನ ಗಂಡನಿಗೆ ಹೇಳಿ ಕಳುಹಿಸಿದ್ದು, ಅದರಂತೆ ಅಳಿಯ ವರ ನೋಡಿಕೊಂಡು ಬರುತ್ತಾನೆ. ಆದರೆ ಮಂಜುಳಾ ತಾನೂ ಇನ್ನೂ ಓದಬೇಕೆಂದು ಹಂಬಲ ವ್ಯೆಕ್ತ ಪಡಿಸುತ್ತಾಳೆ, ಜೊತೆಗೆ ರಾಮಜೀ ಸಕ್ಪಾಲ್ರು ಕೂಡ ಹೆಣ್ಣುಮಕ್ಕಳು ಓದಲಿ ಎಂಬುದು ಅವರ ಮಹದಾಸೆ ಕೂಡ. ಹೀಗಾಗಿ ಭೀಮರಾವ ಕೂಡ ಮಂಜುಳಕ್ಕಾ ಓದಲಿ,ಈಗಲೇ ಮದುವೆ ಬೇಡ, ಅಪ್ಪನು ಇದಕ್ಕೆ ಸಪೋರ್ಟ್ ಮಾಡಲಿ, ಹೇಗಾದ್ರು ಮಾಡಿ ಅಮ್ಮನನ್ನು ಒಪ್ಪಿಸಬೇಕು, ಆದರೆ ಅದೇಗೆ ಎಂದು ಯೋಚನೆ ಮಾಡುವಲ್ಲಿಗೆ ಎಪಿಸೋಡ್ ನಿಂತಿತ್ತು.

ಇವತ್ತು 35ನೇ ಸಂಚಿಕೆಯಲ್ಲಿ ಮಂಜುಳಾ ಮದುವೆಯ ವಿಚಾರವಾಗಿ, ಭೀಮಾಬಾಯಿಯವರು ತುಂಬಾ ಆಳವಾದ ಚಿಂತೆಯಲ್ಲಿ ಮುಳುಗಿ ಹೋಗಿದ್ದಾರೆ. ಮತ್ತೂ ತಾನೂ ತುಳಸಿ ಮದುವೆ ನಡೆಯೋತನಕ ಬದುಕಿರೋದಿಲ್ಲ, ಕಡೆ ಪಕ್ಷ ಮಂಜುಳಾ ಮದುವೆಯನ್ನಾದರೂ ಮಾಡಿ ಕಣ್ಣುತುಂಬಿಕೊಳ್ಳಲು ಅವಕಾಶ ಮಾಡಿ ಕೊಡಿ ಎಂದು ರಾಮಜೀಯವರಲ್ಲಿ ಕಣ್ಣೀರು ತೋಡಿಕೊಳ್ಳುತಿದ್ದಾರೆ. ಪದೇ ಪದೇ ಸಾಯೋ ಮಾತು ಆಡಬೇಡ ಎಂದು ಕೇಳಿಕೊಳ್ಳುವ ಪತಿಗೆ, ಭೀಮಾಬಾಯಿಯವರು, ನೇರವಾಗಿ ಹೇಳುತ್ತಿದ್ದಾರೆ ನನಗೆ ತಲೆ ನೋವು ಅಷ್ಟೊಂದು ಮಿತಿ ಮೀರಿದೆ. ಸುಮ್ಮನೆ ಸಾಯೋ ಮಾತು ನಾನೇಕೆ ಹೇಳಲಿ ಎಂಬುದು ಅವರ ಸಂಕಟವಾಗಿದೆ. ನಾನೂ ನಿಮ್ಮನ್ನು ನಿಮ್ಮ ಮಕ್ಕಳನ್ನು ಈ ಸುಂದರ ಸಂಸಾರವನ್ನು ಬಿಟ್ಟು ಹೋಗಲಾರೆ, ಅಂದ್ರೇ ಸಾಯಲಾರೆ ಎಂಬುದು ಈ ಮಹಾತಾಯಿಯ ಆಸೆ. ಅದನ್ನೂ ಅವರು ಪತಿ ಬಳಿ ಹೇಳಿಕೊಂಡು ದುಃಖ್ಖ ಪಡುತ್ತಾರೆ. ರಾಮಜೀ ಯವರು ಸಮಾಧಾನ ಮಾಡುತ್ತಾರೆ.

ದಂಪತಿಗಳು ಈ ದುಃಖದ ಪ್ರಸಂಗದಲ್ಲಿ ಇರುವಾಗ, ಶಾಲೆಯಿಂದ ಆನಂದ ಅಪ್ಪ ಅಮ್ಮನನ್ನು ಕೂಗುತ್ತಾ ಬರುತ್ತಾನೆ. ಮತ್ತೂ ಭೀಮ ಈ ಪತ್ರ ಬರೆದಿಟ್ಟು ಎಲ್ಲೋ ಹೋಗಿದ್ದಾನೆ ಎಂದು ಹೇಳುತ್ತಾನೆ.ಆಗ ಭೀಮಾಬಾಯಿಯವರು ಗಾಬರಿಯಾಗುತ್ತಾರೆ. ಮತ್ತೂ ರಾಮಜೀಯವರು ಭೀಮ ಬರೆದ ಪತ್ರವನ್ನು ಓಡುತ್ತಾರೆ, “ಮನೆಯವರೆಲ್ಲರೂ ಎದುರಾದರೂ ಮಂಜುಳಕ್ಕನ ಮದುವೆಯನ್ನು ಮಾಡಿಯೇ ಮಾಡುತ್ತೇನೆಂದು ಅಮ್ಮ ಹೇಳುತ್ತಿದ್ದರು. ನಾನು ಈ ಮದುವೆಗೆ ವಿರೋದ ವ್ಯೆಕ್ತಪಡಿಸುತ್ತಿದ್ದೇನೆ. ಅದೆಷ್ಟೇ ಕಷ್ಟವಾದರೂ ಸರಿ ನಾನು ಇದರಲ್ಲಿ ಪಾಲ್ಗೊಳ್ಳುವುದಿಲ್ಲ. ನನ್ನ ಶಿಕ್ಷಣ, ಮಂಜುಳಕ್ಕನ ಮೇಲಿರುವ ಪ್ರೀತಿ ತಪ್ಪಿನ ವಿರುದ್ಧ ಧ್ವನಿ ಎತ್ತಬೇಕು ಅಂತಾ ಅಪ್ಪಾನೇ ಹೇಳಿಕೊಟ್ಟಿದ್ದಾರೆ ಈಗ ಎಲ್ಲ ತಪ್ಪಾಗಿಬಿಡುತ್ತದೆ”. ಇಷ್ಟು ಓದಿ ರಾಮಜೀಯವರು ಎಲ್ಲರ ಮುಖ ನೋಡುತ್ತಾರೆ. ಮತ್ತೂ “ಭೀಮಾ, ಭೀಮಾ,” ಎಂದು ಕೂಗುತ್ತಾ ಎಲ್ಲರೂ ಓಡಿ ಹೋಗುತ್ತಾರೆ. ಆದ್ರೆ ಮಂಜುಳಾ ಮಾತ್ರ ತುಂಬಾ ಬೇಸರದಿಂದ ಅಲ್ಲಿಯೇ ಗೋಡೆಗೆ ಒರಗಿಕೊಂಡು “ನನ್ನ ಪ್ರೀತಿ ಮಾಡ್ತೀನಿ ಅಂತೇಳ್ತಾನೆ. ಆದ್ರೆ ಈಗ ಈ ಪ್ರೀತಿಯ ಅಕ್ಕಳನ್ನೇ ಬಿಟ್ಟು ಹೋಗಿದ್ದಾನೆ, ಯಾವಾಗ್ಲೂ ಮನಸ್ಸಿಗೆ ಬಂದದ್ದನ್ನೇ ಮಾಡ್ತಾನೆ..” ಹೀಗೆಂದು ಕಣ್ಣೀರು ಹಾಕುತ್ತಾಳೆ ಮಂಜುಳಾ.

ಇಲ್ಲಿ ಗಂಗಕ್ಕನ ಗಂಡ ಮಂಜುಳಾಗೆ ವರವನ್ನು ಹುಡುಕಿದ್ದು, ವರನ ತಂದೆ ತಾಯಿಯ ಹತ್ತಿರ ಈಗ ಮಾತಾಡುತ್ತಿದ್ದಾರೆ. “ನಾನೂ ಹುಡುಗಿ ತಂದೆ ತಾಯಿಯನ್ನು ಒಪ್ಪಿಸಿದ್ದೇನೆ. ಅವರು ಒಪ್ಪಿದ್ದಾರೆ” ಎಂದು ಹೇಳುತ್ತಾನೆ. ಆಗ ವರನ ತಂದೆ “ಇದರ ಜೊತೆಜೊತೆಗೆ ಕೊಡುವುದು ತಗೊಳ್ಳುವುದರ ಬಗ್ಗೆನೂ ಮಾತಾಡಬೇಕಲ್ಲ, ಆಮೇಲೆ ಹೆಚ್ಚು ಕಮ್ಮಿ ಆಗಬಾರದು” ಎಂದು ಎಚ್ಚರಿಕೆ ಕೊಡುವಂತೆ ಹೇಳುತ್ತಾನೆ.ಇದೆ ಸಮಯಕ್ಕೆ ಆತನ ಹೆಂಡತಿ “ಕೊಡುವುದರಲ್ಲಿ ಹೆಚ್ಚು ಕಡಿಮೆಯಾದರೆ ನಾವು ಆಮೇಲೆ ಸುಮ್ಮನೆ ಇರೋದಿಲ್ಲ” ಹೀಗೆ ಇನ್ನೂ ಜಾಸ್ತಿನೇ ಎಚ್ಚರಿಕೆ ಕೊಡುತ್ತಾಳೆ. ಬಹುಷಃ ಯಾವಾಗಲೂ ಈ ವರದಕ್ಷಿಣೆ ಎಂಬ ಭೂತ ನಮ್ಮ ಬಡ ಪೂರ್ವಜರನ್ನು ಕಾಡದೆ ಬಿಟ್ಟಿಲ್ಲ ಎಂದು ಕಾಣುತ್ತದೆ. ಆಕೆ ಹಾಗೆ ಹೇಳಿದ ತಕ್ಷಣ ಗಂಡ ಅವಳ ಹತ್ತಿರ ಹೋಗಿ “ಯಜಮಾನ ನಾನೂ ಎಲ್ಲ ಮಾತಾಡುವಾಗ, ನೀನೇಕೆ ಸುಮ್ಮನೆ ಬಾಯಿ ಹಾಕುತ್ತಿಯ” ಎನುತ್ತಾನೆ. ಬಹುಷಃ ಇದು ಗಂಡಿನ ಪರಮಾಧಿಕಾರ ತೋರಿಸುವಂತದ್ದಿರಬೇಕು ಎಂಬುದಾಗಿ ವೀಕ್ಷಕ ಹೆಣ್ಣುಮಕ್ಕಳು ಮಾತನಾಡುವುದು ಕಂಡು ಬಂತು. ಇಲ್ಲಿ ತುಂಬಾ ನಾಜೂಕಾಗಿ ಅಳಿಯ “ಅದರಲ್ಲೇನಿದೆ ಅಲ್ಲೆರಡು ಪಾತ್ರೆಗಳು ಮತ್ತೂ ಇಲ್ಲೆರಡು ಪಾತ್ರೆಗಳು ಇಷ್ಟು ಸಾಕಲ್ಲವೇ ಇನ್ನೇನೂ” ಹೀಗೆ ಕೇಳಿದಾಗ, ಆ ವರನ ತಂದೆ “ಅಲ್ಲೆರಡು ಇಲ್ಲೆರಡು ಈ ಪಾತ್ರೆಗಳು ಈ ಲೆಕ್ಕವೆಲ್ಲ ಬೇಡ, ಏನಿದ್ದರೂ ನಾವು ಕೇಳಿದ್ದು ನಮ್ಮ ಮನೆಯಲ್ಲಿ ಬಂದು ಬೀಳಬೇಕು ಅಷ್ಟೇ. ಇಲ್ಲದಿದ್ದರೆ ಮದುವೆ ಮಂಟಪದಿಂದ ಹೊರಗೆ ಬರುತ್ತೇವೆ”. ಎನ್ನುತ್ತಾನೆ, ಆಗ ರಾಮಜೀ ಸಕ್ಪಾಲರ ಅಳಿಯ “ಆಯಿತು ನೀವೂ ಏನೂ ಕೇಳಿದ್ರೂ ಅದನ್ನೂ ನಾನೂ ಕೊಡಿಸುತ್ತೇನೆ” ಎಂದು ಹೇಳಿದಾಗ ಆ ವರನ ತಂದೆ “ಹಾಗಾದ್ರೆ ನಾಳೆನೆ ನಿಶ್ಚಿತಾರ್ಥ ಇಟ್ಟುಕೊಂಡು ಬಿಡೋಣ” ಎನ್ನುತ್ತಾನೆ. ಆಯಿತು ಎಂದು ಪದ್ಧತಿಯಂತೆ ನಮಸ್ಕರಿಸಿ ಅಳಿಯ ಹೊರಡುತ್ತಾರೆ. ಇಲ್ಲಿ ಮೊದಲ ಮಗನ ಹೆಂಡತಿ ಅತ್ತೆ ಮಾವನಿಗೆ “ಮದುವೆಯ ಬಗ್ಗೆ ನಿಮ್ಮ ಎರಡನೇ ಮಗನನ್ನು ಒಂದು ಮಾತು ಕೇಳಿದ್ದರೆ ಚನ್ನಾಗಿತ್ತು ಎಂದು ಹೇಳಿದಾಗ ಇಬ್ಬರೂ ಒಕ್ಕೊರಲಿನಿಂದ ಅದೆಲ್ಲ ಸಾಧ್ಯವಿಲ್ಲ ನಾವು ಹೇಳಿದಂತೆ ಅವನು ಕೇಳುತ್ತಾನೆ ಅಷ್ಟೇ. ಎಂದು ಗದರುತ್ತಾರೆ. ಮತ್ತೂ ಮೊದಲನೇ ಮಗನಿಗೆ ನಿನ್ನಿಂದ ಏನೂ ಸಿಗಲಿಲ್ಲ ಎಂದು ಚುಚ್ಚು ಮಾತನಾಡುತ್ತಾರೆ.

ಈಗ ವರ್ತಕ ಶೇಡಜಿ ಮನೆಗೆ ಪುರಂಜನ ಬಂದು “ಆಚಾರ್ಯರೇ, ಆಚಾರ್ಯರೇ ಹೊರಗೆ ಬನ್ನಿ, ನಿಮ್ಮ ಮಗ ದ್ರುವನನ್ನು ಯಾವಾಗ ಶುದ್ದೀಕರಣ ಮಾಡೋದು…? ಇಲ್ಲದಿದ್ದರೆ ನಿಮ್ಮ ಮಗನ ಶುದ್ದೀಕರಣದ ವಿಷಯ ಈ ಹಳ್ಳಿಯವರು ಮರೆತು ಬಿಡುತ್ತಾರೆ ಅಂದ್ಕೊಂಡಿದ್ದೀರಾ..? ಹೀಗೆ ಕೇಳುತ್ತಾರನೆ. ಈಗ ಮನೆಯಿಂದ ಹೊರಗೆ ಬಂದ ಆಚಾರ್ಯ “ಪುರಂಜನ ನೀನು ಅಂದುಕೊಂಡಂತೆ ನಾನೂ ನಿಮ್ಮ ಜಾತಿಯಲ್ಲಿ ಸೇರಿಕೊಳ್ಳಲಾರೆ, ನನ್ನ ಮಗನನ್ನು ಹೊಡೆದು ಬಡೆದು ಇಡೀ ಊರವರ ಮುಂದೆ ಶುದ್ದೀಕರಣ ಮಾಡುತ್ತೇನೆ. ಎಂದು ಹೇಳುತ್ತಾನೆ. ಆಗ ಪುರಂಜನ “ಬಹಿಸ್ಕಾರದ ಘನಘೋರ ಹಿಂಸೆಯ ಬಗ್ಗೆ ನಿಮಗೆ ಮನವರಿಕೆ ಮಾಡಲು ಬಂದಿದ್ದೇನೆ. ಅದೆಷ್ಟು ಜನರೂ ನಿಮ್ಮಂತವರಿಂದ ಬಹಿಸ್ಕಾರದ ಶಿಕ್ಷೆಗೆ ಒಳಗಾಗಿ, ನರಕಯಾತನೆ ಅನುಭವಿಸಿದ್ದಾರೆ. ಹಾಗಾಗಿ ಈಗ ನಿಮಗೆ ಬಹಿಸ್ಕಾರದ ಬಿಸಿ ತಟ್ಟುತ್ತಿದೆ. ಮತ್ತೂ ನೀವೂ ನಿಮ್ಮ ಮಗನಿಗೆ ಶುದ್ದಿಕರಣದ ಮೊರೆ ಹೋಗಲು ಕಾರಣ, ನಿಮಗೆ ಬಹಿಷ್ಕಾರದ ಭಯ ಇದೆ. ಆದ್ರೆ ನೀವೂ ನಿಮ್ಮ ಮಗನ ಬಗ್ಗೆ ಚಿಂತೆ ಮಾಡುವದು ತಪ್ಪಲ್ಲ. ಅದರಂತೆ ರಾಮಜೀ ಕೂಡ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ. ಅದೂ ನಿಮಗೇಕೆ ಅರ್ಥ ಆಗೋದಿಲ್ಲ”. ಹೀಗೆ ಪುರಂಜನರವರು ಮಾರ್ಮಿಕವಾಗಿ ಚಿಂತಿಸುತ್ತಾರೆ. ಆಗ ವರ್ತಕ ಶೇಡಜಿ “ನಮ್ಮಂತವರನ್ನು ಬಹಿಷ್ಕಾರ ಹಾಕೋಕೆ ಸುತ್ತ ಹತ್ತು ಹಳ್ಳಿಯವರಿಂದನೂ ಸಾಧ್ಯವಿಲ್ಲ ಎನ್ನುತ್ತಾನೆ.

ಹೌದು ಆ ಶೇಡಜಿ ಮಾತು ಕೂಡ ನಿಜ ಬಿಡಿ ಏಕೆಂದರೆ ಈ ಬಹಿಷ್ಕಾರ,ಹಲ್ಲೆ, ದೌರ್ಜನ್ಯ ಇವೆಲ್ಲವೂ ಕೂಡ ಮೇಲ್ಜಾತಿ, ಶ್ರೀಮಂತರಿಗೆ ಅಲ್ಲ, ಅದೇನಿದ್ದರೂ, ಕೆಳಜಾತಿ, ಬಡವರೂ ಮಹಿಳೆಯರಿಗೆ ಮಾತ್ರ ಅಲ್ಲವೇ..??? !!!! ನೋಡಿ ನಮ್ಮ ದೇಶದ ಎಂತಾ ದುರಂತವಿದು.

ಇದೆ ಸಮಯಕ್ಕೆ ಅಲ್ಲಿಗೆ ಭೀಮನ ಹುಡುಕಿಕೊಂಡು ರಾಮಜೀಯವರು ಬರುತ್ತಾರೆ. ವರ್ತಕನಿಗೆ ನನ್ನ ಮಗನ ನೋಡಿದ್ದೀರಾ ಎಂದು ಕೇಳುತ್ತಾರೆ, ಪುರಂಜನ “ನೀನೇಕೆ ಇಲ್ಲಿ..? ಎಂದು ಪ್ರಶ್ನಿಸುತ್ತಾರೆ. ಆಗ ರಾಮಜೀ ಯವರು ನಡೆದ ವಿಷಯ ಹೇಳಿ ದೃವನ ಜೊತೆಗೆ ಭೀಮ ಇರಬಹುದೇನೋ ಎಂದು ಕೇಳೋಕೆ ಬಂದೇ ಎಂದು ಶೇಡಜಿ ಮುಖ ನೋಡುತ್ತಾರೆ. ಆಗ ಶೇಡಜಿ ಕೋಪದಿಂದ ” ಭೀಮ ನನ್ನ ಮಗನ ಜೊತೆಗೆ ಬಂದಿದ್ದರೇ ಕೈಕಾಲು ಮುರಿದು ಹಾಕುತ್ತಿದ್ದೆ ಎನ್ನುತ್ತಾನೆ. ಈಗ ರಾಮಜೀಯವರು ಪುರಂಜನಿಗೆ ಭೀಮನ ಬಗ್ಗೆ ಕೇಳಿ ಹೊರಡಲನುವಾದಾಗ, ರಾಮಜೀ ಎಂದು ಶೇಡಜಿ ಕೂಗುತ್ತಾ “ರಾಮಜೀ ನಿಮ್ಮ ಮನೆಯಲ್ಲಿ ಎಲ್ಲರೂ ಓಡಿ ಹೋಗುತ್ತಿದ್ದಾರೆ. ಬಲರಾಮ್, ಭೀಮ ಹೀಗೆ, ಹುಷಾರು ಮುಂದೊಂದು ದಿವಸ ನಿನ್ನ ಮಗಳು ಓಡಿ ಹೋಗಬಹುದು.?”, ಹೀಗೆ ಗೇಲಿ ಮಾಡುತ್ತಾನೆ. ಮತ್ತೂ ಕಾಂದಾನದ ಘನತೆ ಕುಗ್ಗುತ್ತಿದ್ದರೆ ಅವರ ಮಕ್ಕಳು ಕಾಲ್ಕಿಳುತ್ತಾರೆ ಎಂಬ ಗಾದೆ ಮಾತು ಹೇಳುತ್ತಾನೆ. ಈಗ ರಾಮಜೀಯವರು “ಆಚಾರಿಗಳೇ ನಮ್ಮಪ್ಪ ಸೇನೆಯಲ್ಲಿ ದೊಡ್ಡ ಅಧಿಕಾರಿಗಳಾಗಿದ್ದರು. ನಮ್ಮ ಮಾವ ಕೂಡ. ಮತ್ತೆ ನಾನೂ ಕೂಡ ಸುಭೇದಾರ ಆಗಿದ್ದವನು. ಇನ್ನೂ ನನ್ನ ಮಗ ಭೀಮನ ಬುದ್ದಿ ಸಾಮರ್ಥ್ಯ ಈಗಾಗಲೇ ಅನೇಕ ಸಲ ಈ ಊರಿನವರಿಗೆ ಗೊತ್ತಾಗಿ ಹೋಗಿದೆ. ಇದಿಷ್ಟು ನನ್ನ ಕುಟುಂಬ. ಆದ್ರೆ ನಿಮ್ಮ ಕುಟುಂಬದ ಬಗ್ಗೆ ನೀವೇ ಯೋಚಿಸಿ ಈಗ..? ಇಷ್ಟು ಹೇಳಿದಾಗ ಶೇಡಜಿ ಮುಖ ಕಪ್ಪಿಡುತ್ತದೆ. ಮತ್ತೂ ರಾಮಜೀಯವರು ಸ್ವಾಭಿಮಾನದಿಂದ ಅಲ್ಲಿಂದ ಹೊರಟು ಹೋಗುತ್ತಾರೆ. ಪುರಂಜನ ಕೂಡ ಶೇಡಜಿಗೆ “ನಿಮ್ಮ ಕುಟುಂಬ ರಾಮಜೀ ಕುಟುಂಬಕ್ಕಿಂತ ಎಷ್ಟು ಕೆಳಗೆ ತೂಗುತ್ತಿದೆ ಎಂದು ಲೆಕ್ಕಾ ಹಾಕೊಳ್ಳಿ”. ಎಂದು ಹೇಳಿ ಹೋಗುತ್ತಾರೆ.

ಭೀಮಾಬಾಯಿ ಹಾಗೂ ಎಲ್ಲರೂ ಭೀಮನಿಗಾಗಿ ಹುಡುಕಿ ಹುಡುಕಿ ಸಿಗದೇ ಕಾಯುತ್ತಿದ್ದಾರೆ, ಅಲ್ಲಿಗೆ ರಾಮಜೀಯವರು ಕೂಡ ಬರುತ್ತಾರೆ. ರಾಮಜೀಯವರೊಬ್ಬರೇ ಬರುತ್ತಿರುವುದನ್ನು ಕಂಡು ಭೀಮಾಬಾಯಿಯವರು “ನನಗೆ ಭೀಮ ಬೇಕು”, ಎಂದು ಅಳುತ್ತ ರೈಲು ನಿಲ್ದಾಣ ಹಾಗೂ ಎಲ್ಲ ಕಡೆ ಹುಡುಕಲು ಹೋರಡಲುನುವಾದಾಗ, ರಾಮಜೀಯವರು ತಡೆಯುತ್ತಾರೆ. ಮತ್ತೂ ಈಗ ಭೀಮಾಬಾಯಿ “ನಾನೂ ಭೀಮನ ತಾಯಿ ಮಗನನ್ನು ಕಳೆದುಕೊಂಡು ಅದೇಗೆ ಸುಮ್ಮನೆ ಇರಲಿ” ಎಂದು ಗೋಳಾಡುತ್ತಾರೆ. ತಲೆ ಚಚ್ಚಿ ಕೊಳ್ಳುತ್ತಾರೆ. ಆಗ ರಾಮಜೀಯವರು ಸಮಾದಾನ ಮಾಡುತ್ತ, “ಭೀಮರಾವ ತುಂಬಾ ಸೂಕ್ಷ್ಮ ಸ್ವಭಾವದವನು. ಅವನಿಗೆ ಈಗಲೇ ಮಂಜುಳಾಳ ಮದುವೆ ಮಾಡೋದು ಇಷ್ಟವಿರಲಿಲ್ಲ. ಆದ್ರೆ ನೀನು ಅವನಿಗೆ ಬೈದು ಬಿಟ್ಟೆ. ತಾಯಿಯಾದ ಮಾತ್ರಕ್ಕೆ ಹೀಗೆ ಮಾಡಬಹುದೇ “.ಎಂದು ಪ್ರಶ್ನೆ ಮಾಡುತ್ತಾರೆ. ಇದೆ ಸಮಯಕ್ಕೆ ಅಳಿಮಯ್ಯ ಅಲ್ಲಿಗೆ ಬರುತ್ತಾರೆ. ನಾನೂ ಮದುವೆ ಮಾತುಕತೆ ಮುಗಿಸಿಕೊಂಡು ಬಂದಿದ್ದೀನಿ. ನಾಳೇನೇ ನಿಶ್ಚಿತಾರ್ಥ ಇಟ್ಟುಕೊಳ್ಳೋಣ ಅದಕ್ಕೆ ಹೇಳೋಣವೆಂದು ಬಂದೆ ಎನ್ನುತ್ತಾರೆ. ಆಗ ಎಲ್ಲರೂ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳುತ್ತಾರೆ. ರಾಮಜೀಯವರು ಈಗ ಮದುವೆ ಬೇಡ, ಮುಂದೆ ನೋಡೋಣ ಎನ್ನುತ್ತಾರೆ. ಯಾಕೆ ಏನಾಯಿತು ಎಂದು ಅಳಿಮಯ್ಯ ಕೇಳಿದಾಗ, ಭೀಮನ ವಿಷಯ ಹೇಳಿ ಮದುವೆ ಬೇಡ ಎನ್ನುತ್ತಾರೆ. ಆಗ ಭೀಮಾಬಾಯಿಯವರು, “ಮದುವೆ ನಿಲ್ಲಿಸೋದು ಬೇಡ ನಾಳೆ ನಿಶ್ಚಿತಾರ್ಥ ಇಟ್ಟುಕೊಳ್ಳೋಣ” ಎಂದು ಹೇಳುತ್ತಾರೆ ಇದರಿಂದ ರಾಮಜೀ ಯವರು ಕೋಪದಿಂದ “ನಮಗೆ ನಮ್ಮ ಮಗ ಸಿಗದ ಚಿಂತೆಯಲ್ಲಿ ಇದ್ದೇವೆ “, ಎಂದು ಹೇಳಿದಾಗ ತಕ್ಷಣ ಭೀಮಾಬಾಯಿಯವರು “ನಮ್ಮ ಮಂಜುಳಾ ಕೂಡ ನಮ್ಮ ಮಗಳೇ” ಎನ್ನುತ್ತಾರೆ. “ಭೀಮ ಮನೆ ಬಿಟ್ಟು ಹೋದರೆ ನಾನೂ ಮದುವೇ ನಿಲ್ಲಿಸೋಲ್ಲ. ಪ್ರತಿಸಲ ನೀನೇ ಗೆಲ್ಲಬೇಕಾ ನಾನೂ ಕೂಡ ನಿನ್ನ ತಾಯಿ ನಾನೂ ಹಠವಾದಿಯೇ ಹಾಗಾಗಿ ನಾನೂ ಸೋಲುವುದಿಲ್ಲ. ನನ್ನ ಬಿಟ್ಟು ಅದೇಗೆ, ಎಲ್ಲಿಗೆ ಹೋಗ್ತಿಯ”. ಎಂದು ಮತ್ತೇ ಭೀಮನನ್ನು ಹುಡುಕ್ಕೊಂಡು ಮುಂದೆ ಹೋಗುತ್ತಾರೆ. ಈಗ ಎಲ್ಲರೂ ಅವರನ್ನೇ ಹಿಂಬಾಲಿಸುತ್ತಾರೆ.

ಇಲ್ಲಿ ನಾವು ಭೀಮರಾವ ಅವರ ಮನೆತನದ ಸ್ಥಿತಿಗತಿ ತಿಳಿಯಲೇಬೇಕು. ಎಲ್ಲರೂ ನ್ಯಾಯಕ್ಕಾಗಿಯೇ ಹೋರಾಡುತ್ತಿದ್ದಾರೆ. ಭೀಮಾಬಾಯಿಯವರು ತಮ್ಮ ಅನಾರೋಗ್ಯದ ಬಾದೆಯಿಂದಾಗಿ ಸಾಯೋದ್ರೊಳಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಿ ತನ್ನ ತಾಯ್ತನದ ಜವಾಬ್ದಾರಿ ತೀರಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಾರೆ. ಇತ್ತ ರಾಮಜೀ ಸಕ್ಪಾಲರು, ಮಂಜುಳಾಳ ಶಿಕ್ಷಣ, ಭೀಮಾಬಾಯಿಯ ಅರೋಗ್ಯ ಹಾಗೂ ಭೀಮನ ವಿಚಾರಧಾರೆಗಳ ಪೋಷಣೆಗಳ ಚಿಂತೆ. ಇನ್ನೂ ಭೀಮರಾವ್ ಅಮ್ಮನ ಕಾಯಿಲೆ, ಜೊತೆಗೆ ಅಪ್ಪನ ವಿಚಾರಗಳ ಪಾಲನೆ ಹಾಗೂ ಮಂಜುಳಾಳ ಶಿಕ್ಷಣ ಇನ್ನಿತರ ಚಿಂತೆ. ಹೀಗೆ ಎಲ್ಲರೂ ನ್ಯಾಯದ ಮಾರ್ಗದಲ್ಲಿನ ಹೋರಾಟದ ಸಂಘರ್ಷಗಳು.

ಇತ್ತ ಅಳಿಮಯ್ಯ ನೋಡಿದ ವರನ ಅಪ್ಪ ಅಮ್ಮ ಮನೆಯಲ್ಲಿ ಇದ್ದಾರೆ, ಅಪ್ಪ ಊಟ ಮಾಡಿ ಮುಗಿಸಿದ್ದನು ಅದೇ ಸಮಯಕ್ಕೆ ಇಬ್ಬರೂ ಗಂಡು ಮಕ್ಕಳು ಮನೆಗೆ ಬರುತ್ತಾರೆ. ಮಕ್ಕಳಲ್ಲಿ ತುಂಬಾ ವಿನಯವಂತಿಕೆ ಒಬ್ಬ ಮಗ “ಅಪ್ಪ ನಾಲ್ಕು ಜೊತೆ ಚಪ್ಪಲಿ ವ್ಯಾಪಾರ ಆಯಿತು. ಇನ್ನೊಬ್ಬ ಎರಡು ಜೊತೆ ಹಳೆಯ ಚಪ್ಪಲಿ ಮಾರಿದ್ದೇನೆ ” ಹೀಗೆ ತಮ್ಮ ಚಪ್ಪಲಿ ವ್ಯಾಪಾರ ಹೇಳಿದಾಗ ಅಪ್ಪ ದರ್ಪದಿಂದ ಇನ್ನೂ ಚನ್ನಾಗಿ ವ್ಯಾಪಾರ ಮಾಡಬೇಕು ಎಂದು ಹೇಳಿ ಚಿಕ್ಕ ಮಗನಿಗೆ ನಾಳೆ ನಿನ್ನ ನಿಶ್ಚಿತಾರ್ಥ ಸ್ವಲ್ಪ ಬೇಗ ಬಾ ಎಂದು ಹೇಳುತ್ತಾನೆ. ಮದುವೆ ಎಂದರೆ ಯಾವ ಹುಡುಗರಿಗೆ ಖುಷಿ ಇಲ್ಲ ಹೇಳಿ ಈ ಚಿಕ್ಕ ಮಗನು ಖುಷಿಯಾಗಿ ಆಯಿತು ಅಪ್ಪ ಎಂದು ಹೇಳುತ್ತಾನೆ. ಒಟ್ಟಿನಲ್ಲಿ ಈ ಅಪ್ಪ ತುಂಬಾ ಕಟ್ಟುನಿಟ್ಟು ಮತ್ತೂ ಹಣದ ಆಸೆ ಕೂಡ ಎಂದು ತಿಳಿದು ಬರುತ್ತದೆ.

ಇಲ್ಲಿ ರಾತ್ರಿ ಮನೆಯಲ್ಲಿ ಎಲ್ಲರೂ ಭೀಮನ ಬಗ್ಗೆ ಚಿಂತಿಸುತ್ತ ಕುಳಿತ್ತಿದ್ದಾರೆ. ರಾಮಜೀಯವರು “ನನ್ನ ಮಗ ಎಲ್ಲೆ ಇದ್ದರೂ ಕ್ಷೇಮವಾಗಿಯೇ ಇರುತ್ತಾನೆ. ಅವನಿಗೆ ಆ ಬುದ್ದಿ ಇದೆ ಎಂದು ಧೈರ್ಯ ತಂದುಕೊಳ್ಳುತ್ತಾರೆ. ಮತ್ತೂ ಎಲ್ಲರಿಗೂ ಚಿಂತೆ ಮಾಡಬೇಡಿ ಈಗ ಎಲ್ಲರೂ ಮಲಗಿಕೊಳ್ಳಿ. ಎಂದು ಹೇಳುತ್ತಾರೆ. ಮತ್ತೂ ಭೀಮಾಬಾಯಿಯವರು ಮಂಜುಳಾಗೆ ನಿದ್ದೆ ಮಾಡು ಇಲ್ಲವಾದ್ರೆ ಕಣ್ಣು ಊದಿಕೊಂಡು ಬಿಡುತ್ತೆ, ನಾಳೆ ಕಷ್ಟ ಆಗಬಾರದು ಎಂದು ಹೇಳಿ ಎಲ್ಲರಿಗೂ ಕಳಿಸಿ ತಾವೂ ಅಲ್ಲಿಯೇ ಕುಳಿತುಕೊಳ್ಳುತ್ತಾರೆ. ರಾಮಜೀಯವರು ಕರೆದರೂ ಆಮೇಲೆ ಬರುತ್ತೇನೆ ಎಂದು ಹೇಳಿ ತಾವೂ ಗೋಡೆಗೆ ಬೆನ್ನು ತಾಗಿಸಿ ಹಾಗೆಯೇ ಚಿಂತೆಯಲ್ಲಿ ಮುಳುಗಿ ಹೋಗಿದ್ದಾರೆ. ಹಾಗೂ ಹಿಂದೆ ಭೀಮ ಸವಾಲ ತೆಗೆದುಕೊಂಡು, ತೋರಿದ ಸಾಧನೆಗಳ ಬಗ್ಗೆ ನೆನಪಿಸಿಕೊಂಡು, ಈಗ ಆತ ಬರೆದ ಪತ್ರದ ಸಾಲುಗಳನ್ನೊಮ್ಮೆ ನೆನಪಿಸಿಕೊಂಡು “ಭೀಮ ನಿನಗೆ ಜಗತ್ತಿನ ಯಾವ ಶಾಲೆಗಳು ಕೂಡ ಇಂತಹ ಪಾಠ ಹೇಳಿಕೊಡಲಾರವು. ಸರಿಯಾದ ನಿರ್ಧಾರ ಮತ್ತೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ವಯಸ್ಸು, ಅನುಭವ ಬೇಕು. ಒಂದೇ ಸಲ ಜವಾಬ್ದಾರಿ ಹೊತ್ತು ಕುಗ್ಗಿ ಹೋಗಿರೋರಿಗೆ ಇದು ಬೇಗ ಅರ್ಥವಾಗುತ್ತದೆ ಕಣೋ ಮಗನೇ, ಇವತ್ತು ನೀನು ಸರಿ ಇರಬಹುದು ಆದ್ರೆ ಸೂಕ್ತ ನಿರ್ಧಾರ ನಾನೂ ತೆಗೆದುಕೊಂಡಿದೀನಿ ಒಂದಲ್ಲ ಒಂದು ದಿವಸ ನಿನಗೆ ಅರ್ಥ ಆಗುತ್ತೆ. ನಾನೂ ಬದುಕಿದ್ದಾಗ ಅಕ್ಕಳ ಮದುವೆ ಯಾಕೆ ಮಾಡಿದೆ ಅಂತಾ. ಅರ್ಥ ಮಾಡಿಕೊಂಡು ಬಿಡು, ಇಲ್ಲವಾದ್ರೆ ನಾನೂ ಸತ್ತ ಮೇಲೆ ನೀನು ತುಂಬಾ ದುಃಖ ಪಡ್ತೀಯ, ಬೇಗ ಈಗಲೇ ಅರ್ಥ ಮಾಡಿಕೊಂಡು ಮನೆಗೆ ಬಾ ಮಗನೇ ಎಂದು ದುಃಖದಿಂದ ಭೀಮರಾವನಿಗಾಗಿ ಹಂಬಲಿಸುತ್ತಾರೆ.

ಮರುದಿವಸ ಮನೆಯಲ್ಲಿ ಮಂಜುಳಾಳ ನಿಶ್ಚಿತಾರ್ಥದ ಎಲ್ಲ ಏರ್ಪಾಡು ನಡೆಯುತ್ತಿದೆ ಅತ್ತೆ ಮೀರಾಬಾಯಿ ಆಕೆಗೆ ಎಲ್ಲ ತಯಾರಿ ಮಾಡುತ್ತಿದ್ದಾರೆ. ಮತ್ತೂ ಅಳಿಮಯ್ಯ ಕೂಡ ನಿಶ್ಚಿತಾರ್ಥಕ್ಕೆ ಬೇಕಾಗುವ ಎಲ್ಲ ತಯಾರಿ ಮನೆಯ ಮುಂದೆ ಮಾಡುತ್ತಿದ್ದಾರೆ. ಅತ್ತೆ ಭೀಮಾಬಾಯಿಯವರಿಗೆ ಅಕ್ಕಿ ಕೊಡಿ ಎಂದು ಕೇಳಿದಾಗ ಅವರು ಅಕ್ಕಿ ತರಲು ಮನೆಯೊಳಗೇ ಹೋಗುತ್ತಾರೆ ಮತ್ತೂ ರಾಮಜೀಯವರು ಹಿಂಬಾಲಿಸಿ ” ನಮ್ಮಿಬ್ಬರು ಗಂಡು ಮಕ್ಕಳು ಮನೆ ಬಿಟ್ಟು ಹೋಗಿರುವಾಗ ಮನೆಯಲ್ಲಿ ಹೆಣ್ಣುಮಕ್ಕಳ ಮದುವೆ ಮಾಡೋದು ಎಷ್ಟು ಸರಿ ” ಎಂದು ಕೇಳುತ್ತಾರೆ ಆಗ ಭೀಮಾಬಾಯಿಯವರು “ಅದನ್ನೂ ಗಂಡು ಮಕ್ಕಳು ವಿಚಾರ ಮಾಡಬೇಕಾಗಿತ್ತು ” ಎಂದು ಹೇಳುತ್ತಾರೆ. ಅದೇ ಸಮಯಕ್ಕೆ ನಿಶ್ಚಿತಾರ್ಥದ ತಾಂಬೂಲಕ್ಕೆ ಇಪ್ಪತೈದು ಪೈಸೆ ಬೇಕೆಂದು ಅಳಿಮಯ್ಯ ಕೇಳಿದಾಗ ರಾಮಜೀಯವರ ಹತ್ತಿರ ಅಷ್ಟೂ ದುಡ್ಡು ಇರುವುದಿಲ್ಲ ಆಗ ಇನ್ನುಳಿದ ಪೈಸೆ ಎಂದು ಅಳಿಮಯ್ಯ ಕೇಳಿದಾಗ ಅದನ್ನೂ ನಾನೂ ಕೊಡುತ್ತೇನೆ ಎಂದು ಬಲರಾಮ್ ಬರುತ್ತಾನೆ. ಆಗ ಎಲ್ಲರೂ ಅಚ್ಚರಿ ಮತ್ತೂ ಖುಷಿ ಪಡುತ್ತಾರೆ. ರಾಮಜೀಯವರು “ಈಗ ಏಕೆ ಬಂದೇ..? ಎಂದು ಖಾರವಾಗಿ ಕೇಳಿದಾಗ ಮೀರಾಬಾಯಿ ರಾಮಜೀಯವರಿಗೆ ತಡೆಯುತ್ತಾರೆ. ಮತ್ತೂ ಸಮಾಧಾನ ಮಾಡುತ್ತಾರೆ. ಮತ್ತೂ ಅಳಿಮಯ್ಯ “ಬಹುಷಃ ತಂಗಿ ನಿಶ್ಚಿತಾರ್ಥಕ್ಕೆ ತಾಂಬೂಲ ಹಣ ಕೊಡೋಕೆ ಅಂತಾನೆ ಬಲರಾಮ್ ಬಂದಂತೆ ಕಾಣುತ್ತದೆ ಒಳ್ಳೆಯದೇ ಆಯಿತು ಬಾ” ಎನ್ನುತ್ತಾರೆ. ಮತ್ತೂ ಬಲರಾಮ್ ಕೂಡ “ಮಂಜುಳಾಗೆ ನಾನೂ ಚಿಕ್ಕವನಿದ್ದಾಗ ಹೇಳ್ತಿದ್ದೇನಲ್ಲ ನಿನ್ನ ಮದುವೆ ದಿಬ್ಬಣ ನಾನೇ ಹೊರುತ್ತೇನೆ ಅಂತಾ.., “. ಇಷ್ಟು ಹೇಳಿ “ಭೀಮ ಮತ್ತೂ ತುಳಸಿ ಎಲ್ಲಿ..? “. ಎಂದು ಕೇಳುತ್ತಾನೆ. ಆಗ ಮೀರಾ ಅತ್ತೆ ತುಳಸಿ ಗಂಗಕ್ಕಳ ಮನೆಯಲ್ಲಿ ಇದ್ದಾಳೆ”.ಎನ್ನುತ್ತಾರೆ ಮತ್ತೂ ಭೀಮ ಮನೆ ಬಿಟ್ಟು ಹೋದನೆಂದು ಆನಂದ ಹೇಳಿದಾಗ, ಬಲರಾಮ್ ಕಾರಣ ಕೇಳುತ್ತಾನೆ ಆಗ ಭೀಮಾಬಾಯಿಯವರು ನಡೆದುದನ್ನು ಹೇಳಿ “ಗಂಗಕ್ಕನ ಮದುವೆ ಬೇಡ ಎಂದು ಪತ್ರ ಬರೆದಿಟ್ಟು ಹೋಗಿದ್ದಾನೆ “.ಎಂದು ಹೇಳುತ್ತಾರೆ. ಆಗ ಬಲರಾಮ್ “ಹಾಗಾದ್ರೆ ಭೀಮ ಸರಿಯಾಗಿಯೇ ಯೋಚ್ನೆ ಮಾಡಿಯೇ ಹೇಳಿರುತ್ತಾನೆ. ಮತ್ತೂ ಭೀಮ ಹೇಳಿದ ಮೇಲೆ ನಾನೂ ಕೂಡ ಈ ಮದುವೆ ವಿರೋಧಿಸುತ್ತೇನೆ” ಎನ್ನುತ್ತಾ, ಗಂಗಾಳ ಮದುವೆ ಆಗೋಕೆ ನಾನೂ ಬಿಡೋದಿಲ್ಲ ಎಂದಾಗ ಕೋಪಗೊಂಡ ತಾಯಿ ಕಪಾಳಕ್ಕೆ ಹೊಡೆದು “ಮನೆ ಬಿಟ್ಟು ಹೋದವ ಮತ್ತೇಕೆ ಬಂದೇ ನಮಗೆಲ್ಲ ಬುದ್ದಿ ಹೇಳೋಕಾ..? ನೆನಪಿಟ್ಟುಕೊಳ್ಳಿ, ನೀವೆಷ್ಟೇ ಬುದ್ದಿವಂತರಾದ್ರು ಅಪ್ಪ ಅಮ್ಮ ಇರೋತನಕ ಅವರ ಮಾತೆ ಕೇಳಬೇಕು”. ಎಂದು ಕೋಪ ಹಾಗೂ ತಾಪದಿಂದ ಹೇಳುತ್ತಾರೆ.ಮತ್ತೂ ನಿನಗೆ ಇಷ್ಟವಿಲ್ಲದಿದ್ದರೆ ಮತ್ತೇ ಮನೆ ಬಿಟ್ಟು ಹೋಗು ಎಂದು ಕಡಾ ಖಂಡಿತವಾಗಿ ಹೇಳಿದಾಗ ಆಯಿತು ಅಮ್ಮ ಎಂದು ಪಾಪ ಬಲರಾಮ್ ಹೊರಡುವಾಗ ರಾಮಜೀಯವರು “ಬಾಲಾ ಮನೆಯೊಳಗೇ ನಡೆ”. ಎಂದು ಹೇಳುತ್ತಾರೆ ಮತ್ತೂ ಬಲರಾಮ್ ಒಳಗೆ ನಡೆಯುತ್ತಾನೆ.

ಈಗ ಮದುವೆ ನಿಶ್ಚಿತಾರ್ಥದ ತಯಾರಿ ಮಾಡಲು ತೊಡಗುತ್ತಾರೆ. ಮನೆಯಲ್ಲಿ ಬಲರಾಮ್ ಹಾಗೂ ಆನಂದ ಭೀಮ ಎಲ್ಲಿ ಹೋಗಿರಬಹುದು ಮತ್ತೂ ಮಂಜುಳಾಳ ಮದುವೆ ಹೇಗೆ ನಿಲ್ಲಿಸೋದು ಹೀಗೆಲ್ಲ ಯೋಚಿಸುವಾಗ ಬಲರಾಮನಿಗೆ ಏನೋ ಅರ್ಥವಾಗಿ ಒಂದು ನಿಮಿಷ ನಾನೂ ಹೋಗಿ ಬರ್ತೀನಿ ಎಂದು ಹೊರಡುತ್ತಾನೆ.

ದ್ರುವನನ್ನು ಆತನ ತಂದೆ ಶೇಡಜಿ ಹೆದರಿಸಲು ಮತ್ತೂ ತನ್ನ ಅಂಕಿತದಲ್ಲಿ ಇಟ್ಟುಕೊಳ್ಳಲು ಯೋಚಿಸಿದಾಗ, ದ್ರುವ ನಾನೂ ಯಾರ ಮಾತು ಕೇಳೋದಿಲ್ಲ, ಭೀಮ ನನ್ನ ಗೆಳೆಯ ಅಷ್ಟೇ ಎನ್ನುತ್ತಾನೆ. ಆಗ ಶೇಡಜಿ ನಿನ್ನ ಮನೆ ಬಿಟ್ಟು ಹೊರಗೆ ಹಾಕುತ್ತೇನೆ ಎಂದು ಕೋಲು ಹಿಡಿದು ನಿಂತಾಗ, ದ್ರುವ ಕೈಯಲ್ಲಿ ಆಯುಧ ಹಿಡಿದು ಎದುರು ನಿಲ್ಲುತ್ತಾನೆ ಮತ್ತೂ ಇನ್ನೊಮ್ಮೆ ನನ್ನ ಹೊಡೆಯುವ ಪ್ರಯತ್ನ ಮಾಡಬೇಡಿ ಎಂದಾಗ ಶೇಡಜಿ ನಿಜಕ್ಕೂ ತಣ್ಣಗಾಗುತ್ತಾನೆ.

ನೋಡಿ ಒಂದೇ ಮನೆಯಲ್ಲಿ ನಾಯಕ ಮತ್ತೂ ಖಳನಾಯಕ ಇದ್ದಾರೆ. ಅಚ್ಚರಿ ಎಂದರೆ ಚಿಕ್ಕ ಹುಡುಗನಾದರೂ ನಾಯಕ ! ಅಚ್ಚರಿ ಅಲ್ವಾ..?

ಇತ್ತ ಮದುವೆಯ ನಿಶ್ಚಯ ಮಾಡಲು ಮಂಜುಳಾಳನ್ನು ಕರೆದುಕೊಂಡು ಎಲ್ಲರೂ ವರನ ಊರಿಗೆ ಹೋಗಿದ್ದಾರೆ. ಮತ್ತೂ ಅಲ್ಲಿ ವರನ ಅಪ್ಪ ತಮಗೆ ಬೇಕಾಗುವ ಹಣ ಮತ್ತಿತರ ಸಾಮಾನುಗಳನ್ನು ವರದಕ್ಷಿಣೆಯ ರೂಪದಲ್ಲಿ ಒಂದು ದೊಡ್ಡ ಲಿಸ್ಟ್ ಮಾಡಿ ಇವೆಲ್ಲ ನೀವೂ ನಮಗೆ ಕೊಡಬೇಕಾಗುತ್ತದೆ ಎನ್ನುತ್ತಾನೆ. ಅಳಿಮಯ್ಯ ಆತುರದಿಂದ ಅದನ್ನೂ ತೆಗೆದುಕೊಂಡು ಆಯಿತು ಅದರ ಚಿಂತೆ ನೀವೂ ಮಾಡಬೇಡಿ ಎನ್ನುತ್ತಾನೆ. ಮತ್ತೂ ಹುಡುಗನ ತಾಯಿ ಮಂಜುಳಾಳನ್ನು ಮೆಚ್ಚಿಕೊಳ್ಳುತ್ತಾಳೆ ಹಾಗೂ ಹುಡುಗ ಹುಡುಗಿ ಇಬ್ಬರೂ ಮಾತಾಡಿಕೊಳ್ಳಿ ಎಂದಾಗ ಆ ಹುಡುಗ ನನ್ನ ಹೆಸರು ಭಾಸ್ಕರ ನಿಮ್ಮ ಹೆಸರು ಏನು ಎಂದು ಕೇಳಿ , ನಾನೂ ನಿಮಗೆ ಇಸ್ಟವಾದೇನಾ ಎನ್ನುತ್ತಾನೆ.ಆಗ ಮಂಜುಳಾ ತನ್ನ ಹೆಸರು ಹೇಳಿ, ತನ್ನ ತಾಯಿ ಕಡೆ ನೋಡಿ, ಇಷ್ಟ ಆಗಿದ್ದೀರಿ ಎನ್ನುತ್ತಾಳೆ. ಮತ್ತೂ ಇದನ್ನು ಬಲರಾಮ್ ಗಮನಿಸುತ್ತಾನೆ ಕೂಡ.

ಬಲರಾಮ್ ಮಂಜುಳಾ ಮಾತಾಡಿಕೊಳ್ಳುತ್ತಿದ್ದಾರೆ ಮತ್ತೂ ಮದುವೆ ನಿಲ್ಲಿಸೋ ಪ್ರಯತ್ನ ಮಾಡೋಣ ಎಂದು ಬಲರಾಮ್ ಹೇಳುತ್ತಾನೆ. ಆದ್ರೆ ಮಂಜುಳಾ ಅದೆಲ್ಲ ಬೇಡ ಅಣ್ಣ ಏನಾದ್ರೂ ಆಗಲಿ. ನೀನು ಅಮ್ಮನಿಗೆ ಎದುರು ಮಾತಾಡಬೇಡ, ಮತ್ತೂ ನನ್ನ ಮದುವೆ ಸಮಯದಲ್ಲಿ ನೀವೂ ಮೂವರು ಸಹೋದರರು ನನ್ನ ಮುಂದೆ ಇರಬೇಕು ಅಷ್ಟೇ ಎನ್ನುತ್ತಾಳೆ. ಬಲರಾಮ್ ಕೂಡ ಭೀಮನನ್ನು ಹುಡುಕೊಣ ಎನ್ನುತ್ತಾನೆ.

ರಾಮಜೀಯವರ ಮುಂದೆ ವರನ ಅಪ್ಪ ಅಮ್ಮ ಕೊಟ್ಟ ಲಿಸ್ಟನ್ನು ಅಳಿಮಯ್ಯ ಮುಂದೆ ಇಟ್ಟಿದ್ದಾನೆ ಮತ್ತೂ ಆ ಲಿಸ್ಟ್ ನೋಡಿದ ರಾಮಜೀಯವರು ” ಇಷ್ಟೊಂದು ಹಣ, ಸಾಮಾನು ಹೇಗೆ ಕೊಡೋಕೆ ನಮ್ಮಿಂದ ಸಾಧ್ಯ..? ಸಾಧ್ಯವಿಲ್ಲ ಹಾಗಾಗಿ ಸ್ವಲ್ಪ ದಿವಸ ಮದುವೆ ಮುಂದೆ ದೂಡೋಣ “. ಎಂದು ಹೇಳಿದಾಗ ಭೀಮಾಬಾಯಿ “ಆಗೋದಿಲ್ಲ ಸಾಲ ಮಾಡಿಯಾದ್ರು ಸರಿ ಮದುವೆ ಮಾಡೋಣ ಆದ್ರೆ ಮುಂದಕ್ಕೆ ಹಾಕೋದು ಸಾಧ್ಯವಿಲ್ಲ “. ಎನ್ನುತ್ತಾರೆ. ಮತ್ತೂ ಅತ್ತೆಯವರು ಹೇಳುವ ಮಾತು ಸರಿ ಎಂದು ಅಳಿಮಯ್ಯ ಕೂಡ ಹೇಳುತ್ತಾನೆ.

ಈಗ ಭೀಮಾಬಾಯಿಯವರು ಮನೆಯೊಳಗೆ ಹಣದ ಲೆಕ್ಕಾ ಮಾಡುತ್ತಿದ್ದಾರೆ. ಅಲ್ಲಿಗೆ ಹೋದ ರಾಮಜೀಯವರು “ಭೀಮಾಬಾಯಿ ಒಂದು ಮಾತು ಹೇಳಬಹುದೇ”, ಎಂದು ಮಾತು ಸುರು ಮಾಡುತ್ತಾರೆ “ಭೀಮ ಹೇಳಿದ್ದ ಮಂಜುಳಾಳ ಮದುವೆ ಬೇಡ ಎಂಬುದನ್ನು ನೀನು ಸ್ವಪ್ರತಿಷ್ಠೆಯ ಸ್ವಾಭಿಮಾನವಾಗಿ ತೆಗೆದುಕೊಂಡಿದ್ದಿಯ, ಒಮ್ಮೊಮ್ಮೆ ಮಾತುಗಳು ಎಲ್ಲೆಲ್ಲೋ ಹುಟ್ಟಿ, ಎಲ್ಲೆಲ್ಲೋ, ಏನೇನೋ ಆಗಿ ತಿರುಗಿಕೊಳ್ಳುತ್ತವೆ. ನಿನ್ನ ಕಣ್ಣ ಮುಂದೇನೆ ಮಂಜುಳಾಳ ಮದುವೆ ಆಗಬೇಕು ಅನ್ನೋದನ್ನ ನಾನೂ ಒಪ್ಪುತ್ತೇನೆ ಆದ್ರೆ ಭೀಮ, ಹಾಗೂ ಎಲ್ಲರ ತರಹ ಮಂಜುಳಾಳ ಮದುವೆ ಆಗೋಕೆ ನನಗೂ ಇಷ್ಟ ಇಲ್ಲ”. ಎಂದು ಹೇಳಿದರೂ ಕೂಡ ಭೀಮಾಬಾಯಿಯವರು ಇದಾವುದನ್ನು ಅವರು ತಲೆಯಲ್ಲಿ ಹಾಕಿಕೊಳ್ಳುವುದಿಲ್ಲ, ಬದಲಾಗಿ “ನೀವೂ ನಿಮ್ಮ ಮಾಲೀಕರಲ್ಲಿ ಹಣ ಕೇಳಿ ಅವರು ಇಲ್ಲ ಅನ್ನುವುದಿಲ್ಲ ಇಲ್ಲಿಯತನಕ ನಾನೂ ಯಾವತ್ತೂ ಸಾಲ ಕೇಳಿ ಎಂದು ಹೇಳಿಲ್ಲ ಆದ್ರೆ ಈಗ ಅದರ ಅವಶ್ಯಕತೆ ಇದೆ “. ಎಂದು ಹೇಳಿ ಒಳ ನಡೆಯುತ್ತಾರೆ.

ಇತ್ತ ರಾಮಜೀಯವರು ಹೊರಗೆ ಹೋಗುತ್ತಿದ್ದಾಗ, ಭೀಮಾಬಾಯಿಯವರು ತಡೆದು “ಪೊಲೀಸ್ ಸಾಹೇಬರನ್ನು ಭೆಟ್ಟಿಯಾಗಿ ಭೀಮನ ಬಗ್ಗೆ ಸ್ವಲ್ಪ ವಿಚಾರಿಸಿ “.ಎಂದು ಹೇಳುವಾಗ ಗಂಗಕ್ಕಳ ಊರಿನಿಂದ ಪರಿಚಯಸ್ಥರು ಒಬ್ಬರು ಅದೇ ಸಮಯಕ್ಕೆ ಬರುತ್ತಾರೆ ಮತ್ತೂ ಭೀಮ ಗಂಗಕ್ಕನ ಮನೆಯಲ್ಲಿ ಇದ್ದಾನೆ. ಮತ್ತೂ ನೀವೂ ಗಾಬರಿಯಾಗಬಾರದೆಂದು ನಾನೇ ಹೇಳಿ ಹೋಗಲು ಬಂದಿದ್ದೀನಿ ಎನ್ನುತ್ತಾರೆ. ಇದರಿಂದ ಮನೆಯಲ್ಲಿ ಎಲ್ಲರೂ ಸಂತೋಷವಾಗುತ್ತಾರೆ. ಆಗ ಬಲರಾಮ್ “ಭೀಮ ಗಂಗಕ್ಕನ ಮನೆಯಲ್ಲಿ ಇದ್ದಾನೆ ಎಂದ್ರೆ ಏನೋ ವಿಷಯ ಇರುತ್ತದೆ ಹಾಗಾಗಿ ನಾವೀಗ ಭೀಮನ ಜೊತೆಗೆ ಕುಳಿತು ಮಾತಾಡೋಣ ಎಂದು ಬಲರಾಮ್ ಹೇಳಿದಾಗ,

ಭೀಮಾಬಾಯಿಯವರು “ಮದುವೆಗೆ ಇನ್ನೂ ಮೂರೇ ದಿವಸ ಬಾಕಿ ಇರೋದು. ಹಾಗಾಗಿ ಬೇಗ ಬೇಗ ಮದುವೆ ತಯಾರಿ ಮಾಡೋಣವೆಂದು ಒಳಗೆ ನಡೆಯುತ್ತಾರೆ.

ಮನೆಯಲ್ಲಿ ಕಡು ಕತ್ತಲೆಯಲ್ಲಿ ಮಂಜುಳಾ ತುಸು ಬೆಳಕು ಬೀರುವ ಕಂದೀಲು ಮುಂದೆ ಒಬ್ಬಳೇ ಕುಳಿತು ಚಿಂತಿಸುತ್ತಿದ್ದಾಳೆ. ಅಲ್ಲಿಗೆ ಇವತ್ತಿನ ಸಂಚಿಕೆ ಮುಗಿಯುತ್ತದೆ.

 

ಹೀಗೆ ಇವತ್ತಿನ 35ನೇ ಸಂಚಿಕೆಯಲ್ಲಿ  ಮಂಜುಳಾಳ ಮದುವೆಯ ವಿಷಯವಾಗಿ ಹೆಚ್ಚು ದೃಶ್ಯಗಳು ಕಂಡು ಬಂದವು. ಇವುಗಳ ನಡುವೆಯೂ ಮನೆ ಬಿಟ್ಟು ಹೋಗಿದ್ದ ಬಾಲಾ ಮನೆಗೆ ಬರುವುದು ಸೇರಿದಂತೆ ಕೆಲವು ಹಿತಕರ ಘಟನೆಗಳು ನಡೆದವು. ಮತ್ತೂ ಮನುವಾದಿಗಳು ಅದರಲ್ಲೂ ಶೇಡಜಿ ರಾಮಜೀ ಕುಟುಂಬದ ಮೇಲೆ ಹಲ್ಲು ಕೆರೆದುಕೊಳ್ಳುವದು ಬಿಟ್ಟಿಲ್ಲ. ಮತ್ತೂ ಪುರಂಜನ ಕೂಡ ಶೇಡಜಿಗೆ ಮಾತಾಡಿದ್ದು ಸರಿಯಾಗಿಯೇ ಇದೆ. ಆದ್ರೆ ಅದೆಲ್ಲ ಅರ್ಥ ಮಾಡಿಕೊಳ್ಳುವ ಜಾಣ್ಮೆ ಅವರಿಗೆಲ್ಲ ಎಲ್ಲಿ ಇರುತ್ತದೆ ಹೇಳಿ. ಇತಿಹಾಸ ಪುಟದಲ್ಲಿ ಹುಡುಕಿದರೆ ಸಿಗುವುದು ಒಬ್ಬರೋ, ಇಬ್ಬರೋ ಮಾತ್ರ..? !!!.

ಇಷ್ಟಾದರೂ ಕೂಡ ಮಂಜುಳಾಳ ಮದುವೆ ನಡೆಯುವುದೋ…? ಇಲ್ಲೋ…?

ಮತ್ತೂ ಭೀಮರಾವ ಮತ್ತೂ ಇನ್ನುಳಿದವರ ಮುಂದಿನ ನಡೆ ಏನೂ..?

ವರನ ಅಪ್ಪ ಅಮ್ಮ ಕೊಟ್ಟ ಅಷ್ಟೂ ದೊಡ್ಡ ಲಿಸ್ಟ್ ಈಡೇರಿಸಲು ಸಾಧ್ಯವಾ..?

ಹೀಗೆ ಇನ್ನಿತರ ವಿಚಾರಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

 

… ಅಲ್ಲಿಯವರಿಗೂ 

  … ಜೈಭೀಮ್

    (… ಮುಂದುವರೆಯುವುದು)

 

  • ಗಣಪತಿ ಚಲವಾದಿ(ಗಗೋಚ)
  • ಬಿಎಂಟಿಸಿ ನಿರ್ವಾಹಕರು , ಸಾಹಿತಿಗಳು ವಿಜಯಪುರ , ಕಸಾಪ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

ಇತ್ತೀಚಿನ ಸುದ್ದಿ