ಟಿ ಆರ್ ಪಿಗಾಗಿ ಗೋಳಿಡುವ ಬದಲು ಮಹಾನಾಯಕದಂತಹ ಕಥೆಗಳನ್ನು ಟಿವಿ ಚಾನೆಲ್ ಗಳು ತರಲಿ - Mahanayaka

ಟಿ ಆರ್ ಪಿಗಾಗಿ ಗೋಳಿಡುವ ಬದಲು ಮಹಾನಾಯಕದಂತಹ ಕಥೆಗಳನ್ನು ಟಿವಿ ಚಾನೆಲ್ ಗಳು ತರಲಿ

02/11/2020

ಎಲ್ಲ ಟಿವಿ ಚಾನೆಲ್ ಗಳು ಈವರೆಗೆ ಕಳೆದುಕೊಂಡಿದ್ದ ಒಂದು ದೊಡ್ಡ ಸಮೂಹದ ಬೆಂಬಲವನ್ನು ಜೀ ಕನ್ನಡ ಪಡೆದುಕೊಂಡಿದೆ. ಅದು ಕೂಡ ಒಂದು ಡಬ್ಬಿಂಗ್ ಸೀರಿಯಲ್ ಗೆ. ಆಶ್ಚರ್ಯವಲ್ಲವೇ? ಮಹಾನಾಯಕ ಎಂಬ ಒಂದು ಧಾರಾವಾಹಿ ಇಡೀ ಕರ್ನಾಟಕದಲ್ಲಿ ಸೃಷ್ಟಿಸಿದ ಬದಲಾವಣೆ ಅಂತಹದ್ದು. ಬಹುಶಃ ಭಾರತದ ಧಾರಾವಾಹಿ, ಸಿನಿಮಾ ಎಲ್ಲವನ್ನು ಒಟ್ಟುಗೂಡಿಸಿ ತಾಳೆ ಹಾಕಿ ನೋಡಿದರೂ, ಮಹಾನಾಯಕ ಧಾರಾವಾಹಿಯನ್ನು ಜನರು ಬರ ಮಾಡಿಕೊಂಡಂತೆ ಯಾವ ಧಾರಾವಾಹಿಗಳನ್ನೂ ಜನರು ಬರ ಮಾಡಿಕೊಂಡಿಲ್ಲ.



Provided by

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಈ ದೇಶದಲ್ಲಿ ಮರೆಮಾಚಲು ಸಾಕಷ್ಟು ಪ್ರಯತ್ನಗಳು ನಡೆದವು. ಆದರೆ, ಪ್ರಜ್ವಲಿಸುವ ಸೂರ್ಯನನ್ನು ಎಂದಾದರೂ ಮರೆಮಾಚಲು ಸಾಧ್ಯವೇ?, ಇಲ್ಲ ಸಾಧ್ಯವೇ ಇಲ್ಲ ಎನ್ನುವುದು ಈಗ ಸಾಬೀತಾಗಿದೆ. ಬಹಳ ಹಿಂದಿನಿಂದಲೂ ಪುರಾಣಗಳ ಕಥೆಗಳನ್ನು ಸಿನಿಮಾ, ಧಾರಾವಾಹಿಗಳಲ್ಲಿ ನೋಡಿ ಜನರು ಮನರಂಜನೆ ಪಡೆಯುತ್ತಿದ್ದರು. ಆದರೆ, ಇಂದು ಮಹಾನಾಯಕ ಧಾರಾವಾಹಿಯಲ್ಲಿ ಡಾ.ಬಿ,ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ನೋಡಿ ಜನರು ಜ್ಞಾನವನ್ನು ಪಡೆಯುತ್ತಿದ್ದಾರೆ. ಭಾರತ ಎಂದರೇನು ಎಂಬ ಪ್ರಶ್ನೆಗೆ ಭಾರತ ಎಂದರೆ ಅಂಬೇಡ್ಕರ್ ಎಂಬ ಉತ್ತರವನ್ನು ಜನರು ನೀಡುವ ಕಾಲ ಇನ್ನೂ ಹೆಚ್ಚು ದೂರವಿಲ್ಲ ಎಂದೇ ಭಾವಿಸಬೇಕಿದೆ.


ಇನ್ನೂ ಕೇವಲ ಮನರಂಜನೆಯ ಕಾರ್ಯಕ್ರಮವನ್ನು ಮಾತ್ರವೇ ಜನರು ನೋಡುತ್ತಾರೆ ಎಂಬ ಟಿವಿ ಚಾನೆಲ್ ಗಳ ಮುಖ್ಯಸ್ಥರ ಭಾವನೆಗಳನ್ನು ಮುರಿಯುವ ಕೆಲಸವನ್ನು ಜೀ ಕನ್ನಡದ ರಾಘವೇಂದ್ರ ಹುಣಸೂರು ಅವರು ಮಾಡಿದ್ದಾರೆ.  ಅವರು ನಿನ್ನೆ ಪ್ರಸಾರವಾದ ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳನ್ನು ಎಲ್ಲ ಟಿವಿ ಚಾನೆಲ್ ಗಳು, ಸಿನಿಮಾ ಡೈರೆಕ್ಟರ್ ಗಳು ಕೇಳಿಸಿಕೊಂಡರೆ, ನಮ್ಮ ಕಾರ್ಯಕ್ರಮಕ್ಕೆ ಟಿ ಆರ್ ಪಿ ಇಲ್ಲ, ನಮ್ಮ ಸಿನಿಮಾವನ್ನು ಯಾರೂ ನೋಡುವುದಿಲ್ಲ ಎಂದು ಅವರು ಇಂದು ಗೋಳಾಡುತ್ತಿರುವ ಪರಿಸ್ಥಿತಿಗೆ ಕಾರಣ ಏನು ಎನ್ನುವುದನ್ನು ಅವರು ತಿಳಿದುಕೊಳ್ಳಬಹುದು.  ಮಹಾನಾಯಕ ಧಾರಾವಾಹಿಯ ಬ್ಯಾನರ್ ಗಳನ್ನು ರಾಜ್ಯಾದ್ಯಂತ ಬೀದಿ ಬೀದಿಗಳಲ್ಲಿ ಫ್ಲೆಕ್ಸ್ ಹಾಕಿ ಸ್ವಯಂ ಮಾರ್ಕೆಟ್ ಒದಗಿಸಿದ್ದಾರೆ.  ಈ ರೀತಿಯಾಗಿ ಯಾವ ಧಾರಾವಾಹಿ ಬಿಡಿ, ಸಿನಿಮಾಕ್ಕೆ ಕೂಡ ಇಲ್ಲಿಯವರೆಗೆ ಬೆಂಬಲ ದೊರಕಿಲ್ಲ.


ಜೀ ಕನ್ನಡದಂತೆಯೇ ಎಲ್ಲ ಚಾನೆಲ್ ಗಳು ಟಿ ಆರ್ ಪಿಗೆ ಭಯಪಡುವ ಬದಲು ಈ ದೇಶದ ಗರ್ಭದಲ್ಲಿ ಇನ್ನೂ ಮರೆಮಾಚಿರುವ ಹಲವು ಮಹಾನಾಯಕ, ನಾಯಕಿಯರ  ಕಥೆಗಳನ್ನು ಹೊರ ತೆಗೆದು ಜಗತ್ತಿಗೆ ತೋರಿಸುವ ಕೆಲಸವನ್ನು ಮಾಡಬೇಕಿದೆ. ಮಹಾತ್ಮ ಜ್ಯೋತಿಬಾಫುಲೆ, ಸಾವಿತ್ರಿಬಾಫುಲೆ, ಪೆರಿಯಾರ್, ನಾರಾಯಣಗುರು, ಗೌತಮ ಬುದ್ಧ, ನಾಲ್ವಡಿ ಕೃಷ್ಣರಾಜ ಒಡೆಯಾರ್, ಶಾಹೂಮಹಾರಾಜ್ ಮೊದಲಾದ ಕಥೆಗಳು ಧಾರಾವಾಹಿಯಾಗಿ ಪರವರ್ತನೆಯಾಗಲಿ. ಆ ಬಳಿಕ ಟಿವಿ ಚಾನೆಲ್ ಗಳು ಟಿ ಆರ್ ಪಿಗಾಗಿ ಗೋಳಿಡುವ ಪ್ರಮೇಯವೇ ಸೃಷ್ಟಿಯಾಗುವುದಿಲ್ಲ. ಮಾರ್ಕೆಟಿಂಗ್ ಗೂ ನಿಮಗೆ ಕಷ್ಟವೇ ಇಲ್ಲ,ಆ ಧಾರಾವಾಹಿಯ ಪ್ರಚಾರ ಅಂತೂ ಒಂದೂ ರೂಪಾಯಿ ಖರ್ಚೇ ಆಗದಂತೆ ಆಗುತ್ತದೆ ಎಂಬ ಅಭಿಪ್ರಾಯಗಳನ್ನು ವೀಕ್ಷಕರು ವ್ಯಕ್ತಪಡಿಸುತ್ತಿದ್ದಾರೆ.


ಇತ್ತೀಚಿನ ಸುದ್ದಿ