ಕ್ರಿಸ್ಮಸ್ ಹಿನ್ನೆಲೆಯಲ್ಲಿ ಮೆರವಣಿಗೆ ಮಾಡುತ್ತಿದ್ದವರ ಮೇಲೆ ಹರಿದ ಲಾರಿ | ನಾಲ್ಕು ಮಕ್ಕಳು ಸ್ಥಳದಲ್ಲೇ ಸಾವು
ಹೈದರಾಬಾದ್: ಕ್ರಿಸ್ಮಸ್ ಹಿನ್ನೆಲೆಯಲ್ಲಿ ಪ್ರಾರ್ಥನಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದು ಜನರ ಮೇಲೆ ಹರಿದಿದ್ದು, ಪರಿಣಾಮವಾಗಿ ನಾಲ್ಕು ಮಕ್ಕಳು ಮೃತಪಟ್ಟು 12 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಹೈದರಾಬಾದ್-ಕಡಪಾ ರಾಷ್ಟ್ರೀಯ ಹೆದ್ದಾರಿ ಸಮೀಪದ ಯರಂಗುಂಟ್ಲಾ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸುಮಾರು 40 ಜನರು ಹೆದ್ದಾರಿ ಬದಿಯಲ್ಲಿ ಪ್ರಾರ್ಥನಾ ಮೆರವಣಿಗೆ ಹೊರಟಿದ್ದರು. ಈ ವೇಳೆ ಹೈದರಾಬಾದ್ ನಿಂದ ಕಡಪಾ ಜಿಲ್ಲೆಗೆ ಹೋಗುತ್ತಿದ್ದ ಲಾರಿ ಮೆರವಣಿಗೆಯಲ್ಲಿದ್ದವರ ಮೇಲೆ ಹರಿದಿದೆ. ಈ ಸಂದರ್ಭದಲ್ಲಿ ಮೂವರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊಂದು ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ಸಾವನ್ನಪ್ಪಿದ ಮಕ್ಕಳು 8ರಿಂದ 15 ವರ್ಷ ವಯಸ್ಸಿನವರಾಗಿದ್ದಾರೆ. ಗಾಯಾಳುಗಳ ಪೈಕಿ ಕೂಡ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 12 ಮಂದಿಯ ಪೈಕಿ 8 ಮಕ್ಕಳು ಗಾಯಾಳುಗಳಾಗಿದ್ದಾರೆ.
ಅಪಘಾತದ ಬಳಿಕ ಲಾರಿಯನ್ನು ನಿಲ್ಲಿಸದೇ ಲಾರಿ ಚಾಲಕ ಪರಾರಿಯಾಗಿದ್ದಾನೆ. ಆದರೆ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಇಲ್ಲಿನ ಬಾತಲೂರು ಬಳಿಯಲ್ಲಿ ತಡೆದು ಬಂಧಿಸಿದ್ದಾರೆ.