ಆಧುನಿಕ ಅಸ್ಪೃಶ್ಯತೆ ಜಾರಿಗೆ ಮುಂದಾಗುತ್ತಿದೆಯೇ ಕೇಂದ್ರ ಸರ್ಕಾರ? | ಇಲ್ಲಿದೆ ಬೆಚ್ಚಿ ಬೀಳಿಸುವ ಸುದ್ದಿ - Mahanayaka
8:35 AM Thursday 7 - December 2023

ಆಧುನಿಕ ಅಸ್ಪೃಶ್ಯತೆ ಜಾರಿಗೆ ಮುಂದಾಗುತ್ತಿದೆಯೇ ಕೇಂದ್ರ ಸರ್ಕಾರ? | ಇಲ್ಲಿದೆ ಬೆಚ್ಚಿ ಬೀಳಿಸುವ ಸುದ್ದಿ

04/12/20201944ರಿಂದಲೂ ಜಾರಿಯಲ್ಲಿದ್ದ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಸ್ಕಾಲರ್ ಶಿಪ್ ನ್ನು ರದ್ದು ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದು ಎಸ್ ಸಿ, ಎಸ್ ಟಿ ಸಮುದಾಯಗಳನ್ನು ಮತ್ತೆ ಅಸ್ಪೃಶ್ಯಗೆ ದೂಡಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನುವ ಅನುಮಾನಗಳಿ ಕಾರಣವಾಗಿದೆ.

ಇದು ಕೇವಲ ಎಸ್ ಸಿ-ಎಸ್ಟಿಗಳ ಸಮಸ್ಯೆ ಮಾತ್ರವಲ್ಲ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳನ್ನೂ ಶಿಕ್ಷಣದಿಂದ ದೂರವಿಟ್ಟು, ಅವರ ಅವಕಾಶಗಳನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ. ಮೀಸಲಾತಿ ಸಾಮಾಜಿಕ ಸಮಾನತೆಗಾಗಿ ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾಗಿದೆ. ಆದರೆ, ಮನುವಾದ ಅಥವಾ ಬ್ರಾಹ್ಮಣವಾದವು ಸಮಾನತೆಯನ್ನು ಬಯಸುವುದಿಲ್ಲ, ಮೇಲ್ಜಾತಿ ಮತ್ತು ಕೆಳ ಜಾತಿ ಎನ್ನುವ ವ್ಯವಸ್ಥೆ ಜೀವಂತವಾಗಿರಿಸಲು ಕಾಂಗ್ರೆಸ್ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಸಂಚನ್ನು ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ವೇಗವಾಗಿ ಮಾಡಲಾಗುತ್ತಿದೆ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ.

ಮೀಸಲಾತಿ ಎಂದರೆ ಅದು ಆರ್ಥಿಕ ಸಹಾಯಧನ ಎಂದು ತಿಳಿದುಕೊಂಡಿರುವವರೇ ಹೆಚ್ಚು. ಮೇಲ್ಜಾತಿಯವರ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡರೆ, ಕೆಳ ಜಾತಿಯವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗುತ್ತಿದೆ. ಇದು ಒಂದು ಸಮುದಾಯದ ಮೇಲೆ ದೌರ್ಜನ್ಯಕ್ಕೆ, ಗುಲಾಮಗಿರಿಯ ಸಮಾಜಕ್ಕೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿಯೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು, ಶೈಕ್ಷಣಿಕವಾಗಿ ಹಿಂದುಳಿದ ಒಬಿಸಿ, ಎಸ್ ಸಿ, ಎಸ್ ಟಿ ಮೊದಲಾದ ಸಮುದಾಯಗಳಿಗಾಗಿ ಶಿಕ್ಷಣದಲ್ಲಿ ಮೀಸಲಾತಿ ನೀಡಿದರು.

ಆದರೆ, ಆಡಳಿತ ವರ್ಗದಲ್ಲಿರುವ ಬ್ರಾಹ್ಮಣವಾದಿಗಳು, ಶಿಕ್ಷಣದಲ್ಲಿ ಸಮಾನತೆ ಬಂದರೆ, ಸಮಾಜದಲ್ಲಿ ಸಮಾನತೆ ಸೃಷ್ಟಿಯಾಗುತ್ತದೆ ಎನ್ನುವ ಕಾರಣಕ್ಕಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ನೀಡಲಾಗುತ್ತಿರುವ ಮೀಸಲಾತಿಯನ್ನು ವಿರೋಧಿಸಲು ಆರಂಭಿಸಿದರು. ದುರಂತವೇನೆಂದರೆ, ಇದಕ್ಕಾಗಿ ಇದೇ ಮೀಸಲಾತಿಯ ಫಲವನ್ನು ಉಣ್ಣುತ್ತಿರುವ ಒಬಿಸಿ ಸಮುದಾಯದ ಯುವಕರನ್ನೇ ಬಳಸಿಕೊಂಡಿತು. ಸಮಾಜದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದವರನ್ನು ಮೀಸಲಾತಿ ವಿರುದ್ಧ ಛೂ ಬಿಡಲಾಗಿತ್ತು. ಇದರ ಪರಿಣಾಮವಾಗಿಯೇ ಇದೀಗ ಭಾರತದಲ್ಲಿ ಒಬಿಸಿಗಳು ಕೂಡ ಶೈಕ್ಷಣಿಕ ಮೀಸಲಾತಿಯನ್ನು ಕಳೆದುಕೊಳ್ಳಲಿದ್ದಾರೆ.

ಎಲ್ಲ ದೇಶಗಳು ಜ್ಞಾನದತ್ತ ಹೋಗುತ್ತಿದ್ದರೆ ಭಾರತವನ್ನು ಅನಕ್ಷರಸ್ತವಾಗಿಸಲು ಆಡಳಿತ ವರ್ಗದಲ್ಲಿರುವ ಮನುವಾದಿಗಳು ಮುಂದಾಗಿದ್ದಾರೆ. ಒಬಿಸಿಗಳು ಎಸ್ ಸಿ, ಎಸ್ ಟಿಗಳ ಹಂತಕ್ಕೆ ಬಂದು ನಿಲ್ಲುವ ಸೂಚನೆಗಳು ಕಂಡು ಬರುತ್ತಿವೆ. ಶೈಕ್ಷಣಿಕ ಮೀಸಲಾತಿಯನ್ನು ಕಸಿದುಕೊಳ್ಳುವ ಮೂಲಕ ಭಾರತದಲ್ಲಿ ಮತ್ತೆ ಆಧುನಿಕ ಅಸ್ಪೃಶ್ಯತೆ ಸೃಷ್ಟಿಯಾಗುವ ಅಪಾಯ ಕಂಡು ಬಂದಿದೆ.

ಇತ್ತೀಚಿನ ಸುದ್ದಿ