ಚಡ್ಡಿ ಧರಿಸಿ ಭಾಷಣ ಮಾಡುವುದು ರಾಷ್ಟ್ರೀಯತೆ ಅಲ್ಲ | ಆರೆಸ್ಸೆಸ್, ಬಿಜೆಪಿಗೆ ಸಚಿನ್ ತಿರುಗೇಟು
ನಾಗ್ಪುರ: ಚಡ್ಡಿ ಧರಿಸಿ ನಾಗ್ಪುರ ಕಚೇರಿಯಲ್ಲಿ ಭಾಷಣ ಮಾಡುವುದು ರಾಷ್ಟ್ರೀಯತೆಯಲ್ಲ, ರೈತರ ಬಗ್ಗೆ ಮಾತನಾಡುವುದು ನಿಜವಾದ ರಾಷ್ಟ್ರೀಯತೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಗೆ ತಿರುಗೇಟು ನೀಡಿದ್ದಾರೆ..
ವಿವಾದಿತ ಕೃಷಿ ಕಾಯ್ದೆಯ ವಿರುದ್ಧದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಕಿಡಿಕಾರಿದರು. ಸರ್ಕಾರವು ರೈತರನ್ನು ಮಾವೋವಾದಿಗಳು, ಪ್ರತ್ಯೇಕತಾವಾದಿಗಳು, ಉಗ್ರರು ಎಂದು ಕರೆಯುತ್ತಿದೆ. ರೈತರ ಅಭಿವೃದ್ಧಿಯ ಬಗ್ಗೆ ಯೋಚಿಸುವ ನಾಯಕರು ಬಿಜೆಪಿ ಹಾಗೂ ಆರೆಸ್ಸೆಸ್ ಇಲ್ಲವಾಗಿರುವುದರಿಂದ ಅವರು ಈ ರೀತಿಯಾಗಿ ಮಾತನಾಡುತ್ತಾರೆ ಎಂದು ಪೈಲಟ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ದೇಶದ ರೈತರ ಪರವಾಗಿ ನಾವು ಮಾತನಾಡಿದರೆ, ಅದು ರಾಜಕೀಯ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ರೈತರ ಪರವಾಗಿ ಮಾತನಾಡುವುದು ರಾಜಕೀಯ ಎಂದಾದರೆ, ನಾವು ಅದನ್ನು ಮುಂದುವರಿಸುತ್ತೇವೆ. ಹೊಸ ಕೃಷಿ ಕಾನೂನು ರದ್ದು ಮಾಡಿದರೆ, ನಾವು ಸರ್ಕಾರವನ್ನು ಅಭಿನಂದಿಸುತ್ತೇವೆ. ಇಲ್ಲವಾದರೆ ಅದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಹೇಳಿದರು.