ರೈತರ ಹೋರಾಟವನ್ನು ಹಿಂದೂ-ಸಿಖ್ಖ್ ಸಂಘರ್ಷವಾಗಿ ಮಾರ್ಪಾಡು ಮಾಡಲಾಗುತ್ತಿದೆ | ಎನ್ ಡಿಎ ಭಾಗವಾಗಿರುವ ಶಿರೋಮಣಿ ಅಕಾಲಿದಳ ಗಂಭೀರ ಆರೋಪ
ಚಂಡೀಗಡ: ಕೇಂದ್ರ ಸರ್ಕಾರದ 3 ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟದ ದಿಕ್ಕು ತಪ್ಪಿಸಲು ಹಿಂದೂ ಹಾಗೂ ಸಿಖ್ ಸಮುದಾಯಗಳ ನಡುವೆ ಕೋಮು ವಿಭಜನೆಗೆ ಯತ್ನಿಸಲಾಗುತ್ತಿದೆ ಎಂದು ಎನ್ ಡಿಎ ಸರ್ಕಾರದ ಭಾಗವಾಗಿರುವ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್ ಡಿಎ ಅಥವಾ ಬಿಜೆಪಿಯ ಹೆಸರು ಬಳಸದೇ ಈ ಆರೋಪವನ್ನು ಮಾಡಿರುವ ಸುಖ್ಬೀರ್ ಸಿಂಗ್ ಬಾದಲ್, ರೈತರ ಹೋರಾಟವನ್ನು ಹಿಂದೂ ಹಾಗೂ ಸಿಖ್ಖ್ ಸಮುದಾಯಗಳ ಸಂಘರ್ಷವಾಗಿ ಮಾರ್ಪಾಡು ಮಾಡಲಾಗುತ್ತಿದೆ. ಇದರ ಹಿಂದೆ ಇರುವ ಶಕ್ತಿಗಳು ಮೊದಲು ದೆಹಲಿಯಲ್ಲಿ ಈ ಕೆಲಸ ಮಾಡಿದ್ದವು ಇದೀಗ ಪಂಜಾಬ್ ಗೆ ವಿಸ್ತರಿಸಲು ನೋಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ರೈತರ ಹೋರಾಟವನ್ನು ದಿಕ್ಕು ತಪ್ಪಿಸಲು ಕೋಮು ವಿಭಜನೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಎನ್ ಡಿಎ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಕಸಿಯುವುದಷ್ಟೇ ಅಲ್ಲದೇ, ಪ್ರತಿಭಟಿಸುವ ಹಕ್ಕನ್ನು ಕೂಡ ಕಸಿಡುಕೊಂಡಿದೆ. ಅವರನ್ನು ಒಪ್ಪುವವರು ಮಾತ್ರವೇ ದೇಶಭಕ್ತರು, ವಿರುದ್ಧ ಮಾತನಾಡುವವರು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.