ಉದ್ದನೆ ಗಡ್ಡ ಬೆಳೆಸಿಕೊಂಡ ಕಾರಣಕ್ಕೆ ಮುಸ್ಲಿಮ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಮಾನತು
ಭಾಗಪತ್: ಉದ್ದನೆ ಗಡ್ಡ ಬೆಳೆಸಿಕೊಂಡ ಕಾರಣಕ್ಕೆ ಉತ್ತರ ಪ್ರದೇಶದ ಭಾಗ್ಪತ್ನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಇಂಟೆಸರ್ ಅಲಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದ್ದು, ಪೊಲೀಸ್ ಇಲಾಖೆಯ ನಿಯಮ ಮೀರಿ ಗಡ್ಡ ಬೆಳೆಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ನಿಯಮದ ಪ್ರಕಾರ, ಪೊಲೀಸರು ಗಡ್ಡ ಬಿಡುವಂತಿಲ್ಲ. ಕ್ಷೌರ ಮಾಡುವುದು ಮತ್ತು ಶೇವ್ ಮಾಡುವುದು ಕಡ್ಡಾಯವಾಗಿದೆ. ಸಿಖ್ ಸಮುದಾಯದವರಿಗೆ ಮಾತ್ರ ಗಡ್ಡ ಬಿಡಲು ಅವಕಾಶವಿದೆ. ಉಳಿದವರು ಗಡ್ಡ ಬಿಡಬೇಕಾದರೆ, ಸೂಕ್ತ ಅನುಮತಿಯನ್ನು ಪಡೆದುಕೊಳ್ಳಬೇಕಿದೆ.
ಇಂಟೆಸರ್ ಅಲಿ ಅವರು, ಅಗತ್ಯ ಅನುಮತಿ ಪಡೆದುಕೊಳ್ಳದೆ ಗಡ್ಡ ಬಿಟ್ಟಿದ್ದರು. ಮೂರು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದರೂ ಅವರು ಅದನ್ನು ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ ಪಿ ಅಭಿಷೇಕ್ ಸಿಂಗ್ ಹೇಳಿದ್ದಾರೆ.
ಇನ್ನೂ ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅಮಾನತಿಗೊಳಗಾಗಿರುವ ಸಬ್ ಇನ್ಸ್ ಪೆಕ್ಟರ್ ಇಂಟೆಸರ್ ಅಲಿ, ನಾನು ಗಡ್ಡ ಇಟ್ಟುಕೊಳ್ಳಲು ಅನುಮತಿ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿದ್ದೇನೆ ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.