“ಅತ್ಯಾಚಾರಿಗಳ ಸ್ವರ್ಗ” ಉತ್ತರಪ್ರದೇಶ ಕರ್ನಾಟಕ ರಾಜ್ಯಕ್ಕೆ ಮಾದರಿಯೇ? | ಉತ್ತಪ್ರದೇಶ ಕರ್ನಾಟಕಕ್ಕೆ ಮಾದರಿ ಅಲ್ಲ ಎಂದು ಧ್ವನಿಯೆತ್ತಿದ ಸಿದ್ದರಾಮಯ್ಯ
ಬೆಂಗಳೂರು: ಗೂಂಡಾ ರಾಜ್ಯ ಉತ್ತರಪ್ರದೇಶ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಬಾರದು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದು, ಕುಖ್ಯಾತಿಯ ಉತ್ತರ ಪ್ರದೇಶ ಪ್ರಗತಿಪರ ಚಿಂತಕರ ಪರಂಪರೆಯ ಕರ್ನಾಟಕಕ್ಕೆ ಮಾದರಿ ಅಲ್ಲ ಎಂದು ಅವರು ಹೇಳಿದ್ದಾರೆ.
ಅತ್ಯಾಚಾರಿಗಳ ಸ್ವರ್ಗ, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶದಲ್ಲಿ ಅಂತರ್ ಧರ್ಮೀಯ ವಿವಾಹವನ್ನು ನಿಷೇಧ ಮಾಡಿರುವ ಕಾನೂನನ್ನೇ ಕರ್ನಾಟಕದಲ್ಲಿಯೂ ಜಾರಿ ಮಾಡಲು ಮುಂದಾಗಿರುವ ಬಿಜೆಪಿ ಸರ್ಕಾರದ ನಿಲುವನ್ನು ವಿರೋಧಿಸಿ, ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ಕೆಲವು ಸಚಿವರು ಉತ್ತರಪ್ರದೇಶದ ಮುಖ್ಯಮಂತ್ರಿಯವರಿಂದ ಪ್ರೇರಿತರಾಗಿರುವುದು ದುರದೃಷ್ಟಕರ. ಪ್ರಗತಿಪರ ಚಿಂತಕರ ಪರಂಪರೆಯ ಕರ್ನಾಟಕಕ್ಕೆ ‘ಗೂಂಡಾರಾಜ್ಯ’ ಎಂಬ ಕುಖ್ಯಾತಿಯ ಉತ್ತರಪ್ರದೇಶ ಮಾದರಿ ಅಲ್ಲ, ಅಲ್ಲಿನ ಮುಖ್ಯಮಂತ್ರಿ ಪ್ರೇರಣೆಯೂ ಆಗಬಾರದು. ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ತಮ್ಮ ರಾಜಕೀಯ ಅನುಕೂಲತೆಗೆ ತಕ್ಕಂತೆ ತಪ್ಪಾಗಿ ವಿಶ್ಲೇಷಿಸುವ ಪ್ರಯತ್ನವನ್ನು ನಾಯಕರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
‘ಮತಾಂತರ ಎನ್ನುವುದು ಅಂತರಧರ್ಮೀಯ ಮದುವೆಗೆ ಅಸ್ತ್ರವಾಗಬಾರದು’ ಎಂದು ತೀರ್ಪು ಹೇಳಿದೆಯೇ ಹೊರತು ಅಂತರಧರ್ಮೀಯ ಮದುವೆಯೇ ಅಕ್ರಮ ಎಂದು ಹೇಳಿಲ್ಲ. ‘ಲವ್ ಜಿಹಾದ್’ ಎಂದರೆ ಏನು ಎನ್ನುವುದೇ ಸ್ಪಷ್ಟ ಇಲ್ಲದೆ ಇರುವಾಗ, ‘ಯಾವ ಕಾನೂನು ಕೂಡಾ ಲವ್ ಜಿಹಾದ್ ಅನ್ನು ವ್ಯಾಖ್ಯಾನಿಸಿಲ್ಲ’ ಎಂದು ಕೇಂದ್ರ ಗೃಹಸಚಿವಾಲಯವೇ ಸ್ಪಷ್ಟಪಡಿಸಿರುವಾಗ, ಯಾವ ಆಧಾರದಲ್ಲಿ ಕಾನೂನು ರೂಪಿಸಲು ಹೊರಟಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಲವ್ ಜಿಹಾದ್’ ತಡೆಗೆ ಕಾನೂನು ರೂಪಿಸುವ ಅವರ ಘೋಷಣೆ, ಆಡಳಿತದ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನವಲ್ಲದೇ ಇನ್ನೇನಲ್ಲ. ಕೋಮುದ್ವೇಷವನ್ನು ಹುಟ್ಟುಹಾಕಿ ರಾಜಕೀಯದ ಬೇಳೆ ಬೇಯಿಸುವ ದುರುದ್ದೇಶವಲ್ಲದೇ ಬೇರೆ ಯಾವ ಸದುದ್ದೇಶ ಈ ಘೋಷಣೆಗೆ ಇಲ್ಲ.