ಬಿಹಾರ ಚುನಾವಣೆಯ ಬಳಿಕ ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಇಳಿಯಲಿದ್ದಾರೆಯೇ? - Mahanayaka

ಬಿಹಾರ ಚುನಾವಣೆಯ ಬಳಿಕ ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಇಳಿಯಲಿದ್ದಾರೆಯೇ?

07/11/2020

ಶಿವಮೊಗ್ಗ: ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆಯೇ? ಎನ್ನುವ ಪ್ರಶ್ನೆಗಳು ಸದ್ಯ ಹುಟ್ಟಿಕೊಂಡಿದೆ. ಒಂದೆಡೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು, ಸದ್ಯದಲ್ಲಿಯೇ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಸ್ವಪಕ್ಷೀಯರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಯಡಿಯೂರಪ್ಪನವರು ಸಿಎಂ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಬಿಹಾರ ಚುನಾವಣೆ ಫಲಿತಾಂಶ ಬಂದ ಬಳಿಕ ಸಿಎಂ ಯಡಿಯೂರಪ್ಪ ಅವರನ್ನು  ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತದೆಯೇ ಎಂಬ ಅನುಮಾನಗಳು ಸೃಷ್ಟಿಯಾಗಿವೆ.

ನನಗೆ ದೆಹಲಿಯಿಂದ ಮಾಹಿತಿ ಬಂದಿದೆ, ಯಡಿಯೂರಪ್ಪನವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಯತ್ನಾಳ್ ಈ ಬಗ್ಗೆ ಮಾತನಾಡಿ, ಯಡಿಯೂರಪ್ಪನವರು ಸಿಎಂ ಆಗಿರುವುದು ಹೈಕಮಾಂಡ್ ಗೆ ಇಷ್ಟ ಇಲ್ಲ. ಹಾಗಾಗಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗೆ ಇಳಿಸಲಾಗುತ್ತದೆ ಎಂದು ಹೇಳಿದ್ದರು. ಇನ್ನೊಂದೆಡೆ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ವಿಚಾರವಾಗಿ ಹೈಕಮಾಂಡ್ ಬೇಸರ ಮಾಡಿಕೊಂಡಿದೆ ಎಂಬತಹ ಹಲವು ಹೇಳಿಕೆಗಳು ಸ್ವಪಕ್ಷೀಯರಿಂದಲೇ ಕೇಳಿ ಬಂದಿದೆ. ಈ ಎಲ್ಲ ಹೇಳಿಕೆಗಳು ಬೆಂಕಿಯಿಲ್ಲದೇ ಹೊಗೆಯಾಡುತ್ತದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.

ಇನ್ನೂ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರೂ ಈ ಬಗ್ಗೆ ಹೇಳಿಕೆ ನೀಡಿ ಯಡಿಯೂರಪ್ಪನವರು ಕಾಲೆಳೆದಿದ್ದು, ಬಿಹಾರದಲ್ಲಿ ಅತಂತ್ರ ಫಲಿತಾಂಶ ಬಂದರೆ, ಯಡಿಯೂರಪ್ಪನವರು ಬಿಹಾರಕ್ಕೆ ಹೋಗುತ್ತಾರೆ. ಅವರು ಆಪರೇಷನ್ ಕಮಲದಲ್ಲಿ ನಿಸ್ಸೀಮರು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ