ಬಾಲಕ ಭೀಮ್ ರಾವ್ ನ ಶಿಕ್ಷಣ ನಾಶ ಮಾಡಲು ಪ್ರಯತ್ನ | ಎಪಿಸೋಡ್ -45 - Mahanayaka

ಬಾಲಕ ಭೀಮ್ ರಾವ್ ನ ಶಿಕ್ಷಣ ನಾಶ ಮಾಡಲು ಪ್ರಯತ್ನ | ಎಪಿಸೋಡ್ -45

08/12/2020

ಮಹಾನಾಯಕ” ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ:


Provided by

ಮಹಾಸಂಚಿಕೆ(ಎಪಿಸೋಡ):45

ವಾರ :ರವಿವಾರ

ದಿನಾಂಕ :06/12/2020

ನಿನ್ನೆ  44ನೇ ಸಂಚಿಕೆಯಲ್ಲಿ ಮನುವಾದಿಗಳು ಮತ್ತೆ ಭೀಮರಾವನ ಪ್ರತಿಭೆ ಅಳಿಸಿ ಹಾಕುವುದಕ್ಕಾಗಿ, ಅವನನ್ನು ಶಾಲೆಗೆ ಬಾರದಂತೆ ತಡೆ ಒಡ್ಡಿದ್ದಾರೆ. ಇದೂ ಅಲ್ಲದೆ  ಅಂಬೇಡ್ಕರ್ ಗುರುಗಳು ಅವರಿಗೆ  ಪಾಠ ಮಾಡಕೂಡದೆಂದು ಅವರಿಗೆ ಒತ್ತಾಯ ಮಾಡುತ್ತಿದ್ದಾರೆ. ಭೀಮನಿಗೆ ಇದೂ ಎಷ್ಟೊಂದು ಆಘಾತವಾಗಿದೆ ಎಂದರೆ ಇನ್ನೂ ಮುಂದೆ ನಾನು ಏನೂ ಪ್ರಶ್ನೆ ಮಾಡುವುದಿಲ್ಲ. ಯಾರ ಜೊತೆಗೂ ಮಾತನಾಡುವುದಿಲ್ಲ. ಆದರೆ ಶಾಲೆಗೆ ಹೋಗಲು ಅನುಮತಿ ಕೊಡಿ ಎಂಬುದಾಗಿ ಎಲ್ಲರನ್ನು ಕೇಳಿಕೊಳ್ಳುತ್ತಿದ್ದಾನೆ. ಆದರೆ ಯಾರೂ ಸ್ಪಂದಿಸುತ್ತಿಲ್ಲ. ಆದರೆ ಅಂಬೇಡ್ಕರ್  ಗುರುಗಳು ಪಾಠ ಮಾಡಲು ಮುಂದೆ ಬಂದಿದ್ದಾರೆ.  ಅವರಿಗೂ ಕೂಡ ಈ ಜಾತಿವಾದಿಗಳು ಧಮಕಿ ಹಾಕಿ ಭೀಮರಾವನಿಗೆ ಪಾಠ ಹೇಳಕೂಡದು ಎಂದು ಬೆದರಿಕೆ ಹಾಕುತ್ತಾರೆ. ಈಗ ರಾಮಜೀ ಸಕ್ಪಾಲರು ಭೀಮನಿಗೆ “ಭೂಮಿಯೊಳಗೆ ಆಳಕ್ಕೆ  ಇಳಿಯುವ ನೀರಿನಂತೆ ಮತ್ತು ಬೆಂಕಿಯ ಕಿಡಿಯಂತೆ ಎತ್ತರಕ್ಕೆ ಏರಬೇಕು”. ಎಂದು ಹೇಳಿದ್ದಾರೆ.

ಇವತ್ತಿನ ಭಾನುವಾರದ 45ನೇ  ಸಂಚಿಕೆಯಲ್ಲಿ  ಅದೇ ಶೇಡಜಿ ಹಾಗೂ ಮಂಗೇಶ ಇವರು  ಅಂಬೇಡ್ಕರ್ ಗುರುಗಳಿಗೆ ಬೆದರಿಸುವ ಸನ್ನಿವೇಶದಿಂದ ಪ್ರಾರಂಭವಾಗುತ್ತದೆ. ಮಂಗೇಶ್ “ಗುರುಗಳೇ ನಿಮಗೆ ಗೊತ್ತಿದೆ, ನಿಮ್ಮ ಕಣ್ಣ ಮುಂದೇನೆ ಚಿದಾನಂದ ಆಚಾರ್ಯರ ಮಗ ಏನಾದ ಎಂದು, ನಿಮಗೆ ಯಾವಾಗ ತಿಳುವಳಿಕೆ ಬರುತ್ತದೆ..? ಎಂದು ಗದರುವಾಗ ಅಂಬೇಡ್ಕರ್ ಗುರುಗಳು “ಆಯಿತು ಮಂಗೇಶ್ ನೀವೂ ಸಮಾಧಾನ ಮಾಡಿಕೊಳ್ಳಿ. ಹಾಗೆ  ನೀವೂ ಒಂದು ಸಲ ನಿಮ್ಮ  ಹಿಂದೆ ತಿರುಗಿ ನೋಡಿ “ಹೀಗೆ ಹೇಳಿದಾಗ ಅವರು ತಿರುಗಿ ನೋಡುತ್ತಾರೆ. ಆಗ ಭೀಮರಾವ, ಆನಂದ ಹಾಗೂ  ದೃವ ಶಿಸ್ತು ಬದ್ಧತೆಯಿಂದ ತುಂಬಾ ಆತ್ಮ ವಿಶ್ವಾಸದಿಂದ ನಡೆದು ಹತ್ತಿರ ಬರುತ್ತಾರೆ. ಹಾಗೂ ಭೀಮ ಬನ್ನಿ ಗುರುಗಳೇ “ಎಂದು ಕರೆಯುತ್ತಾನೆ.  ಆಗ ಶೇಡಜಿ ” ನೀವೂ ಮಾತಾಡ್ತಿರೋದು ನೋಡಿದರೆ,ಏನೂ ಬ್ರಿಟಿಷರು ದೊಡ್ಡ ಸೈನ್ಯ ಕಟ್ಟಿಕೊಂಡು ಬಂದಂತೆ ಬಂದಿದ್ದೀರಿ..? ” ಎಂದು ಕೇಳುತ್ತಾನೆ. ಆಗ ಭೀಮರಾವ “ಹೌದು ಅವಶ್ಯಕತೆ ಇರೋರಿಗೆ ಹಾಗೂ ಕೆಲವರಿಂದ ಮೋಸ ಹೋದವರಿಗಾಗಿ ಈ ಸೈನ್ಯ. ಮತ್ತು ನಮ್ಮ ಸೈನ್ಯದ ತಾಕತ್ತು ಬ್ರಿಟಿಷ ಸೈನ್ಯಕ್ಕಿಂತಲೂ ಯಾವುದರಲ್ಲೂ ಕಡಿಮೆ ಇರಲಾರದು”. ಎನ್ನುತ್ತಾನೆ. ಮತ್ತು ಅಂಬೇಡ್ಕರ್ ಗುರುಗಳು “ಚಿದಾನಂದವರೆ ಈ ಶಾಲೆಗೂ ಆಗಾಗ ಬೆಟ್ಟಿ ಕೊಡ್ತಾ ಇರ್ರಿ. ಏಕೆಂದರೆ ಈ ಶಾಲೆಯಿಂದನೇ ಒಂದು ಹೊಸ ಶೆಕೆ ಶುರುವಾಗುತ್ತದೆ. ಹೀಗೆ ಹೇಳಿ ಅಂಬೇಡ್ಕರ್ ಗುರುಗಳು ಭೀಮರಾವ ಹಾಗೂ ಆನಂದ ರವರ ಕೈಹಿಡಿದು ದೃವನೊಡನೆ ಹೊರಡುತ್ತಾರೆ. ಈಗ ಶೇಡಜಿ “ಮಂಗೇಶ್ ಒಂದು ಕೆಲಸ ಮಾಡು ಈ  ಸಮಾಜದವರು ಎಲ್ಲೆಲ್ಲಿ ಎಷ್ಟೆಷ್ಟು ಜನ ಮಕ್ಕಳು ವಿದ್ಯೆ ಕಲಿತು ಸವಲತ್ತು ತಗೊಂಡಿದ್ದಾರೆ. ಲೆಕ್ಕಾ ಹಾಕು. ನಾನು ನೋಡ್ತೀನಿ” ಎಂದು ಹೇಳುತ್ತಾನೆ. ಆಗ ಮಂಗೇಶ್ “ಸರಿಯಾಗಿ ಹೇಳಿದಿರಿ. ನಾವು ನೋಡೇ ಬಿಡೋಣ ಇವರನ್ನು. ಈ ನಮ್ಮ ಗೆಲುವು ಹಳ್ಳಿಯ ಗೆಲುವು ಆಗಲಿ”. ಎಂದು ಕೂಗಾಡುತ್ತಾ ಹೊರಡುತ್ತಾರೆ.

ಈಗ ಅಂಬೇಡ್ಕರ್ ಗುರುಗಳನ್ನು ಕರೆದುಕೊಂಡು ಭೀಮರಾವ ಹಾಗೂ ಸಹೋದರರು ತಮ್ಮ ಸಮಾಜದವರು ಇರುವ ಕಡೆ ಹೋಗಿ, “ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಕೊಡಿ  ಅವರು ಓದು ಬರಹ ಕಲಿಯಲಿ ”  ಎಂದು ಹೇಳುತ್ತಾರೆ. ಆಗ ಅವರಲ್ಲೊಬ್ಬ “ಅದೆಲ್ಲ ಹೇಗೆ ಸಾಧ್ಯ..? ನಮ್ಮ ಮಕ್ಕಳಿಗೆ ಅಲ್ಲಿ ಪ್ರವೇಶವೇ ಇಲ್ಲ. ಹಾಗೊಂದು ವೇಳೆ ಹೋದರೂ ಕೂಡ ಮೇಲ್ವರ್ಗದ ಜನಗಳು ನಮ್ಮ ಮಕ್ಕಳ ಕೈಕಾಲು ಮುರಿದು ಹಾಕುತ್ತಾರೆ. ಅಂದ ಮೇಲೆ ಅದೇಗೆ ಸಾಧ್ಯ..? ” ಹೀಗೆ ಒಬ್ಬ ಕೇಳುತ್ತಾನೆ. ಮತ್ತು ಭೀಮ ” ಅದ್ಯೇಗೆ  ಮುರಿಯುತ್ತಾರೆ.  ನಾವು ಪ್ರವೇಶ ದ್ವಾರದ ಬಳಿಗಾದರೂ ಒಗ್ಗಟ್ಟಿನಿಂದ ಹೋಗುವ ಪ್ರಯತ್ನ ಮಾಡಬೇಕು ಅಲ್ವಾ..?” ಕೇಳುತ್ತಾನೆ. ಆಗ ಒಬ್ಬಾತ “ನೋಡು ಭೀಮರಾವ್ ನೀನು ಹೇಳುವುದು ನಿಜವಿದೆ. ಆದ್ರೆ  ಅವರನ್ನು ಹೆದುರಿಸುವ ತಾಕತ್ತು ನಮಗೆಲ್ಲಿದೆ ಹೇಳು..? ಅದೂ ಅಲ್ಲದೆ  ನಾವು ಮಾಡುವ ಕೆಲಸ ಕೊಚ್ಚೆ ಎತ್ತಿ ಹಾಕುವುದಕ್ಕೆ, ಊರು ಸ್ವಚ್ಛ ಮಾಡುವುದಕ್ಕೆ, ಕೂಲಿ ಮಾಡುವುದಕ್ಕೆಲ್ಲ ವಿದ್ಯೆಯ ಅವಶ್ಯಕತೆ ಎಲ್ಲಿದೆ ಹೇಳು  ..?”.ಎನ್ನುತ್ತಾರೆ.  ಆಗ ತಕ್ಷಣ ಅಂಬೇಡ್ಕರ್ ಗುರುಗಳು “ಖಂಡಿತ ಇದೆ. ಓದು ಬರಹದಿಂದ ಮನಸ್ಸಿನ ಕೊಳಕನ್ನು ಸ್ವಚ್ಛಗೊಳಿಸಬಹುದು. ನೀವೂ ಮನುಷ್ಯರಂತೆ ಬದುಕುವ ಹಕ್ಕಿದೆ, ಇದನ್ನು ನೀವೆಲ್ಲ ನಿರೂಪಿಸಬಹುದು. ಭೀಮ ಹೇಳಿದ ಹಾಗೆ ಎಲ್ಲರೂ ಇದಕ್ಕಾಗಿ ಹೋರಾಡಬೇಕು. ನೀವೂ ಇದಕ್ಕೆ ಕೈ ಜೋಡಿಸಿ. ಕೊನೆಯ ಪಕ್ಷ ನಿಮ್ಮ ಮುಂದಿನ ಪೀಳಿಗೆ ಸಹಿತ ಸುಖವಾಗಿ ಸಮಾನತೆಯಿಂದ ಬಾಳಬಹುದು. ನೀವೆಲ್ಲ ಅರ್ಥ ಮಾಡಿಕೊಳ್ಳಿ ” ಹೀಗೆ ಹೇಳುತ್ತಾರೆ. ಭೀಮರಾವ “ಇಲ್ಲಿಯವರೆಗೆ ನಮ್ಮನ್ನೆಲ್ಲ  ಕೇರಿಗಳಿಂದ,ಗುಡಿಗಳಿಂದ, ಕೆರೆ-ಬಾವಿಗಳಿಂದ, ಮತ್ತೇ ಶಾಲೆಗಳಿಂದ ಹೊರಗೆ ಇಟ್ಟಿದ್ದಾರೆ. ನಾವು ಎಷ್ಟೇ ಒಳ್ಳೆಯವರಾಗಿ ಬದುಕಿ ತೋರಿಸಿದರೂ ಸಹಿತ ನಮಗೆ ಧರ್ಮದಲ್ಲಿ ಸ್ಥಾನ ಕೊಟ್ಟಿಲ್ಲ.  ಹೀಗಿರುವಾಗ ನಾವು ವಿದ್ಯೆ ಕಲಿತರೆ ಮುಂದಿನ ದಿನಗಳಲ್ಲಿ ಹೀಗೆಲ್ಲ ಮಾಡುವುದು ಅವರಿಗೆ ಬಹಳ ಕಷ್ಟ”. ಈಗ ದೃವ “ನಿಮಗೆ ನಿಜಕ್ಕೂ ನನ್ನ ಗೆಳೆಯ ಭೀಮರಾವನ ಮೇಲೆ ನಂಬಿಕೆ ಇದ್ರೆ ದಯವಿಟ್ಟು ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಕೊಡಿ. ನಾನು ನಮ್ಮ ತಂದೆಯವರನ್ನು ಸಂಬಾಳಿಸುತ್ತೇವೆ”. ಎಂದು ಕೇಳಿಕೊಳ್ಳುತ್ತಾನೆ. ಈಗ ಒಬ್ಬಾತ “ನೀವೂ ಇಷ್ಟು ಹೇಳಿದ ಮೇಲೆ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಕೊಡುತ್ತೇವೆ ” ಎಂದು ಹೇಳುತ್ತಾನೆ.
ಹೀಗೆ ಭೀಮನ ಸ್ವಾಭಿಮಾನದ ಮಾತುಗಳಿಗೆ ಸವರ್ಣಿಯ ಮನುವಾದಿಗಳಿಂದ  ತುಳಿತಕ್ಕೊಳಗಾದ ಅಲ್ಲಿನ  ಜನರು ಪರಿವರ್ತನೆ ಹೊಂದುತ್ತಾರೆ. ಅಲ್ಲಿಂದ ಭೀಮರಾವ, ಅಂಬೇಡ್ಕರ್ ಗುರುಗಳು ಎಲ್ಲರೂ ಆತ್ಮವಿಸ್ವಾಸದಿಂದ ಹೊರಡುವಾಗ
ಮಹಾನಾಯಕ ನಾನೇ..,
ಮಹಾನಾಯಕ ನಾನೇ….,

ಹಾಡು ಮೊಳಗುತ್ತದೆ. ಪ್ರೇಕ್ಷಕರು ಫುಲ್ ಖುಷಿ. ಆದರೆ ಈ ಖುಷಿ ಕ್ಷಣಿಕ ಮಾತ್ರ. ಏಕೆಂದರೆ ಭೀಮರಾವ ಹಾಗೂ ಅಂಬೇಡ್ಕರ್ ಗುರುಗಳನ್ನು ಎಲ್ಲೆ ಹೋದರೂ ಹಿಂಬಾಲಿಸಿ ಅವರ ಪ್ರಗತಿ ಪರ ಕೆಲಸಗಳಿಗೆ ಅಡ್ಡಿಯಾಗುವ ಶೇಡಜಿ ಹಾಗೂ ಆತನ ಬೆಂಬಲಿಗರು ಅಲ್ಲಿಯೂ ಕೂಡ ಬರುತ್ತಾರೆ. ಈಗ ಅಲ್ಲಿನ ಜನರು ಅಕ್ಷರಶ:  ಹೆದರುತ್ತಾರೆ. ಶೇಡಜಿ ಹೇಳುತ್ತಾನೆ. “ಏ ನೀವೆಲ್ಲರೂ ನಾನು ಕೊಟ್ಟಿರುವ ಹಣ ಇನ್ನೂ ಹಿಂದಿರುಗಿಸಿಲ್ಲ. ಈ ಕೂಡಲೇ ಹಿಂದಿರುಗಿಸಿ” ಎಂದು ಕೇಳುತ್ತಾನೆ. ಆಗ ಒಬ್ಬ “ಸ್ವಾಮಿ ನಾನು ಈಗಾಗಲೇ ನಿಮ್ಮ ದುಡ್ಡು  ಕೊಟ್ಟಿದ್ದೀನಿ “ಎಂದು ಅಂಜಿಕೆಯಿಂದಲೇ  ವಿನಮ್ರವಾಗಿ ಹೇಳುತ್ತಾನೆ. ಅದಕ್ಕೆ ಪ್ರತ್ಯುತ್ತರವಾಗಿ ಶೇಡಜಿ “ಏ ಅದೂ ಅಸಲು ಮಾತ್ರ ಆದರೆ ಅದಕ್ಕಿಂತ ನಿನ್ನ ಬಡ್ಡಿನೆ ಹೆಚ್ಚು ಬೆಳೆದಿದೆ. ಬಡ್ಡಿಗಿಂತ ಮತ್ತೇ ಅಸಲು ಹೆಚ್ಚಾಗಿದೆ”.  ಎಂದು ಬಡ್ಡಿ, ಚಕ್ರ ಬಡ್ಡಿ ಲೆಕ್ಕ ಹೇಳುತ್ತಾ, ಮಂಗೇಶ್ ಇವರಿಗೆ ಲೆಕ್ಕಾ ತೋರಿಸು ಎಂದು ಹೇಳಿದಾಗ ಮಂಗೇಶ್ ಇವರ ಹೆಬ್ಬೆಟ್ಟಿನ ಗುರುತು ಹಾಗೂ ಚಕ್ರ ಬಡ್ಡಿ ಸಾಲು ಪಡೆದವರೆಂದು ಬರೆದಿರುವ ಪತ್ರ ತೋರಿಸುತ್ತಾರೆ. ಮತ್ತೀಗ ಆತ “ಇದೆಲ್ಲ ನಮಗೇಗೆ ಗೊತ್ತಾಗುತ್ತದೆ..? ನಾವು ಓದು ಬರಹ ಕಲಿತಿಲ್ಲವಲ್ಲ..? ಎಂದು ಮೆದುವಾಗಿ ಹೇಳುತ್ತಾ ಬಾಗಿ ನಿಲ್ಲುತ್ತಾನೆ. ಆಗ ಶೇಡಜಿ “ಹಾಗಾದ್ರೆ ನನ್ನ ಮಾತನ್ನು ನಂಬಿ, ನನ್ನ ದುಡ್ಡು  ತೆಗಿಯಿರಿ  ಇಲ್ಲವಾದ್ರೆ ಪೊಲೀಸಗೆ ಹೇಳಿ ನಿಮ್ಮನ್ನು ಸಾಯೋವರ್ಗು ಹೊಡಿಸ್ತೀನಿ”.  ಎಂದು ಜೋರು ಮಾಡುತ್ತಾನೆ.  ಈಗ ಅವರು ನಮ್ಮ ಹತ್ತಿರ ದುಡ್ಡು ಇಲ್ಲ, ನಾವು  ಬೇರೆ ಏನೂ ಮಾಡಬೇಕು ಹೇಳಿ “ಎಂದು ಅವರ ಮುಂದೆ  ಕೈ ಜೋಡಿಸುತ್ತಾರೆ. ಆಗ ಮಂಗೇಶ್ “ಹಾಗಾದ್ರೆ ಚಿದಾನಂದವರು ಹೇಳುವಂತೆ ಕೇಳಿ. ಜೀವ ಉಳಿಸಿಕೊಳ್ಳಿ. ಅಂಬೇಡ್ಕರ್ ಗುರುಗಳು ಹಾಗೂ ಭೀಮರಾವ ಹೇಳಿದಂತೆ ನೀವಾರು ಕೇಳಬೇಡಿ. ಮತ್ತು ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಬಾರದು”. ಹೀಗೆ ಹೇಳುತ್ತ ಅಂಬೇಡ್ಕರ್ ಹಾಗೂ ಭೀಮರಾವ  ಹೇಳು ಹೋಗುವ ಕಡೆಗೆಲ್ಲ ಇವರೂ ಕೂಡ ವಿರುದ್ಧವಾಗಿ ಹೇಳುತ್ತಾ, ಹೋಗಿ ಎಲ್ಲರನ್ನೂ ಹೆದರಿಸುತ್ತಾರೆ.

ಈ ವಿಷಯ ಮನೆಯಲ್ಲಿ ಗಂಗಕ್ಕನಿಗೆ ಹೇಗೋ ಗೊತ್ತಾಗಿ ಹೋಗಿದೆ. ಆಕೆ ತಾಯಿ ಭೀಮಾಬಾಯಿ ಬಳಿ ಇದನ್ನು ಹೇಳುತ್ತ ಊರಿನಲ್ಲಿ ಎರಡು ಬಣ ಆಗಿದೆ. ಇದರಿಂದ ಏನೂ ತೊಂದ್ರೆಯಾಗುತ್ತದೆಯೋ…? ಎಂದು ಕಳವಳ ವ್ಯೆಕ್ತಪಡಿಸುತ್ತಾರೆ. ಈಗ ಭೀಮಾಬಾಯಿಯವರು “ಈ ಸಂಘರ್ಷದ ಮಾತುಗಳನ್ನು ಭೀಮನಿಗೆ ಅವರಪ್ಪನೇ  ಹೇಳುತ್ತಾರೆ. ಹೀಗಿರುವಾಗ ಭೀಮ ನನ್ನ ಮಾತನ್ನು  ಅವನೆಲ್ಲಿ ಕೇಳುತ್ತಾನೆ” ಹೀಗೆ ಹೇಳುತ್ತಾರೆ. ಆಗ ” ಅವನು ಯಾರ ಮಾತು ಕೇಳುವುದಿಲ್ಲ. ಆದ್ರೆ ಇಡೀ ಜಗತ್ತೇ ಅವನ ಮಾತು ಕೇಳುತ್ತದೆ”. ಎಂದು ಹೇಳುತ್ತ ರಾಮಜೀ ಸಕ್ಪಾಲರು ಬರುತ್ತಾರೆ. ಆದರೆ ಭೀಮಾಬಾಯಿ ಯವರು “ಯಾರಿಗೇನೇ ಆದ್ರೂ ನನ್ನ ಮಗನಿಗೆ ತೊಂದ್ರೆಯಾಗಬಾರದು ” ಎಂದು ಹೇಳುತ್ತಾರೆ. ರಾಮಜೀಯವರು “ಭೀಮಾಬಾಯಿ ಮಗನ ಮೇಲಿರುವ ಪ್ರೀತಿ, ಕಾಳಜಿಯಿಂದ ಭೀಮನನ್ನು ಕಟ್ಟಿ ಹಾಕಬೇಡ”. ಎಂದು ಹೇಳುತ್ತಾರೆ. ಈಗ ಭೀಮಾಬಾಯಿ “ಯುದ್ಧದ ಸಾವು ನೋವುಗಳ ಬಗ್ಗೆ  ನೀವೇ ಹೇಳಿದಂತೆ ಒಂದು ಇಡೀ ಮಣ್ಣಿಗಾಗಿ ಎಲ್ಲ ನಾಶ ಮಾಡಬೇಕಾ…?” ಎಂದು ಕೆಲವೊಮ್ಮೆ ನೀವೂ ಚಿಂತಿಸಿದ ಹಾಗೆ ನಾನು ನನ್ನ ಮಗನ ಬಗ್ಗೆ ಯೋಚಿಸುತ್ತೇನೆ “ಎನ್ನುತ್ತಾರೆ. ಆಗ ರಾಮಜೀಯವರು “ಇಲ್ಲ ಭೀಮಾಬಾಯಿ, ಭೀಮನಿಗೆ ಶಿಕ್ಷಣದ ಮಹತ್ವ ಅರ್ಥ ಆಗಿದೆ. ಹಾಗಾಗಿ ಅವನು ಅದನ್ನೂ ಪಡೆದುಕೊಳ್ಳಲು  ಹೋರಾಡುತ್ತಿದ್ದಾನೆ. ನಾನು ಕೂಡ ಕೆಲಸಕ್ಕೆ ಕೆಲವು ದಿವಸ ರಜೆ ಹಾಕಿದ್ದೀನಿ. ಏಕೆಂದರೆ ಭೀಮನ ಹೋರಾಟದೊಂದಿಗೆ ನಾನು ಕೈ ಜೋಡಿಸುತ್ತೇನೆ”. ಎಂದು ಹೇಳಿ  ಹೊರಡಲು ಅನುವಾಗುತ್ತಾರೆ. ಈಗ ಭೀಮಾಬಾಯಿ ಮತ್ತೇ ಅವರನ್ನು  ತಡೆಯುವ ಪ್ರಯತ್ನ ಮಾಡುತ್ತಾರೆ. ಆಗ ರಾಮಜೀಯವರು ಇದೂ ಹಕ್ಕೂಗಳಿಗಾಗಿ  ಹೋರಾಡುವ  ನನ್ನ ಮಗನ, ಪರ ನಾನು ನಿಲ್ಲುತ್ತೇನೆ. ಹಕ್ಕು ಪಡೆಯುವ ಯಾವುದೇ ವ್ಯೆಕ್ತಿ ಪರವಾಗಿ ನಾನು ಯಾವಾಗಲೂ ನಿಲ್ಲುತ್ತೇನೆ”  ಎಂದು ಹೇಳಿ ಹೊರಡುತ್ತಾರೆ.

ಭೀಮರಾವ, ದೃವ ಅಂಬೇಡ್ಕರ್ ಗುರುಗಳು ಆನಂದ, ಬಲರಾಮ್ ಹೀಗೆ ಎಲ್ಲರೂ ಊರಿನ ಒಂದು ಮುಖ್ಯ ರಸ್ತೆ ಕಡೆ ಬಂದು ನಿಲ್ಲುತ್ತಾರೆ. ಭೀಮ ” ಇನ್ನೂ ಒಂದಿಷ್ಟು ಜನ ಬಂದಿದ್ದರೆ ಇಲ್ಲೇ ಧರಣಿ ಕೂಡಬಹುದಾಗಿತ್ತು “ಎಂದು ಹೇಳುವಾಗ, ಅಲ್ಲಿಗೆ ಮಂಗೇಶನೊಡನೆ ಆಗಮಿಸುವ ಶೇಡಜಿ “ಯಾರೂ ಇಲ್ಲಿ ಬರುವುದಿಲ್ಲ “ಎಂದು ಹೇಳುತ್ತಾನೆ. ಆಗ ಬಲರಾಮ್ “ಭೀಮನ ಮಾತಿನ ಮೇಲೆ ಅವರಿಗೆ ವಿಶ್ವಾಸ ಇದೆ ಹಾಗಾಗಿ ಅವರು ಬರುತ್ತಾರೆ” ಎಂದು ಹೇಳುತ್ತಾನೆ. ಈಗ ದೃವ “ಚಿದಾನಂದವರೆ ಇಲ್ಲಿ ನಿಮ್ಮವರ ಹಾಗೆ ಸುಖ ಬಂದಾಗ ಓಡಿ ಬರೋರು ಕಷ್ಟ ಬಂದಾಗ ಓಡಿ ಹೋಗುವಂತವರು ಇಲ್ಲಿ ಯಾರೂ ಇಲ್ಲ “. ಎನ್ನುತ್ತಾನೆ. ಆಗ ಶೇಡಜಿ “ಆಟ ಮುಗೀತು ಓದು ಮನೆ ಸೇರಿತು..”ಹೀಗೆ ವೆಂಗೆವಾಗಿ ಹೇಳುತ್ತಾ, ಶೇಡಜಿ ಮಂಗೇಶನಿಗೆ ನಡೆ ಮನೆಗೆ ಹೋಗೋಣ ಎನ್ನುತ್ತಾ, ಹೊರಡುವಾಗ, ದೃವ “ಒಂದ್ನಿಮಿಷ ಇರಿ ನಮ್ಮ ಕಡೆಯವರನ್ನು ನೋಡಿಕೊಂಡು ಹೋಗುವಿರಂತೆ” ಎಂದು ಹೇಳುತ್ತಾನೆ. ಅದೇ ಸಮಯಕ್ಕೆ ಆ ಹಳ್ಳಿಯ ತುಳೀತಕ್ಕೊಳಗಾದ ಜನರು ಅಲ್ಲಿಗೆ ಬರುತ್ತಾರೆ.  ಇದರಿಂದ ಭೀಮರಾವ ಹಾಗೂ ಎಲ್ಲರೂ ಸಂತಸ ಪಡುತ್ತಾರೆ. ಅವರಲ್ಲೊಬ್ಬ “ಭೀಮ ನೀನು ನಮ್ಮ ನಾಯಕ ಹಾಗಾಗಿ ನಿನ್ನ ಮಾತಿಗೆ ಗೌರವ ಕೊಟ್ಟು ಬಂದಿದ್ದೀವಿ “ಎಂದು ಹೇಳುತ್ತಾರೆ. ಈಗ ಭೀಮರಾವ “ನೀವೂ ಮಾತ್ರ ಬಂದಿದ್ದೀರಿ ಆದ್ರೆ ನಿಮ್ಮ ಮಕ್ಕಳೆಲ್ಲಿ..?” ಎಂದು ಕೇಳುತ್ತಾನೆ. ಆಗ ಅವರು “ನಮ್ಮ ಮಕ್ಕಳು ಬರುವುದಕ್ಕಾಗುವುದಿಲ್ಲ ಕ್ಷಮಿಸಿ” ಎಂದು ಹೇಳುವಾಗ ರಾಮಜೀಯವರು ಅಲ್ಲಿಗೆ ಬರುತ್ತಾರೆ “ಅವರ ಮಕ್ಕಳು ಏಕೆ ಬರುವುದಿಲ್ಲ ಎಂಬುದನ್ನು ನಾನು ಹೇಳುತ್ತೇನೆ ಏಕೆಂದರೆ ಇವರೆಲ್ಲಾ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇವರೆಲ್ಲ ಅವರ (ಮನುವಾದಿಗಳ) ಮನೆಯ ಬಚ್ಚಲು ತೊಳೆದು ಸೋತು ಹೋಗಿದ್ದಾರೆ. ಆದ್ರೂ ಬಡ್ಡಿ ಮತ್ತು ಅಸಲು ತೀರಿಲ್ಲ”  ಹೀಗೆ ಹೇಳಿದಾಗ ಶೇಡಜಿ ಚಪ್ಪಾಳೆ ಹೊಡೆದು ಗಹಗಹಿಸಿ ನಗುತ್ತಾ “ರಾಮಜೀ ನಮ್ಮ ಬಡ್ಡಿ ವ್ಯವಹಾರದ ಲೆಕ್ಕಾ ಸರಿಯಾಗಿ ತಿಳಿದುಕೊಂಡಿದ್ದಾನೆ. ಏಕೆಂದರೆ ವಿದ್ಯಾವಂತ ಅಲ್ಲ್ವಾ ” ನಡೆ ಮಂಗೇಶ್ ಎನ್ನುತ್ತಾನೆ. ಆಗ ಮಂಗೇಶ್ “ನಿಮ್ಮಗಳಿಗೆ ನಮ್ಮ ಶೇಡಜಿಯವರ ಬಡ್ಡಿ ತೀರಿಸುವ ಯೋಗ್ಯೆತೆ ಇಲ್ಲ. ಹೀಗಾಗಿ ಆಚಾರ್ಯರು ಹೇಳಿದಂತೆ ಇಲ್ಲಿ ನಡೆಯುತ್ತದೆ”. ಎಂದು ಹೇಳಿ ಅಲ್ಲಿಂದ  ನಾವೇ ಗೆದ್ದೇವೆಂಬ ಖುಷಿಯಲ್ಲಿ  ಹೊರಡುತ್ತಾರೆ.  ಇದರಿಂದ ಮಂಕಾಗಿ ಭೀಮ ಹೊರಗೆ  ನಡೆಯುತ್ತಾನೆ. ಉಳಿದವರು ಅವರನ್ನು ಹಿಂಬಾಲಿಸುತ್ತಾರೆ. ಅಂಬೇಡ್ಕರ್ ಗುರುಗಳು ಹಾಗೂ ರಾಮಜೀ ಸಕ್ಪಾಲ್ ರನ್ನು ಬಿಟ್ಟು. ಮತ್ತೂ  ಈಗ ಏನೂ ಮಾಡುವುದು ಎಂದು ಅಂಬೇಡ್ಕರ್ ಗುರುಗಳು ಕೇಳುತ್ತಾರೆ. ರಾಮಜಿಯವರು “ಅಂಬೇಡ್ಕರ್ ಗುರುಗಳೇ ವಿದ್ಯೆ ಎಂಬುದು ಹಣದ ಮುಂದೆ ಸೋತು ಸುಣ್ಣಾಗಿ ಹೋಗಿದೆ “ಎನ್ನುತ್ತಾರೆ. ಅಂಬೇಡ್ಕರ್ ಗುರುಗಳು “ಇದೂ ಸಮಾಜದ ದೌರ್ಬಲ್ಯ ರಾಮಜೀಯವರೇ ಈ ಸಮಾಜವನ್ನು ಬದಲಾಯಿಸಲು ಅದೆಷ್ಟು ಯುಗಗಳು ಹಿಡಿಯುತ್ತವೆ ಗೊತ್ತಿಲ್ಲ ” ಎಂದು ಚಿಂತಿಸುತ್ತಾರವರು.

ಈಗ ಮನೆಯಲ್ಲಿ  ಭೀಮಾಬಾಯಿಯವರು ನಿಮ್ಮ ಅಣ್ಣನಿಗೆ ನೀವಾದರೂ ಬುದ್ದಿ ಹೇಳಬೇಕು, ಹೀಗೆ ಸಂಘರ್ಷ, ಹೋರಾಟ, ಹೊಡೆದಾಟ ಅಂತೆಲ್ಲ ಹೋದ್ರೆ ನಾವೆಲ್ಲರೂ ನೆಮ್ಮದಿಯಿಂದ ಹೇಗೆ ಇರೋದು..?”ಎಂದು ಕೇಳುತ್ತಾ ನಾನು ಈ ಮನೆ ಬಿಟ್ಟು ಹೋಗುತೇನೆ ಎನ್ನುತ್ತಾರೆ. ಈಗ ಮೀರಾಬಾಯಿಯವರು “ಅತ್ತಿಗೆ ನಿಮ್ಮ ಮಾತು ಕೇಳದವರು ನನ್ನ ಮಾತು ಹೇಗೆ  ಕೇಳುತ್ತಾರೆ..? ದಿನವೊಬ್ಬರು ಹೀಗೆ ಮನೆ ಬಿಟ್ಟು ಹೋದರೆ ಬರುವತನಕ ನಾನು  ದುಃಖದಿಂದ ಕಾಯಬೇಕು”.  ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಈಗ ಗಂಗಕ್ಕ್ “ಭೀಮ ಹೇಗಾದ್ರು ಮಾಡಿ ತನಗ ಮುಚ್ಚಿರುವ  ಶಾಲೆಯ ಬಾಗಿಲನ್ನು  ತೆಗೆಯಿಸಲು ಹೋರಾಡುತ್ತಿದ್ದಾನೆ. ಇದಕ್ಕಾಗಿ ಎಲ್ಲರನ್ನು ಎಚ್ಚರಗೊಳಿಸುತ್ತ ಹೋರಾಡುತ್ತಿದ್ದಾನೆ. ಆದರೆ ನಾನು ಭೀಮನ ಅಕ್ಕಳಾಗಿ ಹೇಳುತ್ತೇನೆ ಊರವರಿಂದ ಏನೂ ತೊಂದ್ರೆಯಾಗದಿರಲಿ” ಎಂದು ಅಂದುಕೊಳ್ಳುತ್ತಾಳೆ.

ಭೀಮ ದುಃಖ್ಖ ಪಡುತ್ತಾ ಕುಳಿತಾಗ ದೃವ  ಬಲರಾಮ್  ಎಲ್ಲರೂ ಸಮಾಧಾನ ಮಾಡುತ್ತಾರೆ ಭೀಮ “ಆಚಾರ್ಯರ ಸಾಲನ್ನು  ಈ ಜನಗಳು ತೀರಿಸಲಾರರು. ಹಾಗಾಗಿ ಇವರ ಮಕ್ಕಳು ಶಾಲೆಗೆ ಬರಲಾರರು”. ಎಂದು ಕೇಳಿದಾಗ ದೃವ “ಭೀಮ  ಇದಕ್ಕೊಂದು ಪರಿಹಾರ ಸಿಗುತ್ತದೆ ಚಿಂತಿಸಬೇಡ” ಎಂದು ಹೇಳುತ್ತಾನೆ. ಬಲರಾಮ್ ಮತ್ತೂ ಎಲ್ಲರೂ ಭೀಮ ಯಾವುದಕ್ಕೂ ಸೋತು ಕುಳಿತುಕೊಲ್ಕುವುದಿಲ್ಲ. ಎಂದು ಆತನಲ್ಲಿ ಆತ್ಮ ವಿಸ್ವಾಸ ತುಂಬುವ ಪ್ರಯತ್ನ ಮಾಡುತ್ತಾರೆ.

ಇಲ್ಲಿ ಮಾದ್ವಿ ತನ್ನ ಅಕ್ಕಳಿಗೆ ಹೇಳುತ್ತಿದ್ದಾಳೆ “ಭೀಮ ತುಂಬಾ ಒಳ್ಳೆಯವನು ಅವನು ನ್ಯಾಯದ ದಾರಿಯಲ್ಲಿ ನಡೆಯುತ್ತಿದ್ದಾನೆ. ಮತ್ತೂ ಸತ್ಯದ ಪರವಾಗಿ ಇರುತ್ತಾನೆ. ನಾನು ಕಟ್ಟಿದ ರಾಕೀ ಅವನನ್ನು ರಕ್ಷಿಸಲಿ.  ಭೀಮ ಗೆಲ್ಲಬೇಕು ಅವನು ಗೆದ್ದರೆ ನಾನೇ ಗೆದ್ದಂತೆ “. ಎಂದು ಹೇಳುತ್ತಾಳೆ. ಆಗ ಆಕೆಯ ಅಕ್ಕ “ಹೌದು ಮಾದ್ವಿ ನೀನು ಹೇಳಿದಂತೆ ಆಗಲಿ. ಏಕೆಂದರೆ ಈ ಜಾತಿ ಯಾವುದಾದರೇನು ವಂಚನೆಗೊಳಗಾಗುವವರು ಹೆಣ್ಣುಮಕ್ಕಳೇ ಅಲ್ವಾ..? ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ನನ್ನ ಮದುವೆ ಮಾಡಿ, ಓದುವ ಆಸೆಗೆ ತಣ್ಣೀರು ಎರಚಿದರು”  ಎನ್ನುತ್ತಾಳೆ. ಆಗ ಮಾದ್ವಿ “ಹೌದು ಅಪ್ಪ ನನ್ನ ಓದುವ ಆಸೆಯನ್ನು ನುಚ್ಚು ನೂರು ಮಾಡಿದ್ದಾರೆ. ಆದ್ರೆ ಭೀಮರಾವ ನನ್ನ ಜೊತೆಗೆ ಇದ್ದಾನೆ ಎಂದು ಹೇಳುತ್ತಾಳೆ.   ಹೀಗೆ ಅಕ್ಕಾ ತಂಗಿಯರು ಭೀಮರಾವನ ಹೋರಾಟಕ್ಕೆ ಗೆಲುವು ಸಿಗಲಿ ಎಂದು ಶುಭ ಹಾರೈಸುತ್ತಾರೆ.

ಇದೀಗ ರಾಮಜೀಯವರ  ಮನೆಯ ದೃಶ್ಯ  ಭೀಮರಾವ್ ದುಃಖದಲ್ಲಿ ಇದ್ದಾನೆ ಏಕೆಂದರೆ ಆತನಿಗೆ ಶಾಲೆಗೆ ಹೋಗುವ ಅದಮ್ಯ ಕನಸು ನುಚ್ಚು ನೂರಾಗಿದೆ. ಭೀಮಾಬಾಯಿ “ನಾವು ಊರು ಬಿಟ್ಟು ಹೋಗೋಣ ಬೇರೆ ಕಡೆ ಭೀಮ್ ಶಾಲೆಗೆ ಹೋಗಲಿ “ಎನ್ನುತ್ತಾರೆ. ರಾಮಜೀಯವರು “ಇಲ್ಲ ಹೋರಾಟ ಮಾಡೋಕೆ ಬೇಡ ಅನ್ನೋರು ಎಲ್ಲರೂ ಹೋಗಿ ಬಿಡಿ “. ಎಂದು ಹೇಳುತ್ತಾ, “ಮಾಹುವಿಂದ್, ದಾಪೋಲಿಗೆ, ದಾಪೋಲಿಯಿಂದ ಸತಾರಾಗೆ ಎಲ್ಲ ಕಡೆ ಜಾತಿ ಜಾತಿ, ಅಲೆದಾಡಿ, ಕೆಟ್ಟ ಅನುಭವ ಆಗಿ ಹೋದವು. ಇನ್ನೂ ಮುಂದೆ ಎಲ್ಲಿ ಹೋಗೋಣ..? ಮಗ ಹೋರಾಡುವಾಗ ನಾನು ಇಲ್ಲೇ ಇರುತ್ತೇನೆ ನೀವೂ ಯಾರೂ ಎಲ್ಲಿಗಾದ್ರೂ ಹೋಗಬಹುದು” ಈಗ ಮಂಜುಳಾ “ಅಪ್ಪ ಎಲ್ಲ ಊರಲ್ಲೂ ಶಾಲೆಗಳು ಇರುತ್ತವೆ. ನಾವು ಅಲ್ಲೂ ಹೋಗಬಹುದು ” ಎಂದು ಹೇಳುತ್ತಾಳೆ. ಆಗ ಭೀಮರಾವ್ “ಅಪ್ಪ ಮಂಜುಳಾ ಹೇಳುವ ಮಾತು ಸರಿ ಇದೆ”. ಎನ್ನುತ್ತಾನೆ. ರಾಮಜೀಯವರು “ಅಲ್ಲೂ ಈ ಶ್ರೀಮಂತ ಸಾಹುಕಾರರು ಇರುತ್ತಾರೆ.  ನಮ್ಮಂತ ಸಾಲ ತೀರಿಸಲಾಗದ  ಸ್ಥಿತಿ ಇರೋರು ಇರ್ತಾರೆ. ಸಾಲದ ಸುಳಿಯಲ್ಲಿ ಸಿಲುಕಿರುವವರು ಇರುತ್ತಾರೆ”. ಈಗ ದೃವ “ಭೀಮ್ ಈಗ ನೀನು ನಿನ್ನಲ್ಲಿರುವ ಹಠ ಮತ್ತು ಕಿಚ್ಚನ್ನು ಬೇರೆಯವರಿಗೆ ಕೊಟ್ಟರೆ ಅಲ್ಲಿಗೆ ನಾವು  ಅರ್ಧ ಗೆದ್ದಂಗೆ “. ಎನ್ನುತ್ತಾನೆ. ಭೀಮ್ ಈಗ ಅಡುಗೆ ಮನೆಯಲ್ಲಿರುವ  ಒಲೆಯ ಕಡೆ ಹೋಗುತ್ತಾನೆ. ಅಲ್ಲಿ ದಗದಗ ಉರಿಯುತ್ತಿರುವ ಬೆಂಕಿ ಕೆಂಡ ತೆಗೆದುಕೊಂಡು ಹೊರಗೆ ಹೋಗುತ್ತಾನೆ. ಇದನ್ನು ಕಂಡು ಭೀಮಾಬಾಯಿ ಹೆದರಿ ರಾಮಜೀಯವರಿಗೆ ಮಗನನ್ನು ತಡೆಯಿರಿ ಎಂದು ಹೇಳುತ್ತಾರೆ ಆಗ ರಾಮಜೀಯವರು “ನಮ್ಮ ಭೀಮ ತಪ್ಪು ಮಾಡಲಾರ ಎಂದು ಹೇಳಿ ಭೀಮ ಹೋದ ಕಡೆ ಹೊರಡುತ್ತಾರೆ. ಎಲ್ಲರೂ ಅವನನ್ನು ಹಿಂಬಾಲಿಸುತ್ತಾರೆ. ಈಗ ಭೀಮರಾವ್ ಶಾಲೆಯ ಮುಂದೆ ಬಂದು ಅಲ್ಲಿ ಉರಿಯುತ್ತಿರುವ ಬೆಂಕಿ ಕೆಂಡ ಹಾಕುತ್ತ “ಆನಂದಣ್ಣ , ದೃವ ಬಲರಾಮಣ್ಣ  ಇಲ್ಲಿ ಉರಿಯುತ್ತಿರುವ ಬೆಂಕಿ ಕೆಂಡ ಹೀಗೆಯೇ ಉರಿಯುತ್ತಿರಬೇಕು ಹಾರೋಕೆ ಬಿಡಬಾರದು. ನಮ್ಮೊಳಗಿನ ನಂಬಿಕೆ ಜೀವಂತ ಇದೆ ಎಂದು ಎಲ್ಲರಿಗೂ ಗೊತ್ತಾಗಲಿ ಎಲ್ಲರೂ ಒಂದೊಂದು ಕೆಂಡ ಇಲ್ಲಿ ಹಾಕುವಂತಾಗಲಿ ಎಂದು ಹೇಳುತ್ತಾ, ಅಲ್ಲಿ ಕಟ್ಟಿಗೆ ತಂದು ಹಾಕುತ್ತಾನೆ. ಈಗ ದೃವ, ಆನಂದ್ ಎಲ್ಲರೂ ಹಾಗೆಯೇ ಮಾಡುತ್ತಾರೆ. ರಾಮಜೀಯವರು ಮಗನ ಹೋರಾಟದ ದಿಕ್ಕು ಕಂಡು ಹೆಮ್ಮೆ ಪಡುತ್ತಿದ್ದಾರೆ.


ಮರುದಿವಸ ದೃವ ಶಾಲೆಯ ಮುಂದಿನ ಆ ಬೆಂಕಿಗೆ ಕೆಂಡ ಹಾಕಿ ಉರಿಸುವಾಗ ಅಲ್ಲಿಗೆ ಬರುವ ಮನುವಾದಿಗಳ ಮಕ್ಕಳು “ಈಗ  ಹೋಳಿ ಹಬ್ಬ ಅಲ್ಲವಲ್ಲ ಬೆಂಕಿ ಯಾಕೆ ಎಂದು ಕೇಳುತ್ತಾರೆ. ದೃವ “ಸುಮ್ಮನೆ ಒಳಗೆ ಹೋಗು ನಿಮ್ಮಪ್ಪ ಮತ್ತು ನಿಮ್ಮ  ಮಾವನ ದುರಹಂಕಾರವನ್ನು ಇದೆ ಬೆಂಕಿಯಲ್ಲಿ ಸುಡುತ್ತೇವೆ “ಎಂದು ಹೇಳಿ ಅವರ ಬಾಯಿ ಮುಚ್ಚಿಸಿ ಒಳಗೆ ಕಳಿಸುತ್ತಾನೆ. ಈಗ ಭೀಮರಾವ ರಾಮಜೀ ಸಕ್ಪಾಲ್ ರು ಹಾಗೂ ಎಲ್ಲರೂ ಜನಗಳಲ್ಲಿ ಶಿಕ್ಷಣದ, ಹೋರಾಟದ  ಜಾಗೃತಿ ಮೂಡಿಸುತ್ತಿದ್ದಾರೆ.  ಈ  ಎಲ್ಲ ವಿಷಯ ತಿಳಿದ ಶೇಡಜಿ ಹಾಗೂ ಮಂಗೇಶ್ “ನೀರು ಸುರಿದು ಆ ಬೆಂಕಿ ಆರಿಸಿ ಅವರ ನಂಬಿಕೆಯನ್ನು ಸಾಯಿಸೋಣ “ಎಂದು ಶಾಲೆಯ ಬಳಿ ಬರುತ್ತಾರೆ. ಮತ್ತು ನೀರು ಹಾಕಿ ಬೆಂಕಿಯನ್ನು ಅರಿಸಲು ಬರುತ್ತಾರೆ. ಆದರೆ ಇದನ್ನು ತಡೆಯಲು ಬರುವ ದ್ರುವನನ್ನು ಪ್ರತಿಭಟಿಸದಂತೆ ಹಿಡಿದು ಇನ್ನೇನೂ ಭೀಮ ಹಚ್ಚಿದ ಹೋರಾಟದ ಕಿಚ್ಚಿಗೆ ನೀರು ಸುರಿಯುತ್ತಾರೆ ಆದರೆ ತಕ್ಷಣ ಅಂಬೇಡ್ಕರ್ ಗುರುಗಳು  ಅಡ್ಡ ಬರುತ್ತಾರೆ. ಮತ್ತು ಅವರು ಸುರಿಯುವ ನೀರು ಅಂಬೇಡ್ಕರ್ ಗುರುಗಳಿಗೆ ತಗಲುತ್ತವೆ. ಇದರಿಂದಾಗಿ  ಮಂಗೇಶ್, ಶೇಡಜಿ ಎಲ್ಲರೂ ನಗುತ್ತಾರೆ. ಆಗ ಅಂಬೇಡ್ಕರ್ ಗುರುಗಳು “ಇದೂ ಒಬ್ಬ ವಿದ್ಯಾರ್ಥಿ ಹಚ್ಚಿದ ಹೋರಾಟದ ಕಿಚ್ಚು. ಇದನ್ನು ಅರಿಸಲು ಯಾವ ಒಬ್ಬ ಒಳ್ಳೆಯ ಗುರುಗಳು ಬಿಡುವುದಿಲ್ಲ. ಎಂದು ಹೇಳುತ್ತಾರೆ. ಆಗ ಅದೇ ಸಮಯಕ್ಕೆ ಭೀಮರಾವ ಅಲ್ಲಿಗೆ ಬಂದು “ಇದೆಲ್ಲ ಅವರಿಗೆ ಅರ್ಥ ಆಗುವುದಿಲ್ಲ ಗುರುಗಳೇ..” ಹೀಗೆ ಹೇಳುತ್ತಾ, “ನೀವೂ ಇಲ್ಲಿ ಸುರಿದಿರುವ ನೀರು ಆರಿ ಹೋಗುತ್ತದೆ. ಆದರೆ ನೀವೂ ಗುರುಗಳಿಗೆ ಮಾಡಿರುವ ಅನ್ಯಾಯಕ್ಕೆ ನೀವೂ ಮತ್ತು ನಿಮ್ಮ ಈ ಸಮಾಜ ಒಂದಲ್ಲ ಒಂದು ದಿವಸ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ”.  ಹೀಗೆ ಭೀಮರಾವ್ ಹೇಳುವಾಗ ಇವತ್ತಿನ ಸಂಚಿಕೆ ಮುಗಿಯುತ್ತದೆ.

ನೋಡಿದ್ರೇಲ್ಲ ಇವತ್ತಿನ ಸಂಚಿಕೆಯಲ್ಲಿ ಹೇಗೆ ಭೀಮರಾವನ ಓದು ತಡೆಯಲು ಹೇಗೆ ಜಾತಿವಾದಿಗಳು ಕುತಂತ್ರದ ಕೆಲಸ ಮಾಡುತ್ತಾರೆ. ಆದರೂ ಭೀಮ ಹೆದರದೆ ತನ್ನ ಧೈರ್ಯ ಹಾಗೂ ಬುದ್ದಿವಂತಿಕೆಯಿಂದ ಎಲ್ಲರಲ್ಲಿಯೂ ಶಿಕ್ಷಣದ ಮಹತ್ವ ವಿವರಿಸುತ್ತ  ಅದರ  ಬಗ್ಗೆ ಜಾಗೃತಿ ಮೂಡಿಸುತ್ತ ಮುಂದೆ ಸಾಗುತ್ತಿದ್ದಾರೆ. ಇನ್ನೂ ಇಂತಹ ಹೋರಾಟಕ್ಕೆ ಮತ್ತಷ್ಟು ಸ್ಫೂರ್ತಿ ತುಂಬುತ್ತ ಮುನ್ನಡೆದಿರುವ  ರಾಮಜೀ ಸಕ್ಪಾಲ್ ರು ನಿಜಕ್ಕೂ ಒಬ್ಬ ಆದರ್ಶ ಅಪ್ಪ ಅನ್ನಿಸಿಕೊಳ್ಳುತ್ತಾರೆ. ಅದೇ ರೀತಿಯಾಗಿ ಒಬ್ಬ ಅಪ್ಪಟ ಆದರ್ಶ ಶಿಕ್ಷಕರಾಗಿ ಅಂಬೇಡ್ಕರ್ ಗುರುಗಳು ತಮ್ಮ ಸಮಾಜ ಸುಧಾರಣೆ ಕೆಲಸ ಮುಂದುವರೆಸಿದ್ದಾರೆ. ಇಂತಹ  ಗುರುಗಳನ್ನು ಇಂದು ನಾವು ನಮ್ಮ ಮನೆಗಳಲ್ಲಿ ಇಟ್ಟು ಪೂಜಿಸೋಣ. ಒಬ್ಬ ಬ್ರಾಹ್ಮಣ ಶಿಕ್ಷಕರಾಗಿ ಸಮಾಜದ ತುಳೀತಕ್ಕೋಳಗಾದವರ ಬಗ್ಗೆ ಅವರಿಗೆ  ಎಂಥಾ ಕಾಳಜಿ ಇತ್ತು . ಅದಕ್ಕೆ ಬಾಬಾಸಾಹೇಬ ಅಂಬೇಡ್ಕರ್ ಅವರು ಅಂದು  ಹೇಳಿದ್ದ ಮಾತು “ನಾನು ಬ್ರಾಹ್ಮಣತ್ವವನ್ನು ವಿರೋಧಿಸುತ್ತೇನೆ. ಆದರೆ ಎಲ್ಲ  ಬ್ರಾಹ್ಮಣರನ್ನು ವಿರೋಧ ಮಾಡಲಾರೆ.. ” ಎಂಬ ಮಾತು ಅವರ ಅನುಭವದಿಂದ ಬಂದ ಮಾತದು. ಅದಕ್ಕೆ ಅಂಬೇಡ್ಕರರಂತಹ  ಬ್ರಾಹ್ಮಣ ಗುರುಗಳು ಈಗಲೂ ನಮ್ಮಲ್ಲಿ ಕಂಡು ಬಂದರೆ ಅವರನ್ನು ಪೂಜಿಸೋಣ. ಹೀಗೆ ಇವತ್ತಿನ ಸಂಚಿಕೆಯಲ್ಲಿ ಭೀಮರಾವ ವಿದ್ಯೆಗಾಗಿ ತಮ್ಮ ಪ್ರಾಣ ಒತ್ತೆ ಇಟ್ಟು ಹೋರಾಡುತ್ತಿರುವುದು ಕಂಡು ಬಂದಿದೆ.
ಆದರೆ ಮುಂದಿನ ಸಂಚಿಕೆಯಲ್ಲಿ ಮನುವಾದಿಗಳ ಈ ಅಟ್ಟಹಾಸ ಹೇಗೆ ತಡೆಯುತ್ತಾರೆ. ಈ ಸಮಯಕ್ಕೆ ರಾಮಜೀಯವರು ಆಗಮಿಸಿ ಹೇಗೆ ಹೋರಾಟದ ದಿಕ್ಕು ಬದಲಿಸುತ್ತಾರೆ…? ಮುಂತಾದ ನೈಜ ಐತಿಹಾಸಿಕ  ದೃಶ್ಯಗಳಿಗಾಗಿ ಮುಂದಿನ ಸಂಚಿಕೆವರೆಗೂ ಕಾಯೋಣ.
. ಅಲ್ಲಿಯವರಿಗೂ
… ಜೈಭೀಮ್
… ಮುಂದುವರೆಯುವುದು

ganapati gagocha

ಗಣಪತಿ ಚಲವಾದಿ(ಗಗೋಚ)
ಬಿಎಂಟಿಸಿ ನಿರ್ವಾಹಕರು
ಕಸಾಪ ಮಯೂರವರ್ಮ
ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

ಇತ್ತೀಚಿನ ಸುದ್ದಿ