ಉಳ್ಳಾಲ ಪಾಕಿಸ್ತಾನ | ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಯು.ಟಿ.ಖಾದರ್
ಮಂಗಳೂರು: ಉಳ್ಳಾಲವನ್ನು ನೋಡಿದರೆ ಪಾಕಿಸ್ತಾನವನ್ನು ನೋಡಿದಂತಾಗುತ್ತದೆ ಎಂಬ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ಶಾಸಕ ಯು.ಟಿ.ಖಾದರ್ ತಿರುಗೇಟು ನೀಡಿದ್ದು, ಸಾರ್ವಜನಿಕ ಹೇಳಿಕೆಗಳು ಸಮಾಜದ ಒಗ್ಗಟ್ಟಿಗೆ ಪೂರಕವಾಗಿರಬೇಕು, ಈ ರೀತಿಯ ಹೇಳಿಕೆಗಳು ದೇಶಕ್ಕೆ ಮಾರಕ ಎಂದು ಹೇಳಿದ್ದಾರೆ.
ಉಳ್ಳಾಲಕ್ಕೆ ಹೋದರೆ ಪಾಕಿಸ್ತಾನಕ್ಕೆ ಹೋದಂತಾಗುತ್ತದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಯು.ಟಿ.ಖಾದರ್ ವಿರೋಧಿಸಿದ್ದು, ದೇಶಪ್ರೇಮ ಇರುವವರು, ಸಮಾಜದ ಮೇಲೆ ಪ್ರೀತಿ ಇರುವವರು ಇಂತಹ ಹೇಳಿಕೆ ನೀಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪ್ರಭಾಕರ್ ಭಟ್ ಅವರ ಬಾಯಿಯಲ್ಲಿ ಇಂತಹ ಹೇಳಿಕೆ ಬರುತ್ತದೆ ಎಂದರೆ ಆಶ್ಚರ್ಯವಾಗುತ್ತದೆ. ಸಾರ್ವಜನಿಕ ಹೇಳಿಕೆಗಳು ಸಮಾಜದ ಒಗ್ಗಟ್ಟಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಹಿರಿಯರಾದ ಕಲ್ಲಡ್ಕ ಪ್ರಭಾಕರ್ ಭಟ್ ಈ ರೀತಿಯ ಹೇಳಿಕೆ ನೀಡಿರುವುದು ಉಳ್ಳಾಲದ ಪ್ರತಿಯೊಬ್ಬರಿಗೂ ನೋವನ್ನುಂಟು ಮಾಡಿದೆ ಎಂದು ಅವರು ಹೇಳಿದರು.
ಉಳ್ಳಾಲದಲ್ಲಿ ಭಾರತದ ಎಲ್ಲ ಸಂಸ್ಕೃತಿಗಳಿವೆ. ಎಷ್ಟೋ ಸಣ್ಣಸಣ್ಣ ಸಮುದಾಯಗಳ ಧಾರ್ಮಿಕ ಕೇಂದ್ರಗಳು ಇಲ್ಲಿವೆ. ಉಳ್ಳಾಲದ ಕಣಕಣದಲ್ಲಿಯೂ ಬಹುಸಂಸ್ಕೃತಿ ಕಂಡು ಬರುತ್ತದೆ. ಇಲ್ಲಿ ಎಲ್ಲರೂ ಪ್ರೀತಿ ವಿಶ್ವಾಸದಿಂದ ಇದ್ದಾರೆ. ಯಾರೋ ಒಬ್ಬರು ಏನೋ ಹೇಳಿಕೆ ನೀಡಿದ ತಕ್ಷಣ ಏನೂ ಬದಲಾವಣೆಯಾವುದಿಲ್ಲ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಎಲ್ಲ ಸುದ್ದಿಗಳಿಗಾಗಿ ನಮ್ಮ ಗ್ರೂಪ್ ಗಳಿಗೆ ಜಾಯಿನ್ ಆಗಿ
https://chat.whatsapp.com/HeAiP3WAQfT6ajtrJVJ4kP